ಎರಡೇ ಎರಡು ಬಕೆಟ್ ನೀರುಳಿಸಲು ಸಾಧ್ಯವೆ? ಪ್ರಯತ್ನಿಸಿ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 26 : ಸ್ನೇಹಿತರೆ, ಬಂಧುಗಳೆ, ಓದುಗ ದೊರೆಗಳೆ... ಇಂದು ಎರಡೇ ಎರಡು ಬಕೆಟ್ ನೀರು ನಿಮ್ಮಿಂದ ಉಳಿಸಲು ಸಾಧ್ಯವೆ? ಅದು ಯಾವ ರೀತಿಯದ್ದೇ ಆಗಿರಬಹುದು. ಪ್ರಯತ್ನ ಮಾತ್ರ ನಿಮ್ಮದಾಗಿರಬೇಕು.

ಸ್ನಾನ ಮಾಡುವಾಗ ಅರ್ಧ ಬಕೆಟ್ ಕಡಿಮೆ ಮಾಡ್ತೀರಾ? ಅಕ್ಕಿ ತೊಳೆದ ಗಂಜಿಯನ್ನು ಚರಂಡಿಗೆ ಬಿಸಾಕದೆ ಪಾನಕ ಮಾಡಿಕೊಂಡು ಕುಡೀತೀರಾ? ಪೈಪಿನಿಂದ ಅಂಗಳವನ್ನು ತೊಳೆಯುವಾಗ ಮಿತಿಯಿಂದ ಬಳಸುತ್ತೀರಾ? ಕಾರನ್ನು ಅರ್ಧ ಬಕೀಟಿನಲ್ಲಿ ವಾಶ್ ಮಾಡ್ತೀರಾ?

ಇದರಿಂದೇನಾಗತ್ತೆ? ಮೊದಲು ನನ್ನ ಪಕ್ಕದ ಮನೆಯ ದಢೂತಿ ಹೆಂಗಸು ಅಂಗಳ ತೊಳೆಯುವ ಪರಿ ನೋಡಿ. ಮೊದಲು ಆಕೆಗೆ ಹೇಳಿ, ನಂತರ ನನ್ನ ಬಳಿ ಬನ್ನಿ... ನಾನೊಬ್ಬ ಎರಡು ಬಕೆಟ್ ನೀರು ಉಳಿಸದಿದ್ದರೇನಾಗತ್ತೆ? ಎನ್ನುವ ಕುಂಟುನೆಪಗಳು ಬೇಡ. ನಿಮ್ಮಿಂದ ಸಾಧ್ಯವಿದೆಯಾ?

Is it possible to save two buckets of water?

ಹತ್ತು ನಿಮಿಷ ಬೈಕನ್ನು ಬಿಸಿಲಲ್ಲಿ ನಿಲ್ಲಿಸಿ ನೋಡಿ, ಮುಕುಳಿ ಸುಟ್ಟುಹೋಗುವಂತೆ ಸೀಟು ಕಾದಿರುತ್ತದೆ. ಬೆಂಗಳೂರಿನಲ್ಲಿಂದು 36 ಡಿಗ್ರಿ ಸೆಲ್ಶಿಯಸ್, ಭಾನುವಾರ 37 ಡಿಗ್ರಿ ಸೆಲ್ಶಿಯಸ್ ತಲುಪಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬೆಂಗಳೂರಿನಲ್ಲಿ ಬಿಸಿಲು ಈಪರಿಯಾದರೆ ಗುಲಬರ್ಗಾ, ಬೀದರ್, ವಿಜಯಪುರ, ರಾಯಚೂರು, ಯಾದಗಿರಿಯಲ್ಲಿ ಹೇಗಿರಬಹುದು?

ಬಿಸಿಲು ಈ ವರ್ಷ ಆ ಪರಿ ತನ್ನ ಪ್ರಭಾವ ತೋರಿಸುತ್ತಿದೆ. ಹಳ್ಳಿಗಳಲ್ಲಿ ನೀರು ಕಾಣದೆ ಬತ್ತದ ತೆನೆಗಳು ಸುಟ್ಟುಹೋಗುತ್ತಿವೆ, ಕಬ್ಬಿನ ತೋಟಕ್ಕೆ ಬೆಂಕಿ ಬೀಳುತ್ತಿದೆ. ಕೆಆರೆಸ್ಸಿನಂಥ ಕೆಆರೆಸ್ಸೇ ಬಟಾಬಯಲಾಗಿದೆ. ದಶಕಗಟ್ಟಲೆ ನೀರಿನಲ್ಲಿ ಮುಳುಗಿದ್ದ ಗುಡಿಗಳು, ಶಿಲಾಶಾಸನಗಳು ತಲೆಯೆತ್ತಿವೆ.

ಹೋಳಿ ಹಬ್ಬದಂದು ಓಕುಳಿಯಾಡುವಾಗ ಎಷ್ಟು ಬಕೇಟು ನೀರು ವೇಸ್ಟ್ ಮಾಡಿದಿರಿ ಲೆಕ್ಕ ಹಾಕಲು ಸಾಧ್ಯವೆ? ಬಣ್ಣದಿಂದ ಮಿಂದೆದ್ದ ಮೈಯನ್ನು ಮತ್ತೆ ತೊಳೆಯಲು ಎಷ್ಟು ಕೊಡ ನೀರು ಚರಂಡಿ ಸೇರಿದೆ ನಿಮಗೆ ಅರಿವಿದೆಯೆ? ಅದೇ ನೀರನ್ನು ಉಳಿಸಿದ್ದರೆ ಎಷ್ಟು ಜನರಿಗೆ ಸಹಾಯವಾಗುತ್ತಿತ್ತು ಎಂಬುದರ ಜ್ಞಾನವಿದೆಯೆ? [ಕುಡಿಯುವ ನೀರಿಗಾಗಿ 3ನೇ ಮಹಾಯುದ್ಧ ಬೇಕೆ?]

ನಿಮಗಿದಾವುದರ ಪರಿವೆ, ಕಾಳಜಿ ಇದ್ದರೆ ಬಕೇಟು ಬಕೇಟು ಬೇಡ ಹನಿ ಹನಿ ನೀರನ್ನು ಉಳಿಸುವತ್ತ ನಿಮ್ಮ ಪ್ರಯತ್ನ ಸಾಗಲಿ. ನಗರಗಳಲ್ಲಿ ಎಷ್ಟೋ ಬೋರ್ವೆಲ್ಲುಗಳು ಬರಿದಾಗಿವೆ, ಕಾವೇರಿ ನೀರಿನ ಪೈಪು ಸದ್ದು ಮಾಡುವುದನ್ನು ಶುರು ಮಾಡಿದೆ. ನೀರು ಸರಬರಾಜು ಮಾಡುವ ಟ್ಯಾಂಕರುಗಳು ಬೆಲೆಯನ್ನು ಏರಿಸಿವೆ.

ಅಂದ ಹಾಗೆ, ಇಂದು ವಿಶ್ವ ವಾಟರ್ ಡೇ ಅಲ್ಲವೇ ಅಲ್ಲ. ಮಾರ್ಚ್ 22ರಂದೇ ವಿಶ್ವ ನೀರಿನ ದಿನ ಆಗಿಹೋಯಿತು. ಅಂದು ನೀರನ್ನು ಉಳಿಸಿದವರೆಷ್ಟೋ, ಉಳಿಸುವ ಬಗ್ಗೆ ಚಿಂತಿಸಿದವರೆಷ್ಟೋ, ಅದ್ಯಾವುದನ್ನೂ ಚಿಂತಿಸದೆ ಯದ್ವಾತದ್ವಾ ಪೋಲು ಮಾಡಿದವರೆಷ್ಟೋ?

ಪರಿಸ್ಥಿತಿ ಹೇಗಿದೆಯೆಂದರೆ, ಪ್ರತಿದಿನ ವಿಶ್ವ ನೀರಿನ ದಿನ ಆಚರಿಸುವಂಥ ಸಂದರ್ಭ ಬಂದಿದೆ. ಕರೆಕಟ್ಟೆಗಳೆಲ್ಲ ಒಣಗಿವೆ, ಅಣೆಕಟ್ಟೆಗಳಲ್ಲಿ ನೀರು ಪಾತಾಳ ಮುಟ್ಟಿದೆ, ಕರ್ನಾಟಕದಲ್ಲಿ ತೊಂಬತ್ತಕ್ಕೂ ಹೆಚ್ಚು ತಾಲೂಕುಗಳು ಭೀಕರ ಬರಪರಿಸ್ಥಿತಿಯನ್ನು ಎದುರಿಸುತ್ತಿವೆ. ಕರ್ನಾಟಕದಲ್ಲಿ ಮಾತ್ರವಲ್ಲ ಭಾರತದ ಅನೇಕ ಕಡೆಗಳಲ್ಲಿ ಹಿಂದೆಂದೂ ಕಂಡರಿಯದಂಥ ಬರ ಬರೆ ನೀಡುತ್ತಿದೆ.

ಸ್ವಲ್ಪ ಯೋಚಿಸಿ, ಸಾಕಷ್ಟು ನೀರು ಸಿಗುವಂಥ ಅದೃಷ್ಟವಂತರು, ಶ್ರೀಮಂತರು ನಾವಿರಬಹುದು. ಆದರೆ, ಕೋಟಿಗಟ್ಟಲೆ ಜನರು ಹನಿ ನೀರಿಲ್ಲದೆ ಪರಿತಪಿಸುತ್ತಿದ್ದಾರೆ, ಪಕ್ಷಿಸಂಕುಲ ನೀರಿಲ್ಲದೆ ಪರದಾಡುತ್ತಿದೆ, ಪ್ರಾಣಿಗಳು ಏದುರಿಸು ಬಿಡುತ್ತಿವೆ. ಒಂದು ಕೊಡ ನೀರಿಗಾಗಿ ಹಳ್ಳಿಗಳಲ್ಲಿ ಬಡಿದಾಟ ನಡೆಯುತ್ತಿದೆ. ಇದು ಉತ್ಪ್ರೇಕ್ಷೆಯಲ್ಲ, ಸತ್ಯ ಸಂಗತಿ.

ಈ ವಿಚಾರ ಏಕೆ ಬಂತೆಂದರೆ, ಇಂಥದೊಂದು ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಗುಪ್ತಗಾಮಿನಿಯಂತೆ ಹರಿಯುತ್ತಿದೆ. ಅದು ಒಂದು ಆಂದೋಲನವಾಗಿ ಪರಿವರ್ತಿತವಾಗಿ, ಜನರಲ್ಲಿ ಜಾಗೃತಿ ಮೂಡಿಸುವಂತೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಒಬ್ಬರು ಎರಡು ಬಕೆಟ್ ನೀರುಳಿಸಿದರೆ ಏನೂ ಸಾಧಿಸದಿರಬಹುದು, ಆದರೆ ಒಟ್ಟಾಗಿ ಮಾಡಿದಾಗ ಅದರ ಪರಿಣಾಮ ಗೋಚರವಾಗುತ್ತದೆ.

ಹ್ಯಾಂಡ್ ಶೇಕ್ ಡೇ, ನೋ ಡಯಟ್ ಡೇ, ಚಾಕ್ಲೇಟ್ ಡೇ, ಪ್ರೇಯರ್ ಡೇ, ಎಡಚರ ದಿನ, ನೇಕೆಡ್ ಸೈಕ್ಲಿಂಡ್ ಡೇ, ತೆಂಗಿನಕಾಯಿಯ ದಿನ, ನಾಯಿಗಳ ದಿನ, ಕತ್ತೆಗಳ ದಿನ... ಅಷ್ಟೇ ಏಕೆ ನೋ ಬ್ರಾ ಡೇ, ವಿಶ್ವ ಹಗ್ ಡೇ, ಕಿಸ್ಸಿಂಗ್ ಡೇ ಕೂಡ ಆಚರಿಸಿಕೊಳ್ಳುವ ನಮಗೆ ಎರಡು ಬಕೇಟ್ ನೀರು ಉಳಿಸಲು ಸಾಧ್ಯವಿಲ್ಲವೆ?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
World Water Day was celebrated on March 22nd itself. But, is it possible to save two buckets of water today? There is accute scarcity of water everywhere in Karnataka. You may be rich and can afford to waste water, but just think of those who are fighting for just one pot of water in a remote village.
Please Wait while comments are loading...