ಒಳ ಮೀಸಲಾತಿ: ಮುಖ್ಯಮಂತ್ರಿಯಿಂದ ಸದ್ಯದಲ್ಲೆ ದಲಿತ ಮುಖಂಡರ ಸಭೆ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 06 : 'ಒಳ ಮೀಸಲಾತಿ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದ್ಯದಲ್ಲೆ ದಲಿತ ಮುಖಂಡರ ಸಭೆ ಕರೆಯಲಿದ್ದಾರೆ' ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ತಿಳಿಸಿದರು.

ಅಂಬೇಡ್ಕರ್ ಪರಿನಿರ್ವಾಣ ದಿನದಂದು ವಿಧಾನಸೌಧದ ಬಳಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

'ಒಳ ಮೀಸಲಾತಿ ಕೇಳುತ್ತಿರುವವರು, ಬೇಡ ಎನ್ನುತ್ತಿರುವ ಎರಡೂ ಪಂಗಡದ ಮುಖಂಡರನ್ನು ಒಂದೇ ವೇದಿಕೆಗೆ ಕರೆದು ಚರ್ಚೆ ನಡೆಸಿ ನಿರ್ಧರಿಸಲಾಗುತ್ತದೆ' ಎಂದು ಅವರು ಹೇಳಿದರು.

Inner cast reservation: CM will call Dalit leaders meeting soon

ಒಳ ಮೀಸಲಾತಿ ಬಗ್ಗೆ ಅಪಪ್ರಚಾರ ಬೇಡ ಎಂದ ಅವರು 'ಒಳ ಮೀಸಲಾತಿ ಜಾರಿಗೆ ಬಂದರೆ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳಲ್ಲಿ ಕೆಲವು ಸಮುದಾಯಗಳನ್ನು ಕೈಬಿಡಲಾಗುತ್ತದೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಯಾವುದೇ ಜಾತಿಯನ್ನೂ ಪಟ್ಟಿಯಿಂದ ಕೈಬಿಡುವ ಪ್ರಶ್ನೆ ಇಲ್ಲ' ಎಂದು ಸ್ಪಷ್ಟಪಡಿಸಿದರು.

'ಮೀಸಲಾತಿಯ ಲಾಭವನ್ನು ಮೂಲ ಅಸ್ಪೃಶ್ಯರಾದ ಮಾದಿಗ ಸಮುದಾಯ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಒಳ ಮೀಸಲಾತಿ ಅಗತ್ಯವಿದೆ ಎಂಬ ಒತ್ತಾಯ ಇದೆ. ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ನ್ಯಾಯಮೂರ್ತಿ ಎ.ಜೆ. ಸದಾಶಿವ ನೇತೃತ್ವದಲ್ಲಿ ಆಯೋಗ ರಚನೆ ಮಾಡಿ ವರದಿ ಪಡೆಯಲಾಗಿದೆ. ಆ ವರದಿ ಆಧರಿಸಿ ಅನ್ಯಾಯಕ್ಕೆ ಒಳಗಾಗಿರುವ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸಲು ಕೋರಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಷ್ಟೇ ರಾಜ್ಯ ಸರ್ಕಾರದ ಕೆಲಸ' ಎಂದರು.

'ಜಾತಿ ಗಣತಿ: ಮುಖ್ಯಮಂತ್ರಿ ಅವರನ್ನೇ ಕೇಳಬೇಕು'
'ಜಾತಿ ಗಣತಿ ವರದಿ ಸಿದ್ಧವಾಗುತ್ತಿದ್ದು, ಯಾವಾಗ ಬಿಡುಗಡೆ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಉತ್ತರಿಸಲಿದ್ದಾರೆ' ಎಂದು ಎಚ್. ಆಂಜನೇಯ ಹೇಳಿದರು. 'ಮಂತ್ರಿಯಾಗಿ ನನ್ನ ಕೆಲಸ ಮಾಡಿದ್ದೇನೆ. ಅಂಕಿ-ಅಂಶಗಳನ್ನು ಆಯೋಗ ಕ್ರೋಡೀಕರಿಸುತ್ತಿದೆ. ಜಾತಿ ಗಣತಿಗೆ ಆಡಳಿತ ಪಕ್ಷದಲ್ಲಿ ಯಾರ ವಿರೋಧವೂ ಇಲ್ಲ. ಮುಖ್ಯಮಂತ್ರಿಯವರು ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ' ಎಂದರು.

'ಸಂವಿಧಾನ ಬದಲಾವಣೆ ಯಾರಿಂದಲೂ ಸಾಧ್ಯವಿಲ್ಲ'
'ಸಂವಿಧಾನ ಬದಲಿಸಬೇಕು ಎಂಬುದು ಉಡಪಿ ಧರ್ಮ ಸಂಸದ್‌ನ ಖಾಸಗಿ ನಿರ್ಣಯ. ಹೀಗಾಗಿ ಅದಕ್ಕೂ ಸರ್ಕಾರಕ್ಕೂ ಸಂಬಂಧ ಇಲ್ಲ' ಎಂದು ಸಚಿವ ಆಂಜನೇಯ ಹೇಳಿದರು. 'ಬಿ.ಆರ್. ಅಂಬೇಡ್ಕರ್ ಅವರು ಎಲ್ಲರು ಮೆಚ್ಚುವಂತ ಸಂವಿಧಾನ ಬರೆದಿದ್ದಾರೆ. ಅದನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ' ಎಂದು ಸಚಿವ ಎಚ್. ಆಂಜನೇಯ ಪ್ರತಿಕ್ರಿಯಿಸಿದರು.

'ಭಾರತದ ಪ್ರತಿಯೊಬ್ಬ ಪ್ರಜೆಗೂ ಸಮಾನ ಹಕ್ಕುನ್ನು ಸಂವಿಧಾನದಲ್ಲಿ ಅಂಬೇಡ್ಕರ್ ಕಲ್ಪಿಸಿದ್ದಾರೆ. ದೇಶ ವಿದೇಶಗಳಲ್ಲಿ ಜನ ನಮ್ಮ ಸಂವಿಧಾನವನ್ನು ಮೆಚ್ಚುತ್ತಿದ್ದಾರೆ. ಹೀಗಾಗಿ ಬೇರೆ ಸಂವಿಧಾನದ ಅವಶ್ಯಕತೆ ಇಲ್ಲ. ಅಂಬೇಡ್ಕರ್ ಅವರನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ' ಎಂದೂ ಅವರು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
To Discuss Inner cast reservation, CM Siddaramaiah will call Dalit leaders meeting soon' says Social Welfare minister H.Anjaneya on Dr.B.R.Ambedkar death anniversary program held in Vidhanasoudha on December 6th.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ