ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ಯಾನ್ಸರ್ ವಿರುದ್ಧ ಗೆದ್ದು ಬರಲಿ ಬೆಂಗಳೂರಿನ ವಿಶಾಲ್

By Prasad
|
Google Oneindia Kannada News

ಬೆಂಗಳೂರು, ಏಪ್ರಿಲ್ 16 : ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಆದರೆ, ಬೆಂಗಳೂರಿನ ಆ ಹುಡುಗನ ಕನಸುಗಳಿಗೆ ಮಾತ್ರ ಅಗಾಧ ಶ್ರೀಮಂತಿಕೆ. ಬಡತನದ ನೆಪವೊಡ್ಡಿ ಆತ ತನ್ನ ಕನಸನ್ನು ಬೆನ್ನತ್ತುವುದನ್ನು ಬಿಡಲಿಲ್ಲ. ಚಡ್ಡಿಗೆ ತೂತು ಬಿದ್ದಿದ್ದರೂ ಛಲಬಿಡದ ತ್ರಿವಿಕ್ರಮನಂತೆ ಒಂದು ದಿನ ತನ್ನ ಕನಸನ್ನು ನನಸಾಗಿಯೇಕೊಂಡುಬಿಟ್ಟ.

ಅದು ಕ್ರಿಕೆಟಿಗನಾಗಬೇಕೆಂಬ ಛಲ. ಎಲ್ಲ ಅಡೆತಡೆಗಳನ್ನು ಮೆಟ್ಟಿನಿಂತು ಕ್ರಿಕೆಟಿಗ ಆಗೇಬಿಟ್ಟ. ಕರ್ನಾಟಕದ 16 ಮತ್ತು 19 ವರ್ಷದೊಳಗಿನ ತಂಡದಲ್ಲಿ ಸ್ಥಾನ ಗಿಟ್ಟಿಸಿದ. ಈ ಪ್ರತಿಭಾವಂತ ಆಟಗಾರನನ್ನು ಹಲವಾರು ಕ್ಲಬ್ಬುಗಳು ಬೆನ್ನತ್ತಿ ಬಂದವು. ಬಡತನ ಇನ್ನೇನು ನಿವಾರಣೆಯಾಯಿತು ಎಂದು ಕನಸು ಕಾಣುತ್ತಿರುವಾಗಲೇ ಕರಾಳ 'ಕ್ಯಾನ್ಸರ್' ಕೂಡ ಆತನನ್ನು ಬೆನ್ನತ್ತಿಕೊಂಡು ಬಂದಿದೆ.

ಕರ್ನಾಟಕ ರಣಜಿ ತಂಡವನ್ನು ಸೇರಿಕೊಳ್ಳಬೇಕೆಂಬ ಹಂಬಲ ಇಟ್ಟುಕೊಂಡಿದ್ದ 20 ವರ್ಷದ ವಿಶಾಲ್ ಬಲ್ಲಾಳ್ ವಿ. Acute Myeloid Leukemia ಎಂಬ ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿದ್ದಾನೆ. ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆತನ ಕುಟುಂಬ ಆಸ್ಪತ್ರೆಯ ಬಿಲ್ ಪಾವತಿಸಲೂ ಅಶಕ್ತವಾಗಿದೆ. ಬಿರು ಬಿಸಿಲಲ್ಲೂ ಕಾರ್ಮೋಡ ಆವರಿಸಿಕೊಂಡಿದೆ!

Indian Cricket Team Aspirant From Bangalore Fighting Cancer

ಸುಡುಸುಡು ಜ್ವರ, ಹೆಪ್ಪುಗಟ್ಟಿದ ರಕ್ತ

ಆರಾಮವಾಗಿಯೇ ಇದ್ದ ವಿಶಾಲ್‌ನಿಗೆ ಕೆಲ ದಿನಗಳ ಹಿಂದೆ ಸುಡುಸುಡು ಜ್ವರ ಆವರಿಸಿಕೊಂಡಿತು. ಔಷಧಿ ಪಡೆದ ನಂತರ ಜ್ವರ ಇಳಿಯಿತಾದರೂ ಮರುದಿನ ಕತ್ತು, ಭುಜಗಳಲ್ಲಿ ರಕ್ತ ಹೆಪ್ಪುಗಟ್ಟಿರುವುದು ಕಂಡುಬಂದಿದೆ. ಮರುದಿನ ದೇಹದ ಅನೇಕ ಭಾಗಗಳಲ್ಲಿ ಇದು ವ್ಯಾಪಿಸಿಕೊಂಡಿದೆ. ಇದನ್ನು ಕಂಡು ವಿಶಾಲ್ ಮನೆಯವರು ಬೆಚ್ಚಿಬಿದ್ದಿದ್ದಾರೆ.

ಜಿಮ್‌ನಲ್ಲಿ ಹೆಚ್ಚು ವ್ಯಾಯಾಮ ಮಾಡಿದ್ದರಿಂದ ಹೀಗಾಗಿರಬಹುದು ಎಂದು ಮನೆಯವರು ಕಲ್ಪಿಸಿಕೊಂಡಿದ್ದರು. ಚರ್ಮದ ತೊಂದರೆ ಇರಬಹುದೆಂದು ಊಹಿಸಿಕೊಂಡಿದ್ದಾರೆ. ವಿಶಾಲ್ ಕನಸುಗಳಿಗೆ ಇಂಬು ನೀಡಿದ್ದ ಚಿಕ್ಕಪ್ಪ ಪ್ರಕಾಶ್ ಬಳಿ ಕರೆದುಕೊಂಡು ಹೋಗಿದ್ದಾರೆ. ಪ್ರಕಾಶ್ ಅವರು ವಿಶಾಲ್ ನನ್ನು ಚರ್ಮದ ತಜ್ಞರ ಬಳಿ ಕರೆದೊಯ್ದಾಗಲೇ ಗೊತ್ತಾಗಿದ್ದು ಇದು ಬೇರೇನೋ ಎಂದು.

ವೈದ್ಯರು ರಕ್ತದ ಪರೀಕ್ಷೆ ಮಾಡಿಸಬೇಕೆಂದು ಶಿಫಾರಸು ಮಾಡಿದ್ದಾರೆ. ವರದಿ ನೋಡುತ್ತಿದ್ದಂತೆ ವೈದ್ಯರು ಮತ್ತು ಪ್ರಕಾಶ್ ಅವರ ಮುಖ ವಿವರ್ಣವಾಗಿದೆ. ಕೂಡಲೆ ವಿಶಾಲ್‌ನನ್ನು ಆಸ್ಪತ್ರೆಗೆ ದಾಖಲಿಸಬೇಕೆಂದು ವೈದ್ಯರು ಸೂಚಿಸಿದರು. ವಿಶಾಲ್ ರಕ್ತದಲ್ಲಿ ಬಿಳಿ ರಕ್ತದ ಕಣಗಳ ಸಂಖ್ಯೆ ಸಿಕ್ಕಾಪಟ್ಟೆ ಜಾಸ್ತಿಯಿತ್ತು. ಇದು ಕ್ಯಾನ್ಸರ್ ಇರುವ ಸೂಚನೆ ನೀಡಿತ್ತು.

Indian Cricket Team Aspirant From Bangalore Fighting Cancer

ದಿಕ್ಕು ತೋಚದಂತಾದ ವಿಶಾಲ್ ಕುಟುಂಬ

ವಿಶಾಲ್ ತಂದೆ ಕೆಲಸ ಮಾಡುತ್ತಿದ್ದ ಯಾವುದೋ ಎಲೆಕ್ಟ್ರಾನಿಕ್ ಕಂಪನಿ ಹತ್ತು ವರ್ಷಗಳ ನಂತರ ನೋಟೀಸ್ ಕೂಡ ನೀಡದೆ ಬಂದ್ ಆಗಿತ್ತು. ಬಂಧುಗಳ ಸಹಾಯದಿಂದ ಡ್ರೈವರ್ ಕೆಲಸ ಗಿಟ್ಟಿಸಿಕೊಂಡಿದ್ದರು. ಹೊರಜಗತ್ತು ಏನೆಂಬುದನ್ನೇ ಅರಿಯದ ವಿಶಾಲ್ ತಾಯಿ ಕೂಡ ಮನೆಯ ಕಷ್ಟ ನೋಡಿ ಶಾಲೆಯೊಂದರಲ್ಲಿ ಗುಮಾಸ್ತೆಯಾಗಿ ಕೆಲಸ ಮಾಡುತ್ತಿದ್ದರು.

ವಿಶಾಲ್ ನಿಗೆ ತಮ್ಮನೊಬ್ಬನಿದ್ದಾನೆ. ತಂದೆ ತಾಯಿಯರ ಗಳಿಕೆ ಸಾಕಾಗುತ್ತಿರಲಿಲ್ಲವಾದ್ದರಿಂದ ಇವರಿಬ್ಬರ ಬಂಧಗಳೇ ಓದಿನ ಖರ್ಚು ನೋಡಿಕೊಂಡಿದ್ದರು. ವಿಶಾಲ್ ನಲ್ಲಿದ್ದ ಪ್ರತಿಭೆಯನ್ನು ಗುರುತಿಸಿದ್ದ ಪ್ರಕಾಶ್ ಅವರು ಕ್ರಿಕೆಟ್ ಕೋಚಿಂಗಿಗೆ ಸೇರಿಸಿದ್ದರು. ವಿಶಾಲ್ ನಿಗೆ ಕೆಲಸ ಸಿಕ್ಕು ಇನ್ನೇನು ಬಡತನ ದೂರವಾಗುತ್ತದೆ ಎಂದು ಅಂದುಕೊಂಡಿರುವಾಗ ಕ್ಯಾನ್ಸರ್ ಎಂಬ ಮಾರಿ ಅಮರಿಕೊಂಡಿದೆ.

Indian Cricket Team Aspirant From Bangalore Fighting Cancer

ಬೇಕಿದೆ 12ರಿಂದ 14 ಲಕ್ಷ ರು.

ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿರುವಾಗಲೂ ವಿಶಾಲ್ ನಿಗೆ ಕ್ರಿಕೆಟಿನದೇ ಧ್ಯಾನ. ಚಿಕಿತ್ಸೆಗೆ ಸ್ಪಂದಿಸುತ್ತಿರುವ ಆತನ ಬಿಳಿರಕ್ತಕಣಗಳ ಸಂಖ್ಯೆ ತುಸು ಕಡಿಮೆಯಾಗಿದೆ. ಆದರೆ ಮುಂದಿನ ಹತ್ತು ದಿನಗಳು ತುಂಬಾ ಮುಖ್ಯವಾಗಿದ್ದು, ಬಿಟ್ಟುಬಿಡದಂತೆ ಚಿಕಿತ್ಸೆ ಮುಂದುವರಿಸಬೇಕೆಂದು ವೈದ್ಯರು ಹೇಳಿದ್ದಾರೆ. ಆದರೆ ಇದಕ್ಕೆಲ್ಲ ಬೇಕಾಗಿರುವುದು ಅಂದಾಜು 12ರಿಂದ 14 ಲಕ್ಷ ರು.

ಕರ್ನಾಟಕ ರಣಜಿ ತಂಡ ಮಾತ್ರವಲ್ಲ ಭಾರತ ಕ್ರಿಕೆಟ್ ತಂಡ ಸೇರಿಕೊಳ್ಳಬೇಕೆಂಬ ವಿಶಾಲ ಕನಸುನ್ನು ವಿಶಾಲ್ ಕಟ್ಟಿಕೊಂಡಿದ್ದಾನೆ. ಆತ ಬದುಕಿ ಬರಬೇಕಿದ್ದರೆ ವಿಶಾಲ ಹೃದಯವುಳ್ಳವರು ದಾನ ಮಾಡಬಹುದಾಗಿದೆ. ಇಷ್ಟು ವರ್ಷ ಕ್ರಿಕೆಟಿಗಾಗಿ ಆತ ಹೋರಾಟ ಮಾಡಿದ, ಈಗ ಕ್ಯಾನ್ಸರ್ ವಿರುದ್ಧ ಆತ ಹೋರಾಡಿ ಗೆಲ್ಲಬೇಕಾಗಿದೆ. ಗೆದ್ದುಬರಲಿ ಎಂದು ಆಶಿಸೋಣ.

English summary
Young cricketer from Bengaluru Vishal Ballal V (20), who is from poor family and dreaming to play for India, is suffering from Acute Myeloid Leukemia (AML), a kind of blood cancer and is undergoing treatment at Columbia Asia Hospital. He needs Rs. 12-14 lakh for treatment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X