ಐಬಿಎಂ ಉದ್ಯೋಗಿ ಕುಸುಮಾ ಕೊಲೆ ಪಾತಕಿ ಬಂಧನ

Posted By:
Subscribe to Oneindia Kannada

ಬೆಂಗಳೂರು, ಜನವರಿ 21 : ಐಬಿಎಂ ಉದ್ಯೋಗಿ ಕುಸುಮಾ ರಾಣಿ ಸಿಂಗ್ಲಾ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ. ಬೆಂಗಳೂರು ಪೊಲೀಸರ ವಿಶೇಷ ತಂಡ ಹರ್ಯಾಣದಲ್ಲಿ ಆರೋಪಿಯನ್ನು ಬಂಧಿಸಿದ್ದು, ಬೆಂಗಳೂರಿಗೆ ಕರೆತಂದಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಪೂರ್ವ ವಲಯದ ಅಪರ ಪೊಲೀಸ್ ಆಯುಕ್ತ ಪಿ.ಹರಿಶೇಖರನ್ ಅವರು ಈ ಕುರಿತು ಮಾಹಿತಿ ನೀಡಿದರು. ಕುಸುಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರ್ಯಾಣ ಮೂಲದ ಸುಖ್‌ ಬೀರ್ ಸಿಂಗ್‌ನನ್ನು ಬಂಧಿಸಲಾಗಿದೆ ಎಂದರು. [ಬೆಂಗಳೂರು : ಐಬಿಎಂ ಟೆಕ್ಕಿ ಹತ್ಯೆ]

kadugodi

ಜನವರಿ 19ರ ಮಂಗಳವಾರ ಕಾಡುಗೋಡಿ ಸಮೀಪದ ಮಹಾವೀರ್ ಕಿಂಗ್ಸ್‌ ಪ್ಲೇಸ್ ಅಪಾರ್ಟ್‌ಮೆಂಟ್‌ನಲ್ಲಿ ಐಬಿಎಂ ಉದ್ಯೋಗಿ ಕುಸುಮಾ ರಾಣಿ ಸಿಂಗ್ಲಾ (31) ಹತ್ಯೆಯಾಗಿತ್ತು. ಕುಸುಮಾ ಅವರನ್ನು ಕೊಲೆ ಮಾಡಿದ್ದ ಸಿಂಗ್ ಕ್ರೆಡಿಟ್, ಡೆಬಿಟ್ ಕಾರ್ಡ್, ಚೆಕ್ ಬುಕ್ ಹಾಗೂ ಮೊಬೈಲ್ ಫೋನ್‌ಗಳನ್ನು ದೋಚಿಕೊಂಡು ಪರಾರಿಯಾಗಿದ್ದ.

ಪಂಜಾಬ್ ಮೂಲದ ಕುಸುಮಾ ರಾಣಿ ಸಿಂಗ್ಲಾ ಅವರು ದೆಹಲಿ ಮೂಲದ ನಿಧಿ ಶರ್ಮಾ ಅವರ ಜೊತೆ ವಾಸವಾಗಿದ್ದರು. ಮಂಗಳವಾರ ಕೆಲಸಕ್ಕೆ ಹೋಗದೆ ರಜೆ ಪಡೆದಿದ್ದರು. ಅಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಅಪಾರ್ಟ್‌ಮೆಂಟ್‌ಗೆ ಬಂದಿದ್ದ ಸುಖ್‌ ಬೀರ್ ಸಿಂಗ್‌ನನ್ನು ಕುಸುಮಾ ರಾಣಿ ಅವರೇ ಮನೆಗೆ ಕರೆದುಕೊಂಡು ಹೋಗಿದ್ದರು.

ಕುಸುಮಾ ಅವರ ಕುತ್ತಿಗೆಯನ್ನು ಲ್ಯಾಪ್‌ಟಾಪ್ ಚಾರ್ಜ್‌ರ್‌ನ ವೈರ್‌ನಿಂದ ಬಿಗಿದು ಕೊಲೆ ಮಾಡಿದ ಸಿಂಗ್, ಮಧ್ಯಾಹ್ನ 3ಗಂಟೆಯ ವೇಳೆಗೆ ಅಲ್ಲಿಂದ ಪರಾರಿಯಾಗಿದ್ದ. ನಂತರ ದೆಹಲಿಗೆ ತೆರಳಿ ಅಲ್ಲಿಂದ ಹರ್ಯಾಣಕ್ಕೆ ಹೋಗಿದ್ದ. ಅಪಾರ್ಟ್‌ಮೆಂಟ್ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಆರೋಪಿಯ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಿದ್ದರು.

ಫೇಸ್‌ಬುಕ್ ಮೂಲಕ ಪರಿಚಯ : ಕುಸುಮಾ ರಾಣಿ ಸಿಂಗ್ಲಾ ಮತ್ತು ಸುಖ್‌ ಬೀರ್ ಸಿಂಗ್‌ ಪರಸ್ಪರ ಪರಿಚಿತರು. ಫೇಸ್‌ಬುಕ್ ಮೂಲಕ ಸಿಂಗ್ಲಾರನ್ನು ಪರಿಚಯ ಮಾಡಿಕೊಂಡಿದ್ದ ಸಿಂಗ್ ಅವರ ಬಳಿ ಇರುವ ಹಣ ಮತ್ತು ಆಭರಣ ದೋಚಲು ಸಂಚು ರೂಪಿಸಿದ್ದ. ಅದಕ್ಕಾಗಿ ಈ ಕೊಲೆ ಮಾಡಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru police have arrested 30-year-old Sukhbir singh from Haryana in connection with the techie IBM Kusuma Rani murder case.
Please Wait while comments are loading...