ಹುಕ್ಕಾ ಎಂದರೆ ಸಮಸ್ಯೆ ಪಕ್ಕಾ, ಸಿಗರೇಟ್ ನಷ್ಟೇ ಆಗುತ್ತೆ ಅನಾರೋಗ್ಯದ ಲೆಕ್ಕ

By: ಪ್ರವೀಣ್ ರಾವ್ ಎಸ್.
Subscribe to Oneindia Kannada

ಬೆಂಗಳೂರು, ಫೆಬ್ರವರಿ 4: ನಗರದಲ್ಲಿ ಅಕ್ರಮ ಹುಕ್ಕಾ ಬಾರ್ ಗಳು ತಲೆ ಎತ್ತಿರುವ ಬಗ್ಗೆ ಇತ್ತೀಚೆಗೆ ನಡೆದ ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಸಭೆಯಲ್ಲಿ ಬಿಸಿಬಿಸಿ ಚರ್ಚೆಯಾಗಿದೆ. ಪಕ್ಷಭೇದ ಮರೆತು ಪಾಲಿಕೆ ಸದಸ್ಯರು ಈ ಹುಕ್ಕಾ ಬಾರ್ ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ನಗರದಲ್ಲಿರುವ 600ಕ್ಕೂ ಹೆಚ್ಚು ಹುಕ್ಕಾಬಾರ್ ಗಳನ್ನು ಮುಚ್ಚಿಸುವಂತೆ ಆಗ್ರಹ ಮಾಡಿದ್ದಾರೆ.

ಇದೀಗ ತಂಬಾಕು ನಿಯಂತ್ರಣಕ್ಕಾಗಿ ರಚಿಸಿರುವ ಕರ್ನಾಟಕ ಸರ್ಕಾರದ ಉನ್ನತ ಮಟ್ಟದ ಸಮಿತಿಯ ಸದಸ್ಯರು ಹುಕ್ಕಾಬಾರ್ ಗಳಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ಹುಕ್ಕಾಬಾರ್ ಗಳನ್ನು ನಿಷೇಧಿಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದ್ದಾರೆ.[ಬೆಂಗಳೂರಿನ 3 ಹುಕ್ಕಾಬಾರ್ ಗಳ ಮೇಲೆ ದಾಳಿ, 15 ಜನರ ಸೆರೆ]

ತಂಬಾಕು ನಿಯಂತ್ರಣಕ್ಕಾಗಿ ರಚಿಸಿರುವ ಕರ್ನಾಟಕ ಸರ್ಕಾರದ ಉನ್ನತ ಮಟ್ಟದ ಸಮಿತಿಯ ಸದಸ್ಯರೂ ಆಗಿರುವ ಕ್ಯಾನ್ಸರ್ ರೋಗ ತಜ್ಞ ಡಾ.ವಿಶಾಲ್ ರಾವ್ ಯು.ಎಸ್. ಅವರು ಒಂದು ಬಹಿರಂಗ ಪತ್ರ ಬರೆದಿದ್ದು, ತಂಬಾಕು ಉತ್ಪನ್ನಗಳ ನಿಯಂತ್ರಣ ಮಾಡುವುದು ಅತ್ಯಗತ್ಯವಾಗಿದೆ. ಇದೇ ವೇಳೆ, ಹುಕ್ಕಾ ಸೇದುವುದು ಸಿಗರೇಟ್ ಸೇದುವುದಕ್ಕಿಂತ ಹಾನಿಕಾರಕವಾಗಿರುತ್ತದೆ. ಏಕೆಂದರೆ, ಹುಕ್ಕಾದಲ್ಲಿ ಟಾಕ್ಸಿಕ್ ಅಂಶ ಹೆಚ್ಚಾಗಿರುತ್ತದೆ ಎಂದು ಹೇಳಿದ್ದಾರೆ.

ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ(ಕೋಟ್ಪಾ) 4, 5, 6 ಮತ್ತು 7ರ ಸೆಕ್ಷನ್ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಅಂದರೆ, ರೆಸ್ಟೋರೆಂಟ್ ಮತ್ತು ಇತರೆ ಸ್ಥಳಗಳಲ್ಲಿ ಹುಕ್ಕಾ ಸೇವನೆ ಮಾಡುವುದು ಅಕ್ರಮ ಮತ್ತು ಅಪರಾಧವಾಗಿದ್ದು, ಇದು ಶಿಕ್ಷಾರ್ಹ ಅಪರಾಧವಾಗಿದೆ.[ಬೆಂಗಳೂರಿನ ಬಾರ್ ಟೆರೇಸ್ ಮೇಲೆ ಹುಕ್ಕಾದಂಧೆ]

ಸರಕಾರ ಇತ್ತೀಚೆಗೆ ಹೊರಡಿಸಿದ ಆದೇಶದ ಪ್ರಕಾರ ಎಲ್ಲ ಕೆಫೆಗಳು, ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್ ಗಳು ಕಡ್ಡಾಯವಾಗಿ ಕೋಟ್ಪಾ ಕಾಯ್ದೆಯನ್ನು ಪಾಲಿಸಬೇಕು ಎಂದು ಹೇಳಿದೆ. ಇದನ್ನು ಪಾಲಿಸಿದರೆ ಮಾತ್ರ ಮುನ್ಸಿಪಾಲಿಟಿಗಳು ವ್ಯಾಪಾರ ಪರವಾನಗಿ ನೀಡಬೇಕೆಂದೂ ಆದೇಶದಲ್ಲಿ ತಿಳಿಸಲಾಗಿದೆ.

ಆದರೆ, ನೋವಿನ ಸಂಗತಿಯೆಂದರೆ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹುಕ್ಕಾ ಬಾರ್ ಗಳು ಕೋಟ್ಪಾ ಕಾಯ್ದೆಯ ಯಾವುದೇ ಕಾನೂನನ್ನು ಪಾಲಿಸುತ್ತಿಲ್ಲ. ಈ ಕಾನೂನು ಉಲ್ಲಂಘನೆ ಪರಿಣಾಮ ಹುಕ್ಕಾ ಬಾರ್ ಗಳ ಪರವಾನಗಿಯನ್ನು ರದ್ದು ಮಾಡಲು ಕಾನೂನಿನಲ್ಲಿ ಅವಕಾಶವಿದೆ.[ಸಿಗರೇಟು ಶಾಶ್ವತವಾಗಿ ಸುಟ್ಟಾಕಿ : ಸೆಲೆಬ್ರಿಟಿಗಳ ಕೂಗು]

ಹುಕ್ಕಾಬಾರ್ ಮತ್ತು ಕಾನೂನು

ಹುಕ್ಕಾಬಾರ್ ಮತ್ತು ಕಾನೂನು

ಹುಕ್ಕಾ ಬಾರ್ ಗಳೂ ಕಾನೂನನ್ನು ಪಾಲಿಸುವುದು ಕಡ್ಡಾಯ ಎಂದು ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ ಎಂದು ಪತ್ರದಲ್ಲಿ ತಿಳಿಸಿರುವ ವಿಶಾಲ್ ರಾವ್, ಪ್ರಸ್ತುತ ಹುಕ್ಕಾ ಬಾರ್ ಗಳು ಕೋಟ್ಪಾ ಕಾಯ್ದೆಯ ಈ ಕೆಳಕಂಡ ಕಾನೂನುಗಳನ್ನು ಉಲ್ಲಂಘನೆ ಮಾಡುತ್ತವೆ ಎಂದು ವಿವರಿಸಿದ್ದಾರೆ.

1.ಸೆಕ್ಷನ್ 4:- 30 ಆಸನಗಳಿಗಿಂತ ಕಡಿಮೆ ಸಾಮರ್ಥ್ಯವಿರುವ ಹೋಟೆಲ್/ರೆಸ್ಟೋರೆಂಟ್/ಬಾರ್ ಗಳಲ್ಲಿ ಹುಕ್ಕಾ ಸೇವೆ ಇರುವಂತಿಲ್ಲ. 30 ಸೀಟ್ ಗಳಿಗಿಂತ ಹೆಚ್ಚಿನ ಸಾಮರ್ಥ್ಯವಿರುವ ಕಡೆ ಹುಕ್ಕಾ ಸೇವೆಯನ್ನು ನೀಡಬಹುದು. ಆದರೆ ಇದಕ್ಕೆಂದೇ ಪ್ರತ್ಯೇಕ ಧೂಮಪಾನ ಸ್ಥಳವನ್ನು ಮೀಸಲಿಟ್ಟಿರಬೇಕು. ಈ ಸ್ಥಳದಲ್ಲಿ ಯಾವುದೇ ತಿಂಡಿ-ತಿನಿಸು ಸೇವೆ ಇರಬಾರದು ಮತ್ತು ಪ್ರತ್ಯೇಕ ವೆಂಟಿಲೇಶನ್ ವ್ಯವಸ್ಥೆ ಇರಬೇಕು.

2.ಸೆಕ್ಷನ್ 5:- ಹುಕ್ಕಾವನ್ನು ಉತ್ತೇಜಿಸುವಂತಹ ಯಾವುದೇ ಜಾಹೀರಾತು ಪ್ರದರ್ಶಿಸುವಂತಿಲ್ಲ.

3.ಸೆಕ್ಷನ್ 6(ಎ) ಮತ್ತು (ಬಿ):- (ಎ) ಶಿಕ್ಷಣ ಸಂಸ್ಥೆಗಳಿರುವ ಸುತ್ತಮುತ್ತಲಿನ 100 ಯಾರ್ಡ್ ಗಳ ವ್ಯಾಪ್ತಿಯಲ್ಲಿ ಹುಕ್ಕಾ ಮಾರಾಟ ಮಾಡುವಂತಿಲ್ಲ. (ಬಿ) ಮಕ್ಕಳಿಗೆ ಹುಕ್ಕಾ ಮಾರಾಟ ಮಾಡುವಂತಿಲ್ಲ. ಹುಕ್ಕಾ ಮಾರಾಟ ಸ್ಥಳಗಳಲ್ಲಿ ತಂಬಾಕು ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎಂಬ ಚಿತ್ರಸಹಿತವಾದ ಪ್ರಕಟಣೆ ಫಲಕ ಹಾಕುವುದು ಕಡ್ಡಾಯ.

4.ಸೆಕ್ಷನ್ 7: ಹುಕ್ಕಾದಿಂದ ಆಗುವ ದುಷ್ಪರಿಣಾಮದ ಬಗ್ಗೆ ಚಿತ್ರಸಹಿತವಾದ ಪ್ರಕಟಣೆ ಹುಕ್ಕಾ ಉತ್ಪನ್ನಗಳ ಮೇಲಿರುವುದು ಕಡ್ಡಾಯ.

ಮಾದಕ ಪದಾರ್ಥ ಸೇವನೆಗೆ ಹುಕ್ಕಾ ಹೆಬ್ಬಾಗಿಲು

ಮಾದಕ ಪದಾರ್ಥ ಸೇವನೆಗೆ ಹುಕ್ಕಾ ಹೆಬ್ಬಾಗಿಲು

"ನಗರದಲ್ಲಿರುವ ಹುಕ್ಕಾ ಬಾರ್ ಗಳು ಯುವಜನಾಂಗವನ್ನು ಗುರಿಯಾಗಿಟ್ಟುಕೊಂಡು ವ್ಯವಹಾರ ನಡೆಸುತ್ತಿವೆ. ಈ ಉತ್ಪನ್ನ ಒಂದು ಸ್ಟೈಲ್, ಚಿಂತೆಯನ್ನು ದೂರ ಮಾಡುತ್ತದೆ ಅಥವಾ ಏಕಾಂತತೆಯ ಬೇಸರವನ್ನು ಕಳೆಯುತ್ತದೆ ಎಂದು ವಿದ್ಯಾರ್ಥಿ ಸಮುದಾಯವನ್ನು ಸೆಳೆಯುವ ಪ್ರಯತ್ನ ಮಾಡುತ್ತಿವೆ. ಇದು ಪೋಷಕರ ಕಳವಳಕ್ಕೆ ಕಾರಣವಾಗಿದ್ದು, ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿ ಮಾಡಿದೆ. ಪ್ರಸ್ತುತ ಹುಕ್ಕಾ ಬಳಕೆ ಆರೋಗ್ಯಕ್ಕೆ ಹಾನಿಕರ ಮತ್ತು ಕೋಟ್ಪಾ ಕಾಯ್ದೆಯ ಸೆಕ್ಷನ್‍ಗಳ ಉಲ್ಲಂಘನೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾದಕ ವಸ್ತುಗಳಿಗೆ ಈ ಹುಕ್ಕಾ ಒಂದು ರೀತಿಯ ಹೆಬ್ಬಾಗಿಲು ಆದಂತಾಗಿದೆ'' ಎಂದು ವಿಶಾಲ್ ರಾವ್ ಆತಂಕ ವ್ಯಕ್ತಪಡಿಸಿದ್ದಾರೆ.

ಹುಕ್ಕಾವನ್ನು ನಾರ್ಘಿಲೆ, ಶೀಶ ಮತ್ತು ಗೋಝಾ ಎಂದು ಕರೆಯಲಾಗುತ್ತಿದ್ದು, ಇದು ನೀರಿನ ಪೈಪ್ ನೊಂದಿಗೆ ಸ್ಮೋಕ್ ಚೇಂಬರ್, ಬೌಲ್, ಪೈಪ್ ಮತ್ತು ಹೋಸ್ ಹೊಂದಿರುತ್ತದೆ. ಹುಕ್ಕಾ ಸೇವನೆ ಮಾಡುವವರು ಈ ಪೈಪ್ ಮೂಲಕ ಸಿಗರೇಟ್ ಸೇವನೆ ಮಾಡುವವರಿಗಿಂತ ಹೆಚ್ಚಿನ ತಂಬಾಕು ಸೇವನೆ ಮಾಡುತ್ತಾರೆ. ಇದರ ಜತೆಗೆ ಹೆಚ್ಚು ಹೊಗೆಯನ್ನು ಕುಡಿಯುತ್ತಾರೆ. ಇದು ಹೆಚ್ಚು ಕಡಿಮೆ 60 ನಿಮಿಷಗಳ ಕಾಲ ಇರುತ್ತದೆ.

ಹುಕ್ಕಾ ಹೊಗೆ ಅತಿ ಹೆಚ್ಚಿನ ಟಾಕ್ಸಿಕ್ ಅಂಶಗಳನ್ನು ಒಳಗೊಂಡಿರುತ್ತದೆ. ಅಂದರೆ ಟಾರ್, ಕಾರ್ಬನ್ ಮಾನಾಕ್ಸೈಡ್, ಲೋಹದ ಅಂಶ ಮತ್ತು ಕ್ಯಾನ್ಸರ್ ರೋಗ ತರುವ ರಾಸಾಯನಿಕಗಳನ್ನು ಒಳಗೊಂಡಿರುತ್ತದೆ. ಹುಕ್ಕಾ ಸೇವನೆ ಮಾಡುವವರು ಸಿಗರೇಟ್ ಸೇದುವವರಿಗಿಂತ ಹೆಚ್ಚಿನ ಕಾರ್ಬನ್ ಮಾನಾಕ್ಸೈಡ್ ಮತ್ತು ಹೊಗೆಯನ್ನು ಹೊರಬಿಡುತ್ತಾರೆ. ಈ ಹುಕ್ಕಾ ಸೇವನೆ ಶ್ವಾಸಕೋಶ ಮತ್ತು ಬಾಯಿ ಕ್ಯಾನ್ಸರ್, ಹೃದಯಾಘಾತ ಮತ್ತು ತೀವ್ರ ತೆರನಾದ ಅನಾರೋಗ್ಯಕ್ಕೆ ಕಾರಣವಾಗುತ್ತದೆ.

ಹುಕ್ಕಾ ಸೇವನೆಯಿಂದ ಆಗುವ ಇತರೆ ದುಷ್ಪರಿಣಾಮಗಳು

ಹುಕ್ಕಾ ಸೇವನೆಯಿಂದ ಆಗುವ ಇತರೆ ದುಷ್ಪರಿಣಾಮಗಳು

ಹುಕ್ಕಾದಲ್ಲಿನ ತಂಬಾಕು ಮತ್ತು ಅದರಿಂದ ಬರುವ ಹೊಗೆಯಲ್ಲಿ ಹಲವಾರು ವಿಷಕಾರಕ ಅಂಶಗಳು ಇರುವುದರಿಂದ ಹುಕ್ಕಾ ಸೇವನೆ ಮಾಡಿದರೆ ಹೃದ್ರೋಗಗಳು ಕಾಣಿಸಿಕೊಳ್ಳುತ್ತವೆ. ಹುಕ್ಕಾವನ್ನು ಒಬ್ಬರಿಂದ ಒಬ್ಬರು ಹಂಚಿಕೊಂಡು ಸೇವನೆ ಮಾಡುವುದರಿಂದ ಒಬ್ಬರಲ್ಲಿರುವ ರೋಗ ಮತ್ತೊಬ್ಬರಿಗೆ ಅಂಟಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ.

ಗರ್ಭಿಣಿಯರು ದಿನಕ್ಕೆ ಒಂದು ಬಾರಿ ಅಥವಾ ಎರಡು ಬಾರಿ ಹುಕ್ಕಾ ಸೇದಿದರೆ ಹುಟ್ಟುವ ಮಗುವಿನ ತೂಕ ಕಡಿಮೆಯಾಗುತ್ತದೆ. ಇಷ್ಟೇ ಅಲ್ಲ, ಆ ಮಕ್ಕಳಿಗೆ ಶ್ವಾಸಕೋಶ ಸಮಸ್ಯೆ ಸೇರಿದಂತೆ ಮತ್ತಿತರೆ ತೊಂದರೆಗಳು ಕಾಣಿಸಿಕೊಳ್ಳುತ್ತವೆ.

ಹುಕ್ಕಾ ಮತ್ತು ಸೆಕೆಂಡ್ ಹ್ಯಾಂಡ್ ಸ್ಮೋಕ್

ಹುಕ್ಕಾ ಮತ್ತು ಸೆಕೆಂಡ್ ಹ್ಯಾಂಡ್ ಸ್ಮೋಕ್

ಹುಕ್ಕಾ ಸೇವನೆ ಮಾಡುವವರು ಬಿಡುವ ಹೊಗೆಯಿಂದ ಧೂಮಪಾನ ಮಾಡದಿರುವವರ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ. ಏಕೆಂದರೆ, ಈ ಹೊಗೆ ಕೇವಲ ತಂಬಾಕಿನದ್ದಾಗಿರುವುದಿಲ್ಲ. ಇದರ ಜತೆಗೆ ಚಾರ್ ಕೋಲ್ ನಂತಹ ಬಿಸಿ ಅಂಶವೂ ಸೇರಿಕೊಂಡಿರುತ್ತದೆ. ಹುಕ್ಕಾಗೆ ಬಳಸುವ ತಂಬಾಕು ಸೇವನೆ ಮಾಡುವವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hukka is more dangerous than smoking. here is the complete details about Hukka side effects and law enforced on hukka centres.
Please Wait while comments are loading...