ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡೇತರರಿಗೆ ಕನ್ನಡ ಕಲಿಸುವುದು ಹೇಗೆ? ಇಲ್ಲಿದೆ ಮಾರ್ಗ

By ಹರ್ಷ ಭಾರದ್ವಾಜ್
|
Google Oneindia Kannada News

"ಅಯ್ಯೋ, ಅವರು 20 ವರ್ಷದಿಂದ ಬೆಂಗಳೂರಿನಲ್ಲೇ ಇದ್ದಾರೆ. ಆದ್ರೂ ಅವರಿಗೆ ಒಂದ್ ಪದ ಕನ್ನಡ ಅರ್ಥ ಆಗೋಲ್ಲ"; "ಇಲ್ಲಿನ ಅನ್ನ-ನೀರು ಬೇಕು, ಭಾಷೆ ಮಾತ್ರ ಬೇಡ. ಇದ್ಯಾವ ನ್ಯಾಯ?"; "ಕನ್ನಡ ಗೊತ್ತಿಲ್ವಾ? ಎಲ್ಲಿಂದ ಬಂದ್ಯೋ ಅಲ್ಲಿಗೇ ವಾಪಸ್ ಹೋಗು!"

ಇಂತಹ ಸುಮಾರು ಮಾತುಗಳು ನಮಗೆಲ್ಲರಿಗೂ ದಿನನಿತ್ಯ ಕೇಳಿಬರುತ್ತದೆ. ಮೌಖಿಕ ಸಂಭಾಷಣೆಯಲ್ಲಾಗಲೀ, ಅಥವಾ ಅಂತರ್ಜಾಲದಲ್ಲಿ ಸಿಗುವ ಸಹಸ್ರಾರು troll ಪುಟಗಳಲ್ಲಾಗಲೀ, ಇದು ಸರ್ವೇಸಾಮಾನ್ಯ. ಈ ಪ್ರಕ್ರಿಯೆ ಕೆಲವೊಮ್ಮೆ ವೈಪರೀತ್ಯಕ್ಕೆ ತಿರುಗಿ, ಕನ್ನಡಿಗರು ಪರಭಾಷಿಗರನ್ನು ದ್ವೇಷಿಸುವ ಹಾಗೆ ಮಾಡುತ್ತದೆ.

ಯಾವುದೇ ಸ್ವಾಭಿಮಾನಿ ಕನ್ನಡಿಗನಿಗಾದರೂ ಸರಿ, ತನ್ನ ನಾಡು, ನುಡಿಯನ್ನು ಕೀಳಾಗಿ ನೋಡುವವರಿಗೆ ತಿರುಗೇಟು ನೀಡಲೇಬೇಕು ಎಂದನಿಸುವುದು ಸಹಜ. ಆದರೆ ಹೀಗೆ ಮಾಡುವುದರಿಂದ ಸಂಬಂಧಗಳು ಕಹಿಯಾಗುತ್ತವೆಯೇ ವಿನಹ ಯಾರೂ ಏನನ್ನೂ ಸಾಧಿಸಲಾಗುವುದಿಲ್ಲ.

ಒಂದು ಹೊಸ ಭಾಷೆಯನ್ನು ಕಲಿಯುವುದು ಅಷ್ಟು ಸುಲಭದ ಮಾತಲ್ಲ. ಆಸಕ್ತಿ ಇದ್ದು, ಅದಕ್ಕೆ ಪೂರಕವಾದ ವಾತಾವರಣ ಹಾಗೂ ಕಲಿಯಲು ಸಹಾಯವಾಗುವ ಸಾಮಗ್ರಿಗಳು ಸಿಕ್ಕಿದರೂ ಕೆಲವೊಮ್ಮೆ ಅಸಾದ್ಯ ಎನಿಸುತ್ತದೆ. ಯಾರಿಗೋ ಕನ್ನಡ ಬರುವುದಿಲ್ಲ ಎಂದು ದೂಷಿಸುವುದು ಸುಲಭ. ಆದರೆ ಹಾಗೆ ಮಾಡುವ ಮುನ್ನ ಅವರು ಯಾರಿಂದ ಅಥವಾ ಎಲ್ಲಿಂದ ಕನ್ನಡ ಕಲಿಯಬೇಕು ಎಂದು ಯೋಚಿಸಬೇಕು.

ಕನ್ನಡದ ಕಂಪನ್ನು ಪಸರಿಸುವ ಕಾರ್ಯಕ್ಕೆ ಹಲವು ಆಯಾಮಗಳಿವೆ. ಕೆಲವು ಸರ್ಕಾರದಿಂದ ಆಗಬೇಕಾದ ಕೆಲಸಗಳು. ಇನ್ನು ಕೆಲವು ಜನಸಾಮಾನ್ಯರಿಂದ ಆಗಬಹುದಾದಂತಹ ಕೆಲಸಗಳು. ಪ್ರತೀ ಬಾರಿ ಕರ್ನಾಟಕದಲ್ಲಿ ಕನ್ನಡಕ್ಕೆ ಮಹತ್ವ ಕಡಿಮೆಯಾಗುತ್ತಿದೆ ಎಂದಾಗ ಸರ್ಕಾರವನ್ನೋ, ಪರಭಾಷಿಗರನ್ನೋ ಅಥವಾ ಇನ್ಯಾರನ್ನೋ ದೂರಿ ಸುಮ್ಮನಾಗುವ ಬದಲು ನಮ್ಮ ಕೈಯಲ್ಲಿ ಸಾಧ್ಯವಾದಷ್ಟು ಮಾಡಿದರೆ ಹಲವು ಬದಲಾವಣೆಗಳನ್ನು ತರಬಹುದು.

How to teach Kannada language to non-Kannadigas?

"ಕನ್ನಡ ಗೊತ್ತಿಲ್ಲ" ಸಂಸ್ಥೆ WhatsApp ಮೂಲಕ ಕನ್ನಡ ಕಲಿಸುವ ಕೆಲಸ ಯಶಸ್ವಿಯಾಗಿ ಮಾಡುತ್ತಿದೆ. ಇದರೊಂದಿಗೆ ಕನ್ನಡಿಗರ ಒಡನಾಟವಿದ್ದರೆ ಇನ್ನಷ್ಟು ಬೇಗ ಕನ್ನಡ ಕಲಿಯಬಹುದು. ನಿಮ್ಮ ದಿನನಿತ್ಯದ ಜೀವನದಲ್ಲಿ ಮಾಡಬಹುದಾದಂತಹ ಸಣ್ಣ ಕೆಲಸಗಳು ಇವು:

1. ಪರಭಾಷಿಗರೊಂದಿಗೆ ಕನ್ನಡದಲ್ಲೇ ವ್ಯವಹರಿಸಿ

ಮುಂದಿರುವ ವ್ಯಕ್ತಿಗೆ ಕನ್ನಡ ಗೊತ್ತಿಲ್ಲ ಎಂದು ತಿಳಿದ ಕೂಡಲೇ ಅವರ ಭಾಷೆಯಲ್ಲೇ ವ್ಯವಹರಿಸಲು ಪ್ರಯತ್ನಿಸುತ್ತೇವೆ. ಅವರದೇ ಭಾಷೆಯಲ್ಲಿ ಹರುಕು ಮುರುಕಾಗಿ ಮಾತನಾಡಿ, ಇನ್ನೊಬ್ಬ ವ್ಯಕ್ತಿಗೆ ತೊಂದರೆ ಕೊಡದೆ, ನಾವು ತೊಂದರೆ ತೆಗೆದುಕೊಂಡು ವಿಶಾಲ ಹೃದಯದವರಾಗುತ್ತೇವೆ. ಇದೇನು ಕೆಟ್ಟದ್ದಲ್ಲ, ಆದರೆ ಇದರಿಂದ ಏನಾಗುತ್ತದೆ ಒಮ್ಮೆ ಯೋಚಿಸಿ. ಆ ವ್ಯಕ್ತಿಗೆ ಕನ್ನಡದ ಪರಿಚಯವೇ ಆಗುವುದಿಲ್ಲ. ನಿಧಾನವಾಗಿಯಾದರೂ ಸರಿ, ಅವಕಾಶವಾದಾಗ ಖಂಡಿತ ಕನ್ನಡದಲ್ಲೇ ಮಾತಾಡಿ. ಅವರು ಕನ್ನಡ ಮಾತನಾಡಲು ಕಷ್ಟ ಪಡುತ್ತಿದ್ದಾರೆ ಎಂದು ಗೊತ್ತಾದ ಮರುಕ್ಷಣವೇ ಭಾಷೆ ಬದಲಿಸಬೇಡಿ. ಅವರಿಗೆ ಪ್ರಯತ್ನಿಸಲು ಅವಕಾಶ ನೀಡಿ.

2. ಭಾಷಾ ವಿನಿಮಯ ಮಾಡಿ

ಇತರೆ ಭಾಷೆಗಳ ಬಗ್ಗೆ ಆಸಕ್ತಿ ವ್ಯಕ್ತಪಡಿಸಿ ಮತ್ತು ಅವರಿಗೆ ಕನ್ನಡದ ಬಗ್ಗೆ ತಿಳಿಸಿಕೊಡಿ. ಇದಕ್ಕೆ ಆಂಗ್ಲ ಭಾಷೆಯಲ್ಲಿ "Tandem partner" ಎಂದು ಹೆಸರು. ಉದಾಹರಣೆಗೆ ಎಂಕನಿಗೆ ತಮಿಳು ಕಲಿಯಬೇಕೆಂಬ ಆಸೆ ಮತ್ತು ಸೀನನದು ಕನ್ನಡ ಕಲಿಯುವ ಬಯಕೆ. ಸಮಯ ಸಿಕ್ಕಾಗಲೆಲ್ಲಾ ಇಬ್ಬರೂ ಒಟ್ಟಿಗೆ ಸೇರಿ ಭಾಷಾ ವಿನಿಮಯ ಮಾಡಿಕೊಳ್ಳುತ್ತಾರೆ. ಇದರಿಂದ ಇಬ್ಬರಿಗೂ ಲಾಭ. ಇತರರ ಭಾಷೆ ಕಲಿಯುವುದಷ್ಟೇ ಅಲ್ಲದೇ ಅವರಿಗೂ ನಮ್ಮ ಭಾಷೆ ಹೇಳಿಕೊಡಿ. ಒಂದು ಹೊಸ ಭಾಷೆ ಕಲಿಯುವ ಪ್ರಕ್ರಿಯೆಯಲ್ಲಿ ಮಾತೃಭಾಷಿಗರ ಪಾತ್ರ ಅತ್ಯಂತ ಮುಖ್ಯ.

3. ಊಟ-ತಿಂಡಿ ಪದಾರ್ಥಗಳಿಗೆ ಕನ್ನಡದ ಪದಗಳನ್ನೇ ಬಳಸಿ

ಬೇಳೆಯ ಬದಲು ದಾಲ್, ಕಾವಲಿಯ ಬದಲು ತವಾ, ಹೀಗೆಯೇ ಇತರೆ ಪದಗಳನ್ನು ಬಳಸುವುದು ವಾಡಿಕೆಯಾಗಿದೆ. ಉಪ್ಮಾ ಬದಲು ಉಪ್ಪಿಟ್ಟು ಎನ್ನಿ, ರಸಂ ಬದಲು ಸಾರು ಎನ್ನಿ. ಹೀಗೆ ಮಾಡಿದಾಗ ಪರಭಾಷಿಗರಿಗೆ ಕನ್ನಡದ ಬಹಳಷ್ಟು ಪದಗಳು ಗೊತ್ತಾಗುತ್ತವೆ. ಊಟ-ತಿಂಡಿಗೆ ಮಾತ್ರ ಸೀಮಿತಗೊಳಿಸದೆ ಇತರೆ ಸಾಮಗ್ರಿಗಳಿಗೂ ಕನ್ನಡದ ಪದಗಳನ್ನೇ ಬಳಸಿದರೆ ಇನ್ನೂ ಉತ್ತಮ.

4. ಕನ್ನಡ ಹಾಡುಗಳನ್ನು ಕೇಳಿಸಿ ಮತ್ತು ಕನ್ನಡ ಚಿತ್ರಗಳಿಗೆ ಕರೆದೊಯ್ಯಿರಿ

ಕನ್ನಡದಲ್ಲಿನ ಉತ್ತಮ ಚಿತ್ರಗಳು ಬಹಳಷ್ಟು ಮತ್ತು ಉತ್ತಮ ಹಾಡುಗಳು ಮತ್ತಷ್ಟು. ಇತ್ತೀಚಿನ ಹಲವು ಕನ್ನಡ ಚಿತ್ರಗಳು English subtitlesನೊಂದಿಗೆ ಲಭ್ಯ. ಸುಗಮ ಸಂಗೀತ, ಜಾನಪದ, ಚಿತ್ರ ಸಂಗೀತ ಹೀಗೇ ಹತ್ತು ಹಲವು ವಿಧಗಳೊಂದಿಗೆ ಕನ್ನಡ ಸಂಗೀತ ಭಂಡಾರವು ಸಮೃದ್ಧವಾಗಿದೆ.

5. ಗಾಂಧಿ ಜಯಂತಿಯಂದು ಮಹಾತ್ಮಾ ಗಾಂಧಿ ರಸ್ತೆಗೆ ಬನ್ನಿ

ಬೆಂಗಳೂರು ಮೆಟ್ರೋ ರೈಲು ನಿಗಮದ ಸಹಯೋಗದೊಂದಿಗೆ "ಕನ್ನಡ ಗೊತ್ತಿಲ್ಲ" ಒಂದು ವಿನೂತನ ಕಾರ್ಯಕ್ರಮ ಆಯೋಜಿಸಿದೆ. ಕಾರ್ಯಕ್ರಮದ ಉದ್ದೇಶ ಕನ್ನಡಿಗರನ್ನು ಹಾಗೂ ಕನ್ನಡ ಕಲಿಯಬಯಸುವವರನ್ನು ಒಂದೇ ಸೂರಿನಡಿ ಸೇರಿಸುವುದು. ಇಲ್ಲಿ ಬಂದು ಎಲ್ಲರೂ ಕನ್ನಡ ಹೇಳಿಕೊಡಬಹುದು, ಕನ್ನಡ ಕಲಿಯಬಹುದು. ಬನ್ನಿ, ನಿಮ್ಮ ಸ್ನೇಹಿತರನ್ನೂ ಕರೆತನ್ನಿ. ಬರ್ತೀರಿ ತಾನೇ?

ಎಲ್ಲಿ? : ರಂಗೋಲಿ ಮೆಟ್ರೋ ಆರ್ಟ್ ಸೆಂಟರ್, ಮೆಟ್ರೋ ನಿಲ್ದಾಣ, ಮಹಾತ್ಮಾ ಗಾಂಧಿ ರಸ್ತೆ, ಬೆಂಗಳೂರು.
ಎಂದು? : ಅಕ್ಟೋಬರ್ 02, 2016 ಸಂಜೆ 5.15ಕ್ಕೆ

English summary
How to teach Kannada to non-Kannadigas? Kannada Gottilla team and Rangoli Metro Art Center presenting Live Kannada Speaking Class '#AnyBodyCanTeach' along with 'Kannada Improve' on 2nd October 2016 at 5.15PM at Rangoli Art Center M.G road, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X