ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಬ್ಬಾಳ್ ಫ್ಲೈಓವರ್ ಬಳಿ ಸಿಲುಕಿಕೊಂಡರೆ ಗೋವಿಂದ!

By Prasad
|
Google Oneindia Kannada News

ಬೆಂಗಳೂರು, ಮೇ 21 : ಸೋಮವಾರದಿಂದ ಭಾನುವಾರದವರೆಗೆ ಯಾವುದೇ ದಿನ, ಯಾವುದೇ ಸಂದರ್ಭದಲ್ಲಿ, ಬೆಳಿಗ್ಗೆಯಿಂದ ಹಿಡಿದು ಮಧ್ಯರಾತ್ರಿಯವರೆಗೆ ಯಾವುದೇ ಸಮಯದಲ್ಲಿ ಹೆಬ್ಬಾಳ್ ಫ್ಲೈಓವರ್ ಬಳಿ ಸಾಗಬೇಡಿ. ಅಲ್ಲಿ ಹೋದ್ರೆ ನೀವು, ನಿಮ್ಮ ಸಮಯ ಎಲ್ಲ ಕೆಟ್ಟಿತೆಂದೇ ಅರ್ಥ.

ಒಂದಾನೊಂದು ಕಾಲದಲ್ಲಿ ಹೆಬ್ಬಾಳ್ ಫ್ಲೈಓವರ್ ಭಾರೀ ಅನುಕೂಲ ಮಾಡಿಕೊಟ್ಟಿತ್ತು. ವಾಹನಗಳು ಸರಾಗವಾಗಿ ಚಲಿಸುತ್ತಿದ್ದವು. ಆದರೆ, ಯಾವಾಗ ಹೆಬ್ಬಾಳದಿಂದ ಏರ್ಪೋರ್ಟ್ ವರೆಗೆ ಮೇಲುಸೇತುವೆ ಆರಂಭವಾಯಿತೋ, ಅಲ್ಲಿ ಅಡ್ಡಾಡುವವರಿಗೆ ನಿತ್ಯವೂ ನರಕಯಾತನೆ.[ನಮ್ಮ ಮೆಟ್ರೋ ಗ್ರೀನ್ ಲೈನ್ ಜೂನ್ 1 ರಿಂದ ಶುಭಾರಂಭ]

How to ease traffic at Hebbal Flyover

ಈ ಸಮಸ್ಯೆಗೆ ಅವೈಜ್ಞಾನಿಕವಾದ ಪ್ಲಾನಿಂಗ್ ಕಾರಣವಾಗಿರುವುದು ಮಾತ್ರವಲ್ಲ, ಶೇ.90ರಷ್ಟು ಕಾರು, ಆಟೋ, ಬಸ್ಸು, ಟ್ಯಾಕ್ಸಿ, ಬೈಕು ಓಡಿಸುವವರು ಕೂಡ ಸಾಕಷ್ಟು ಯೋಗದಾನ ನೀಡಿದ್ದಾರೆ. ಅದರಲ್ಲೂ ಮಧ್ಯಾಹ್ನದ ಬಿರುಬಿಸಿಲಿನಲ್ಲಿ ಫ್ಲೈಓವರ್ ಬಳಿ ಸಿಲುಕಿಕೊಂಡರೆ, ದಾಟಿ ಬರುವ ಹೊತ್ತಿಗೆ ಬೆವರಿನಿಂದ ಜಳಕವಾಗಿರುತ್ತದೆ.

ಏರ್ಪೋರ್ಟ್ ಕಡೆಯಿಂದ ಭರ್ರನೆ ಇಳಿದು ಬರುವವರು ನೇರವಾಗಿ ಹೆಬ್ಬಾಳ್ ಫ್ಲೈಓವರ್ ಸೇರಿಕೊಳ್ಳುತ್ತಾರೆ. ಎಸ್ಟೀಮ್ ಮಾಲ್ ಬಳಿ ನಾಗವಾರದ ಕಡೆಗೆ ಸಾಗುವವರಿಗಾಗಿ ಡಿವೈಡರ್ ಅನ್ನು ಹಾಕಿ ಮತ್ತಷ್ಟು ಗೊಂದಲ ಸೃಷ್ಟಿಸಲಾಗಿದೆ. ಇನ್ನು ರಸ್ತೆ ನಿಯಮಗಳಿಗೆ ವಾಹನ ಓಡಿಸುವವರ ಬಳಿ ಕವಡೆ ಕಾಸಿನ ಕಿಮ್ಮತ್ತು ಸಿಗುವುದಿಲ್ಲ.[ವಾರಾಂತ್ಯದ ಮಳೆಗೆ ಕಂಗಾಲಾದ ಬೆಂಗಳೂರಿಗರು, ನೆಲ ಕಂಡ ಮರಗಳು]

ಒಂದೇ ಲೈನಿನಲ್ಲಿ ಚಲಿಸುತ್ತಿದ್ದರೆ ತೊಂದರೆ ಇರುವುದಿಲ್ಲ. ಆದರೆ, ಎಲ್ಲರಿಗೂ ಅರ್ಜೆಂಟು, ಯಾವೋನಾದರೂ ಅಡ್ಡ ಬಂದ್ರೆ ಸಿಕ್ಕಾಪಟ್ಟೆ ಸಿಟ್ಟು, ಸತತವಾಗಿ ಸದ್ದು ಮಾಡುತ್ತಲೇ ಇರುವ ಹಾರ್ನುಗಳು, ಪಕ್ಕದ ಕಿಟಕಿಯಿಂದ ಕೇಳಿಬರುವ ವಾಚಾಮಗೋಚರ ಬೈಗುಳಗಳು...

ಒಬ್ಬರ ಹಿಂದೆ ಇನ್ನೊಬ್ಬರು ಶಿಸ್ತಿನಿಂದ ಚಲಿಸಲು ಏನು ಧಾಡಿ ಇವರಿಗೆ? ಸ್ವಲ್ಪ ಜಾಗ ಸಿಗ್ಗರೂ ಸಾಕು ಸಟ್ಟನೆ ಎಡಬಲ ತಿರುವಿ ಪಕ್ಕದ ಲೈನಿಗೆ ಬರಲು ಹವಣಿಸುತ್ತಿರುತ್ತಾರೆ. ಹೋಗಲಿ ಈ ರೀತಿ ಒಂದಿಬ್ಬರು ಮಾಡುತ್ತಾರಾ? ಎಲ್ಲರಿಗೂ ಅರ್ಜೆಂಟೇ, ಎಲ್ಲರಿಗೂ ಮೊದಲು ತಾವೇ ದಾಟಿ ಹೋಗಬೇಕೆಂಬ ಗಡಿಬಿಡಿ. ಟ್ರಾಫಿಕ್ ಜಾಮ್ ಆಗದೆ ಇನ್ನೇನು ಆಗುತ್ತದೆ.

ಈ ಸಮಸ್ಯೆಗೆ ಪರಿಹಾರವೇನು?

ಇದಕ್ಕೆ ಪರಿಹಾರವೇನು ಎಂದು ಬೆಂಗಳೂರು ಟ್ರಾಫಿರ್ ಪೊಲೀಸರು ತಮ್ಮ ವಾರಾಂತ್ಯದ ರಜಾದಿನಗಳನ್ನು ಅಥವಾ ವೀಕ್ಲಿ ಆಫ್ ಅನ್ನು ರದ್ದುಪಡಿಸಿ ಇಂದೇ ಕುಳಿತು ಕಂಡುಕೊಳ್ಳಬೇಕು. ಯಾವುದೋ ಒಬ್ಬ ಪೇದೆಯನ್ನು ಅಲ್ಲಿ ನಿಲ್ಲಿಸಿ ಸಂಚಾರ ನಿಯಂತ್ರಿಸು ಅಂತ ಹೇಳಿದರೆ ಸಾಲದು. ಇದಕ್ಕೆ ಸೂಕ್ತ ಮಾರ್ಪಾಡುಗಳನ್ನು ಮಾಡಿಕೊಳ್ಳಲೇಬೇಕು.

ಪೊಲೀಸರು ಏನು ಮಾಡಬಹುದು?

ದಿನದ ಎಲ್ಲ ಸಮಯದಲ್ಲಿಯೂ ಹೆಬ್ಬಾಳ ಫ್ಲೈಓವರ್ ಬಳಿ ಕನಿಷ್ಠವೆಂದರೂ ಹತ್ತು ಪೊಲೀಸರು ಸಂಚಾರ ನಿಯಂತ್ರಿಸುತ್ತಿರಬೇಕು. ಒಂದು ಲೈನಿನಲ್ಲಿ ಹೋಗುತ್ತಿರುವವರು ಅದೇ ಲೈನಿನಲ್ಲಿ ಸಾಗುವಂತೆ ಕಟ್ಟುನಿಟ್ಟಿನ ಆಜ್ಞೆಯನ್ನು ಹೊರಡಿಸಬೇಕು. ಲೈನು ತಪ್ಪಿ ಅತ್ತಿತ್ತ ಚಲಿಸಿದರೆ ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸಬೇಕು.

ಅನಗತ್ಯ ಶಬ್ದ ಮಾಡಬೇಡಿ, ಅಡ್ಡಾದಿಡ್ಡಿ ಓಡಿಸಬೇಡಿ, ಸುತ್ತಿಬಳಸಿ ಬಂದು ಫ್ಲೈಓವರ್ ಆರಂಭದ ಹಂತದಲ್ಲಿ ನುಗ್ಗಿಸಲು ಯತ್ನಿಸಬೇಡಿ, ಸಂಚಾರ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂಬಿತ್ಯಾದಿ ರೆಕಾರ್ಡೆಡ್ ಮಾತುಗಳನ್ನು ಸತತವಾಗಿ ನೀಡುತ್ತಿರಿ ಅಥವಾ ಡಿಜಿಟಲ್ ಬೋರ್ಡ್ ಮೇಲೆ ಬರುವಂತೆ ಮಾಡಿರಿ.

ಇನ್ನು ಈ ರಸ್ತೆಯಲ್ಲಿ ಆಂಬ್ಯುಲೆನ್ಸ್ ಬಂದರಂತೂ ಈ ರೋಗಿಗೆ ದೇವ್ರೇ ಗತಿ. ಬಳ್ಳಾರಿ ರಸ್ತೆಯಲ್ಲಿ ಹಲವಾರು ಆಸ್ಪತ್ರೆಗಳಿವೆ. ಈ ಟ್ರಾಫಿಕ್ ಜಾಮ್ ನಲ್ಲಿ ಒಮ್ಮೆ ಸಿಲುಕಿಕೊಂಡರೆ ಆಸ್ಪತ್ರೆ ತಲುಪುವಷ್ಟರಲ್ಲಿ ರೋಗಿ ಅಸುನೀಗಿದರೂ ಅಚ್ಚರಿಯಿಲ್ಲ. ಈ ದೃಷ್ಟಿಯಿಂದಲಾದರೂ ಸಂಚಾರಿ ಪೊಲೀಸರು ಏನಾದರೂ ಕ್ರಮ ಕೈಗೊಳ್ಳಲೇಬೇಕು.

ಮನವಿ : ಓದುಗರೆ, ನೀವು ಕೂಡ ಹೆಬ್ಬಾಳ್ ಫ್ಲೈಓವರ್ ಬಳಿ ಸಿಲುಕಿಕೊಂಡು ನರಳಿದ್ದರೆ #HellAtHebbalFlyover ಹ್ಯಾಶ್ ಟ್ಯಾಗ್ ಮಾಡಿ, @blrcitytraffic ಹ್ಯಾಂಡಲ್ ಹಾಕಿ ಟ್ವೀಟ್ ಮಾಡಿ, ಬೆಂಗಳೂರು ಟ್ರಾಫಿಕ್ ಪೊಲೀಸರ ಗಮನಕ್ಕೆ ತನ್ನಿ.

{promotion-urls}

English summary
Hebbal flyover has become hell for vehible riders. Due to unscientific planning everyday, anytime you can see traffic jam at Esteem Mall junction. Flyover from airport to Hebbal has worsened the situation. Vehicle riders also don't follow traffic rule. So, How to ease traffic at Hebbal Flyover? Bengaluru Traffic Police have to come out with a proper plan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X