ಕರ್ನಾಟಕ ಬಜೆಟ್, ಕನ್ನಡ ಪತ್ರಿಕೆಗಳ ಕವರೇಜ್ ಹೇಗಿದೆ?

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 16: ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 15ರಂದು ಕರ್ನಾಟಕ ಬಜೆಟ್-2017 ಮಂಡಿಸಿದ್ದಾರೆ. ಆ ಬಜೆಟ್ ನ ಹೇಗೆ ಅರ್ಥೈಸಿಕೊಳ್ಳುವುದು ಎಂಬುದನ್ನು ಪ್ರಮುಖ ದಿನಪತ್ರಿಕೆಗಳ ಶೀರ್ಷಿಕೆ ಏನು ಹೇಳುತ್ತಿವೆ ಎಂದು ತಿಳಿಯುವ ಮೂಲಕ ಮಾಡಿಕೊಳ್ಳಬಹುದು.

ಸಿದ್ದರಾಮಯ್ಯ ಅವರು ಆರ್ಥಿಕ ವಿಚಾರಗಳಲ್ಲಿ ಬಹಳ ಬುದ್ಧಿವಂತರು ಅನ್ನೋದು ಜನರ ಹಾಗೂ ಮಾಧ್ಯಮಗಳ ಮಧ್ಯೆ ಇರುವ ನಂಬಿಕೆ. ಈ ವರೆಗೆ ಹನ್ನೆರಡು ಬಜೆಟ್ ಮಂಡಿಸಿದ ಅವರ ಅನುಭವ ಹಾಗೂ ಆ ಮೂಲಕ ದಕ್ಕಿರಬಹುದಾದ ಗ್ರಹಿಕೆ ನಂಬಿಕೆಯನ್ನು ಹುಸಿ ಮಾಡದಂತೆಯೇ ಇವೆ.[ಸಾಲ ಮನ್ನಾ ಘೋಷಣೆ ನಿರೀಕ್ಷೆ ಹುಸಿ, ಮಂಡ್ಯದಲ್ಲಿ ಇಬ್ಬರು ರೈತರ ಆತ್ಮಹತ್ಯೆ!]

ಈ ಬಾರಿ ರೈತರ ಸಾಲ ಮನ್ನಾ ಮಾಡಲಿಲ್ಲ ಎಂಬುದು ನಿರೀಕ್ಷೆ ಹುಸಿ ಮಾಡಿದ ಸಂಗತಿ. ಅದಾಗಲೇ ಇದೇ ಕಾರಣಕ್ಕೆ ಇಬ್ಬರು ಉಸಿರು ಚೆಲ್ಲಿದ್ದಾರೆ. ಆದರೆ, ಸಿದ್ದರಾಮಯ್ಯನವರು ಎಲ್ಲ ವರ್ಗ, ಜಾತಿಯನ್ನೂ ಸಮಾಧಾನಪಡಿಸುವ ಪ್ರಯತ್ನವಂತೂ ಮಾಡಿದ್ದಾರೆ. ಕೆಲವು ಘೋಷಣೆಗಳಂತೂ ಕನಿಷ್ಠ ಪಕ್ಷ ನಿರೀಕ್ಷೆ ಕೂಡ ಮಾಡದಂಥವು. ಅದರಲ್ಲೂ ಸಿನಿಮಾ ರಂಗಕ್ಕೆ ಒಂದಿಷ್ಟು ಬಲ ಬಂದಂತಾಗಿದೆ.

ಒಟ್ಟಾರೆ ಬಜೆಟ್ ನ ಯಾವ ಪತ್ರಿಕೆಗಳು ಹೇಗೆ ನೋಡಿವೆ? ಶೀರ್ಷಿಕೆಗಳೇನು ಎಂದು ನಿಮ್ಮ ಗಮನಕ್ಕೆ ತರುವ ಪ್ರಯತ್ನ ನಮ್ಮದು.[ಕರ್ನಾಟಕ ಬಜೆಟ್ 2017ರ 24 ಪ್ರಮುಖ ಅಂಶಗಳು..]

ವಿಜಯ ಕರ್ನಾಟಕ

ವಿಜಯ ಕರ್ನಾಟಕ

ಬಜೆಟ್ ನ ಗುರಿ ಏನು ಎಂಬುದನ್ನು ಬಿಂಬಿಸುವಂತೆ ವಿಜಯ ಕರ್ನಾಟಕ ಪತ್ರಿಕೆಯ ಶೀರ್ಷಿಕೆ ಇದೆ. 'ಓಟಿನತ್ತ ಬಜೆಟ್ ಓಟ'-ಇದು ಶೀರ್ಷಿಕೆ. ಇಷ್ಟು ಕಡಿಮೆ ಪದ ಬಳಸಿ, ತುಂಬ ಪರಿಣಾಮಕಾರಿಯಾಗಿ ಬಜೆಟ್ ನ ಉದ್ದೇಶವನ್ನು ನೇರವಾಗಿ ಓದುಗರ ಮುಂದಿಡಲಾಗಿದೆ. ಅದಕ್ಕಾಗಿ ಬಳಸಿರುವ ಸಂತೋಷ್ ಸಸಿಹಿತ್ಲು ಅವರ ವ್ಯಂಗ್ಯಚಿತ್ರ ಕೂಡ ಇಡೀ ಉದ್ದೇಶಕ್ಕೆ ಪರಿಣಾಮಕಾರಿಯಾದ ಮೌಲ್ಯ ತುಂಬಿದೆ. ಹೊಸ ತಾಲೂಕು ರಚನೆ, ಅನ್ನ ಭಾಗ್ಯದ ಅಕ್ಕಿ ವಿತರಣೆಯಲ್ಲಿ ಹೆಚ್ಚಳ, ಸರಕಾರಿ ನೌಕರರಿಗೆ ಏಳನೇ ವೇತನ ಆಯೋಗ ರಚನೆ, ಅಗ್ಗದೂಟಕ್ಕೆ ಕ್ಯಾಂಟೀನ್...ಎಂಬುದು ಸೇರಿ ಬಜೆಟ್ ನ ಪ್ರಮುಖಾಂಶಗಳನ್ನು ತುಂಬ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ.

ವಿಜಯವಾಣಿ

ವಿಜಯವಾಣಿ

ಇದು ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಿದ ಬಜೆಟ್ ಎಂಬುದನ್ನೇ ಧ್ವನಿಸುವ ಎರಡನೇ ಶೀರ್ಷಿಕೆ ಎಲೆಕ್ಷನ್ ದೃಷ್ಟಿ ಅಹಿಂದಕ್ಕೆ ಅತಿವೃಷ್ಟಿ. ಮತಬ್ಯಾಂಕ್ ಗೆ ಒತ್ತು, ಸರ್ವಕ್ಷೇತ್ರಕ್ಕೂ 'ಕೈ' ತುತ್ತು ಎಂಬ ಕಿಕ್ಕರ್ ಇಡೀ ಬಜೆಟ್ ನ ಸಾರ ಸಂಗ್ರಹವನ್ನೇ ಬಸಿದು ಕೊಟ್ಟಂತಿದೆ. ಬಜೆಟ್ ನ ಗಾತ್ರ ತಕ್ಷಣವೇ ಕಣ್ಣಿಗೆ ಬೀಳುವಂತಿರುವುದು ಗಮನ ಸೆಳೆಯುತ್ತದೆ. ಯಾವುದು ಅಗ್ಗ-ದುಬಾರಿ, ಯಾವ ಇಲಾಖೆಗೆ ಎಷ್ಟು ಅನುದಾನ, ಕೃಷಿಕರಿಗೆ-ಮಹಿಳೆಯರು-ಶಿಕ್ಷಣ ಮತ್ತಿತರ ವರ್ಗಕ್ಕೆ ಕೊಟ್ಟಿದ್ದೇನು ಎಂಬ ವಿವರಗಳು ಹಾಗೂ ಕಾರ್ಟೂನ್ ಅನ್ನು ಮುಖಪುಟ ಒಳಗೊಂಡಿದೆ.

ಪ್ರಜಾವಾಣಿ

ಪ್ರಜಾವಾಣಿ

ಕೆಲವು ಸಲ ಒಂದೇ ವಿಷಯಕ್ಕೆ ನಾನಾ ಆಯಾಮ ಕಾಣಿಸುತ್ತದೆ. ಹಲವು ಸಲ ಒಂದೇ ರೀತಿಯೇ ಎಲ್ಲರ ಆಲೋಚನೆ ಇರುತ್ತದೆ. ಪ್ರಜಾವಾಣಿ ಶೀರ್ಷಿಕೆ 'ಚುನಾವಣೆ ತಪ: ಅಹಿಂದ ಜಪ' ಈ ಬಜೆಟ್ ಗೆ ಏನನ್ನಬಹುದು ಎಂಬುದರ ಪುನರುಕ್ತಿ ಆಗಿದೆ. ಅಂದರೆ ಎಲ್ಲರೂ ಗ್ರಹಿಸಿದಂತೆ ಇದು ಮುಂದಿನ ಚುನಾವಣೆಗೆ ಟವಲ್ ಹಾಕುವ ಕಸರತ್ತು ಎಂಬುದು ಗೊತ್ತಾಗಿದೆ. ಪ್ರಜಾವಾಣಿ ಕೂಡ ಯಾವ ಕ್ಷೇತ್ರಕ್ಕೆ ಎಷ್ಟು ಹಣ ಮೀಸಲು, ಆ ಪೈಕಿ ಗಮನ ಸೆಳೆಯುವಂಥ ಘೋಷಣೆಗಳಾದ ಕಾರ್ಮಿಕರ ನಿವೃತ್ತಿ ವಯಸ್ಸು ಏರಿಕೆ ಸೇರಿದಂತೆ ಇತರ ಸಂಗತಿಗಳನ್ನು ಕಟ್ಟಿಕೊಟ್ಟಿದೆ. ಮುಖ್ಯವಾಗಿ ಅಂಕಿಗಳು ಏನು ಹೇಳುತ್ತವೆ, ಓದುಗರ ಪ್ರಶ್ನೆಗೆ ಉತ್ತರಿಸುವ ರೀತಿಯಲ್ಲಿ ಮುಖಪುಟ ರೂಪಿಸಲಾಗಿದೆ.

ಕನ್ನಡಪ್ರಭ

ಕನ್ನಡಪ್ರಭ

ಜನ ಸಾಮಾನ್ಯರ ಮೇಲೆ, ಅದರಲ್ಲೂ ದುಡಿಯುವ ವರ್ಗದ ಮೇಲೆ ಪರಿಣಾಮ ಬೀರಬಹುದಾದ ಬಜೆಟ್ ಘೋಷಣೆಯನ್ನು ಕನ್ನಡಪ್ರಭದಲ್ಲಿ ಹೈಲೈಟ್ ಮಾಡಲಾಗಿದೆ. ಮತಬೇಟೆ ಬಜೆಟ್ ಭಾಗ-1 ಎಂಬ ಶೀರ್ಷಿಕೆ ಜತೆಗೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಇನ್ನಷ್ಟು ಘೋಷಣೆ ಮಾಡುವ ಸಾಧ್ಯತೆಯನ್ನು ತಿಳಿಸಲಾಗಿದೆ. ಬ್ಯಾನರ್ ಹೆಡ್ ಲೈನ್ ನೀಡಿರುವುದು. ಕನ್ನಡಪ್ರಭದ ದೊಡ್ಡ ಗಾತ್ರದ ಶೀರ್ಷಿಕೆ ಎಂಬ ನಿಯಮ ವಾಪಸಾಗಿದೆ. ಅದಕ್ಕೆ ರವಿ ಹೆಗಡೆ ಅವರ ವಾಪಸಾತಿಯೂ ಕಾರಣ ಇರಬಹುದು. ಬಜೆಟ್ ನ ಮುಖ್ಯಾಂಶಗಳು ಕೂಡ ಚೆನ್ನಾಗಿ ಬಿಂಬಿಸಲಾಗಿದೆ.

ಉದಯವಾಣಿ

ಉದಯವಾಣಿ

ಉದಯವಾಣಿ ಪತ್ರಿಕೆ ಶೀರ್ಷಿಕೆ ಉಳಿದವರಿಗಿಂತ ಭಿನ್ನವಾಗಿದೆ. ಸಂಪಾದಕೀಯದಲ್ಲಿ ಹೇಳೋಣ ಎಂದುಕೊಂಡು ಕೈ ಬಿಡಬಹುದಾದ ವಿಷಯವೊಂದನ್ನು ಶೀರ್ಷಿಕೆಯಾಗಿ ಮಾಡಿದ್ದಾರೆ. ಜತೆಗೆ ಚುನಾವಣೆ ಮೇಲೆ ಕಣ್ಣಿಟ್ಟ ಸಿಎಂ ಸಿದ್ದರಾಮಯ್ಯ ಕೊಡುಗೈ ದಾನಿ ಎಂದು ಸರಿಯಾಗಿ ತಿವಿದಿದ್ದಾರೆ. ಅದಕ್ಕೆ ಮುಲಾಮು ಎಂಬಂತೆ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡಿದ್ದಕ್ಕೆ ಮೆಚ್ಚುಗೆ ಸೂಚಿಸಿರುವಂತಿದೆ. ಆದರೆ ಕಾರ್ಟೂನ್ ನಲ್ಲಿ ಉದ್ದೇಶವನ್ನೇ ತುಂಬ ಚೆನ್ನಾಗಿ ಬಿಂಬಿಸಲಾಗಿದೆ. ಆ ಪ್ರಯತ್ನ ವ್ಹಾವ್ ಎನಿಸುವಂತಿದೆ.

ವಿಶ್ವವಾಣಿ

ವಿಶ್ವವಾಣಿ

ಈ ಬಾರಿ ಬಜೆಟ್ ನಲ್ಲಿ ರಾಜ್ಯದ ಜನರಿಗೆ ಸಿದ್ದರಾಮಯ್ಯ ಅವರು ಉಣಬಡಿಸಿರುವುದೇನು ಎಂಬುದನ್ನು ಹೇಳುವಂತಿದೆ ವಿಶ್ವವಾಣಿ ಶೀರ್ಷಿಕೆ ವೋಟಿಗಾಗಿ ಊಟ. ಅಷ್ಟೇ ಅಲ್ಲ, ಇದು ಚುನಾವಣೆ ಬಜೆಟ್ ಎಂಬುದರ ಸೂಚ್ಯವೂ ಊಟ 'ಸಿದ್ದ' ಎಂಬಲ್ಲಿ ಪರೋಕ್ಷವಾಗಿ ಸಿದ್ದರಾಮಯ್ಯ ಅವರ ಹೆಸರನ್ನೂ ತರಲಾಗಿದೆ. ಯೋಜನೆಗಳ ಸಲುವಾಗಿ ರಾಜ್ಯದ ಖಜಾನೆಗೆ ಹೊರೆ ಎಂಬುದನ್ನು ತುಂಬ ನೇರವಾಗಿ ಹೇಳಲಾಗಿದೆ. ಇದು ಕೂಡ ಸಂಪಾದಕೀಯ ಪುಟದಲ್ಲೆಲ್ಲೋ ಹೇಳೋಣ ಎಂದುಕೊಳ್ಳುವ ಸಂಗತಿ. ಆದರೆ ಜನ ಸಾಮಾಣ್ಯರ ಜತೆಗೆ ನೇರ ಸಂಬಂಧ ಇರುವ ಯೋಜನೆಗಳ ವಿವರ, ಅದರ ದೂರಗಾಮಿ ಪರಿಣಾಮ ಎರಡನ್ನೂ ತುಂಬ ಚೆನ್ನಾಗಿ ಹೇಳಲಾಗಿದೆ.

ಹೊಸದಿಗಂತ

ಹೊಸದಿಗಂತ

ನೋಡಿದ ತಕ್ಷಣ ವ್ಹಾವ್ ಎನಿಸುವಂತಿದೆ ಹೊಸ ದಿಗಂತದ ಪುಟ ವಿನ್ಯಾಸ. ಚುನಾವಣೆ ಬಜೆಟ್ ಎಂಬುದನ್ನು ರಾಜ್ಯ ಸರಕಾರದ ಜಾಹೀರಾತು ಇರುವ ಧಾಟಿಯಲ್ಲಿ ಸಿದ್ದು ನಡಿಗೆ ಚುನಾವಣೆ ಕಡೆಗೆ ಎಂದಿರುವುದರಲ್ಲಿ ಸಣ್ಣಗೆ ತಿವಿಯಲಾಗಿದೆ. ಆದರೆ ಮುಖ್ಯ ಘೋಷಣೆಗಳು ಮತ್ತಿತರ ಮಾಹಿತಿಗಳನ್ನು ಕಟ್ಟಿಕೊಟ್ಟಿದ್ದು, ಸಾಂಪ್ರದಾಯಿಕ ಪುಟ ವಿನ್ಯಾಸ ರೀತಿಯನ್ನು ಮುರಿಯುವ ಪ್ರಯತ್ನ ಮಾಡಿರುವುದು ಗಮನಕ್ಕೆ ಬರುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka budget 2017 presented by Siddaramaiah on Wednesday, here Kannada newspapers coverage and headlines about budget.
Please Wait while comments are loading...