ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿಂದಿ ಹೇರಿಕೆ: ಕರವೇ ನಲ್ನುಡಿ ಸಂಪಾದಕರ ಜೊತೆಗೊಂದು ಸಂದರ್ಶನ

ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ಸೇರಿದಂತೆ, ಕೇಂದ್ರ ಸರಕಾರದ ಭಾಷಾ ತಾರತಮ್ಯದ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆಯ ' ಕರವೇ ನಲ್ನುಡಿ' ಪ್ರಧಾನ ಸಂಪಾದಕರಾದ ದಿನೇಶ್ ಕುಮಾರ್ ಜೊತೆಗಿನ ಸಂದರ್ಶನದ ಪೂರ್ಣ ಪಾಠ.

|
Google Oneindia Kannada News

ನಮ್ಮ ಮೆಟ್ರೋ ಹೋರಾಟದಿಂದ ಹಿಡಿದು, ಕನ್ನಡ ಪರವಾದ ಹೋರಾಟದಲ್ಲಿ ಮಂಚೂಣಿಯಲ್ಲಿ ನಿಲ್ಲುವುದು ನಾರಾಯಣ ಗೌಡರ ಕರ್ನಾಟಕ ರಕ್ಷಣಾ ವೇದಿಕೆ. ಈ ಸಂದರ್ಭದಲ್ಲಿ 'ಕರವೇ ನಲ್ನುಡಿ' ಪ್ರಧಾನ ಸಂಪಾದಕರಾದ ದಿನೇಶ್ ಕುಮಾರ್ ಜೊತೆಗಿನ ಸಂದರ್ಶನದ ಪೂರ್ಣ ಪಾಠ (ಸಂ)

ಪ್ರ: ಚುನಾವಣಾ ಈ ವರ್ಷದಲ್ಲಿ ಹಿಂದಿ ಹೇರಿಕೆ ಬೇಡ ಎನ್ನುವ ಸಿಎಂ ನಿರ್ಧಾರ ರಾಜಕೀಯ ಮೈಲೇಜ್ ಗಳಿಸಲು ಎನ್ನುವ ಮಾತು ಅಲ್ಲಲ್ಲಿ ಕೇಳಿ ಬರುತ್ತಿದೆಯಲ್ಲಾ?
ದಿನೇಶ್: ಇದು ರಾಜಕೀಯ ಪ್ರಶ್ನೆ. ಬಹಳ ಸ್ಪಷ್ಟವಾಗಿ ಹೇಳುವುದಾದರೆ ಈ ನಿರ್ಧಾರದ ಹಿಂದಿನ ರಾಜಕೀಯ ಉದ್ದೇಶದ ಬಗ್ಗೆ ನಮಗೆ ಅಷ್ಟಾಗಿ ಆಸಕ್ತಿ ಇಲ್ಲ. ಯಾಕೆಂದರೆ ರಾಜ್ಯದಲ್ಲಿ ಬಿಜೆಪಿ, ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗಲೂ ಕರ್ನಾಟಕ ರಕ್ಷಣಾ ವೇದಿಕೆ ನಮ್ಮ ಮೆಟ್ರೋ ಹಿಂದಿ ಹೇರಿಕೆ ವಿರುದ್ಧ ಚಳವಳಿ ಸಂಘಟಿಸುತ್ತ ಬಂದಿದೆ. ಸರ್ಕಾರ ಯಾವುದೇ ಇರಲಿ, ನಮಗೆ ಕನ್ನಡಪರವಾದ ತೀರ್ಮಾನಗಳು ಹೊರಬರುವುದು ಮುಖ್ಯ.

ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ: ಕರವೇ ವಿಶಿಷ್ಟ ಹೋರಾಟನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ: ಕರವೇ ವಿಶಿಷ್ಟ ಹೋರಾಟ

ಇನ್ನು ನಮ್ಮ ಮೆಟ್ರೋ ಹಸಿರು ಮಾರ್ಗ ಉದ್ಘಾಟನೆಯಾದಾಗ ನಾವು ಸಹಜವಾಗಿಯೇ ಇನ್ನಷ್ಟು ತೀವ್ರವಾದ ಪ್ರತಿಭಟನೆ ಆರಂಭಿಸಿದ್ದೆವು. ಸರ್ಕಾರ ಯಾವುದಾದರೊಂದು ತೀರ್ಮಾನ ಕೈಗೊಳ್ಳಲೇಬೇಕಿತ್ತು. ಚುನಾವಣಾ ವರ್ಷ ಎಂದು ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಳ್ಳದೇ ಇರಲು ಸಾಧ್ಯವೇ? ಹೀಗಾಗಿ ಮುಖ್ಯಮಂತ್ರಿಗಳೇ ನೇರವಾಗಿ ಕೇಂದ್ರ ನಗರಾಭಿವೃದ್ಧಿ ಇಲಾಖೆ ಸಚಿವರಿಗೆ ಪತ್ರ ಬರೆದು ರಾಜ್ಯ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ವಾಸ್ತವವಾಗಿ ಹೋದ ವರ್ಷ ಸರ್ಕಾರ ತೆಗೆದುಕೊಂಡ ನಿರ್ಧಾರವೇ ಮುಂದುವರೆದಿದೆ ಅಷ್ಟೆ. ರಾಜ್ಯ ಸರ್ಕಾರದ ಭಾಗವೇ ಆಗಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರವಂತೂ ಮೊದಲಿನಿಂದಲೂ ಮೆಟ್ರೋದಲ್ಲಿ ದ್ವಿಭಾಷಾ ನೀತಿಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸುತ್ತ ಬಂದಿದೆ. ಹೀಗಿರುವಾಗ ಚುನಾವಣಾ ವರ್ಷದಲ್ಲಿ ರಾಜಕೀಯ ಮೈಲೇಜ್ ಪ್ರಶ್ನೆ ಬರುವುದಿಲ್ಲ.

ಒಂದು ವೇಳೆ ಸಿದ್ಧರಾಮಯ್ಯ ಅವರಿಗೆ ರಾಜಕೀಯ ಮೈಲೇಜ್ ಸಿಕ್ಕರೆ ಅದು ತಪ್ಪೇನೂ ಅಲ್ಲ. ಕನ್ನಡವೂ ಸಹ ರಾಜಕೀಯ ಪ್ರಶ್ನೆ ಆಗಬೇಕು. ಕನ್ನಡಿಗರನ್ನು ಎದುರು ಹಾಕಿಕೊಂಡು ರಾಜಕಾರಣ ಮಾಡಲು ಸಾಧ್ಯವಿಲ್ಲ ಎಂಬುದು ರಾಜಕೀಯ ಪಕ್ಷಗಳಿಗೆ ಅರ್ಥವಾಗಬೇಕು. ಆ ಕಾಲ ಬಂದಿದೆ. ಅದಕ್ಕಾಗಿ ನಮಗೆ ಸಂತಸವಿದೆ. ಮುಂದೆ ಓದಿ,

 ನಮ್ಮ ಮೆಟ್ರೋದಲ್ಲಿ ಹಿಂದಿ ಬೇಡ ಎನ್ನುವ ಸಿದ್ದರಾಮಯ್ಯ ಸರಕಾರದ ಗಟ್ಟಿ ನಿಲುವು

ನಮ್ಮ ಮೆಟ್ರೋದಲ್ಲಿ ಹಿಂದಿ ಬೇಡ ಎನ್ನುವ ಸಿದ್ದರಾಮಯ್ಯ ಸರಕಾರದ ಗಟ್ಟಿ ನಿಲುವು

ಪ್ರ: ನಮ್ಮ ಮೆಟ್ರೋದಲ್ಲಿ ಹಿಂದಿ ಬೇಡ ಎನ್ನುವ ಸಿದ್ದರಾಮಯ್ಯ ಸರಕಾರದ ಗಟ್ಟಿ ನಿಲುವಿನ ಬಗ್ಗೆ?
ದಿನೇಶ್: ಸರ್ಕಾರ ಸರಿಯಾದ ಸಂದರ್ಭದಲ್ಲಿ ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದೆ. ವಾಸ್ತವವಾಗಿ ರಾಜ್ಯ ಸರ್ಕಾರ ಕಳೆದ ವರ್ಷವೇ ಈ ವಿಷಯದಲ್ಲಿ ಖಚಿತವಾದ ನಿಲುವನ್ನು ತೆಗೆದುಕೊಂಡು ಕೇಂದ್ರ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿತ್ತು. ಆದರೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ವಿರೋಧದ ನಡುವೆಯೂ ನಮ್ಮ ಮೆಟ್ರೋದಲ್ಲಿ ಹಿಂದಿ ತೂರಿಸುವ ಸಲುವಾಗಿ ನೇರವಾಗಿ ಬಿಎಂಆರ್‌ಸಿಎಲ್‌ಗೆ ಪತ್ರ ಬರೆದು ಕೇಂದ್ರ ಸರ್ಕಾರದ ಭಾಷಾನೀತಿಯನ್ನು ಪಾಲಿಸುವಂತೆ ನಿರ್ದೇಶನ ನೀಡಿತ್ತು.

ನಾವು (ಕರ್ನಾಟಕ ರಕ್ಷಣಾ ವೇದಿಕೆ) 2011ರಿಂದಲೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ವಿರುದ್ಧ ಚಳವಳಿ ಸಂಘಟಿಸುತ್ತ ಬಂದಿದ್ದೆವು. ನಮ್ಮ ಹೋರಾಟದಿಂದಲೇ ಬೈಯಪ್ಪನಹಳ್ಳಿಯಿಂದ ಎಂಜಿ ರಸ್ತೆಯವರೆಗಿನ ಮಾರ್ಗದಲ್ಲಿ ಹಿಂದಿ ಬಳಕೆಯನ್ನು ತಗ್ಗಿಸಲಾಗಿತ್ತು. ಆದರೆ ಮೊದಲ ಹಂತದ ಮೆಟ್ರೋ ಲೋಕಾರ್ಪಣೆ ಸಂದರ್ಭದಲ್ಲಿ ಹಿಂದಿ ಹೇರಿಕೆ ಎಗ್ಗಿಲ್ಲದೆ ನಡೆದಿತ್ತು.

ಇದಕ್ಕಾಗಿ ತೀವ್ರ ಸ್ವರೂಪದ ಹೋರಾಟ ರೂಪಿಸುವುದು ಅನಿವಾರ್ಯವಾಯಿತು. ಈ ಬಾರಿ ವಿಶೇಷವೆಂದರೆ ಇದು ರಾಷ್ಟ್ರಮಟ್ಟದಲ್ಲಿ ಚರ್ಚೆಯ ವಿಷಯವಾಯಿತು. ನಮ್ಮ ಮೆಟ್ರೋ ಹಿಂದಿ ಬೇಡ ಅನ್ನುವ ಹ್ಯಾಷ್ ಟ್ಯಾಗ್ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನವನ್ನೇ ಮೂಡಿಸಿತು. ಇಂಗ್ಲಿಷ್-ಹಿಂದಿ ಚಾನಲ್‌ಗಳು ಕೂಡ ಇದನ್ನು ಚರ್ಚೆಯ ವಿಷಯವನ್ನಾಗಿಸಿದವು. ಈ ಎಲ್ಲ ಚರ್ಚೆಗಳ ಸಂದರ್ಭದಲ್ಲಿ ನಮ್ಮ ಮೆಟ್ರೋದಲ್ಲಿ ಹಿಂದಿ ಯಾಕೆ ಬೇಡ ಎನ್ನುವುದನ್ನು ನಾವು ಬಿಡಿಸಿ ಬಿಡಿಸಿ ಹೇಳಿದೆವು.

ದೊಡ್ಡ ಮಟ್ಟದ ಜಾಗೃತಿ ಇದರಿಂದ ಸಾಧ್ಯವಾಯಿತು. ಸರ್ಕಾರವೂ ಕೂಡ ಅನಿವಾರ್ಯವಾಗಿ ನಮ್ಮೆಲ್ಲರ ಚಳವಳಿಗೆ ಧ್ವನಿಗೂಡಿಸಲೇಬೇಕಾಯಿತು. ಯಾಕೆಂದರೆ ನಾವು 2016ರ ಡಿಸೆಂಬರ್‌ನಲ್ಲಿ ರಾಜ್ಯ ಸರ್ಕಾರ ತಳೆದಿದ್ದ ನಿರ್ಧಾರವನ್ನು ಬೆಂಬಲಿಸಿಯೇ ಈ ಚಳವಳಿ ಹೂಡಿದ್ದೆವು. ನಮ್ಮ ಮೆಟ್ರೋ ಯೋಜನೆ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ನಡೆಯುತ್ತಿದ್ದರೂ ಅದರ ಹೆಚ್ಚಿನ ಬಂಡವಾಳ ಕರ್ನಾಟಕ ಸರ್ಕಾರದ್ದು. ಕರ್ನಾಟಕ ಸರ್ಕಾರವೇ ಭೂಸ್ವಾಧೀನ ಮಾಡಿದೆ, ಲಾಭವಿಲ್ಲದಂತೆ ವಿದ್ಯುತ್ ಪೂರೈಸುತ್ತಿದೆ.

ಯೋಜನೆಗೆ ಬೇಕಿರುವ ಸಾಲಕ್ಕೆ ರಾಜ್ಯಸರ್ಕಾರವೇ ತನ್ನ ಆಸ್ತಿಯನ್ನು ಅಡಮಾನಕ್ಕೆ ಇಟ್ಟಿದೆ. ಮುಂದೆ ಆಗಬಹುದಾದ ಎಲ್ಲ ನಷ್ಟದ ಹೊಣೆಯನ್ನೂ ರಾಜ್ಯ ಸರ್ಕಾರವೇ ಹೊತ್ತುಕೊಂಡಿದೆ. ಹೀಗಿರುವಾಗ ಇದನ್ನು ಕೇಂದ್ರ ಸರ್ಕಾರದ ಯೋಜನೆ ಎಂದು ಭಾವಿಸಿ, ಕೇಂದ್ರ ಸರ್ಕಾರದ ಭಾಷಾನೀತಿಯನ್ನು ಹೇರಲಾಗುವುದಿಲ್ಲ. ಇದನ್ನು ನಾವು ಎಲ್ಲರಿಗೂ ಮನವರಿಕೆ ಮಾಡಿಕೊಂಡುಬಂದೆವು. ಸರ್ಕಾರ ತನ್ನ ನಿಲುವನ್ನು ಸಡಿಲಿಸದೆ ಕನ್ನಡಿಗರ ಪರವಾಗಿ ಸ್ಪಷ್ಟವಾದ ನಿರ್ಧಾರ ಕೈಗೊಂಡಿದೆ. ಅದಕ್ಕಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಅಭಿನಂದಿಸುತ್ತೇವೆ.

 ಬಿಎಂಆರ್ಸಿಎಲ್ ಅಧಿಕಾರಿಗಳು ಕಣ್ಣೊರೆಸುತ್ತಿದ್ದಾರಾ

ಬಿಎಂಆರ್ಸಿಎಲ್ ಅಧಿಕಾರಿಗಳು ಕಣ್ಣೊರೆಸುತ್ತಿದ್ದಾರಾ

ಪ್ರ: ರಾಜ್ಯ ಸರಕಾರದ ನಿರ್ಧಾರದಿಂದ ನಮ್ಮ ಮೆಟ್ರೋದಲ್ಲಿನ ಹೋರಾಟಕ್ಕೆ ತಾರ್ಕಿಕ ಅಂತ್ಯ ಸಿಗುತ್ತಾ ಅಥವಾ ಬಿಎಂಆರ್ಸಿಎಲ್ ಅಧಿಕಾರಿಗಳು ಸದ್ಯದ ಮಟ್ಟಿಗೆ ಕಣ್ಣೊರೆಸುತ್ತಿದ್ದಾರಾ?
ದಿನೇಶ್: ಬಿಎಂಆರ್‌ಸಿಎಲ್ ರಾಜ್ಯ ಸರ್ಕಾರದ ಅಧೀನದ ಸಂಸ್ಥೆ. ರಾಜ್ಯ ಸರ್ಕಾರದ ಆದೇಶವನ್ನು ಅದು ಪಾಲಿಸಲೇಬೇಕು. ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಕರೋಲ ಬಹಳಷ್ಟು ಬಾರಿ ನಾಮಫಲಕಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ತೀರ್ಮಾನವನ್ನು ಪಾಲಿಸುವುದಾಗಿ ಹೇಳಿಕೆ ನೀಡಿದ್ದಾರೆ. ಅದು ಅವರಿಗೆ ಅನಿವಾರ್ಯ ಕೂಡ.

ಕೇಂದ್ರ ಸರ್ಕಾರಕ್ಕೆ ಪತ್ರ ಬರೆದ ನಂತರ ರಾಜ್ಯ ಸರ್ಕಾರ ಬಿಎಂಆರ್‌ಸಿಎಲ್‌ಗೆ ಹಿಂದಿ ಫಲಕಗಳನ್ನು ತೆರವು ಮಾಡುವಂತೆ ಆದೇಶವನ್ನೂ ನೀಡಿದೆ. ಈ ವಾರದಲ್ಲೇ ನೀವು ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ಇಲ್ಲದ ನಾಮಫಲಕಗಳನ್ನು ನೋಡಬಹುದು. ಒಂದುವೇಳೆ ಬಿಎಂಆರ್‌ಸಿಎಲ್ ರಾಜ್ಯ ಸರ್ಕಾರದ ಆದೇಶವನ್ನು ಉಲ್ಲಂಘಿಸಿದರೆ ಕರೋಲಾರನ್ನು ಸರ್ಕಾರವೇ ವರ್ಗಾವಣೆ ಮಾಡಿ ಬೇರೆ ಅಧಿಕಾರಿಯ ಮೂಲಕ ಆ ಕೆಲಸ ಮಾಡಿಸಬೇಕಾಗುತ್ತದೆ.

ಇಂಥ ಸಂದರ್ಭವೇನೂ ಸೃಷ್ಟಿಯಾಗುವುದಿಲ್ಲ. ಬಿಎಂಆರ್‌ಸಿಎಲ್ ಈ ವಾರದಲ್ಲೇ ಹಿಂದಿ ಫಲಕ ತೆರವು ಮಾಡಲಿದೆ ಎಂಬ ಸ್ಪಷ್ಟ ನಂಬಿಕೆ ನಮ್ಮದು. ಒಂದು ವೇಳೆ ಅಂಥದ್ದೇನಾದರೂ ಆದರೆ ಕರ್ನಾಟಕ ರಕ್ಷಣಾ ವೇದಿಕೆ ಮತ್ತೆ ಚಳವಳಿಗೆ ಇಳಿಯುತ್ತದೆ. ಈ ಬಾರಿಯ ಕಾವನ್ನು ನಮ್ಮ ಮೆಟ್ರೋ ತಡೆದುಕೊಳ್ಳುವುದು ಕಷ್ಟ.

 ಕರವೇ ಕಾರ್ಯಕರ್ತರು ಕಾನೂನು ಕೈಗೆ ತೆಗೆದುಕೊಂಡಿದ್ದು ಸರಿಯೇ

ಕರವೇ ಕಾರ್ಯಕರ್ತರು ಕಾನೂನು ಕೈಗೆ ತೆಗೆದುಕೊಂಡಿದ್ದು ಸರಿಯೇ

ಪ್ರ: ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆಯ ವಿಚಾರದಲ್ಲಿ ರಾಜ್ಯ ಸರಕಾರ ಸ್ಪಂದಿಸುತ್ತಿದ್ದರೂ, ಕರವೇ ಕಾರ್ಯಕರ್ತರು ಕಾನೂನು ಕೈಗೆ ತೆಗೆದುಕೊಂಡಿದ್ದು ಸರಿಯೇ?
ದಿನೇಶ್: ರಾಜ್ಯ ಸರ್ಕಾರ ಕಳೆದ ವರ್ಷವೇ ಕೇಂದ್ರ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದು ನಮ್ಮ ಮೆಟ್ರೋದಲ್ಲಿ ಹಿಂದಿ ಬಳಕೆ ಮಾಡಲಾಗುವುದಿಲ್ಲ ಎಂದು ತಿಳಿಸಿತ್ತು. ಸ್ವತಃ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಕರೋಲಾ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಕೇಂದ್ರ ಸರ್ಕಾರದ ರಾಜಭಾಷಾ ಕಾಯ್ದೆಯಡಿಯಲ್ಲಿ ತ್ರಿಭಾಷಾ ನೀತಿ ಅನುಸರಿಸಿದರೆ ಆಗುವ ಅನಾಹುತಗಳನ್ನು ಗಮನಕ್ಕೆ ತಂದಿದ್ದರು.

ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಬಹುದು ಎಂದು ಹೇಳಿದ್ದರು. ಇಷ್ಟೆಲ್ಲ ಇದ್ದಾಗಲೂ ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಇಲಾಖೆಯಿಂದ ಬಂದ ಒಂದು ಪತ್ರದ ಕಾರಣದಿಂದಾಗಿ ಇಷ್ಟೆಲ್ಲ ಗೊಂದಲಗಳು ಸೃಷ್ಟಿಯಾಗಿದ್ದವು. ರಾಜ್ಯ ಸರ್ಕಾರದಿಂದ ಸ್ಪಷ್ಟ ಸೂಚನೆ ಬರದೆ ಬಿಎಂಆರ್‌ಸಿಎಲ್ ಹಿಂದಿ ನಾಮಫಲಕ ತೆರವು ಮಾಡುವುದಿಲ್ಲ ಎಂದು ಹಠ ಹಿಡಿದು ಕುಳಿತಿತ್ತು. ಬಿಎಂಆರ್‌ಸಿಎಲ್‌ಗೆ ಕೇಂದ್ರ ಸರ್ಕಾರದ ಗುಮ್ಮನ ಭಯ.

ಹಿಂದಿಫಲಕ ತೆರವು ಮಾಡಿದರೆ ಅದಕ್ಕೆ ಕೇಂದ್ರ ಸರ್ಕಾರಕ್ಕೆ ಏನು ಹೇಳುವುದು ಎನ್ನುವ ಭೀತಿ. ಅದಕ್ಕಾಗಿ ಅವರು ರಾಜ್ಯ ಸರ್ಕಾರದ ಸ್ಪಷ್ಟ ನಿರ್ದೇಶನಕ್ಕೆ ಕಾದಿದ್ದರು. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಮ್ಮ ನಿಲುವು ಸ್ಪಷ್ಟವಾಗಿ ಹೇಳಿದ್ದರೂ ಬಿಎಂಆರ್‌ಸಿಎಲ್‌ಗೆ ಆದೇಶ ನೀಡದೇ ಇದ್ದಿದ್ದರಿಂದಾಗಿ ಸಮಸ್ಯೆ ಬಿಗಡಾಯಿಸುತ್ತಲೇ ಬಂದಿತ್ತು. ಇಂಥ ಸಂದರ್ಭದಲ್ಲಿ ಕರವೇ ತೀವ್ರ ಸ್ವರೂಪದ ಪ್ರತಿಭಟನೆ ಮಾಡಲೇಬೇಕಿತ್ತು.

ಒಂದು ವಿಷಯವನ್ನು ಸ್ಪಷ್ಟಪಡಿಸಬೇಕು. 2011ರಿಂದಲೇ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ನಮ್ಮ ಮೆಟ್ರೋ ಹಿಂದಿ ಹೇರಿಕೆ ವಿರುದ್ಧ ಹಲವು ಸ್ವರೂಪದ ಪ್ರಜಾಸತ್ತಾತ್ಮಕ, ಅಹಿಂಸಾತ್ಮಕ ಚಳವಳಿಯನ್ನು ಸಂಘಟಿಸುತ್ತಲೇ ಬಂದಿದೆ. ಬಿಎಂಆರ್‌ಸಿಎಲ್ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಶಿವಸೈಲಂ ಹಾಗು ಈಗಿನವರಾದ ಪ್ರದೀಪ್ ಸಿಂಗ್ ಕರೋಲಾ ಅವರನ್ನು ಭೇಟಿ ಮಾಡಿ ಮನವಿಗಳನ್ನು ನೀಡಿದೆ.

ಮೆಟ್ರೋ ಕಚೇರಿ ಮುಂದೆಯೇ ಹಲವಾರು ಪ್ರತಿಭಟನೆಗಳನ್ನೂ ಕರವೇ ಸಂಘಟಿಸಿದೆ. ಈ ಬಾರಿ ನಾಡಿನ ಅತ್ಯಂತ ಪ್ರಮುಖ ಸಾಹಿತಿಗಳು, ಚಳವಳಿಗಾರರು, ದಲಿತ ಸಂಘಟನೆಗಳ ಮುಖಂಡರು, ಜನಪ್ರತಿನಿಧಿಗಳನ್ನು ಸೇರಿಸಿ ದುಂಡುಮೇಜಿನ ಸಭೆಯನ್ನೂ ನಡೆಸಲಾಯಿತು. ಈ ಸಭೆಗೆ ಮಹಾರಾಷ್ಟ್ರದ ಎಂಎನ್‌ಎಸ್, ತಮಿಳುನಾಡಿನ ಡಿಎಂಕೆ ಸೇರಿದಂತೆ ದೇಶದ ನಾನಾ ಭಾಗಗಳ ಭಾಷಾ ಚಳವಳಿಗಳ ಮುಖಂಡರು, ರಾಜಕೀಯ ಪಕ್ಷಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಈ ದುಂಡುಮೇಜಿನ ಸಭೆಯಲ್ಲಿ ಬಹಳ ಸ್ಪಷ್ಟವಾಗಿ ಕೂಡಲೇ ಹಿಂದಿ ನಾಮಫಲಕ ತೆರವು ಮಾಡುವಂತೆ ಆಗ್ರಹಿಸಲಾಗಿತ್ತು. ಇಷ್ಟೆಲ್ಲ ಆದ ಮೇಲೂ ಹಿಂದಿ ಫಲಕಗಳು ತೆರವಾಗಲಿಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ತಮ್ಮ ಎರಡನೇ ಪತ್ರದಲ್ಲಿ ಹದಿನೈದು ದಿನಗಳೊಳಗೆ ಹಿಂದಿ ಫಲಕಗಳನ್ನು ತೆರವುಗೊಳಿಸಿ ತಮಗೆ ವರದಿ ನೀಡುವಂತೆ ಬಿಎಂಆರ್‌ಸಿಎಲ್ ಮುಖ್ಯಸ್ಥರಿಗೆ ಪತ್ರ ಬರೆದಿದ್ದರು. ಆದರೆ ಅದರಿಂದಲೂ ಪ್ರಯೋಜನವಾಗಲಿಲ್ಲ. ರಾಜ್ಯ ಸರ್ಕಾರ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆದೇಶವನ್ನೇ ಇವರು ಉಲ್ಲಂಘಿಸಿದರೆ ನಾವೇನು ಮಾಡುವುದು?

ಇದೂ ಸಹ ಒಂದು ರೀತಿಯಲ್ಲಿ ಕಾನೂನನ್ನು ಕೈಗೆ ತೆಗೆದುಕೊಂಡ ಹಾಗೆಯೇ. ಹೀಗಾಗಿ ಅನಿವಾರ್ಯವಾಗಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಮಸಿ ಚಳವಳಿಯ ನಿರ್ಧಾರವನ್ನು ಕೈಗೊಂಡರು. ಆದರೆ ಈ ಚಳವಳಿಯನ್ನು ಅವರು ಹೇಗೆ ರೂಪಿಸಿದ್ದರೆಂದರೆ ಯಾವುದೇ ಕಾರಣಕ್ಕೂ ಪ್ರಯಾಣಿಕರಿಗೆ ತೊಂದರೆ ಆಗಕೂಡದು, ಗೊಂದಲದ ಸ್ಥಿತಿ ನಿರ್ಮಾಣವಾಗಬಾರದು ಎಂದು ಈ ಕಾರ್ಯಾಚರಣೆಯನ್ನು ಬೆಳಗಿನ ಜಾವ ನಾಲ್ಕರಿಂದ ಐದು ಗಂಟೆಗೆ ನಿಗದಿಮಾಡಲಾಗಿತ್ತು.

ಹಿಂದಿ ಫಲಕಗಳಿಗೆ ಮಸಿ ಬಳಿಯುವುದನ್ನು ಬಿಟ್ಟರೆ ಬೇರೆ ಏನೂ ಮಾಡಕೂಡದು ಎಂಬ ಸ್ಪಷ್ಟ ನಿರ್ದೇಶನ ಕಾರ್ಯಕರ್ತರಿಗಿತ್ತು. ಒಟ್ಟಾರೆಯಾಗಿ ನಮ್ಮ ಪ್ರತಿಭಟನೆ ಸಾಂಕೇತಿಕವಾಗಿತ್ತು. ಅದರಲ್ಲಿ ಹಿಂಸೆಯ ಅಂಶವೇನೂ ಇರಲಿಲ್ಲ. ಸರ್ಕಾರಗಳನ್ನು ಬಡಿದು ಏಳಿಸುವುದು ನಮ್ಮ ಉದ್ದೇಶವಾಗಿತ್ತು. ನಮ್ಮ ಉದ್ದೇಶದಲ್ಲಿ ಸಫಲರಾದೆವು. ತುಂಬ ಸಂಕೀರ್ಣವಾಗಿ ಒಂದು ಮಾತು ಹೇಳಬಹುದು. ಏನೆಂದರೆ ಈ ಹಿಂದಿ ಹೇರಿಕೆ ಅನ್ನೋದೇ ನಮ್ಮ ಮೇಲೆ 70ವರ್ಷಗಳಿಂದ ಆಗುತ್ತಿರುವ ದೊಡ್ಡ ಹಿಂಸೆ. ಈ ಹಿಂಸೆಯನ್ನು ತಪ್ಪಿಸಿದರೆ ನಾವು ಯಾಕೆ ಮಸಿಡಬ್ಬ ಹಿಡಿದುಕೊಂಡು ಓಡಾಡಬೇಕಾಗುತ್ತದೆ ಹೇಳಿ?

 ನಮ್ಮ ಮೆಟ್ರೋ ಹಿಂದಿ ಬೇಡ ಎನ್ನುವ ಟ್ವಿಟರ್ ಕ್ಯಾಂಪೇನ್‌ಗೆ 150 ಕೋಟಿ ಇಂಪ್ರೆಷನ್ಸ್

ನಮ್ಮ ಮೆಟ್ರೋ ಹಿಂದಿ ಬೇಡ ಎನ್ನುವ ಟ್ವಿಟರ್ ಕ್ಯಾಂಪೇನ್‌ಗೆ 150 ಕೋಟಿ ಇಂಪ್ರೆಷನ್ಸ್

ಪ್ರ: ನಮ್ಮ ಮೆಟ್ರೋದಲ್ಲಿ ಹಿಂದಿ ಬೇಡ ಎನ್ನುವ ಹೋರಾಟಕ್ಕೆ ಎಲ್ಲಾ ಕನ್ನಡಿಗರ ಬೆಂಬಲ ಇದೆ ಅಂದು ನಿಮಗೆ ಅನಿಸುತ್ತಾ?
ದಿನೇಶ್: ನಮ್ಮ ಮೆಟ್ರೋ ಹಿಂದಿ ಬೇಡ ಎನ್ನುವ ನಮ್ಮ ಟ್ವಿಟರ್ ಕ್ಯಾಂಪೇನ್‌ಗೆ ಸುಮಾರು 150 ಕೋಟಿ ಇಂಪ್ರೆಷನ್ಸ್ ಬಿದ್ದಿವೆ. ಈ ಚಳವಳಿಗೆ ವ್ಯಕ್ತವಾಗಿರುವ ಬೆಂಬಲಕ್ಕೆ ಇದೊಂದು ಉದಾಹರಣೆ. ನಿಜ, ಮೊದಮೊದಲು ಹಿಂದಿಹೇರಿಕೆ ಬಗ್ಗೆ ನಾವು ಮಾತನಾಡಿದಾಗ ಬಹಳಷ್ಟು ಮಂದಿಗೆ ಅರ್ಥವೇ ಆಗುತ್ತಿರಲಿಲ್ಲ. ಸಾಮಾನ್ಯ ಜನರು ಹೋಗಲಿ, ಸಾಕಷ್ಟು ಮಂದಿ ಜನಪ್ರತಿನಿಧಿಗಳು-ಸಾಹಿತಿಗಳಿಗೇ ಈ ವಿಷಯದ ಆಳ ಅಗಲ ಗೊತ್ತಿರಲಿಲ್ಲ.

2005ರಿಂದ ಕರ್ನಾಟಕ ರಕ್ಷಣಾ ವೇದಿಕೆ ಹಿಂದಿಹೇರಿಕೆ ಬಗ್ಗೆ ಜನಜಾಗೃತಿ ಮೂಡಿಸುತ್ತ ಬಂದಿದೆ. ಸೆಪ್ಟೆಂಬರ್ ತಿಂಗಳಲ್ಲಿ ಅವರು ಹಿಂದಿ ದಿವಸ್, ಹಿಂದಿ ಸಪ್ತಾಹ, ಹಿಂದಿ ಪಕ್ವಾಡಾಗಳನ್ನು ನಡೆಸುತ್ತ ಬಂದರೆ ನಾವು ಅದಕ್ಕೆ ವಿರುದ್ಧವಾಗಿ ಅದೇ ದಿನಗಳಲ್ಲಿ ಪ್ರತಿ ವರ್ಷ ಹಿಂದಿ ಹೇರಿಕೆ ವಿರೋಧಿ ದಿನಾಚರಣೆ, ಭಾಷಾ ಸಮಾನತಾ ಸಪ್ತಾಹಗಳನ್ನು ಆಚರಿಸುತ್ತ ಬಂದಿದ್ದೇವೆ. ಅವರು ಹಿಂದಿಯೊಂದೇ ಇರಲಿ ಎನ್ನುತ್ತಾರೆ, ನಾವು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ 22ಭಾಷೆಗಳಿಗೂ ಸಮಾನಸ್ಥಾನಮಾನ ಇರಬೇಕು ಎಂದು ಹೇಳುತ್ತಿದ್ದೇವೆ.

ಅವರು ಇಡೀ ದೇಶದ ತುಂಬೆಲ್ಲ ಒಂದೇ ಭಾಷೆ ಇರಬೇಕು ಎಂದು ಬಯಸುತ್ತಾರೆ, ನಾವು ಈ ದೇಶದ ಭಾಷಾ ವೈವಿಧ್ಯಕ್ಕೆ ಧಕ್ಕೆಯಾಗಕೂಡದು. ಎಲ್ಲ ಭಾಷೆಗಳೂ ಜೀವಂತವಾಗಿರಬೇಕು, ಎಲ್ಲ ಭಾಷೆಗಳೂ ಬೆಳೆಯಬೇಕು ಎಂದು ಹೇಳುತ್ತೇವೆ. ಈ ವಿಷಯವನ್ನು ನಾವು ನಿಧಾನವಾಗಿ ಜನಸಾಮಾನ್ಯರ ಹಂತಕ್ಕೆ ತೆಗೆದುಕೊಂಡುಹೋಗುತ್ತಿದ್ದೇವೆ.

ಮೊದಮೊದಲು ಹಿಂದಿ ರಾಷ್ಟ್ರಭಾಷೆ ಎಂದು ಹೇಳುತ್ತಿದ್ದವರ ಸಂಖ್ಯೆ ಹೆಚ್ಚು. ಹಿಂದಿ ರಾಷ್ಟ್ರಭಾಷೆ ಎಂಬ ಹಸಿಸುಳ್ಳನ್ನು ಹೇಗೆ ನಮ್ಮ ಜನರ ತಲೆಗಳಲ್ಲಿ ತುಂಬಲಾಗಿದೆಯೆಂದರೆ ಅದನ್ನು ತೊಡೆದುಹಾಕುವುದೇ ನಮಗೆ ದೊಡ್ಡ ಸವಾಲಾಗಿತ್ತು. ಈಗ ಸಾಮಾನ್ಯ ಜನರಿಗೂ ಹಿಂದಿ ರಾಷ್ಟ್ರಭಾಷೆಯಲ್ಲ, ಅದೂ ಸಹ ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಒರಿಯಾ, ಅಸ್ಸಾಮಿ, ಪಂಜಾಬಿ ಭಾಷೆಗಳ ಹಾಗೆ ಒಂದು ಭಾಷೆ ಎನ್ನುವುದು ಅರ್ಥವಾಗಿದೆ. ಹೀಗಾಗಿ ಮೊದಲಿಗಿಂತ ಹೆಚ್ಚಿನ ಬೆಂಬಲ ನಮ್ಮ ಚಳವಳಿಗೆ ವ್ಯಕ್ತವಾಗುತ್ತಿದೆ.

 ಆಂಗ್ಲರು ಬಿಟ್ಟು ಹೋದ ಇಂಗ್ಲಿಷ್ ಯಾಕೆ ಬೇಕು?

ಆಂಗ್ಲರು ಬಿಟ್ಟು ಹೋದ ಇಂಗ್ಲಿಷ್ ಯಾಕೆ ಬೇಕು?

ಪ್ರ : ನಮ್ಮ ಮೆಟ್ರೋದಲ್ಲಿ ನಮ್ಮದೇ ದೇಶದ ಹಿಂದಿ ಬೇಡ ಎಂದಾದರೆ ಆಂಗ್ಲರು ಬಿಟ್ಟು ಹೋದ ಇಂಗ್ಲಿಷ್ ಯಾಕೆ ಬೇಕು?
ದಿನೇಶ್: ನಮಗೆ ಇಂಗ್ಲಿಷ್ ಎಷ್ಟು ಪರಕೀಯವೋ ಹಿಂದಿಯೂ ಅಷ್ಟೇ ಪರಕೀಯ. ಕನ್ನಡಿಗರಿಗೆ ಕನ್ನಡವೊಂದೇ ಸ್ವಂತ, ಮಿಕ್ಕಿದ್ದೆಲ್ಲವೂ ಹೊರಗಿನವು. ಕರ್ನಾಟಕ ಸರ್ಕಾರ ತನ್ನ ಆಡಳಿತ ಭಾಷೆಯನ್ನಾಗಿ ಕನ್ನಡವನ್ನು ಜಾರಿಗೆ ತಂದಿದೆ. ತೀರಾ ಅನಿರ್ವಾಯವೆನಿಸಿದಾಗ ಇಂಗ್ಲಿಷ್ ಬಳಸುತ್ತದೆ. ಇದು ರಾಜ್ಯ ಸರ್ಕಾರದ ಸ್ಪಷ್ಟ ಭಾಷಾ ನೀತಿ. ಕನ್ನಡಿಗರ ಅನುಕೂಲಕ್ಕಾಗಿ ಕನ್ನಡ, ಕನ್ನಡ ಬಾರದ ಕನ್ನಡೇತರರಿಗಾಗಿ ಇಂಗ್ಲಿಷ್ ಇದು ಈ ನೀತಿ.

ಬೇಕೋ ಬೇಡವೋ ಇಂಗ್ಲಿಷ್ ಭಾಷೆ ಎಲ್ಲ ವಲಯಗಳಲ್ಲೂ ಹರಡಿಕೊಂಡಿದೆ. ಅದನ್ನು ಯಾರೂ ಹೇರಲಿಲ್ಲ. ಯುವಸಮೂಹ ತಾನಾಗಿಯೇ ಒಪ್ಪಿ ಸ್ವೀಕರಿಸಿದೆ. ರಾಜ್ಯದ ಶೇ. 30ರಷ್ಟು ಶಾಲೆಗಳು ಇಂಗ್ಲಿಷ್ ಮಾಧ್ಯಮದಲ್ಲೇ ನಡೆಯುತ್ತಿವೆ. ಹೀಗಿರುವಾಗ ಇಂಗ್ಲಿಷನ್ನು ಈ ಕ್ಷಣಕ್ಕೆ ತೆಗೆದುಹಾಕಿ ಎಂದು ಕೇಳಲಾಗದು. ಹೊರಗಿನಿಂದ ಬಂದವರೂ ಸಹ ಕನ್ನಡವನ್ನೇ ಓದಲು, ಬರೆಯಲು ಬರುವಂತಿದ್ದರೆ ಇಂಗ್ಲಿಷ್‌ನ ಅಗತ್ಯವೂ ಇರಲಿಲ್ಲ. ಅಂಥ ಕಾಲ ಬಂದರೆ ನಮಗೆ ಸಂತೋಷವೇ.

ಹಿಂದಿಯೂ ಸೇರಿದಂತೆ ನಾವು ಯಾವುದೇ ಭಾಷೆಯ ವಿರೋಧಿಗಳಲ್ಲ, ಭಾಷೆ ಹೇರಿಕೆಯ ವಿರೋಧಿಗಳು ಅಷ್ಟೆ. ಹಿಂದಿಯೂ ಇಂಗ್ಲಿಷಿನ ಹಾಗೆ ನಮಗೆ ಸಹಜ ಭಾಷೆಯಾಗಿದ್ದರೆ, ಅನ್ನದ ಭಾಷೆಯಾಗಿದ್ದರೆ, ಅಂತಾರಾಷ್ಟ್ರೀಯ ಮಟ್ಟದ ಸಂವಹನದ ಭಾಷೆಯಾಗಿದ್ದರೆ ಅದನ್ನೂ ಸ್ವೀಕರಿಸುತ್ತಿದ್ದೆವೇನೋ? ನಾವು ಕೋಟ್ಯಂತರ ಕನ್ನಡಿಗರು ಶಿಕ್ಷಣದಲ್ಲಿ ತೃತೀಯ ಭಾಷೆಯಾಗಿ ಉಳಿದುಕೊಂಡಿರುವ ಹಿಂದಿಯನ್ನು ಶ್ರದ್ಧೆಯಿಂದ ಕಲಿತೆವು. ನೀವೇ ಹೇಳಿ, ಅದು ಯಾವ ಪ್ರಯೋಜನಕ್ಕೆ ಬಂತು?

ಬಾಲಿವುಡ್ ಸಿನಿಮಾ ನೋಡಿ ಅರ್ಥ ಮಾಡಿಕೊಳ್ಳಲು ನಾವು ಹಿಂದಿ ಕಲಿಯಬೇಕಿತ್ತಾ? ಮೂರನೇ ಭಾಷೆ ನಮ್ಮ ಆಯ್ಕೆಗೆ ಬಿಟ್ಟಿದ್ದರೆ ನಾವು ನಮಗೆ ಹತ್ತಿರದ ಭಾಷೆಗಳಾದ ತಮಿಳೋ, ತೆಲುಗೋ, ಮಲೆಯಾಳಮ್ಮೋ, ಮರಾಠಿಯೋ ಭಾಷೆಗಳನ್ನು ಕಲಿಯುತ್ತಿದ್ದೆವು. ಅಥವಾ ಜರ್ಮನ್, ಫ್ರೆಂಚ್ ಭಾಷೆಗಳನ್ನಾದರೂ ಕಲಿಯಬಹುದಿತ್ತು. ನಮಗೆ ನಮ್ಮ ಸರ್ಕಾರಗಳು ಯಾವ ಕೆಲಸಕ್ಕೂ ಬಾರದ ಹಿಂದಿಯನ್ನು ಕಲಿಸಿದವು, ಅದೂ ಕೂಡ ಕಡ್ಡಾಯ ಹೇರಿ. ಇದನ್ನೇ ನಾವು ಬೇಡ ಅನ್ನೋದು.

ಇನ್ನು ಇಂಗ್ಲಿಷ್-ಹಿಂದಿಯ ಹೋಲಿಕೆಯೇ ಸರಿಯಲ್ಲ. ಯಾಕೆಂದರೆ ಇಂಗ್ಲಿಷನ್ನು ಮಾತೃಭಾಷೆಯಾಗಿ ಉಳ್ಳವರು ಈ ದೇಶದಲ್ಲಿ ಇಲ್ಲ. ಅದು ಒಂದು ಸಂಪರ್ಕ ಭಾಷೆ. ಆದರೆ ಹಿಂದಿ ಹಾಗಲ್ಲ. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಬಳಸಲಾಗುವ ಭಾಷೆ. ಹೀಗಾಗಿ ಹಿಂದಿಯನ್ನು ಇತರೆ ರಾಜ್ಯಗಳಿಗೆ ಹೇರುವುದರಿಂದ ದೇಶದಲ್ಲಿ ತಾರತಮ್ಯದ ಸಂದರ್ಭ ಸೃಷ್ಟಿಯಾಗುತ್ತದೆ. ಉದಾಹರಣೆಗೆ ಒಬ್ಬ ಹಿಂದಿವಾಲಾ ಬಂದು ಕರ್ನಾಟಕದಲ್ಲಿ ಕನ್ನಡ, ಇಂಗ್ಲಿಷ್ ಎರಡೂ ಭಾಷೆ ಗೊತ್ತಿಲ್ಲದೆಯೂ ಬ್ಯಾಂಕು, ಪೋಸ್ಟ್ ಆಫೀಸು, ರೈಲ್ವೆ ಇತ್ಯಾದಿ ಕಡೆಗಳಲ್ಲಿ ವ್ಯವಹರಿಸಬಲ್ಲ.

ಆದರೆ ಇಂಗ್ಲಿಷ್, ಹಿಂದಿ ಗೊತ್ತಿಲ್ಲದ ಕನ್ನಡಿಗ ಉತ್ತರ ಭಾರತದಲ್ಲಿ ಬದುಕಲಾರ. ಯಾವುದೋ ಒಂದು ಭಾಷಾ ಸಮುದಾಯಕ್ಕೆ ವಿಶೇಷ ಆದ್ಯತೆ ಯಾಕೆ ಕೊಡಬೇಕು? ಈ ದೇಶದ ಸಂವಿಧಾನದ ಪ್ರಸ್ತಾವನೆಯಲ್ಲೇ ದೇಶದ ಎಲ್ಲ ನಾಗರಿಕರು ಸಮಾನರು ಎಂದು ಹೇಳಲಾಗಿದೆ. ಆದರೆ ಭಾಷೆಗಳು ಸಮಾನವಾಗದೇ, ಭಾಷಾ ಸಮುದಾಯಗಳು ಸಮಾನರಾಗುವುದು ಹೇಗೆ ಸಾಧ್ಯ? ಹೀಗಾಗಿ ನಾವು ಹಿಂದಿ ಮತ್ತು ಇಂಗ್ಲಿಷ್‌ನ ಆಯ್ಕೆ ಮುಂದಿಟ್ಟರೆ ಇಂಗ್ಲಿಷನ್ನೇ ಆಯ್ಕೆ ಮಾಡುತ್ತೇವೆ, ಅದೂ ಕೂಡ ಎರಡನೇ ಭಾಷೆಯಾಗಿ ಮಾತ್ರ.

 ರಾಷ್ಟ್ರೀಯ ವಾಹಿನಿಗಳಲ್ಲ, ಹಿಂದಿಯನ್ ವಾಹಿನಿಗಳು

ರಾಷ್ಟ್ರೀಯ ವಾಹಿನಿಗಳಲ್ಲ, ಹಿಂದಿಯನ್ ವಾಹಿನಿಗಳು

ಪ್ರ: ರಾಷ್ಟ್ರೀಯ ವಾಹಿನಿಗಳು ಕನ್ನಡ ವಿರೋಧಿ ನಿಲುವನ್ನು ತಾಳುತ್ತಾ ಬರುತ್ತಿವೆಯಲ್ಲಾ, ಈ ಬಗ್ಗೆ?
ದಿನೇಶ್: ಇವುಗಳನ್ನು ರಾಷ್ಟ್ರೀಯ ವಾಹಿನಿಗಳು ಎಂದು ಕರೆಯುವುದೇ ತಪ್ಪೇನೋ ಎನಿಸುತ್ತದೆ. ಇವು ಹಿಂದಿಯನ್ ವಾಹಿನಿಗಳು. ಅವು ಅಧಿಕೃತವಾಗಿ ಇಂಗ್ಲಿಷ್ ವಾಹಿನಿಗಳೇ ಆಗಿದ್ದರೂ ಒಳಗೊಳಗೆ ಹಿಂದಿಯನ್ ವಾಹಿನಿಗಳೇ ಆಗಿರುತ್ತವೆ. ನೀವು ಗಮನಿಸಿರಬಹುದು. ಈ ವಾಹಿನಿಗಳು ನಡೆಸುವ ಡಿಬೇಟುಗಳಲ್ಲಿ ಭಾಗವಹಿಸುವವರಿಗೆ ಹಿಂದಿಯಲ್ಲಿ ಮಾತನಾಡುವ ಅವಕಾಶವೂ ಇರುತ್ತದೆ. ಆದರೆ ಯಾವ ಕಾರಣಕ್ಕೂ ಕನ್ನಡ, ತಮಿಳು, ಮಲೆಯಾಳಂ, ಅಸ್ಸಾಮಿ, ಮಣಿಪುರಿ ಭಾಷೆಗಳನ್ನು ಮಾತನಾಡಲಾಗದು.

ಈ ವಾಹಿನಿಗಳು ದೇಶದ ಯಾವುದೇ ಭಾಗದಲ್ಲಿ ಪ್ರಾದೇಶಿಕ ಶಕ್ತಿಗಳು ಜಾಗೃತವಾದರೆ ಅದನ್ನು ವಿರೋಧಿಸುತ್ತವೆ. ಪ್ರಾದೇಶಿಕತೆ ಎಂಬುದು ರಾಷ್ಟ್ರೀಯತೆಗೆ ವಿರೋಧಿ ಎಂಬುದು ಈ ಹಿಂದಿಯನ್ನರ ಅಚಲವಾದ ನಂಬುಗೆ. ಈ ದೇಶ ಭಾಷೆಯ ಆಧಾರದಲ್ಲೇ ರಾಜ್ಯಗಳಾಗಿ ವಿಂಗಡಣೆಯಾಗಿದೆ. ರಾಜ್ಯಗಳು ಮತ್ತು ಕೇಂದ್ರಕ್ಕೆ ಇರುವ ಅಧಿಕಾರಗಳನ್ನೂ ಸಹ ಸಂವಿಧಾನದಲ್ಲೇ ಸ್ಪಷ್ಟಪಡಿಸಲಾಗಿದೆ. ಇದಕ್ಕಾಗಿಯೇ ರಾಜ್ಯಪಟ್ಟಿ, ಕೇಂದ್ರ ಪಟ್ಟಿ, ಸಮವರ್ತಿಪಟ್ಟಿಗಳಿವೆ. ಆದರೆ ರಾಜ್ಯಗಳಿಗೆ ಇರುವ ಅಧಿಕಾರಗಳು ಮೊಟಕಾಗಬೇಕು ಎಂಬುದು ಹೊಸಬಗೆಯ ರಾಷ್ಟ್ರವಾದಿಗಳ ವಾದ.

ಅದಕ್ಕೆ ಪೂರಕವಾಗಿ ಈ ಹಿಂದಿಯನ್ ಚಾನಲ್‌ಗಳು ಕೆಲಸ ಮಾಡುತ್ತವೆ. ತಮಾಷೆ ಎಂದರೆ ದಿಲ್ಲಿಯ ಕುಳಿತ ಜನರು ದಕ್ಷಿಣ ಭಾರತ ಎಂದರೆ ತಮಿಳು, ಮದ್ರಾಸ್ ಎಂದೇ ಭಾವಿಸಿದ್ದರು. ಕರ್ನಾಟಕ ಈ ನಡುವೆ ಭಾಷಾಹೋರಾಟದ ಹಿನ್ನೆಲೆಯಲ್ಲಿ ಸದ್ದು ಮಾಡುತ್ತಿರುವುದನ್ನು ಅವರಿಂದ ಸಹಿಸಿಕೊಳ್ಳಲಾಗುತ್ತಿಲ್ಲ. ಉತ್ತರ ಭಾರತದಲ್ಲಿ ಮಿತಿಮೀರುತ್ತಿರುವ ಜನಸಂಖ್ಯಾ ಹೆಚ್ಚಳದ ಒತ್ತಡವನ್ನು ಕಡಿಮೆ ಮಾಡಲು ಅಲ್ಲಿಂದ ಜನರನ್ನು ದಕ್ಷಿಣ ಭಾರತದೆಡೆಗೆ ವಲಸೆ ಹೋಗುವಂತೆ ಮಾಡಲಾಗುತ್ತಿದೆ.

ಹೀಗೆ ವಲಸೆ ಬಂದವರಿಗೆ ಅನುಕೂಲ ಮಾಡಿಕೊಡಲು ಕೇಂದ್ರ ಸರ್ಕಾರ ರಾಜಾಭಾಷಾ ಕಾಯ್ದೆಯನ್ನು ರಾಜ್ಯಸರ್ಕಾರಗಳ ಮೇಲೆ ಪ್ರಯೋಗಿಸುತ್ತಿದೆ. ಹೀಗೆ ಹಿಂದಿ ಭಾಷಿಕರಿಗೆ ದಕ್ಷಿಣಭಾರತದಲ್ಲಿ ಕಂಫರ್ಟ್ ಜೋನ್ ಸೃಷ್ಟಿಸುವುದು ಹಿಂದಿ ಸಾಮ್ರಾಜ್ಯಶಾಹಿಯ ಹುನ್ನಾರ. ಅದನ್ನು ಕರ್ನಾಟಕ ಮನಗಂಡು ಪ್ರತಿಭಟಿಸುತ್ತಿದೆ. ಈ ಪ್ರತಿಭಟನೆ ಸಹಜವಾಗಿ ಈ ಸೊ ಕಾಲ್ಡ್ ರಾಷ್ಟ್ರೀಯ ವಾಹಿನಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.

 ಬಿಜೆಪಿ ತಂತ್ರಗಾರಿಕೆ, ಆ ಪಕ್ಷಕ್ಕಿಂತ ಮೂರ್ಖ ರಾಜಕೀಯ ಪಕ್ಷ ಇನ್ನೊಂದಿಲ್ಲ

ಬಿಜೆಪಿ ತಂತ್ರಗಾರಿಕೆ, ಆ ಪಕ್ಷಕ್ಕಿಂತ ಮೂರ್ಖ ರಾಜಕೀಯ ಪಕ್ಷ ಇನ್ನೊಂದಿಲ್ಲ

ಪ್ರ: ನಮ್ಮ ಮೆಟ್ರೋ ವಿಚಾರದಲ್ಲಿ ಬಿಜೆಪಿ ತಟಸ್ಥ ನಿಲುವನ್ನು ತಾಳಿತು. ಇದು ರಾಜ್ಯ ಬಿಜೆಪಿ ಘಟಕದ ತಂತ್ರಗಾರಿಕೆ ಇರಬಹುದೇ?
ದಿನೇಶ್: ಇದು ರಾಜ್ಯ ಬಿಜೆಪಿ ಘಟಕದ ತಂತ್ರಗಾರಿಕೆ ಆಗಿದ್ದರೆ ಆ ಪಕ್ಷಕ್ಕಿಂತ ಮೂರ್ಖ ರಾಜಕೀಯ ಪಕ್ಷ ಇನ್ನೊಂದಿಲ್ಲ ಎಂದೇ ಹೇಳಬೇಕಾಗುತ್ತದೆ. ಯಾಕೆಂದರೆ ಕನ್ನಡಿಗರು ಒಂದೇ ಧ್ವನಿಯಲ್ಲಿ ಹಿಂದಿ ಬೇಡ ಎನ್ನುತ್ತಿರುವಾಗ ತಟಸ್ಥವಾಗಿರುವ ಮೂಲಕ ಬಿಜೆಪಿಯವರು ತಮ್ಮ ಕಾಲ ಮೇಲೆ ಚಪ್ಪಡಿ ಕಲ್ಲು ಎಳೆದುಕೊಂಡರು ಎಂದೇ ಹೇಳಬೇಕಾಗುತ್ತದೆ.

ಹಾಗೆ ಹೇಳುವುದಾದರೆ ಬಿಜೆಪಿ ಈ ವಿವಾದ ಆರಂಭಗೊಂಡ ಸಂದರ್ಭದಲ್ಲಿ ಬಿಜೆಪಿ ತಟಸ್ಥ ನಿಲುವನ್ನೇನೂ ತಾಳಿರಲಿಲ್ಲ, ಸ್ಪಷ್ಟವಾಗಿ ಕನ್ನಡಿಗರ ವಿರೋಧವಾಗಿಯೇ ಹೇಳಿಕೆ ನೀಡಿತ್ತು. ಬೆಂಗಳೂರಿನ ಮೂವರು ಎಂಪಿಗಳ ಪೈಕಿ ಅನಂತಕುಮಾರ್ ಮತ್ತು ಸದಾನಂದಗೌಡ ಮೂರನೇ ಭಾಷೆಯಾಗಿ ಹಿಂದಿ ಇರಲಿ ಬಿಡಿ ಎಂದೇ ಹೇಳಿದ್ದರು. ಆ ಪಕ್ಷದ ಮತ್ತೋರ್ವ ಮುಖಂಡ ಸಿ.ಟಿ.ರವಿ ಸಹ ಇದೇ ಥರದ ಹೇಳಿಕೆ ನೀಡಿದ್ದರು. ಬೆಂಗಳೂರಿನ ಇನ್ನೋರ್ವ ಸಂಸದ ಪಿ.ಸಿ.ಮೋಹನ್ ಮಾತ್ರ ರಾಜ್ಯ ಸರ್ಕಾರವೇ ನಿರ್ಧಾರ ಕೈಗೊಳ್ಳಲಿ ಎಂದು ಹೇಳಿದ್ದರು.

ಅನಂತ ಕುಮಾರ್, ಸದಾನಂದಗೌಡ ಮತ್ತು ಸಿ.ಟಿ.ರವಿ ತಳೆದ ನಿಲುವಿಗಳಿಗಾಗಿ ಅವರು ತಮ್ಮ ಪಕ್ಷದ ಬೆಂಬಲಿಗರಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಸ್ವರೂಪದ ವಿರೋಧವನ್ನು ಎದುರಿಸಬೇಕಾಯಿತು. ಈ ವಿಷಯ ಸಾರ್ವಜನಿಕವಾಗಿ ತಮಗೆ ಮುಖಭಂಗಕ್ಕೆ ಕಾರಣವಾಗುತ್ತದೆ ಎಂಬುದು ಗೊತ್ತಾಗುತ್ತಿದ್ದಂತೆ ಬಿಜೆಪಿ ನಾಯಕರು ತಟಸ್ಥರಾದರು.

ಭಾರತೀಯ ಜನತಾ ಪಕ್ಷಕ್ಕೆ ಕನ್ನಡಿಗರ ನಾಡಿಮಿಡಿತ ಗೊತ್ತಿದ್ದರೆ ಅವರು ಸಾರಾಸಗಟಾಗಿ ಈ ಚಳವಳಿಯ ಬೆನ್ನಿಗೆ ನಿಲ್ಲಬೇಕಿತ್ತು. ಈಗ ಹೈಕಮಾಂಡ್ ಗುಮ್ಮಕ್ಕೆ ಹೆದರಿ ಹಿಂದಿ ಇರಲಿ ಎಂದು ಹೇಳಿ ಮುಖ ಕೆಡಿಸಿಕೊಂಡಿದ್ದಾರೆ. ವಿಶೇಷವಾಗಿ ಬೆಂಗಳೂರಿನ ಸಂಸದರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೆಟ್ರೋ ವಿಷಯಕ್ಕೆ ಸಂಬಂಧಿಸಿದಂತೆ ಬೆಲೆ ತೆರಲಿದ್ದಾರೆ.

 ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಈ ಬಗ್ಗೆ ಘೋಷಿಸುವುದು ಸೂಕ್ತ

ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಈ ಬಗ್ಗೆ ಘೋಷಿಸುವುದು ಸೂಕ್ತ

ಪ್ರ: ಮುಂಬರುವ ಚುನಾವಣೆಯಲ್ಲಿ ಕನ್ನಡ ಪ್ರಮುಖ ವಿಷಯವಾಗಲಿದೆಯಾ? ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಈ ಬಗ್ಗೆ ಘೋಷಿಸುವುದು ಸೂಕ್ತ ಅಲ್ಲವೇ?
ದಿನೇಶ್: ಕನ್ನಡವೆಂಬುದು ರಾಜಕೀಯ ವಿಷಯವಾಗಬೇಕು ಎಂದು ಈ ಮೊದಲೇ ಹೇಳಿದ್ದೇವೆ. ಕನ್ನಡಿಗರ ವೋಟ್ ಬ್ಯಾಂಕ್ ಸೃಷ್ಟಿಯಾಗಬೇಕು ಎಂದು ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಆಗಾಗ ಹೇಳುತ್ತಿದ್ದಾರೆ. ಕನ್ನಡಿಗರು ತಮ್ಮ ವಿರುದ್ಧ ನಿಂತ ರಾಜಕಾರಣಿಗಳನ್ನು ಸೋಲಿಸಿ ಮನೆಗೆ ಕಳಿಸುತ್ತಾರೆ ಎಂಬುದು ನಮ್ಮ ಜನನಾಯಕರಿಗೆ ಅರ್ಥವಾಗಬೇಕು. ಮುಂಬರುವ ಚುನಾವಣೆಗಳಲ್ಲಿ ಕನ್ನಡ ಪ್ರಮಖ ವಿಷಯ ಆಗಬೇಕು.

ಮುಂದೆ ಬರುವ ಯಾವುದೇ ಸರ್ಕಾರದ ಮುಂದೆ ಕರ್ನಾಟಕ ರಕ್ಷಣಾ ವೇದಿಕೆ ಒಂದಷ್ಟು ಹಕ್ಕೊತ್ತಾಯಗಳನ್ನು ಮಂಡಿಸಲಿದೆ. ಇವುಗಳನ್ನು ಪೂರೈಸುವವರಿಗಷ್ಟೇ ನಮ್ಮ ಮತ ಎಂದು ಘೋಷಿಸಲಿದ್ದೇವೆ. ಪ್ರಧಾನವಾಗಿ ಎಲ್ಲ ರೀತಿಯ ಉನ್ನತ ಶಿಕ್ಷಣಗಳು ಕನ್ನಡದಲ್ಲಿ ಪಡೆಯುವಂತೆ ಸಾಧ್ಯವಾಗುವಂತೆ ಹೊಸ ಶಿಕ್ಷಣ ನೀತಿಯನ್ನು ರೂಪಿಸಬೇಕು. ದ್ವಿಭಾಷಾ ನೀತಿ ಜಾರಿಗೆ ಬರಬೇಕು, ತೃತೀಯ ಭಾಷೆಯಾಗಿ ಇರುವ ಹಿಂದಿಯನ್ನು ಕಿತ್ತೊಗೆಯಬೇಕು. ಭಾಷಾ ಸಮಾನತೆಗಾಗಿ ಸಂವಿಧಾನದ 343ರಿಂದ 351ರವರೆಗಿನ ವಿಧಿಗಳನ್ನು ತಿದ್ದುಪಡಿ ಮಾಡಬೇಕು.

ಈ ಮೂಲಕ ಕನ್ನಡವೂ ಭಾರತ ಒಕ್ಕೂಟ ಸರ್ಕಾರದ ಆಡಳಿತ ಭಾಷೆಯಾಗಬೇಕು. ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ಕೆಲಸವಾಗಬೇಕು. ಕರ್ನಾಟಕಕ್ಕೆ ಆಗುತ್ತಿರುವ ತೀವ್ರ ಸ್ವರೂಪದ ಅನಿಯಂತ್ರಿತ ವಲಸೆಯನ್ನು ಕಡಿವಾಣ ಹಾಕುವೆಡೆಗೆ ಸಂವಿಧಾನಾತ್ಮಕ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು. ಕರ್ನಾಟಕ ಮತ್ತು ಒಕ್ಕೂಟ ಸರ್ಕಾರದ ಎಲ್ಲ ಸೇವೆಗಳು ಕನ್ನಡ ನುಡಿಯಲ್ಲಿ ಸಿಗುವಂತಾಗಬೇಕು. ಕರ್ನಾಟಕದಲ್ಲಿ ಸೃಷ್ಟಿಯಾಗುವ ಉದ್ಯೋಗಗಳಲ್ಲಿ ಸಿಂಹಪಾಲು ಕರ್ನಾಟಕದವರಿಗೇ ಸಿಗಬೇಕು. ಇಂಥ ಹಲವು ಕನ್ನಡ-ಕರ್ನಾಟಕ-ಕನ್ನಡಿಗರಿಗೆ ಅನುಕೂಲವಾಗುವ ನೀತಿಗಳನ್ನು ರೂಪಿಸಬೇಕು. ಇದೆಲ್ಲವನ್ನು ಪ್ರಣಾಳಿಕೆಗಳಲ್ಲಿ ಸೇರಿಸುವಂತೆ ನಾವು ರಾಜಕೀಯ ಪಕ್ಷಗಳನ್ನು ಆಗ್ರಹಿಸಲಿದ್ದೇವೆ.

 ಇತರ ಕನ್ನಡ ಸಂಘಟನೆಗಳು ಕರವೇಯಿಂದ ದೂರವಿರಲು ಕಾರಣ?

ಇತರ ಕನ್ನಡ ಸಂಘಟನೆಗಳು ಕರವೇಯಿಂದ ದೂರವಿರಲು ಕಾರಣ?

ಪ್ರ: ಕೊನೆಯದಾಗಿ, ವಾಟಾಳ್, ಪ್ರವೀಣ್ ಶೆಟ್ಟಿ, ಶಿವರಾಮೇ ಗೌಡರ ಬಣಗಳು, ನಾರಾಯಣ ಗೌಡರ ಬಣದಿಂದ ದೂರವಿರಲು ಕಾರಣ?
ದಿನೇಶ್: ಎಲ್ಲ ಕನ್ನಡಸಂಘಟನೆಗಳು ಒಂದಾಗಿಯೇ ಚಳವಳಿ ಮಾಡಬೇಕು ಎಂದೇನಿಲ್ಲ. ನಾಡಿನಲ್ಲಿ ಸಾವಿರಾರು ಕನ್ನಡ ಸಂಘಟನೆಗಳು ಇವೆ. ಎಲ್ಲ ಸಂಘಟನೆಗಳೂ ತಮ್ಮ ಇತಿಮಿತಿಯಲ್ಲಿ ಕೆಲಸ ಮಾಡುತ್ತ ಬರುತ್ತಿವೆ. ನಾವು ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಕಳೆದ ಹದಿನೆಂಟು ವರ್ಷಗಳಿಂದ ಕರ್ನಾಟಕ ರಕ್ಷಣಾ ವೇದಿಕೆಯನ್ನು ಸಂಘಟಿಸುತ್ತ ಬರುತ್ತಿದ್ದೇವೆ. ಸುಮಾರು 63ಲಕ್ಷಕ್ಕೂ ಹೆಚ್ಚು ನೋಂದಾಯಿತ ಕಾರ್ಯಕರ್ತರು ನಾರಾಯಣಗೌಡರ ನಾಯಕತ್ವದಲ್ಲಿ ನಂಬುಗೆ ಇಟ್ಟು ಕೆಲಸ ಮಾಡುತ್ತಿದ್ದಾರೆ.

ರಾಜ್ಯದ ಎಲ್ಲ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿಗಳಲ್ಲೂ ವೇದಿಕೆಯ ಶಾಖೆಗಳಿವೆ. ವೇದಿಕೆ ತನ್ನದೇ ಆದ ಸಿದ್ಧಾಂತವನ್ನು ಹೊಂದಿದೆ. ವಿಶಾಲವಾದ ತಳಹದಿಯ ಮೇಲೆ ಕನ್ನಡ ಚಳವಳಿಯನ್ನು ಕಟ್ಟುತ್ತ ಬಂದಿದೆ. ಈಗ ಕರ್ನಾಟಕದ ಗಡಿಯನ್ನೂ ಮೀರಿ ಭಾಷಾ ಸಮಾನತೆಗಾಗಿ ಒತ್ತಾಯಿಸಿ, ದೇಶದ ನಾನಾ ಭಾಗಗಳ ಭಾಷಾ ಚಳವಳಿಗಳ ಜತೆ ಕೈಜೋಡಿಸಿ ಕರವೇ ಕೆಲಸ ಮಾಡುತ್ತಿದೆ.

ಹಿಂದೂ ಸಂಘಟನೆಗಳು ಹಲವಾರು ಇರುವಂತೆ, ದಲಿತ ಸಂಘಟನೆಗಳು ಹಲವಾರು ಇರುವಂತೆ, ರೈತ ಸಂಘಟನೆಗಳು ಹಲವಾರು ಇರುವಂತೆ ಕನ್ನಡ ಸಂಘಟನೆಗಳೂ ಹಲವಾರು ಇವೆ. ಎಲ್ಲವೂ ಪ್ರತ್ಯೇಕ ಅಸ್ತಿತ್ವದೊಂದಿಗೆ ಚಳವಳಿಗಳನ್ನು ಸಂಘಟಿಸುತ್ತಿವೆ. ಕನ್ನಡಕ್ಕಾಗಿ ಯಾವ ಪ್ರತಿಫಲಾಪೇಕ್ಷೆ ಇಲ್ಲದೆ ದುಡಿಯುವ ಇನ್ನೂ ಹಲವು ಸಾವಿರ ಸಂಘಟನೆಗಳು ಹುಟ್ಟಿಕೊಂಡರೂ ನಮಗೆ ಸಂತೋಷವೇ. ಒಟ್ಟಿನಲ್ಲಿ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳು ದೂರವಾಗಬೇಕು.

English summary
Hindi imposition in Namma Metro, Nationalized Banks and other Central Government institutions : Karnataka Rakshana Vedike 'Nalnudi' Chief Editor Dinesh Kumar interview.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X