ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡ ಅನುವಾದದ ಕ್ರೌಡ್ ಸೋರ್ಸಿಂಗ್ ಪರ್ವಕಾಲ

By ವಿಕಾಸ್ ಹೆಗಡೆ, [email protected]
|
Google Oneindia Kannada News

ಅಂತರ್ಜಾಲದಲ್ಲಿ ಜಗತ್ತಿನ ಹಲವು ಭಾಷೆಗಳಲ್ಲಿ ಸೇವೆಗಳನ್ನು ಒದಗಿಸುವುದಕ್ಕೋಸ್ಕರ ಅನುವಾದದ ಕೆಲಸಗಳನ್ನು ಕ್ರೌಡ್ ಸೋರ್ಸ್ (Crowdsource) ಮಾಡುವ ಪರಿಪಾಠವನ್ನು ಹಲವಾರು ಕಂಪನಿಗಳು ಇಟ್ಟುಕೊಂಡಿವೆ. ಅಂದರೆ ಆಯಾ ಭಾಷೆಯ ಬಳಕೆದಾರರೇ ತಮ್ಮ ಭಾಷೆಗಳಿಗೆ ಅನುವಾದ ಮಾಡಿಕೊಳ್ಳುವ ಅವಕಾಶ ಒದಗಿಸಿಕೊಡುವ ಮೂಲಕ ಯೂಸರ್ ಇಂಟರ್ಫೇಸ್ ವಿವಿಧ ಭಾಷೆಗಳಲ್ಲಿ ದೊರೆಯುವಂತೆ ಮಾಡುವುದು ಇದರ ಉದ್ದೇಶ.

ಫೇಸ್ಬುಕ್ , ಟ್ವಿಟ್ಟರ್ ಮುಂತಾದ ಜನಪ್ರಿಯ ಸಾಮಾಜಿಕ ಸಂಪರ್ಕತಾಣಗಳು ಅನೇಕ ಭಾಷೆಗಳಲ್ಲಿ ದೊರೆಯುತ್ತಿರುವುದರ ಹಿಂದೆ ಈ ಕ್ರೌಡ್ ಸೋರ್ಸಿಂಗ್ ಬಹುಮುಖ್ಯ ಪಾತ್ರ ವಹಿಸಿದೆ. ಅಂತರ್ಜಾಲದಲ್ಲಿ ಎಲ್ಲಾ ಭಾಷೆಗಳಲ್ಲಿ ಸೇವೆಗಳನ್ನು ಒದಗಿಸಲು, ಅಂತರಜಾಲವು ಹೆಚ್ಚಿನ ಜನರನ್ನು ತಲುಪಲು ಇದು ಅಗತ್ಯ ಎಂದು ಬಣ್ಣಿಸಲ್ಪಟ್ಟರೂ ಕಾರ್ಪೋರೇಟ್ ಕಂಪನಿಗಳು ಹೀಗೆ ಉಚಿತವಾಗಿ ಕೆಲಸ ಮಾಡಿಸಿಕೊಳ್ಳುವುದು ಎಷ್ಟು ಸರಿ ಎಂಬ ಟೀಕೆಯೂ ಕೇಳಿಬರುತ್ತದೆ. [ಮೊಬೈಲಿನಲ್ಲಿ ಸಂಪೂರ್ಣ ಕನ್ನಡ ಬ್ರೌಸರ್ ಬೇಕೆ?]

ಕ್ರೌಡ್ ಸೋರ್ಸ್ ಮೂಲಕ ಅನುವಾದ
: ಅದೇನೇ ಇದ್ದರೂ ಸಹ ಕನ್ನಡ ಭಾಷೆಯಲ್ಲಿ ಎಲ್ಲವನ್ನೂ ತರಬೇಕು ಎಂಬ ಉತ್ಸಾಹಿಗಳು ಈ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಅದು ಉಚಿತವಾಗಿ ಮಾಡುವ ಕೆಲಸವಾದರೂ ಸರಿ, ಎಲ್ಲೆಡೆ ಕನ್ನಡ ಇರಬೇಕು, ಅದು ನುಡಿಯ ಬೆಳವಣಿಗೆಗೆ ಬಹಳ ಒಳ್ಳೆಯದು ಎಂಬ ನಿಲುವು ಅವರೆಲ್ಲರದು. ಇದರಿಂದಲೇ ಇವತ್ತು ಅನೇಕ ಜನಪ್ರಿಯ ತಾಣಗಳು, ಸೇವೆಗಳು ಕನ್ನಡದಲ್ಲಿ ಲಭ್ಯ ಇದೆ. [ಬ್ರೌಸರ್ ನಲ್ಲಿ ಕನ್ನಡದ ಸ್ಪೆಲ್ ಚೆಕ್ಕರ್ ಹಾಕ್ಕೊಳ್ಳಿ]

Vikas Hegde

ಕೆಲವು ಕ್ರೌಡ್ ಸೋರ್ಸ್ ಮೂಲಕ ಮಾಡಿರುವುದಾಗಿವೆ ಮತ್ತು ಹಲವನ್ನು ಆಯಾ ಕಂಪನಿಗಳೇ (ಸೇವಾದಾತರು) ಒದಗಿಸಿವೆ. ಉದಾಹರಣೆಗೆ ಗೂಗಲ್ ನ ಅನೇಕ ಸೇವೆಗಳು ಜನರ ಅನುವಾದದಿಂದ ತಯಾರಾಗಿವೆ, ಆದರೆ ಯಾಹೂ ಮೇಲ್ ಮತ್ತು ಹೈಕ್ ಮೆಸ್ಸೆಂಜರ್ ನಲ್ಲಿ ಕನ್ನಡ ಭಾಷೆಯಲ್ಲಿ ಯೂಸರ್ ಇಂಟರ್ಫೇಸನ್ನು ಅವರೇ ಮಾಡಿ ಒದಗಿಸಿದ್ದಾರೆ. [ಕಂಗ್ಲೀಷ್ ಬರೆಯುವುದನ್ನು ನಿಲ್ಲಿಸಲು ಇಲ್ಲಿದೆ ಉಪಾಯ]

2005ರ ಸುಮಾರಿಗೆ ಅಂತರಜಾಲ ದೈತ್ಯ ಗೂಗಲ್ ಮೊದಲ ಬಾರಿಗೆ ತನ್ನ ಬೇರೆ ಬೇರೆ ಸೇವೆಗಳ ಅನುವಾದ ಕೆಲಸಗಳನ್ನು ಕ್ರೌಡ್ ಸೋರ್ಸಿಂಗ್ ಮಾಡಿತು. ಒಂದು ಮಟ್ಟದ ಅನುವಾದ ಪೂರ್ಣಗೊಂಡನಂತರ ಅದನ್ನು ಲೈವ್ ಮಾಡುವ ಪ್ರಯತ್ನ ಅದಾಗಿತ್ತು. ಕನ್ನಡದಲ್ಲಿ ಅನೇಕ ಜನ ಈ ಅನುವಾದದ ಕೆಲಸಗಳಲ್ಲಿ ತೊಡಗಿಕೊಂಡರು. [ಫೇಸ್ ಬುಕ್ ಈಗ ಕನ್ನಡ ಭಾಷೆಯಲ್ಲಿ ಲೋಕಾರ್ಪಣೆ]

ಅನಂತರದ ದಿನಗಳಲ್ಲಿ ಅಂತರ್ಜಾಲ ಭೂನಕಾಶೆ ವಿಕಿಮ್ಯಾಪಿಯಾ ಕೂಡ ಅನುವಾದದ ಅವಕಾಶ ಮಾಡಿಕೊಟ್ಟಿತು. ಅದರಲ್ಲಿ ಕನ್ನಡದ ಪರಿಸ್ಥಿತಿ ಮೊದಲು ೦% ಇದ್ದು ಅನಂತರ ಒಂದಿಷ್ಟು ಉತ್ಸಾಹಿಗಳ ಸತತ ಅನುವಾದದ ಕೆಲಸಗಳಿಂದ ಕೆಲವೇ ದಿನಗಳಲ್ಲಿ ಶೇಕಡಾ 80 ಮುಟ್ಟಿ ಕನ್ನಡ ವಿಕಿಮ್ಯಾಪಿಯಾ ಲೈವ್ ಆಗುವಂತಾಯಿತು. ಈಗ ಜನಪ್ರಿಯವಾಗಿರುವ ಕೆಲವು ಸೋಶಿಯಲ್ ನೆಟ್ವರ್ಕ್ ತಾಣಗಳೂ ಸಹ ಅನುವಾದಗಳನ್ನು ಕ್ರೌಡ್ ಸೋರ್ಸಿಂಗ್ ಮಾಡುವ ಮೂಲಕವೇ ಭಾರತೀಯ ಭಾಷೆಗಳಲ್ಲಿ ತಯಾರಾದವು.

Crowdsourcing platform Kannada translation

ಅನುವಾದಕನಾಗಿ ಏನು ಮಾಡಬಹುದು?
ಈ ಕೆಳಗಿನವು ಈಗ ಕನ್ನಡದಲ್ಲಿ ನಡೆಯುತ್ತಿರುವ ಅನುವಾದದ ಕ್ರೌಡ್ ಸೋರ್ಸಿಂಗ್ ಯೋಜನೆಗಳು.

ಗೂಗಲ್ ಟ್ರಾನ್ಲೇಶನ್: https://translate.google.com/community
ಫೇಸ್ಬುಕ್ https://facebook.com/translations
ಟ್ವಿಟ್ಟರ್: https://translate.twitter.com/
ವಾಟ್ಸಪ್: https://translate.whatsapp.com/
ವಿಕಿಮೀಡಿಯಾ ಪ್ರಾಜೆಕ್ಟ್ಸ್: https://translatewiki.net
ಮೋಜಿಲ್ಲಾ: https://mozilla.locamotion.org/kn/
FUEL ಪ್ರಾಜೆಕ್ಟ್: https://translate.zanata.org/project/view/fuel-project

ಈಗಾಗಲೇ ಈ ಅನುವಾದ ಕೆಲಸಗಳಲ್ಲಿ ಅನೇಕ ಜನ ತೊಡಗಿಕೊಂಡಿದ್ದರೂ ಸಹ ಇನ್ನೂ ಹೆಚ್ಚಿನ ಅನುವಾದಕರ ಅಗತ್ಯವಿದೆ. ಬೇರೆ ಅನೇಕ ಭಾರತೀಯ ಭಾಷೆಗಳಿಗೆ ಹೋಲಿಸಿದರೆ ಕನ್ನಡಿಗರು ಹಿಂದೆ ಇರುವುದು ಎದ್ದುಕಾಣುತ್ತದೆ. ಹಾಗಾಗಿ ಆಸಕ್ತಿಯುಳ್ಳವರು ತಮ್ಮ ಬಿಡುವಿನ ವೇಳೆಯಲ್ಲಿ ಹವ್ಯಾಸದಂತೆ ತೊಡಗಿಕೊಳ್ಳಬಹುದಾಗಿದೆ. [ಭಾಷಾಂತರ ದೇಶಾಂತರ ಅವಾಂತರ]

ಮೇಲಿನ ಕೊಂಡಿಗಳ ಮೂಲಕ ಹೋಗಿ ನೋಂದಾಯಿಸಿಕೊಂಡು ಅನುವಾದ ಹಾಗೂ ಪದಕಟ್ಟುವ ಕೆಲಸಕ್ಕೆ ಕೈಜೋಡಿಸಬಹುದು. ಈಗಾಗಲೇ ಆಗಿರುವ ಅನುವಾದಗಳಲ್ಲಿ ಇಂಗ್ಲೀಷಿಗೆ ಪರ್ಯಾಯವಾಗಿ ಅನೇಕ ಹೊಸ ಹೊಸ ಪದಗಳೂ ಇವೆ. ಹಾಗಂತ ಈ ಅನುವಾದಗಳು ಎಲ್ಲವೂ ಪೂರ್ತಿ ಸರಿ ಇದೆ ಎಂದು ಹೇಳಲಾಗುವುದಿಲ್ಲ. ಇದು ನಮ್ಮ ನಿಮ್ಮಂತಹ ಸಾಮಾನ್ಯ ಜನರೇ ಮಾಡಿರುವುದರಿಂದ ಅನೇಕ ತಪ್ಪುಗಳೂ ನುಸುಳಿರಬಹುದು.

Facebook


ಇದು ಪದ ಕಟ್ಟುವ ಸಮಯ:
ಕೆಲವು ಅನುವಾದಗಳು ಸರಿಯಿಲ್ಲ ಎಂದೂ ಅನ್ನಿಸಬಹುದು. ನೀವೂ ಅನುವಾದಕರಾಗಿ ಸೇರಿಕೊಂಡು ಅನುವಾದಗಳನ್ನು (ಸರಿ) ಮಾಡಬಹುದು. ಈಗಾಗಲೇ ಮಾಡಿರುವ ಅನುವಾದಗಳಲ್ಲಿ ನಿಮಗೆ ಸರಿ ಎನ್ನಿಸುವುದಕ್ಕೆ ಮತ ಹಾಕಬಹುದು. ಇಲ್ಲಿ ಕಟ್ಟುವ ಪದಗಳು, ಅನುವಾದಗಳು ಮುಂದೆ ವ್ಯಾಪಕವಾಗಿ ಬಳಕೆಗೆ ಬಂದು ಕನ್ನಡದ ಪದಸಂಪತ್ತಿಗೆ ಸೇರುವ ಸಾಧ್ಯತೆಯೂ ಇದೆ.

ವಿಕಿಮೀಡಿಯಾ, ಮೊಜಿಲ್ಲಾ, FUEL ಇವು non-commercial projects ಆಗಿದ್ದು ಅನುವಾದಗಳನ್ನು ಬಳಕೆಗಾಗಿ ಉಚಿತವಾಗಿ ಅವರಿಂದ ಪಡೆದುಕೊಳ್ಳಬಹುದು. ಉಳಿದವುಗಳು commercial ಆಗಿದ್ದು ಆಯಾ ಸೇವೆಗಳಲ್ಲಿ ಮಾತ್ರ ಬಳಕೆಯಾಗುತ್ತವೆ. [ಫೈರ್‌ಫಾಕ್ಸ್ ಆಡ್ ಆನ್ : ಒನ್ಇಂಡಿಯಾ ಕನ್ನಡ ಮೆನು]

FUEL ಪ್ರಾಜೆಕ್ಟ್ ಎಂಬುದು terminology standardization ಕೆಲಸದಲ್ಲಿ ತೊಡಗಿದ್ದು ಕಂಪ್ಯೂಟರ್ ಮತ್ತು ಅಂತರಜಾಲ ಲೋಕದ ವಿವಿಧ ತಂತ್ರಾಂಶ, ಜಾಲತಾಣಗಳಲ್ಲಿ ಬಳಸಲು ನೆರವಾಗುವಂತೆ standard terminology database ರಚಿಸುತ್ತಿದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಬಹುದು: http://fuelproject.org/about/

ಬಳಕೆದಾರನಾಗಿ ಏನು ಮಾಡಬಹುದು.?
ಈ ಮೇಲಿನ ಎಲ್ಲವೂ ಈಗಾಗಲೇ ಕನ್ನಡದಲ್ಲಿ ಲಾಂಚ್ ಆಗಿವೆ. ನೀವು ಇವುಗಳನ್ನು ಬಳಸುತ್ತಿದ್ದಲ್ಲಿ ಯೂಸರ್ ಇಂಟರ್ಫೇಸನ್ನು ಕನ್ನಡಕ್ಕೆ ಬದಲಾಯಿಸಿಕೊಳ್ಳಬಹುದು. ಅದಕ್ಕಾಗಿ ಮಾಡಬೇಕಾದ್ದಿಷ್ಟೆ. Account Settingsಗೆ ಹೋಗಿ ಅದರಲ್ಲಿ Language ಆಯ್ಕೆಯಲ್ಲಿ 'ಕನ್ನಡ'ವನ್ನು ಆಯ್ಕೆಮಾಡಿಕೊಂಡರೆ ಆಯಿತು. ಕನ್ನಡಿಗರೆಲ್ಲರೂ ಎಲ್ಲಾ ಅಂತರಜಾಲ ಸೇವೆಗಳಲ್ಲಿ ಇಂಟರ್ಫೇಸನ್ನು ಕನ್ನಡಕ್ಕೆ ಬದಲಾಯಿಸಿಕೊಂಡು ಕನ್ನಡದ ಬೆಳವಣಿಗೆಗೆ ನೆರವಾಗಬೇಕು.

Crowdsourcing platform Kannada translation

ಪ್ರಯೋಜನಗಳೇನು?
ಮಾಹಿತಿತಂತ್ರಜ್ಞಾನ ಮತ್ತು ಅಂತರಜಾಲಕ್ಕೆ ಸಂಬಂಧಿಸಿದಂತೆ ಕನ್ನಡದ ಹೊಸ ಹೊಸ ಪದಗಳು ರಚನೆಯಾಗುತ್ತವೆ.
ಐ.ಟಿ ಮುಂತಾದ ಕಡೆ ಕೆಲಸ ಮಾಡುವ ಬಹುತೇಕರಿಗೆ ಕನ್ನಡ ಬಳಕೆಯೇ ತಪ್ಪಿಹೋಗಿರುತ್ತದೆ. ಇದರಿಂದಾಗಿ ಸ್ವಲ್ಪವಾದರೂ ಕನ್ನಡ ಬಳಕೆ ಉಳಿಯುತ್ತದೆ. ಹೊಸಹೊಸ ಪದಗಳೂ ತಿಳಿಯುತ್ತವೆ.

ಕಾರ್ಪೋರೇಟ್ ಕಂಪನಿಗಳಾಗಲೀ ಮತ್ಯಾವುದೇ ಸೇವಾದಾತರೇ ಆಗಲೀ ಆಯಾ ಭಾಷೆಯ ಬಳಕೆದಾರರು ಎಷ್ಟಿದ್ದಾರೆ ಎಂಬ ಅಂಕಿಅಂಶಗಳ ನಿಗಾ ಇಡುತ್ತವೆ. ಹೆಚ್ಚು ಬಳಕೆಯಿಂದಾಗಿ ಕನ್ನಡ ಬಳಸುವವರು ಬಹಳ ಜನ ಇದ್ದಾರೆ ಎಂಬುದು ಕಂಪನಿಗಳಿಗೆ ತಿಳಿಯುತ್ತದೆ. ಆ ಭಾಷೆಯ ಬಳಕೆದಾರರು ಹೆಚ್ಚಿದ್ದಷ್ಟೂ ಅವರ ಇನ್ನಿತರ ಯೋಜನೆಗಳಲ್ಲಿ ಆ ಭಾಷೆಗಳನ್ನೂ ಸೇರಿಸಿಕೊಳ್ಳುತ್ತವೆ.

ತಂತ್ರಜ್ಞಾನದಲ್ಲಿ ಕನ್ನಡದ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಇದರಿಂದಾಗಿ ಕನ್ನಡವು ಜಾಗತಿಕ ಮಟ್ಟದಲ್ಲಿಯೂ ಗುರುತಿಸಿಕೊಳ್ಳಲು ನೆರವಾಗುತ್ತದೆ. ಹೆಚ್ಚು ಹೆಚ್ಚು ಜನ ಬಳಸಲು ಶುರುಮಾಡಿದಂತೆ ಕನ್ನಡದ ಉತ್ಪನ್ನಗಳಿಗೂ ಬೇಡಿಕೆ ಇದೆ ಎಂಬುದು ತಿಳಿದು ಎಲ್ಲಾ ಸೇವೆಗಳನ್ನೂ ಕನ್ನಡದಲ್ಲಿ ಕೊಡಲು ಮುಂದಾಗುತ್ತವೆ, ಕನ್ನಡ ಚೆನ್ನಾಗಿ ಗೊತ್ತಿರುವವರ ಅಗತ್ಯ ಉಂಟಾಗಿ ಉದ್ಯೋಗಾವಕಾಶಗಳ ಬಾಗಿಲೂ ತೆರೆಯುತ್ತದೆ. ಕನ್ನಡದ ಬಳಕೆ ಹೆಚ್ಚುತ್ತದೆ. ಭಾಷೆಯ ಮತ್ತು ಭಾಷಿಕರ ಬೆಳವಣಿಗೆಗೆ ಸಹಾಯವಾಗುತ್ತದೆ.

English summary
Its high time for Kannada translation via Crowd sourcing platform. All Major Social networking sites and IT Companies adapting crowd sourcing method to get work done.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X