ಖಾಸಗಿ ವೈದ್ಯರ ಮುಷ್ಕರಕ್ಕೆ ಸಾಮಾಜಿಕ ಜಾಲತಾಣಗಳಲ್ಲೂ ಛೀಮಾರಿ!

Posted By:
Subscribe to Oneindia Kannada
   Karnataka Private Doctors Strike on KPME Bill : ಸಾಮಾಜಿಕ ಜಾಲತಾಣಗಳಲ್ಲಿ ಛೀಮಾರಿ

   'ವೈದ್ಯೋ ನಾರಾಯಣೋ ಹರಿಃ' ಎಂದು ಜೀವ ಉಳಿಸುವ ವೈದ್ಯರನ್ನು ದೇವರಿಗೆ ಹೋಲಿಸುವ ಸಂಸ್ಕೃತಿ ನಮ್ಮದು. ಆದರೆ ಕಳೆದ ಮೂರು ದಿನಗಳಿಂದ ಹಟಕ್ಕೆ ಕಟ್ಟುಬಿದ್ದ ವೈದ್ಯರು ಮತ್ತು ಸರ್ಕಾರದ ನಡುವಲ್ಲಿ ಅಡಕತ್ತರಿಯಲ್ಲಿ ಸಿಕ್ಕ ಅಡಿಕೆಯಂತಾದ ಜನಸಾಮಾನ್ಯರ ಪಾಡು ಮಾತ್ರ ಆ ದೇವರಿಗೂ ಅರ್ಥವಾಗದಿರುವುದು ದುರಂತ!

   ವೈದ್ಯರ ಮುಷ್ಕರಕ್ಕೆ ಕಾರಣವಾಯಿತೇ ಈ ಅಂಶಗಳು

   15ಕ್ಕೂ ಹೆಚ್ಚು ಅಮಾಯಕರ ಸಾವಿಗೆ ಹೊಣೆ ಯಾರು? ಖಾಸಗಿ ಆಸ್ಪತ್ರೆಗಳ ದುಬಾರಿ ಬಿಲ್ಲು ಮತ್ತು ಇತ್ತೀಚೆಗೆ ಖಾಸಗಿ ಆಸ್ಪತ್ರೆಗಳಲ್ಲಿ ನಡೆದ ಹಲವು ಅಹಿತಕರ ಘಟನೆಗಳನ್ನು ಮನಗಂಡು, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ(ಕೆಪಿಎಂಇ) ತಿದ್ದುಪಡಿ ಮಸೂದೆ 2017 ಅನ್ನು ಜಾರಿಗೆ ತರಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಇದರಿಂದ ಪ್ರಾಮಾಣಿಕವಾಗಿ ಕೆಲಸ ಮಾಡುವ ವೈದ್ಯರೂ ಸಮಸ್ಯೆ ಎದುರಿಸಬೇಕಾದೀತು ಎಂಬ ಆತಂಕ ನಿಜವಿರಬಹುದು. ಆದರೆ ಅದಕ್ಕಾಗಿ ನಿರ್ದಯವಾಗಿ ಮುಷ್ಕರಕ್ಕೆ ಕೂತು, ಅಮಾಯಕ ಜನರ ಸಾವಿಗೆ ಕಾರಣವಾಗುತ್ತಿರುವುದು ಸರಿಯೇ?

   ವೈದ್ಯರ ಮುಷ್ಕರ, ಇಂದು OPDಗಳು ಬಂದ್

   ಈಗಾಗಲೇ ಜನಸಾಮಾನ್ಯರ ಬದುಕನ್ನು ಹೈರಾಣಾಗಿಸಿರುವ ಖಾಸಗಿ ಆಸ್ಪತ್ರೆಗಳ ಚಿಕಿತ್ಸೆಯ ದರವನ್ನು ನಿಯಂತ್ರಣಕ್ಕೆ ತರುವ ಸರ್ಕಾರದ ಯೋಚನೆಯನ್ನು ಬಹುತೇಕ ಜನ ಬೆಂಬಲಿಸಿದ್ದಾರೆ. ಮಾತ್ರವಲ್ಲ, ತಮ್ಮ ಕರ್ತವ್ಯ ಮರೆತು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿರುವ ವೈದ್ಯರ ಕುರಿತು ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

   ವೈದ್ಯರ ಮುಷ್ಕರವೂ ವೈದ್ಯನೇ ಹರಿಃ ಎಂಬ ತಪ್ಪು ಕಲ್ಪನೆಯೂ

   ಸಾಮಾಜಿಕ ಜಾಲತಾಣಗಳಲ್ಲೂ ಕೆಪಿಎಂಇ ತಿದ್ದುಪಡಿ ಮಸೂದೆ, ವೈದ್ಯರ ನಡೆ ಮತ್ತು ಸರ್ಕಾರದ ನಡೆಯ ಕುರಿತು ಪರವಿರೋಧ ಚರ್ಚೆ ನಡೆಯುತ್ತಿದೆ.

   ವೈದ್ಯರ ದೌರ್ಜನ್ಯಕ್ಕೆ ಬೇಕಿದೆ ಕಡಿವಾಣ!

   ನಾವು ಸಾಮಾನ್ಯ ಜನರೆಲ್ಲ ಖಾಸಗಿ ಆಸ್ಪತ್ರೆಯ ವೈದ್ಯರುಗಳ ದೌರ್ಜನ್ಯಕ್ಕೆ ಬಲಿಯಾದವರೇ. ಆದ್ದರಿಂದ ಈ ಮಸೂದೆಗೆ ನಮ್ಮ ಸಂಪೂರ್ಣ ಬೆಂಬಲವಿದೆ. ತಮ್ಮ ಕೆಲಸವನ್ನು ದೇವರ ಕೆಲಸ ಎಂದುಕೊಂಡು ಮಾಡುವ ವೈದ್ಯರ ಮನೋಭಾವ ಮರೆಯಾಗಿ ಯಾವುದೋ ಕಾಲವಾಗಿದೆ. ಅವರನ್ನು ನಿಯಂತ್ರಣಕ್ಕೆ ತರುವುದಕ್ಕೆ ಇದು ತಕ್ಕ ಸಮಯ ಎಂದು ಮಧು ಎನ್ನುವವರು ಟ್ವೀಟ್ ಮಾಡಿದ್ದಾರೆ.

   ಜೀವ ವಾಪಸ್ ಕೊಡುತ್ತಾರೆಯೇ?

   3 ದಿನಗಳಲ್ಲಿ 25ಕ್ಕೂ ಹೆಚ್ಚು ಜನರು ವೈದ್ಯರ ಮುಷ್ಕರಕ್ಕಾಗಿ ಬಲಿಯಾಗಿದ್ದಾರೆ. ವೈದ್ಯರುಗಳು ಮುಷ್ಕರದ ಮೂಲಕ ತಮ್ಮ ಉದ್ದೇಶವನ್ನು ಈಡೇರಿಸಿಕೊಂಡರೆ, ಈ ಜೀವಗಳನ್ನು ವಾಪಸ್ ಕೊಡುವ ತಾಕತ್ತು ಅವರಿಗಿದೆಯೇ ಎಂದು ಅಶ್ವಿನ್ ಲಕ್ಷ್ಮಿನಾರಾಯಣ್ ಎನ್ನುವವರು ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿದ್ದಾರೆ.

   ಮಸೂದೆ ಅಂಗೀಕಾರವಾದರೆ ಏನು ಸಮಸ್ಯೆ?!

   ಕೆಪಿಎಂಇ ತಿದ್ದುಪಡಿ ಮಸೂದೆ ಅಂಗೀಕಾರವಾದರೆ ಸಮಸ್ಯೆಯೇನು ಎಂಬುದು ನನಗಂತೂ ಅರ್ಥವಾಗುತ್ತಿಲ್ಲ. ಈ ಮಸೂದೆಯಿಂದ ಪರ ನಿಯಂತ್ರಣ, ತಪ್ಪು ಮಾಡಿದ ವೈದ್ಯರಿಗೆ ಶಿಕ್ಷೆಯಾಗುತ್ತದೆ, ಇದರಿಂದ ಬಡವರಿಗೇ ಲಾಭ. ಅಂದಮೇಲೆ ಈ ಮಸೂದೆ ಅಂಗೀಕಾರವಾದರೇ ಒಳ್ಳೆಯದಲ್ಲವೇ ಎಂದು ಅನೀಲ್ ಎಂಬುವವರು ಟ್ವೀಟ್ ಮಾಡಿದ್ದಾರೆ.

   ಆರೋಗ್ಯ ಎಂಬುದು ಸೇವೆ, ಲಾಭವಲ್ಲ!

   ಆರೋಗ್ಯ ಎಂಬುವುದು ಸೇವೆಗಾಗಿ ಇರುವುದು. ಲಾಭಕ್ಕಾಗಿ ಅಲ್ಲ, ಲಕ್ಷಾಂತರ ಬಡವರು ಉತ್ತಮ ಆರೋಗ್ಯದಿಂದ ವಂಚಿತರಾಗುತ್ತಿದ್ದು, ಖಾಸಗಿ ಆಸ್ಪತ್ರೆಗಳ ಮೇಲೆ ಸರ್ಕಾರದ ನಿಯಂತ್ರಣ ಬೇಕಾಗಿದೆ ಎಂದು ವಿನೋದ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

   ನನ್ನ ಬೆಂಬಲ ವೈದ್ಯರಿಗೆ

   ಈ ಜಗತ್ತಿಗೆ ಅತ್ಯುತ್ತಮ ಮತ್ತು ಬುದ್ಧಿವಂತ ವೈದ್ಯರನ್ನು ನೀಡುವಲ್ಲಿ ಭಾರತ ಯಶಸ್ವಿಯಾಘಿದೆ. ಆದರೆ ಕರ್ನಾಟಕದ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ತಮ್ಮ ವೋಟಿನಾಸೆಗೆ ವೈದ್ಯರ ವಿರುದ್ಧ ಕ್ರೂರ ಕಾಯ್ದೆಯೊಂದನ್ನು ಜಾರಿಗೆತರಲು ಹೊರಟಿದ್ದಾರೆ, ಇದು ಸರಿಯೇ? ನನ್ನ ಬೆಂಬಲವೇನಿದ್ದರೂ ವೈದ್ಯರಿಗೆ ಎಂದು ಕನ್ನಡ ನಟಿ ಸಂಜನಾ ಟ್ವೀಟ್ ಮಾಡಿದ್ದಾರೆ.

   ಇದು ದಬ್ಬಾಳಿಕೆ

   ಇದರ ಅರ್ಥ ದಬ್ಬಾಳಿಕೆಯಲ್ಲದೆ ಮತ್ತೇನು? ದಯವಿಟ್ಟು ಇವನ್ನೆಲ್ಲ ನಿಲ್ಲಿಸಿ ರಮೇಶ್ ಕುಮಾರ್ ಅವರೇ... ಎಂದು ಪ್ರಜ್ಞಾ ಹರಿಪ್ರಸಾದ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

   ಅತ್ಯುತ್ತಮ ಹೆಜ್ಜೆ

   ಖಾಸಗಿ ವೈದ್ಯರ ಉಪಟಳ ನಿಯಂತ್ರಿಸಲು ಕೆಪಿಎಂಇ ಮಸೂದೆ ಜಾರಿಗೆ ತರುವ ಕ್ರಮ ಸ್ವಾಗತಾರ್ಹ. ಆರೋಗ್ಯಸೇವೆಯ ದರ ಯಾವಾಗಲೂ ದುಬಾರಿಯೇ. ಸರ್ಕಾರವು ದೇಶದೆಲ್ಲೆಡೆಯೂ ಆರೋಗ್ಯ ವಿಮೆಗಳನ್ನು ಪರಿಚಯಿಸುವ ಅಗತ್ಯವಿದೆ ಎಂದು ಸಚಿನ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Doctors of private hospitals in Karnataka are protesting against proposed Karnataka Private Medical Establishment Act 2017. Here is what social media people say about the Karnataka private doctors strike against the bill.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ