ಜುಲೈ 1 ರಿಂದ ವೈನ್ ದರ ಶೇ 177ರಷ್ಟು ಹೆಚ್ಚಳ

Posted By:
Subscribe to Oneindia Kannada

ಬೆಂಗಳೂರು, ಜೂನ್ 29: ವೈನ್ ಪ್ರೋತ್ಸಾಹಕ್ಕೆ ಹೆಚ್ಚಿನ ಮಹತ್ವ ನೀಡುವ ಭರವಸೆ ನೀಡಿದ್ದ ಸರಕಾರ, ಇದೀಗ ರಾಜ್ಯದ ದ್ರಾಕ್ಷಿ ಬೆಳೆಗಾರರ ಜೀವನೋಪಾಯಕ್ಕೆ ಹೊಸ ಆಶಾಕಿರಣವನ್ನು ಹುಟ್ಟಿಸಿದ್ದ, ವೈನ್ ಉತ್ಪನ್ನಗಳ ಮೇಲೆ ಶೇಕಡಾ 160 ತೆರಿಗೆಯನ್ನು ಹೆಚ್ಚಿಸುವ ತೀರ್ಮಾನಕ್ಕೆ ಬಂದಿದೆ. ಜೂನ್ 22 ರಂದು ಗೆಜೆಟ್ ಪ್ರಕಟಣೆ ಹೊರಡಿಸಿರುವ ಸರಕಾರ ಕೇವಲ 7 ದಿನಗಳಲ್ಲಿ ಆಕ್ಷೇಪಣೆಯನ್ನು ಸಲ್ಲಿಸಲು ಅವಕಾಶ ನೀಡಿದ್ದು, ಅಲ್ಲದೆ ಜುಲೈ 1 ರಿಂದ ಈ ತೆರಿಗೆಗಳು ಅನ್ವಯವಾಗಲಿವೆ ಎನ್ನುವ ಎಚ್ಚರಿಕೆಯನ್ನೂ ನೀಡಿದೆ.

ದ್ರಾಕ್ಷಿ ಬೆಳೆಗಾರರು ಹಾಗೂ ವೈನ್ ಉತ್ಪಾದಕರ ಜೊತೆಯಲ್ಲಿ ಯಾವುದೇ ಸಮಾಲೋಚನೆ ನಡೆಸದೆ ಜಾರಿಗೆ ತರಲು ನಿರ್ಧರಿಸಿರುವ ಈ ಅಂಶಕ್ಕೆ ವೈನ್ ಉತ್ಪಾದಕರು ಹಾಗೂ ದ್ರಾಕ್ಷಿ ಬೆಳೆಗಾರರಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ವೈನ್ ಉತ್ಪಾದಕರು ಹಾಗೂ ದ್ರಾಕ್ಷಿ ಬೆಳೆಗಾರರು ರಾಜ್ಯ ಸರಕಾರದ ಈ ನಿರ್ಧಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಹಾಗೂ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ. [ಆಹಾರ ಸಂಸ್ಕೃತಿ: ವೈನ್ ಕುಡಿದು ವೈನಾಗಿರಿ!]

ವೈನ್ ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ: ಮದ್ಯದ ಅವಲಂಬನೆಯನ್ನು ಕಡಿಮೆ ಮಾಡುವ, ದ್ರಾಕ್ಷಿ ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡುವ ಹಾಗೂ ಮದ್ಯಪಾನಿಗಳ ಆರೋಗ್ಯವನ್ನು ವೃದ್ದಿಸುವ ಮತ್ತು ವೈನ್ ಕುಡಿಯುವ ಸಂಸ್ಕೃತಿಯನ್ನು ಬೆಳೆಸುವ ಉದ್ದೇಶದಿಂದ ರಾಜ್ಯ ಸರಕಾರ ವೈನ್ ನೀತಿಯನ್ನು ಜಾರಿಗೊಳಿಸಿದೆ. [11 ಜಿಲ್ಲೆಗಳಲ್ಲಿ ಸ್ಥಾಪನೆಯಾಗಲಿದೆ ವೈನ್ ಬೋಟಿಕ್]

ಇದುವರೆಗೂ ವೈನ್ ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ. ರಾಜ್ಯದಲ್ಲಿರುವ 11 ವೈನರಿಗಳು ಉತ್ಕೃಷ್ಟ ಗುಣಮಟ್ಟದ ವೈನ್ ತಯಾರಿಸುತ್ತಿದ್ದು ಈ ಮೂಲಕ ರಾಜ್ಯದ ಬಹುತೇಕ ದ್ರಾಕ್ಷಿ ಬೆಳೆಗಾರರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ.

Grape growers, wine producers to protest tax hike

ಬೆಂಗಳೂರು ದ್ರಾಕ್ಷಿ ಬೆಳೆಗಾರರ ಸಂಘದ ನಾರಾಯಣಸ್ವಾಮಿ: ಯಡಿಯೂರಪ್ಪ ಅವರು, ದ್ರಾಕ್ಷಿ ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡುವ ದೃಷ್ಟಿಯಿಂದ ವೈನ್ ಪಾಲಿಸಿಯನ್ನು ಜಾರಿಗೊಳಿಸಿದರು. ಆದರೆ, ಇಂದಿನ ಸರಕಾರ ರೈತರು ಹಾಗೂ ವೈನ್ ಉತ್ಪಾದಕರ ಜೊತೆ ಯಾವುದೇ ಸಮಾಲೋಚನೆ ನಡೆಸದೆ ಒಮ್ಮೆಗೆ ಶೇಕಡಾ 177 ರಷ್ಟು ತೆರಿಗೆಯನ್ನು ಹೆಚ್ಚಿಸಿದ್ದಾರೆ.

ಇದರಿಂದಾಗಿ, ಪ್ರಸ್ತುತ 60,000 ಕೇಸ್ ಗಳಷ್ಟು ಸಾರವರ್ಧಿತ ವೈನ್ ಕರ್ನಾಟಕದಲ್ಲಿ ಮಾರಾಟವಾಗುತ್ತದೆ ಇದು 15,000 ಕೇಸ್ ಗಳಿಗೆ ಕುಸಿಯಲಿದೆ. ಇದು ನೇರವಾಗಿ ಭೌಗೋಳಿಕ ಸ್ಥಾನಮಾನದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿರುವ ಸ್ಥಳೀಯ ಬೆಂಗಳೂರು ಬ್ಲೂ ದ್ರಾಕ್ಷಿ ಬೆಳೆಗಾರರಿಗೆ ಪರಿಣಾಮ ಬೀರಲಿದೆ.

ಅಂದಾಜು ವಾರ್ಷಿಕ 9,000 ಟನ್ ಗಳಷ್ಟು ಬೆಂಗಳೂರು ಬ್ಲೂ ದ್ರಾಕ್ಷಿ ಬಳಕೆಯಾಗುತ್ತಿದ್ದು, ಇದು 2,250 ಟನ್ ಗಳಿಗೆ ಇಳಿಯಲಿದೆ, ಬೆಂಗಳೂರು ಬ್ಲೂ ದ್ರಾಕ್ಷಿ ಬೆಳೆಗಾರರು ಸಣ್ಣ ಹಿಡುವಳಿದಾರರಾಗಿದ್ದು, ಇದು ಸಾವಿರಾರು ದ್ರಾಕ್ಷಿ ಬೆಳೆಗಾರರ ಮೇಲೆ ನೇರವಾಗಿ ಪರಿಣಾಮ ಬೀರಲಿದೆ ಎಂದರು. [ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲೂ ಮದ್ಯ ನಿಷೇಧಿಸಿ!]

ರಾಜ್ಯ ಸರಕಾರದ ಈ ಇಬ್ಬಗೆಯ ನೀತಿಯಿಂದ ರಾಜ್ಯದಲ್ಲಿ ಕಳೆದ 10 ವರ್ಷಗಳಿಂದ ವೈನ್ ಕುಡಿಯಲು ಪ್ರೋತ್ಸಾಹ ನೀಡಿದ್ದ ಕಾರ್ಯಕ್ರಮಗಳು ಅರ್ಥ ಕಳೆದುಕೊಳ್ಳಲಿವೆ. ವಿಸ್ಕಿ, ಬ್ರಾಂದಿಯಂತಹ ಅನಾರೋಗ್ಯಕೀಡು ಮಾಡುವ ಮದ್ಯಗಳನ್ನು ಕಡಿಮೆ ಮಾಡಬೇಕು ಹಾಗೂ ಆರೋಗ್ಯಕರ ಪೇಯವಾಗಿರುವ ವೈನ್ ಗೆ ಮಹತ್ವ ನೀಡಬೇಕು ಎನ್ನುವ ಉದ್ದೇಶದಿಂದ ಈ ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿತ್ತು.

ಆದರೆ, ತೆರಿಗೆ ಹೆಚ್ಚಳ ಮಾಡುವುದರಿಂದ ಪ್ರತಿ ಬಾಟಲಿನ ಬೆಲೆ ನೂರಾರು ರೂಪಾಯಿಗಳಷ್ಟು ಹೆಚ್ಚಾಗಲಿದ್ದು, ಜನರು ಮತ್ತೆ ತಮ್ಮ ಹಳೆಯ ಅನಾರೋಗ್ಯಕರ ಮದ್ಯದತ್ತ ವಾಲಲಿದ್ದಾರೆ. 6 ತಿಂಗಳ ಹಿಂದೆ ನಡೆದಂತಹ ಸಭೆಯಲ್ಲಿ ಕೇವಲ 20% ರಷ್ಟು ತೆರಿಗೆ ಹೆಚ್ಚಿಸುವ ಭರವಸೆಯನ್ನು ನೀಡಿದ್ದರು. ಆದರೆ, ಯಾವುದೇ ಮುನ್ಸೂಚನೆ ಹಾಗೂ ಸಭೆ ನಡೆಸದೆ ಏಕಾಏಕಿ ನಿರ್ಧಾರವನ್ನು ಪ್ರಕಟಿಸಲಾಗಿರುವುದು ಬಹಳ ಅನ್ಯಾಯಎಂದು ವೈನ್ ಉತ್ಪಾದಕರ ಸಂಘದ ಅಧ್ಯಕ್ಷ ಪಿ ಎಲ್ ವೆಂಕಟರಾಮರೆಡ್ಡಿ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Unhappy over Karnataka government's decision to raise excise duty and additional excise duty on fortified wines, grape growers and wine producers decided to hold state-wide agitation and also move the court in this regard.
Please Wait while comments are loading...