ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರಕು ಸಾಗಣೆ ವಾಹನ ಮಾಲೀಕರ ಮುಷ್ಕರ: ಎದುರಾಗಲಿದೆ ಸಂಕಷ್ಟ

|
Google Oneindia Kannada News

ಬೆಂಗಳೂರು, ಏಪ್ರಿಲ್ 26: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಸರಕು ಸಾಗಣೆ ವಾಹನಗಳ ಮಾಲೀಕರ ಸಂಘಗಳ ಮಹಾಒಕ್ಕೂಟ ಜೂನ್ 18 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರಕು ಸಾಗಣೆ ವಾಹನ ಮಾಲೀಕರ ಸಂಘ ಕೇಂದ್ರ ಸರ್ಕಾರಕ್ಕೆ ಅನೇಕ ದಿನಗಳಿಂದ ಮನವಿ ಮಾಡುತ್ತಿತ್ತು. 2012 ರಿಂದ ಡೀಸೆಲ್ ಬೆಲೆ ಏರಿಕೆಯಾಗಿದೆ. ಥರ್ಡ್ ಪಾರ್ಟಿ ಇನ್‍ಶ್ಯೂರೆನ್ಸ್ ಪ್ರೀಮಿಯಂನಲ್ಲಿ ಭಾರಿ ಹೆಚ್ಚಳ ಮಾಡಲಾಗಿದೆ. ಇದರಿಂದ ವಾಹನಗಳ ಮಾಲೀಕರಿಗೆ ತೀವ್ರ ಹೊರೆ ಉಂಟಾಗುತ್ತಿದೆ.

ಬಿಎಂಆರ್ ಸಿಎಲ್ ನೌಕರರು ಮತ್ತೆ ಮುಷ್ಕರಕ್ಕೆ ಕರೆ ನೀಡುವ ಸಾಧ್ಯತೆ!ಬಿಎಂಆರ್ ಸಿಎಲ್ ನೌಕರರು ಮತ್ತೆ ಮುಷ್ಕರಕ್ಕೆ ಕರೆ ನೀಡುವ ಸಾಧ್ಯತೆ!

ಈ ಸಮಸ್ಯೆಗಳನ್ನು ಬಗೆಹರಿಸಬೇಕು. ಅಲ್ಲದೆ ಇತರೆ ಕೆಲವು ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದರೆ, ಜೂನ್ 18ರಿಂದ ದೇಶದಾದ್ಯಂತ ಸರಕು ಸಾಗಣೆ ವಾಹನಗಳ ಸಂಚಾರವನ್ನು ಅನಿರ್ದಿಷ್ಟಾವಧಿವರೆಗೆ ಸ್ಥಗಿತಗೊಳಿಸಲಾಗುವುದು ಎಂದು ಅಖಿಲ ಭಾರತ ಸರಕು ಸಾಗಣೆ ವಾಹನಗಳ ಮಾಲೀಕರ ಸಂಘಗಳ ಮಹಾಒಕ್ಕೂಟದ ಅಧ್ಯಕ್ಷ ಬಿ. ಚನ್ನಾರೆಡ್ಡಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

Goods transport vehicle owners warned indefinite strike

ದುಬಾರಿಯಾದ ಇಂಧನ
2012 ರಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 45.73 ರೂಪಾಯಿ ಇದ್ದರೆ, 2018 ರಲ್ಲಿ 66.37 ರೂಪಾಯಿಗೆ ತಲುಪಿದೆ. ಅದೇ ರೀತಿ 2012 ರಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟತರ್‌ಗೆ 73.5 ರೂಪಾಯಿ ಇದ್ದರೆ, ಪ್ರಸ್ತುತ 75.06 ರೂಪಾಯಿ ಇದೆ. ಬೇರೆ ರಾಜ್ಯಗಳಲ್ಲಿ ಈ ಬೆಲೆ ಇನ್ನೂ ಹೆಚ್ಚಿದೆ. ತೈಲ ಬೆಲೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಹೆಚ್ಚಳವಾಗುತ್ತಲೇ ಇದೆ.

ಆದರೆ, ಕೇಂದ್ರದ ಪೆಟ್ರೋಲಿಯಂ ಇಲಾಖೆ ಈ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಲೇ ಬರುತ್ತಿದೆ. ಇದರೊಂದಿಗೆ ಡೀಸೆಲ್ ಮೇಲೆ ಅಪಾರ ಪ್ರಮಾಣದ ತೆರಿಗೆಗಳನ್ನು ವಿಧಿಸುತ್ತಿದೆ. ಇದಲ್ಲದೇ, ಹೆದ್ದಾರಿಗಳಲ್ಲಿ ದುಬಾರಿ ಮೊತ್ತದ ಟೋಲ್ ಕಟ್ಟಬೇಕಾಗಿದೆ. ಇದರಿಂದಾಗಿ ವಾಹನ ಮಾಲೀಕರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ.

ಸರ್ಕಾರಕ್ಕೆ ಟ್ರಕ್ ಮಾಲೀಕರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಡೀಸೆಲ್ ಮೇಲೆ ವಿಧಿಸುತ್ತಿರುವ ಅನಗತ್ಯ ತೆರಿಗೆಗಳನ್ನು ಕಡಿತಗೊಳಿಸಿ, ಡೀಸೆಲ್ ಬೆಲೆಯನ್ನು ಕಡಿಮೆ ಮಾಡಬೇಕು ಎಂದು ಚನ್ನಾರೆಡ್ಡಿ ಆಗ್ರಹಿಸಿದರು.

Goods transport vehicle owners warned indefinite strike

ವಿಮೆಯಲ್ಲಿಯೂ ಹೊರೆ
ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರ (ಐಆರ್‍ಡಿಎಐ) ಥರ್ಡ್ ಪಾರ್ಟಿ ಇನ್‍ಶ್ಯೂರೆನ್ಸ್‌ವಿಚಾರದಲ್ಲಿ ಟ್ರಕ್ ಮಾಲೀಕರನ್ನು ಗುರಿಯಾಗಿರಿಸಿಕೊಂಡು ವಿಮಾ ಕಂತಿನ ಪ್ರಮಾಣವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಿದೆ. ಈಗ ಈ ಐಆರ್‍ಡಿಎಐ ಕಂತಿನ ಪ್ರಮಾಣವನ್ನು ಶೇ 1117 ರಷ್ಟು ಹೆಚ್ಚಳವಾಗಿದೆ. ಇದರಿಂದಲೂ ಟ್ರಕ್ ಮಾಲೀಕರಿಗೆ ಆರ್ಥಿಕ ಹೊರೆ ಉಂಟಾಗುತ್ತಿದೆ. ಸಾಮಾನ್ಯ ವಿಮಾ ರೀತಿಯಲ್ಲಿ ಥರ್ಡ್ ಪಾರ್ಟಿ ಇನ್‍ಶ್ಯೂರೆನ್ಸ್ ಪದ್ಧತಿಯನ್ನು ಬದಲಿಸಬೇಕು ಎಂದು ಅವರು ಒತ್ತಾಯಿಸಿದರು.

ಮುಷ್ಕರ ನಡೆದರೆ ಸಂಕಷ್ಟ
ಒಂದು ವೇಳೆ ಜೂನ್ 18ರಿಂದ ಸರಕು ಸಾಗಣೆ ವಾಹನಗಳು ರಸ್ತೆಗಿಳಿಯದಿದ್ದರೆ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ತೀರಾ ಅಗತ್ಯ ವಸ್ತುಗಳು, ಐಷಾರಾಮಿ ವಸ್ತುಗಳ ಪೂರೈಕೆಗೆ ತೊಂದರೆಯಾಗುತ್ತದೆ.

ರಸ್ತೆ ಸಾರಿಗೆ ವ್ಯವಸ್ಥೆ ಭಾರತದ ಆರ್ಥಿಕತೆಯ ಪ್ರಮುಖ ಅಂಗ. ರೈಲು, ವೈಮಾನಿಕ ಸರಕು ಸಾಗಣೆ ಮತ್ತು ಜಲಸಾರಿಗೆ ಸಾಗಣೆ ವ್ಯವಸ್ಥೆಗಳು ಸಹ ಸರಕು ಸಾಗಣೆ ವ್ಯವಸ್ಥೆಗಳಾಗಿವೆ. ಆದರೆ, ಈ ಮೂರೂ ಸರಕು ಸಾಗಣೆ ವ್ಯವಸ್ಥೆಗೆ ರಸ್ತೆ ಸಾರಿಗೆಯ ಸೌಲಭ್ಯ ಬೇಕೇಬೇಕು. ಇಂತಹ ಅತ್ಯಂತ ಪ್ರಮುಖ ಸರಕು ಸಾಗಣೆ ವ್ಯವಸ್ಥೆಗೆ ಸರ್ಕಾರ ಹೊಡೆತ ನೀಡುತ್ತಿದೆ. ಕೇಂದ್ರ ಸರ್ಕಾರ ಒಕ್ಕೂಟದ ಬೇಡಿಕೆಗಳನ್ನು ಜೂನ್ 18 ರೊಳಗೆ ಬಗೆಹರಿಸದೆ ಇದ್ದರೆ ಮುಷ್ಕರ ನಡೆಸುವುದು ಅನಿವಾರ್ಯ ಎಂದು ಮಾಲೀಕರು ತಿಳಿಸಿದ್ದಾರೆ.

English summary
All India Confederation of Goods Vehicle Owner's Association today asked central government to deal all its demands before june 18. If fails, they will go for indefinite strike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X