ಈ 'ಸರ್ಕಾರಿ ಮಳೆ'ಯ ಸಂಕಟದಲ್ಲೇ ಸೊಬಗೂ ಹುಡುಕುತ್ತ...

Posted By:
Subscribe to Oneindia Kannada

ಕಳೆದ ಎರಡು ದಿನದಿಂದ ಉದ್ಯಾನಗರಿ ಬೆಂಗಳೂರಿನ ಯಾರ ಬಾಯಲ್ಲಿ ಕೇಳಿದ್ರೂ ಮಳೆಯದ್ದೇ ಕತೆ! ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುವವರ ಹಾಗೆ, ಬೆಳಗ್ಗೆ ಮತ್ತು ಸಂಜೆ ಪೀಕ್ ಅವರ್ ನಲ್ಲಿಯೇ ಹಾಜರಿ ಹಾಕುವ ಈ ಮಳೆಯದು ಸೊಬಗೋ, ಸಂಕಟವೋ ಎಂಬುದನ್ನು ಅನುಭವಿಸಿದವರನ್ನೇ ಕೇಳಬೇಕು!ಶಿಸ್ತಿನ ಸಿಪಾಯಿಯಂತೆ ಸರ್ಕಾರಿ ಕಚೇರಿಗಳ ಟೈಮಿಂಗಿಗೆ ಸರಿಯಾಗಿ ಅಟೆಂಡೆನ್ಸ್ ಹಾಕುವ ಈ ಮಳೆಗೆ 'ಸರ್ಕಾರಿ ಮಳೆ' ಎಂಬ ರೂಪಕ ಹೇಳಿಮಾಡಿಸಿದಂತಿರೋದು ಸುಳ್ಳಲ್ಲ.

ಬೆಂಗಳೂರಿನಲ್ಲಿ ಮಧ್ಯಾಹ್ನದ ಮಳೆ, ಛತ್ರಿ ಮರೆತವರ ಚಡಪಡಿಕೆ...

'ಅಯ್ಯೋ, ನಿನ್ನೆ ಸಿಲ್ಕ್ ಬೋರ್ಡ್ ಹತ್ರ ಸಿಕ್ಕಾಕ್ಕೊಂಡು ಬೇಡ ನನ್ ಪಾಡು!' ಅಂತ ಒಬ್ಬ ಸಹೋದ್ಯೋಗಿ ಹೇಳಿದ್ರೆ, 'ಬ್ಯಾಗಲ್ಲಿ ಈ ಲ್ಯಾಪ್ ಟಾಪ್ ಒಂದಿಲ್ಲ ಅಂದಿದ್ರೆ ಆ ಮಳೇಲೇ ಹೋಗ್ಬಿಡ್ತಿದ್ದೆ. ಈ ಹಾಳಾದ್ ಲ್ಯಾಪ್ ಟಾಪ್ ಒದ್ದೆ ಆದ್ರೆ ಅನ್ನೋ ಭಯಕ್ಕೆ ಎರಡು ತಾಸು ಅದ್ಯಾವ್ದೋ ಗೂಡಂಗಡಿ ಮುಂದೆ ಠಿಕಾಣಿ ಹೂಡಿದ್ದಾಯ್ತು' ಅನ್ನೋದು ಇನ್ನೊಬ್ಬನ ಮಾತು! ಒಟ್ಟಿನಲ್ಲಿ ಕಳೆದರೆಡು ದಿನದಿಂದ ಸಂಜೆಯಾದರೆ ಸಾಕು ಉದ್ಯಾನನಗರಿಯ ಗಲ್ಲಿ ಗಲ್ಲಿಗಳು ಮೇಘರಾಜನ ಅಮೃತಧಾರೆಯಲ್ಲಿ ಮೈತೊಳೆದುಕೊಳ್ಳುತ್ತಿವೆ!

ಮಲೆನಾಡಿನಾ ಮಳೆಹಾಡಿನಾ ಪಿಸು ಮಾತಿನಾ ಹೊಸತನ... ಸವಿದೆನಾ...

ಆದ್ರೂ ಈ ಮಳೆಗೆ ಎಂಥ 'ಕೊಬ್ಬು' ನೋಡಿ, ಬೆಳ್ಗೆ ಇನ್ನೇನು ಸ್ಕೂಲಿಗೋ, ಆಫೀಸ್ ಗೋ ಹೊರಡಬೇಕು ಅನ್ನೋ ಅಷ್ಟರಲ್ಲಿ ಪಿರಿ ಪಿರಿ ಶುರುಮಾಡುತ್ತೆ! ಆ ಒದ್ದೆ ಒದ್ದೆ ಬಟ್ಟೆಯಲ್ಲೆ ಸ್ಕೂಲು, ಆಫೀಸು ಸೇರ್ಕೊಂಡು ವರುಣ ದೇವಂಗೆ ಶಾಪ ಹಾಕ್ತಾ ಕೂತು, ಸಂಜೆ ವಾಪಾಸಾಗೋ ಹೊತ್ತಿಗೆ ಮತ್ತೆ ಶುರು ಈ ಮಳೆಯ ಕಾಟ! ಈ ಮಳೇನೂ ಆಫೀಸ್ ಅವರ್ ಗೆ ತಕ್ಕಹಾಗೆ, ಬೆಳಗ್ಗೆ -ಸಂಜೆ ಹಾಜರಿ ಹಾಕುತ್ತಲ್ಲ, ಅದ್ಕೇ ಇರಬೇಕು ಇದಕ್ಕೆ ಬೆಂಗಳೂರಿಗರು 'ಸರ್ಕಾರಿ ಮಳೆ' ಅಂತ ಹೆಸರಿಟ್ಟಿದ್ದು!

ಅಪರೂಪವಾಗಿದೆ ಮಳೆ

ಅಪರೂಪವಾಗಿದೆ ಮಳೆ

ಮೊದಲೆಲ್ಲ ಬೇಸಿಗೆಯಲ್ಲಿ, ಬೆಂಗಳೂರಿನ ತಾಪಮಾನ 35 ಡಿಗ್ರಿ ತಲುಪ್ತು ಅಂದ್ರೆ ಆವತ್ತು ಸಂಜೆ ಮಳೆ ಪಕ್ಕಾ ಅಂತಲೇ ಲೆಕ್ಕ. ಅದಕ್ಕೆಂದೇ ಬೆಳಗ್ಗೆ ಬೆಳಗ್ಗೆ ಸೆಖೆ ಅನ್ನಸಿದ್ರೆ ಆವತ್ತು ಯಾವುದಕ್ಕೂ ಇರಲಿ ಅಂತ ಮುನ್ನೆಚ್ಚರಿಕೆಗೆ ಒಂದು ಛತ್ರಿ ಹಿಡಿದುಕೊಂಡು ಹೋಗೋ ಪರಿಪಾಠವಿತ್ತಂತೆ. ಆದರೆ ಈಗ ಕಾಲ ಬದಲಾಗಿದೆ. ಬೆಂಗಳೂರಿನ ಉಸಿರಾಗಿದ್ದ ಹಸಿರೆಲ್ಲ ನಾಶವಾಗಿ, ಕಣ್ಣು ಹಾಯಿಸಿದಷ್ಟು ದೂರವೂ ಗಗನ ಚುಂಬಿ ಕಟ್ಟಡಗಳೇ ಕಾಣುತ್ತಿರುವುವದರಿಂದ ಮಳೆಯೂ ಅಪರೂಪವಾಗಿದೆ. ಎಲ್ಲೆಲ್ಲೂ ಕಾಂಕ್ರೀಟ್ ತುಂಬಿ, ಮಳೆ ಬಂದರೆ ನೀರು ಇಂಗುವುದಕ್ಕೂ ಮಣ್ಣಿಲ್ಲದೆ, ಮಳೆ ಬಾರದಿದ್ದರೇ ಒಳ್ಳೆಯದು ಎಂಬ ತೀರ್ಮಾನಕ್ಕೆ ಹಲವರು ಬಂದಾಗಿದೆ.

ಸೊಬಗಿನ ಮುನ್ನುಡಿ ಬರೆವ ಮಳೆ

ಸೊಬಗಿನ ಮುನ್ನುಡಿ ಬರೆವ ಮಳೆ

ಸಿಲಿಕಾನ್ ಸಿಟಿಯ ಯಾಂತ್ರಿಕ ಬದುಕಿಗೆ ಒಂದು ಸೊಬಗಿನ ಮುನ್ನುಡಿ ಬರೆವ ಸಂಜೆಯ ಮಳೆ, ಆಹ್ಲಾದ ನೀಡುವುದಕ್ಕಿಂತ, ಆತಂಕ ಸೃಷ್ಟಿಸುವುದೇ ಹೆಚ್ಚು. ಟ್ರಾಫಿಕ್ ಸಮಸ್ಯೆ, ಎಲ್ಲೆಲ್ಲೂ ಕಾಂಕ್ರೀಟ್ ತುಂಬಿ, ಬೇರಿಗೆ ಸಾಕಷ್ಟು ಮಣ್ಣು ಸಿಗದೆ, ಸಣ್ಣ ಗಾಳಿಗೂ ಕುಸಿದು ಬೀಳುವ ಮರಗಳು, ಬಸ್ಸನ್ನೇ ಮುಳುಗಿಸುವ ಮಟ್ಟಿಗೆ ರಸ್ತೆಯನ್ನು ತುಂಬುವ ನೀರು... ಮಳೆ ಎಂಬ ಸೃಷ್ಟಿ ವಿಸ್ಮಯದ ಸೊಬಗಿನೊಂದಿಗೆ, ವಿಲಕ್ಷಣ ಭಯವನ್ನೂ ಹುಟ್ಟಿಸುತ್ತಿದೆ!

ಮಳೆಯಿಲ್ಲದೆ ಬದುಕೆಲ್ಲಿ?

ಮಳೆಯಿಲ್ಲದೆ ಬದುಕೆಲ್ಲಿ?

ಹಾಗಂತ ಮಳೆಯೇ ಬೇಡ ಅನ್ನೋಕಾಗುತ್ತಾ? ರಸ್ತೆ ತುಂಬಿದರೂ, ಬೆಳ್ಳಂದೂರು ಕೆರೆಯಲ್ಲಿ ನೊರೆ ಹುಟ್ಟಿದರೂ, ಸಾಲು ಸಾಲು ಮರಗಳು ಧರೆಗುರುಳಿದರೂ, ಟ್ರಾಫಿಕ್ ಸಮಸ್ಯೆಯಿಂದ ರಸ್ತೆಯ ತುಂಬ ವಾಹನಗಳೆಲ್ಲ ಮೂರ್ತಿಯಂತೆ ತಟಸ್ಥವಾಗಿ ನಿಂತಿದ್ದರೂ ಮಳೆ ಬೇಕೇ ಬೇಕು. ರಾಜ್ಯದಲ್ಲಿ ಚೆನ್ನಾಗಿ ಮಳೆಯಾಗಲಿ, ಆದ್ರೆ ಬೆಂಗಳೂರಲ್ಲಿ ಬೇಡ ಎಂದರೆ ಪಾತಾಳಕ್ಕಿಳಿದ ಇಲ್ಲಿನ ಬೋರ್ ವೆಲ್ ಗಳಲ್ಲಿ ನೀರಿನ ಒರತೆ ಚಿಗುರುವುದು ಹೇಗೆ? ಕೆರೆ-ಕೊಳ್ಳಗಳು ತುಂಬೋದು ಹೇಗೆ? ಬೆರಳೆಣಿಕೆಯಷ್ಟಿರುವ ಮರಗಳಲ್ಲಿ ಹಸಿರು ಮೂಡೋದು ಹೇಗೆ? ಬಿಸಿಲಿಂದ ಬಾಯ್ದೆರೆದ ಭೂಮಿ ತಂಪಾಗೋದು ಹೇಗೆ?

ಜೀವನ ಪ್ರೀತಿಯ ಸಂಭ್ರಮ

ಜೀವನ ಪ್ರೀತಿಯ ಸಂಭ್ರಮ

ಸಾವಿರ ಸಂಕಟಗಳ ನಡುವಲ್ಲೂ ಸೊಬಗಿನ ನವಿರಾದ ಭಾವ ಮೂಡಿಸುವ ಈ ವರ್ಷಧಾರೆಯನ್ನು ಶಪಿಸುವುದನ್ನು ಬಿಟ್ಟು, ಇದರ ಪ್ರತಿ ಹನಿಯಲ್ಲೂ ಇರುವ ಜೀವನ ಪ್ರೀತಿಯ ಸಂಭ್ರಮವನ್ನು ಹೆಕ್ಕಿತೆಗೆಯೋಣವೇ? ಆಗ ಈ ಸರ್ಕಾರಿ ಮಳೆ ಸಂಕಟವಾಗುವ ಬದಲು, ಸೊಬಗಾದೀತು!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Garden city Bengaluru is recieving rains for two days. People are blaming the rain because it creates hectic traffic in the city and the life in the city in rainy season is not so easy for them.
Please Wait while comments are loading...