ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲೈಂಗಿಕ ದೌರ್ಜನ್ಯ ಪ್ರಕರಣ ಇತ್ಯರ್ಥಕ್ಕೆ ತ್ವರಿತ ನ್ಯಾಯಾಲಯ

By Prasad
|
Google Oneindia Kannada News

ಬೆಂಗಳೂರು, ನ. 10 : ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತ್ವರಿತ ಗತಿಯಲ್ಲಿ ವಿಲೇವಾರಿ ಮಾಡಲು ರಾಜ್ಯದಲ್ಲಿ 10 ಫಾಸ್ಟ್ ಟ್ರಾಕ್ ನ್ಯಾಯಾಲಯಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಅವರು ತಿಳಿಸಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ರಾಜ್ಯದ ಉಚ್ಚ ನ್ಯಾಯಾಲಯಕ್ಕೆ ಈ ಬಗ್ಗೆ ಮನವಿ ಮಾಡಿಕೊಳ್ಳಲಾಗಿದ್ದು, ಮೂರು ತ್ವರಿತಗತಿಯ ನ್ಯಾಯಾಲಯ ಸ್ಥಾಪನೆಗೆ ಅನುಮತಿ ನೀಡಿದೆ. ಇದರಲ್ಲಿ ಎರಡು ನ್ಯಾಯಾಲಯಗಳನ್ನು ಬೆಂಗಳೂರಿನಲ್ಲಿ, ಇನ್ನೊಂದು ನ್ಯಾಯಾಲಯವನ್ನು ಬೇರೆಡೆ ಪ್ರಾರಂಭಿಸಲು ಚಿಂತಿಸಲಾಗಿದೆ ಎಂದರು.

ಬೆಂಗಳೂರು ನಗರದಲ್ಲಿನ ಸುಮಾರು 180 ಶಾಲೆಗಳು ಸರ್ಕಾರ ಈಗಾಗಲೇ ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಿಲ್ಲ. ಈ ಸಂಬಂಧ ನಗರದ ಪೊಲೀಸ್ ಆಯುಕ್ತರು ಈಗಾಗಲೇ ಇಂತಹ ಶಾಲೆಗಳಿಗೆ ನೋಟೀಸ್ ಜಾರಿ ಮಾಡಿದ್ದಾರೆ. ಮಾರ್ಗಸೂಚಿಗಳನ್ನು ಪಾಲಿಸದ ಆಡಳಿತ ಮಂಡಳಿಗಳ ಮೇಲೆ ಐಪಿಸಿ ಸೆಕ್ಷನ್ 180ರ ಅಡಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. [ಜಾರ್ಜ್ ಅವರಿಗೆ ಇಂಥ ಪ್ರಶ್ನೆ ಕೇಳಬಹುದು ಈಶ್ವರಪ್ಪ]

Fast track court to try sexual harassment cases

1ರಿಂದ 5ನೇ ತರಗತಿವರೆಗೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಒಟ್ಟಿಗೆ ಹೋಗುವ ಶಾಲೆಗಳಲ್ಲಿ ಮಹಿಳಾ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಈಗಾಗಲೇ ರಚಿಸಲಾಗಿರುವ ಉನ್ನತಾಧಿಕಾರದ ಸಮಿತಿಗೆ ಸಲಹೆ ನೀಡಲಾಗಿದೆ ಎಂದರು.

ಅಪರ ಮುಖ್ಯ ಕಾರ್ಯದರ್ಶಿ ವಿ. ಉಮೇಶ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ಮುಖ್ಯಮಂತ್ರಿ ರಚಿಸಿದ್ದು, ಈ ಸಮಿತಿಯು ನೀಡುವ ಶಿಫಾರಸುಗಳನ್ನು ಜಾರಿಗೆ ತರಲಾಗುವುದು. ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಸಂಬಂಧಿಸಿದ ಮಾಹಿತಿ ನೀಡಲು 1091 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು ಎಂದೂ ಅವರು ತಿಳಿಸಿದರು. [ಗೃಹ ಸಚಿವರ ಕಾಡಿದ 7 ವಿವಾದ]

ಶಾಲಾ ಕಾಲೇಜುಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದರೆ ಸಾಲದು. ಆಯಾ ಶಾಲೆಗಳಲ್ಲಿ ನಿಯಂತ್ರಣಾ ಕೊಠಡಿಯನ್ನು ಪ್ರಾರಂಭಿಸಿ, ಶಾಲಾ ಆವರಣದ ಚಲನವಲನ- ಆಗುಹೋಗುಗಳನ್ನು ಗಮನಿಸಲು ಸಿಬ್ಬಂದಿ ನೇಮಕ ಮಾಡುವಂತೆ ಆದೇಶಿಸಲಾಗಿದೆ. ಸಿಬ್ಬಂದಿಯ ಸನ್ನಡತೆ ಬಗ್ಗೆ ಶಾಲಾ ಆಡಳಿತ ಮಂಡಳಿ ಪೂರ್ಣ ಮಾಹಿತಿ ಹೊಂದಿರಬೇಕು. ಇಂತಹ ಪ್ರಕರಣಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಇಲಾಖೆ, ಜನಸಾಮಾನ್ಯರು ಹಾಗೂ ಮಾಧ್ಯಮಗಳೂ ಮಾಡಬೇಕು ಎಂದು ಜಾರ್ಜ್ ಕೋರಿಕೊಂಡರು.

ತೀರ್ಥಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆದಿದ್ದು, ವರದಿ ಬಂದ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದರು. ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಒಳಾಡಳಿತ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಎಸ್.ಕೆ. ಪಟ್ಟನಾಯಕ್, ಪೊಲೀಸ್ ಮಹಾನಿರ್ದೇಶಕ ಲಾಲ್‌ರೊಖುಮಾ ಪಚಾವೊ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ಹಾಜರಿದ್ದರು.

English summary
Karnataka government has decided to establish 10 fast track courts to try sexual harassment cases against women and children, home minister KJ Goerge told to media in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X