ಚಾಮರಾಜಪೇಟೆಯ ನೂರಿಪ್ಪತ್ತೈದು ಮಾಸದ ನೆನಪುಗಳು!

By: ಶ್ರೀನಾಥ್ ಭಲ್ಲೆ, ರಿಚ್ಮಂಡ್
Subscribe to Oneindia Kannada

ಚಾಮರಾಜಪೇಟೆ ಬೆಂಗಳೂರು ಹದಿನೆಂಟು, ನನ್ನ ಜೀವನದ ಅವಿಭಾಜ್ಯ ಅಂಗ ಎಂದರೆ ತಪ್ಪಾಗಲಾರದು. ಅಂದಿನ ಬೆಂಗಳೂರು ಹೊರವಲಯವಾದ ಮಾರತ್ ಹಳ್ಳಿಯಲ್ಲೇ ಹುಟ್ಟಿ ಹೈಸ್ಕೂಲ್'ವರೆಗೆ ಹೆಚ್ಚುವರಿ ಅಲ್ಲೇ ವಾಸಿಸಿದ್ದರೂ, ಅಲ್ಲಿನ ನೆನಪುಗಳಿಗಿಂತ ಚಾಮರಾಜಪೇಟೆ ನೆನಪುಗಳೇ ಹೆಚ್ಚಾಗಿ ನನ್ನ ಹೃದಯದಲ್ಲಿದೆ.

ನೂರಿಪ್ಪತ್ತೈದರ ಹರೆಯದ ಚಾಮರಾಜಪೇಟೆಯ ಕಾರಣೀಭೂತರಾದವರು ಹತ್ತನೆಯ ಶ್ರೀ ಚಾಮರಾಜ ಒಡೆಯರ್ ಅವರು. ಅವರ ಹೆಸರನ್ನೇ ಪ್ರಾಂತ್ಯಕ್ಕೂ ಇಟ್ಟಿರುವುದು ಸೋಜಿಗವೇನಲ್ಲ. ಐದನೇ ಮುಖ್ಯ ರಸ್ತೆಯನ್ನು 'ದಿವಾನರ ಬೀದಿ' ಎಂದೇ ಕರೆಯುತ್ತಿದ್ದರಂತೆ. ಆ ಬೀದಿಯನ್ನು ಕಡಿಮೆ ಎತ್ತರದ ಕಾಂಪೌಂಡ್ ಉಳ್ಳ ಮನೆಗಳು, ಪ್ರತಿ ಮುಖ್ಯ ಬೀದಿಯಲ್ಲೂ ಒಂದೊಂದು ದೇವಸ್ಥಾನ ಇರುವುದೂ ಚಾಮರಾಜಪೇಟೆಯ ವೈಶಿಷ್ಟ್ಯ ಎನ್ನಬಹುದು. ಐದನೇ ಬೀದಿಯಲ್ಲೇ ರಥದ ಮನೆ ಅಂತಲೂ ಒಂದಿತ್ತು.

Everygree memories of Chamarajpet, one of the oldest layouts in Bengaluru

ನೂರಿಪ್ಪತ್ತೈದು ವರ್ಷಗಳ ಹಿಂದಿನ ಈ ಪ್ರಾಂತ್ಯ ಕಾಲಕ್ಕೆ ತಕ್ಕಂತೆ ಬದಲಾಗುತ್ತಲೇ ಇದೆ. ಆದರೂ ಪ್ರಕಾಶ್ ಕಫೆ, ರಾಷ್ಟ್ರೋತ್ಥಾನ ಪರಿಷತ್, ಸಾಹಿತ್ಯ ಪರಿಷತ್, ಮಕ್ಕಳ ಕೂಟ, ಕೋಟೆ ಶಾಲೆ, ರಾಮೇಶ್ವರನ ಗುಡಿ, ರಾಮೋತ್ಸವ, ಮುಂತಾದವುಗಳು ಅಂದಿನ ನೆನಪುಗಳನ್ನು ಹೆಕ್ಕಿ ಮುಂದಿಡಲು ಸದಾ ಸಿದ್ದವಾಗಿಯೇ ನಿಂತಿವೆ.

ಬದಲಾವಣೆಯಾಗಿದೆ ಆದರೆ ಎಲ್ಲವೂ ಬದಲಾಗಿಲ್ಲ. ಇಂದಿನ ಚಾಮರಾಜಪೇಟೆಯನ್ನು ಕಾಣಬಹುದು ಎಂದಾಗುವುದರಿಂದ ನಾ ಕಂಡ ಚಾಮರಾಜಪೇಟೆಯ ಬಗ್ಗೆ ಇಲ್ಲಿ ಹೆಚ್ಚು ಒತ್ತುಕೊಡುತ್ತೇನೆ.

ಚಾಮರಾಜಪೇಟೆಯ ಅಪ್ಪೂರಾವ್ ರಸ್ತೆಯಲ್ಲಿ, ವೇದಾಂತ ಬುಕ್ ಹೌಸ್ ದಾಟಿ ಮುಂದೆ ಸಾಗಿದರೆ ರಾಷ್ಟ್ರೋತ್ಥಾನ ಪರಿಷತ್'ನ ಆಚೆ ಅಜ್ಜಿ ಮನೆ. ಒಂದು ಕಾಲಕ್ಕೆ ಪರಿಷತ್'ನ ಮೂಲೆಯಲ್ಲಿ ಶ್ರೀನಗರದಿಂದ ಬರುತ್ತಿದ್ದ ಕೆಂಪು ಬಸ್ ಒಂದರ ಸ್ಟಾಪ್ ಇರುತ್ತಿತ್ತು. ಅಜ್ಜಿ ಮನೆಯ ತಿರುವಿನಲ್ಲಿ ಕಲ್ಲಿದ್ದಲಿನ ಅಂಗಡಿ ಬೇರೆ ಇತ್ತು. ಶಾಲಾ ನಂತರವೇ ಅಲ್ಲದೇ, ಭಾನುವಾರದಂದೂ ಅದೆಷ್ಟು ಬಾರಿ ಉಮಾ ಟಾಕೀಸ್ ಬಸ್ ನಿಲ್ದಾಣದಲ್ಲಿ ಇಳಿದು ಅಜ್ಜಿ ಮನೆಗೆ ನೆಡೆದು ಹೋಗಿದ್ದೇನೋ ಲೆಕ್ಕವೇ ಇಲ್ಲ.

ಚಾಮರಾಜಪೇಟೆಯ ವ್ಯಾಮೋಹ ಎಷ್ಟಿತ್ತೆಂದರೆ ಮೂರನೇ ತರಗತಿಗೆ ಮಾರತ್ ಹಳ್ಳಿ ಬಿಟ್ಟು ಇಲ್ಲಿಗೇ ಬಂದು ತಳ ಊರಿದ್ದೆವು. ಆದರೆ ಇದ್ದಿದ್ದು ಕೇವಲ ಎರಡೇ ವರ್ಷ ಮಾತ್ರ. ಮರಳಿ ಗೂಡಿಗೆ ಎಂದು ಎಚ್.ಎ.ಎಲ್'ಗೆ ಹೋದರೂ ನಮ್ಮ ಶಾಲಾ ದಿನಗಳು ಚಾಮರಾಜಪೇಟೆಯಲ್ಲೇ ಮುಂದುವರೆಯಿತು. ಪ್ರೈಮರಿ ಮತ್ತು ಮಿಡಲ್ ಸ್ಕೂಲ್ ಭಾರತೀಯ ಸಂಸ್ಕೃತಿ ವಿದ್ಯಾಪೀಠದಲ್ಲಿ ನಡೆದು ನಂತರ ಅಲ್ಲಿಂದ ಎರಡು ಬೀದಿ ದಾಟಿ 'ಬೆಂಗಳೂರು ಹೈಸ್ಕೂಲಿನಲ್ಲಿ' ಹತ್ತರವರೆಗೆ. ನಿತ್ಯ ಕೆಂಪು ಬಸ್ ಓಡಾಟದ ಸಮಾರಾಧನೆ.

Everygree memories of Chamarajpet, one of the oldest layouts in Bengaluru

ಹಾಗಾಗಿ, ಚಾಮರಾಜಪೇಟೆಯ ಆರನೆ ಬೀದಿ, ಉಮಾ ಟಾಕೀಸು, ವೇದಾಂತ ಬುಕ್ ಹೌಸ್, ಅರಳೀಕಟ್ಟೆ, ರಾಮದೇವರ ಗುಡಿ, ಗುಟ್ಟಹಳ್ಳಿ, ಕಿಟ್ಟಿ ಅಂಗಡಿ, ರತ್ನಾಕರರ ಅಂಗಡಿ, ಕೆಂಪಾಂಬುಧಿ ಕೆರೆ, ಬುಲ್ ಟೆಂಪಲ್ ರೋಡ್'ನ ರಾಧ ಮೆಡಿಕಲ್ಸ್, ವಾದಿರಾಜ ಸ್ಟೋರ್ಸ್, ಮಿತ್ರಾ ಸ್ಟೋರ್ಸ್, ಗೋಪಾಲಯ್ಯನವರ ಅಂಗಡಿ, ಐದನೇ ಬೀದಿಯ ನಮ್ಮ ಶಾಲೆ (ಮೊದಲಿಗೆ), ಮಧ್ವ ಸಂಘ, ನಾಲ್ಕನೇ ಬೀದಿಯ ನಮ್ಮ ಶಾಲೆ (ವರ್ಗಾವಣೆಯ ನಂತರ), ರಾಮಸ್ವಾಮಿ ಎಂಬ ಟೈಲರ್ ಅಂಗಡಿ ಇವೆಲ್ಲವೂ ಮಾಸದ ನೆನಪುಗಳು.

ಎರಡು ವರ್ಷಗಳ ಚಾಮರಾಜಪೇಟೆಯ ವಾಸದಲ್ಲಿ ನಾ ಅನುಭವಿಸಿದ್ದು ಮೊದಲ ಮತ್ತು ಕೊನೆಯ ವಠಾರ ವಾಸ. ಆರು ಮನೆಗಳಿದ್ದ ಆ ವಠಾರದಲ್ಲಿ ಒಟ್ಟು ಜನಸಂಖ್ಯೆ ಮೂವತ್ತಕ್ಕೂ ಹೆಚ್ಚು. ಇದ್ದುದರಲ್ಲಿ ನಮ್ಮ ಮನೆ ದೊಡ್ಡದಿತ್ತು. ಎಂದೋ ಉದುರಿ ಹೋಗುತ್ತದೆ ಎಂಬ ಭೀತಿಯಲ್ಲೇ ಆ ಮನೆಯಲ್ಲಿ ಜೀವನ ಸಾಗಿತ್ತು ಎಂದು ಅಪ್ಪ-ಅಮ್ಮ ಹೇಳುತ್ತಿದ್ದರು. ಗೋಡೆಗೆ ಮಳೆ ಹೊಡೆಯುವ ಹಾಗಿಲ್ಲ ಎಂದು ಮನೆ ಮಾಲೀಕ ಯಾಕೆ ಹೇಳ್ತಿದ್ದ ಅಂತ ನಂತರ ಅರ್ಥವಾಗಿತ್ತು. ಗೋಲಿ, ಬುಗುರಿ, ಕಬಡ್ಡಿ ಎಂಬೆಲ್ಲ ಆಟ ಕಲಿತಿದ್ದೇ ಆ ಆರನೇ ಬೀದಿಯ ಅಡ್ಡ ರಸ್ತೆಯಲ್ಲಿ. ಆಮೇಲೆ ಅದು ಅಲ್ಲಿಗೇ ಕೊನೆಯಾಗಿತ್ತು ಎನ್ನುವುದು ಬೇರೆ ವಿಷಯ.

ಚಾಮರಾಜಪೇಟೆಯ ಮತ್ತೊಂದು ಸವಿನೆನಪು ಎಂದರೆ, ಇಂದಿಗೂ ಜೀವನದಲ್ಲಿ ನಾನು ಕಂಡಿರುವ ಅತ್ಯಂತ ಪ್ರಶಾಂತವಾದ ಬೀದಿಯಾದ 'ಶಂಕರಮಠದ ಬೀದಿ'. ವಿಶಾಲವಾದ ಬೀದಿಯ ಎರಡೂ ಬದಿಯಲ್ಲಿನ ಮರಗಳು ಹಾದಿಯುದ್ದಕ್ಕೂ ತಂಪನ್ನೆರೆಯುತ್ತಿತ್ತು. ಪ್ರಶಾಂತವಾದ ಬೀದಿಯಲ್ಲಿ ಜೊತೆ ಇದ್ದಾಗ ನಡೆದಾಡುವ ಅನುಭವವೇ ಬೇರೆ. ಎಚ್.ಎ.ಎಲ್ ಬಸ್ ಇಳಿದು ಹೈಸ್ಕೂಲಿಗೆ ನಡೆದು ಬರುತ್ತಿದ್ದ ಆ ಕೆಲವು ಬೀದಿಗಳಲ್ಲಿ ಜನ ಸಂಚಾರ ಕಡಿಮೆ ಇರುತ್ತಿತ್ತು. ಸಾಲದ್ದಕ್ಕೆ ಅಂದಿನ ದಿನಗಳಲ್ಲಿ ಮಕ್ಕಳ ಕಳ್ಳತನ ಹೆಚ್ಚಾಗಿತ್ತು. ಹೆದರಿಕೊಂಡೇ ಬೇಗ ಶಾಲೆಗೆ ನಡೆಯುತ್ತಿದ್ದೆ. ಅದೂ ಒಂದು ರೀತಿ ವಿಶೇಷ ಅನುಭವವೇ ಅನ್ನಿ.

ಇನ್ನು ಐದನೇ ಬೀದಿ ಬಸ್ ನಿಲ್ದಾಣ. ತಿಪಟೂರು ಸ್ಟೋರ್ಸ್'ನಲ್ಲಿ ಅದೆಷ್ಟು ತೆಂಗಿನಕಾಯಿ ಕೊಂಡಿದ್ದೆವೋ ಗೊತ್ತಿಲ್ಲ. ಫುಟ್-ಪಾತ್'ನ ಹೆಚ್ಚಿನ ಜಾಗವನ್ನು ಬಾಳೆ ಎಲೆ ವ್ಯಾಪಾರಿಗಳೇ ಆಕ್ರಮಿಸುತ್ತಿದ್ದರು. ಈ ಪರಿಸ್ಥಿತಿ ಇಂದಿಗೂ ಹಾಗೇ ಇದೆ ಅನ್ನಿ. ಹಬ್ಬ ಹರಿದಿನಗಳ ಸಮಯದಲ್ಲಿ, ಅದರಲ್ಲೂ ಗಣೇಶನ ಹಬ್ಬದ ಸಮಯದಲ್ಲಿ, ಒಟ್ಟಾರೆ ಬುಲ್ ಟೆಂಪಲ್ ರಸ್ತೆಯ ಒಂದರಿಂದ ಆರನೇ ಬೀದಿಯು ಮದುವೇ ಮನೆಯಂತೆ ಶೋಭಿಸುತ್ತಿತ್ತು. ಕಾಲಿಡಲು ಜಾಗವಿರುತ್ತಿರಲಿಲ್ಲ.

Everygree memories of Chamarajpet, one of the oldest layouts in Bengaluru

ಚಾಮರಾಜಪೇಟೆಯ ಜೀವನ ಸಂಪೂರ್ಣ ಸೊಬಗು ಎನ್ನಲಾಗದು. ಊರಿದ್ದೆಡೆ ಕೊಳಗೇರಿ ಎನ್ನುವಂತೆ ಕೆಲವು ಅಪಸ್ವರಗಳನ್ನೂ ಅನುಭವಿಸಿದ್ದೇನೆ. ಚಾಮರಾಜಪೇಟೆಯನ್ನು ಅವಲೋಕಿಸಿದಾಗ ಟಿ.ಆರ್ ಮಿಲ್'ನಿಂದ ಈಚೆ ಒಂದು ಬಗೆಯಾದರೆ ಅಲ್ಲಿಂದಾಚೆ ಇನ್ನೊಂದು ವರ್ಗ. ಅಂದಿನ ದಿನಗಳ ಪ್ರಮುಖ ಗಲಭೆಯಾದ 'ಈದ್-ಗಾ ಮೈದಾನ' ವಿವಾದವೇ ಚಾಮರಾಜಪೇಟೆಯ ಕೇಂದ್ರಬಿಂದು. ಯಾವ ಹೊತ್ತಿನಲ್ಲಿ ಏನು ಗಲಭೆಯಾಗುತ್ತೋ, ಯಾವಾಗ ಬಸ್'ಗಳ ಮೇಲೆ ಕಲ್ಲು ತೂರಾಟ ನಡೆಯುತ್ತದೋ ಗೊತ್ತಾಗುತ್ತಿರಲಿಲ್ಲ.

ಹಾಗೆಂದ ಮಾತ್ರಕ್ಕೆ ಸದಾ ಭೀತಿ ಎಂದೇನಲ್ಲ. ಆ ಮೈದಾನದಲ್ಲೇ ಎಷ್ಟೋ ಬಾರಿ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಿದ್ದೇನೆ. ಮನೆಯ ಬೀದಿಯಲ್ಲಿ ಜ್ವರಪೀಡಿತ ಮಕ್ಕಳನ್ನು ದರ್ಗಾ'ಕ್ಕೆ ಕರೆದೊಯ್ಯುವುದನ್ನು ಕಂಡಿದ್ದೇನೆ. ಮೊಹರಮ್ ಸಮಯದಲ್ಲಿ 'ಆಲಿ ದೂಲ' ಎಂದು ಬರುವವರ ಹಿಂದೆಯೇ ಬೀದಿ ಬೀದಿ ಸುತ್ತಿದ್ದೇವೆ. ಸರಿಯಾಗಿದ್ದಾಗ ಎಲ್ಲವೂ ಸರಾಗ ಆದರೆ ಭುಗಿಲೆದ್ದರೆ ಏನೇನೋ ಅನಾಹುತಗಳು. ಅಂಥಾ ಸಮಯದಲ್ಲಿ ಹೊರಗಿನ ಶಕ್ತಿಗಳದ್ದೇ ಆಟ ಎಂಬುದು ನಿತ್ಯ ಸತ್ಯ. ಇಂದಿಗೂ ಈ ಸಮಸ್ಯೆ ಬೂದಿ ಮುಚ್ಚಿದ ಕೆಂಡದಂತೆ ಇದೆ ಎಂದು ಕೇಳಿದ್ದೇನೆ.

ಚಾಮರಾಜಪೇಟೆಯ ನಾಲ್ಕನೇ ಬೀದಿಯಲ್ಲಿ ನಮ್ಮ ಶಾಲೆ. ಅದೊಂದು ಬಂಗಲೆ ಇರಬೇಕು ಅನ್ನಿಸುತ್ತೆ, ಶಾಲೆಯಾಗಿ ಪರಿವರ್ತನೆಗೊಂಡಿತ್ತು. ಸಾಲಾದ ಮನೆಗಳ ಮಧ್ಯೆ ಶಾಲೆ. ಶಾಲೆಯ ಬೆಲ್ ಹೊಡೆಯುವವರೆಗೂ ಪುಟ್ಟ ಮೈದಾನದ ಕಾಂಪೌಂಡ್'ನ ಗೇಟು ತೆಗೆಯುತ್ತಿರಲಿಲ್ಲ. ಅಲ್ಲಿಯವರೆಗೂ ಬೀದಿಯಲ್ಲೇ ಕ್ರಿಕೆಟ್ ಆಟ. ಕೆಲವು ವರ್ಷಗಳ ಹಿಂದೆ ಸ್ನೇಹಿತರ ಜೊತೆ ಶಾಲೆಯ ಬಳಿ ಹೋಗಿದ್ದೆ. ಗುರುತೇ ಸಿಗಲಿಲ್ಲ. ಆ ಪುಟ್ಟ ಮೈದಾನವೂ ಕ್ಲಾಸ್ ರೂಮುಗಳಾಗಿವೆ. ಭದ್ರತೆಯ ಹೆಸರಿನ ಅಡಿಯ ಮಾರ್ಪಾಡು ದೊಡ್ಡ ಕಬ್ಬಿಣದ ಪೆಟ್ಟಿಗೆಯಂತೆ ಕಂಡಿತು ನನಗೆ. ಮೈದಾನವೇ ಮುಚ್ಚಿಬಿಟ್ಟಿದೆ ಎಂದ ಮೇಲೆ ಮಕ್ಕಳು ಆಡುವುದು ಎಲ್ಲಿ? ಬೀದಿಯಲ್ಲಿ ಆಡುವುದು ಕನಸು ಬಿಡಿ. ಸ್ವಲ್ಪ ಬೇಸರವೇ ಆಯ್ತು!

ಮೂರನೇ ಬೀದಿಯಲ್ಲಿ ನನ್ನ ಸ್ನೇಹಿತ ಅಲಿಯಸ್ ಬಂಧುವಿನ ಮನೆ. ಲೆಕ್ಕವಿಲ್ಲದಷ್ಟು ಬಾರಿ ಅವರ ಮನೆಯಲ್ಲಿ ಊಟ ಮಾಡಿದ್ದೇನೆ. ಅಲ್ಲೊಂದು ಅಗರಬತ್ತಿ ಮಾಡುವ ಪುಟ್ಟ ಕಾರ್ಖಾನೆ ಕೂಡಾ ಇತ್ತು. ಪ್ರೈಮರಿ ಶಾಲೆಯ ಸಮಯದಲ್ಲಿ, ಎರಡನೆಯ ಬೀದಿಯಲ್ಲಿ, ನಮ್ಮ ಟೀಚರ್ ಒಬ್ಬರ ಮನೆ ಇತ್ತು. ಅದು ಸಾಲದು ಎಂದರೆ ನಮ್ಮಮ್ಮನ ಪರಿಚಯಸ್ತೆ ಬೇರೆ. ಹಾಗಾಗಿ ಅಪ್ಪಿ ತಪ್ಪಿ ಕೂಡಾ ಆ ಬೀದಿ ಕಾಲಿಡುತ್ತಿರಲಿಲ್ಲ!

ಇನ್ನು ಚಾಮರಾಜಪೇಟೆಯ ಮೊದಲನೇ ರಸ್ತೆ. ಅಂದು ನನಗೆ ಅಲ್ಲಿನ ಪ್ರಮುಖ ಆಕರ್ಷಣೆ ಎಂದರೆ ಸೋದರತ್ತೆ ಮನೆ ಮತ್ತು ಸೀತಾಪತಿ ಅಗ್ರಹಾರ ರಾಯರ ಮಠ. ಅಜ್ಜಿ ಮನೆಗೆ ಹೋದಷ್ಟೆ ಬಾರಿ ಅತ್ತೆ ಮನೆಗೆ ಹೋಗಿದ್ದೇನೆ. ಅತ್ತೆ ಮನೆಯ ಆಕರ್ಷಣೆಯೇ ಬೇರೆ. ಸುಧಾ, ಪ್ರಜಾಮತ, ರೂಪತಾರ ಇತ್ಯಾದಿ ಪುಸ್ತಕಗಳು ಸದಾ ಲಭ್ಯ. ನಮ್ಮ ಶಾಲೆಯಿಂದ ಇವೆಲ್ಲವೂ ಕಾಲುನಡಿಗೆಯಾದರೂ ಎಂದಿಗೂ ದೂರ ಎನಿಸಲಿಲ್ಲ. ಅಪ್ಯಾಯಮಾನವಾದರೆ ಯಾವುದೂ ತ್ರಾಸವಲ್ಲ ಅಲ್ಲವೇ?

ರಾಯರ ಆರಾಧನೆ ಸಮಯದಲ್ಲಿ ಶಾಲೆ ಮುಗಿಸಿಕೊಂಡು ಸಂಜೆ ರಾಯರ ಮಠಕ್ಕೆ ಹೋಗಿ ಊಟ. ತಾತ ಅಲ್ಲಿನ ಪ್ರಮುಖ ಅರ್ಚಕರಾದ್ದರಿಂದ ಲೇಟಾಗಿದ್ದರೂ ಊಟಕ್ಕೇನೂ ಕೊರತೆ ಇರುತ್ತಿರಲಿಲ್ಲ! ಊಟ ಮುಗಿಸಿ ಸಿಟಿ ಮಾರ್ಕೆಟ್'ಗೆ ಮತ್ತೆ ನಡಿಗೆ. ಹಾದಿಯಲ್ಲಿ ಪ್ರಕಾಶ್ ಕಫೆ ದರ್ಶನ. ಸಾಗುತ್ತ ಹೋದಂತೆ ಕೋಟೆ ವೆಂಕಟರಮಣ, ಬಿ.ಎಂ.ಸಿ, ಕೋಟೆ ಆಂಜನೇಯ, ಅಪ್ಸರ ಮತ್ತು ಪರಿಮಳ ಚಿತ್ರಮಂದಿರ ಎಂದೆಲ್ಲ ನೋಡಿಕೊಂಡು ಬಸ್ ಸ್ಟಾಪ್'ಗೆ ಬರುತ್ತಿದ್ದೆವು... ಚಾಮರಾಜರಪೇಟೆಯಿಂದ ಕೃಷ್ಣರಾಜರ ಮಾರುಕಟ್ಟೆ ಸೇರಿದರೆ ಮುಗೀತು. ಬಸ್ ಸಿಕ್ಕಾಗ ಮನೆ!

ಇಂದಿನ ಚಾಮರಾಜಪೇಟೆ ಹೇಗಿದೆ? ಕೆಲವು ವರ್ಷಗಳಿಂದ ಬೆಂಗಳೂರಿಗೆ ಬಂದಾಗ ಹಳೆಯ ನೆನಪುಗಳ ಗುಂಗಿನಲ್ಲೇ ಚಾಮರಾಜಪೇಟೆಯ ಬೀದಿಯಲ್ಲಿ ಅಡ್ಡಾಡಿದ್ದೇನೆ. ಎತ್ತ ನೋಡಿದರೂ ದೊಡ್ಡ ಕಟ್ಟಡಗಳು, ಕಬ್ಬಿಣದ ಸರಳುಗಳೊಳಗೆ ಸಿಲುಕಿರುವ ಮನೆಗಳು, ಆಡುವ ಮಕ್ಕಳೇ ಕಾಣದ ವಾಹನ ಭರಿತ ಬೀದಿಗಳು, ಎಲ್ಲೆಲ್ಲೂ ಧಾವಂತ, ಫುಟ್-ಪಾತ್ ಕಾಣದ ಬೀದಿಗಳು, ಒಂದೆರಡು ಕ್ಷಣ ಒಂದೆಡೆ ನಿಂತರೆ ತಳ್ಳಿ ನೂಕಿ ಹೊಸಕಿ ಹಾಕಿಬಿಡುವರೇನೋ ಎನ್ನುವಷ್ಟು ಜನಸಾಗರ.

ಅಂದಿದ್ದ ದೊಡ್ಡ ಕಾಂಪೌಂಡ್ ಒಳಗಿನ ಪುಟ್ಟ ಮನೆಗಳು, ವಠಾರಗಳು ಇಂದಿಲ್ಲ. ವಿಧಿಯಿಲ್ಲದೆ ತಮ್ಮ ನೆಲ ಮಾರಿ ಬೇರೆಡೆ ಹೋದವರು ಉಂಟು. ಒತ್ತಾಯಪೂರ್ವಕವಾಗಿ ನೆಲವನ್ನು ದೊಡ್ಡ ಜನರಿಗೆ ಕೊಟ್ಟವರೂ ಹೇರಳ. ಹೀಗಾಗಿ ನೋಟುಗಳು ಕೈಬದಲಾಗಿ ನೋಟ ಬದಲಾಗಿದೆ. ಕಾಲಾಯ ತಸ್ಮೈ ನಮ:!

ಇಂದಿನ ಚಾಮರಾಜಪೇಟೆಯ ಸನ್ನಿವೇಶ ಇಡೀ ಬೆಂಗಳೂರಿಗೆ ಅನ್ವಯಿಸುತ್ತದೆ ಅಲ್ಲವೇ? ಬದಲಾವಣೆಯ ಬಿರುಗಾಳಿಯಲ್ಲೂ ಹಲವಾರು ವಿಚಾರಗಳಲ್ಲಿ ಚಾಮರಾಜಪೇಟೆ ತನ್ನತನವನ್ನು ಉಳಿಸಿಕೊಂಡಿದೆ ಎಂಬುದೇ ಅತ್ಯಂತ ಸಂತಸಕರ ವಿಷಯ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Chamarajpet, one of the oldest layouts in Bengaluru is celebrating 125th birth anniversay on 28th and 29th January, 2017. At this moment, Srinath Bhalle, resident of USA, recalls his childhood days he spent in Chamarajpet. Do you have same memories? If so, please share with us.
Please Wait while comments are loading...