ಹೊಸ ವರ್ಷಕ್ಕೆ ಕುಣಿದು ಕುಪ್ಪಳಿಸಿ ಚಿಯರ್ಸ್ ಹೇಳಿದೆ ಜಗತ್ತು

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 31 : ಕಳೆದುಹೋದ 2017ಕ್ಕೆ ಟಾಟಾ, 2018ಕ್ಕೆ ಭವ್ಯ ಸ್ವಾಗತ.ಹೊಸ ವರ್ಷಕ್ಕೆ ಕುಣಿದು ಕುಪ್ಪಳಿಸಿ ಚಿಯರ್ಸ್ ಹೇಳಿದೆ ಜಗತ್ತು, ಹುಚ್ಚು ಉನ್ಮಾದದಲ್ಲಿ, ಕುಡಿತದ ಅಮಲಿನಲ್ಲಿ ಬರದಿರಲಿ ಆಪತ್ತು.

ಪೊಲೀಸರು ಎಷ್ಟೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡರೂ ಕೆಲ ಅಹಿತಕರ ಘಟನೆ ಎಂಜಿ ರಸ್ತೆಯಲ್ಲಿ ನಡೆದುಹೋಗಿರುವ ವರದಿ ಬರುತ್ತಿದೆ. ಪಡ್ಡೆಗಳ ನಡುವೆ ಸಿಲುಕಿದ್ದ ಕೆಲ ಯುವತಿಯರನ್ನು ರಕ್ಷಿಸಲಾಗಿದೆ. ಕೆಲ ಯುವತಿಯರು ದೌರ್ಜನ್ಯಕ್ಕೊಳಗಾದ ದೂರನ್ನು ಪೊಲೀಸರಿಗೆ ನೀಡುತ್ತಿದ್ದರು.

ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಯಶವಂತಪುರ, ಕೋರಮಂಗಲ ಸೇರಿದಂತೆ ಯುವಸಮೂಹ ನಿಂತ ರಸ್ತೆಯೇ ಡಾನ್ಸ್ ಫ್ಲೋರ್ ಆಗಿ ಪರಿವರ್ತನೆಯಾಗಿದೆ. ಡಿಜೆ ಸಂಗೀತಕ್ಕೆ ಮೈಮರೆತು ಯುವಕ ಯುವತಿಯರು ಹುಚ್ಚೆದ್ದು ಕುಣಿದಿದ್ದಾರೆ.

ಹದತಪ್ಪಿದ ಎದೆಬಡಿತದ ನಡುವೆ ಬೆದೆಯೇರಿದ ಬಿಸಿಯುಸಿರು

ಝಗಮಗಿಸುವ ಲೈಟಿಂಗ್ ನಲ್ಲಿ ಕುಣಿದಾಡುತ್ತಿರುವ ಯುವ ಜನರ ಸಾಗರದ ನಡುವೆ ಅಲ್ಲಲ್ಲಿ ಖಾಕಿ ಬಟ್ಟೆ, ಟೋಪಿ ಧರಿಸಿರುವ ಪೊಲೀಸರ ಕಣ್ಗಾವಲು. ಏನೂ ಅವಘಡ ನಡೆಯದಂತೆ ಹದ್ದಿನ ಕಣ್ಣಿಟ್ಟು ಪೊಲೀಸರು ಕಾಯುತ್ತಿದ್ದಾರೆ. ಅವರಿಗೊಂದು ದೊಡ್ಡ ಸಲಾಂ.

ಜನಸಾಗರವನ್ನು ಚೆದುರಿಸಲು, ಅವರ ಮಧ್ಯ ಸಿಲುಕಿರುವ ವಾಹನಗಳ ಸಂಚಾರವನ್ನು ಸುಗಮಗೊಳಿಸಲು, ಆತಂಕದಿಂದ ಓಡಾಡುತ್ತಿರುವ ಯುವತಿಯರನ್ನು ರಕ್ಷಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ.

Entire world dancing on the eve of New Year

"ಜವಾಬ್ದಾರಿಯಿಂದ ಹೊಸ ವರ್ಷ ಆಚರಿಸಿ, ಇದು ನಿಮ್ಮ ಕಟ್ಟಕಡೆಯ ಆಚರಣೆ ಆಗದಿರಲಿ, ನಿಮ್ಮ ಸಂತೋಷ ಮತ್ತು ನಿಮ್ಮ ಸುರಕ್ಷತೆಯೇ ನಮ್ಮ ಪರಮ ಆದ್ಯತೆ" ಎಂಬ ಪ್ರೀತಿಯ ಎಚ್ಚರಿಕೆಯನ್ನು ಪೊಲೀಸರು ರವಾನಿಸುತ್ತಿದ್ದಾರೆ. ಆದರೆ, ಇದಾವುದರ ಪರಿವೆ ಇಲ್ಲದಂತೆ ಹುಚ್ಚು ಉನ್ಮಾದಕ್ಕೆ ಯುವಜನತೆ ಬಿದ್ದಿದೆ.

ಹುಬ್ಬಳ್ಳಿ, ಮೈಸೂರು ಮುಂತಾದ ನಗರಗಳಲ್ಲಿಯೂ ಹಲವಾರು ಕ್ಲಬ್ ಗಳು ಪಾರ್ಟಿ ಆಯೋಜಿಸಿವೆ. ರಸ್ತೆರಸ್ತೆಗಳಲ್ಲಿ, ರಸ್ತೆಬದಿಯ ಢಾಬಾಗಳಲ್ಲಿ, ಮದ್ಯದ ಅಂಗಡಿಗಳಲ್ಲಿ ಜನವೋ ಜನ. ಸಂತಸಭರಿತ ಮುಖಗಳ ನಡುವೆ ಕೆಲವೊಂದು ಆತಂಕತುಂಬಿದ ಮುಖಗಳು ಕೂಡ ಕಾಣಿಸುತ್ತಿವೆ.

ಕಳೆದ ವರ್ಷ ಬ್ರಿಗೇಡ್ ಮತ್ತು ಎಂಜಿ ರಸ್ತೆಯಲ್ಲಿ ನಡೆದ ಘಟನೆ ಮತ್ತೆ ಮರುಕಳಿಸದಿರಲಿ ಎಂಬುದೇ ಪೊಲೀಸರ ಮತ್ತು ಎಲ್ಲರ ಆಶಯ. ಉರುಳಿಹೋದ ಘಳಿಗೆ, ಕಳೆದುಹೋದ ಮಾನ ಮತ್ತೆ ಮರಳಿ ಬರುವುದಿಲ್ಲ. ಜಿಂಕೆಯನ್ನು ಬೇಟೆಯಾಡಲು ಮೃಗಗಳು ಹೊಂಚಿ ಕುಳಿತಿರುತ್ತವೆ, ಎಚ್ಚರ!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Count down has begun for the New Year 2018. People of all age, from everywhere in the world, who believe this is the time to enjoy, are dancing, drinking and waiting to welcome the New Year.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ