ಬೆಂಗಳೂರು ವ್ಯಾಪಾರಿಗಳಿಗಿಲ್ಲ ಸಂಕ್ರಾಂತಿ ಸುಗ್ಗಿ, ಸಡಗರ

By: ಚೇತನ್ ಓ.ಆರ್. ಬೆಂಗಳೂರು
Subscribe to Oneindia Kannada

ಬೆಂಗಳೂರು, ಜನವರಿ 13: ''ಪ್ರತೀವರ್ಸ ಬೆಳಗ್ಗೆ ನಾಲ್ಕು ಗಂಟೆಯಿಂದ್ಲೇ ಯಾಪಾರ (ವ್ಯಾಪಾರ) ಶುರುವಾಗಿರ್ತಿತ್ತು. ಇಷ್ಟೊತ್ತಿಗೆ ಇಂಗೆಲ್ಲಾ ನಿಂತ್ಕೊಂಡ್ ಮಾತಾಡಕೇ ಜಾಗ ಇರ್ತಿರ್ಲಿಲ್ಲ. ಅಷ್ಟು ಜನ ಸೇರಿರೋವ್ರು. ಆದ್ರೆ, ಈ ಸಲ ನೋಡಿ... ಜನ ಇಲ್ಲ, ಯಾಪಾರನೂ ಇಲ್ಲ. ಹಿಂಗೇ ಆದ್ರೆ ಈ ಹೂಗಳ ಮೇಲೆ ಹಾಕಿದ್ ಬಂಡ್ವಾಳದಾಗೆ ಅರ್ಧ ಕೂಡ ಬರಾಕಿಲ್ಲ....''

- ಗಾಂಧೀ ಬಜಾರಿನಲ್ಲಿ ಸುಮಾರು ಹನ್ನೆರಡು ವರ್ಷಗಳಿಂದ ಹೂವಿನ ವ್ಯಾಪಾರ ಮಾಡುತ್ತಿರುವ ವರದರಾಜು ಹೇಳುವ ಮಾತಿದು.

Dull business in markets of bengaluru for this sankranti

ಇನ್ನು, ವಿಜಯ ನಗರ ಮಾರುಕಟ್ಟೆಯ ಹೂವಿನ ವ್ಯಾಪಾರಿಯಾದ ಷಣ್ಮುಗಪ್ಪ ಹೇಳುವ ಪ್ರಕಾರ, "ವರ್ಷದಿಂದ ವರ್ಷಕ್ಕೆ ಹಬ್ಬಗಳ ವೇಳೆ ಹೂವು, ಹಣ್ಣು, ಪೂಜೆ ಸಾಮಗ್ರಿಗಳ ಖರೀದಿಯಲ್ಲಿ ಜನರು ತೋರುತ್ತಿರುವ ಆಸಕ್ತಿ ಕ್ರಮೇಣ ಕುಸಿಯುತ್ತಿರುವುದನ್ನು ನಾನು ಗಮನಿಸಿದ್ದೆ. ಈ ಬಾರಿಯಂತೂ ಗ್ರಾಹಕರು ಮತ್ತಷ್ಟು ನಿರಾಸಕ್ತಿ ತೋರಿದ್ದಾರೆ. ಇದಕ್ಕೆ ಕಾರಣ, ಮುಖ್ಯವಾಗಿ ನೋಟ್ ಮಾಡಿರುವುದು. ಎಲ್ಲರೂ 2 ಸಾವಿರ ನೋಟು ತೋರಿದರೆ ನಾವು ಎಲ್ಲಿಂದ ಚಿಲ್ಲರೆ ತರುವುದು?"[ಮಕರ ಸಂಕ್ರಾಂತಿ, ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ]

ಈ ಇಬ್ಬರೂ ಹೇಳುವ ಮಾತಿನಲ್ಲಿ ಯಾವುದೇ ಕೃತಕತೆ ಇಲ್ಲ, ಅತಿಶಯೋಕ್ತಿಯೂ ಇಲ್ಲ. ಶನಿವಾರವೇ ಸಂಕ್ರಾಂತಿ ಹಬ್ಬ. ಅದರ ಹಿಂದಿನ ದಿನವೆಂದ ಮೇಲೆ ಅದೆಷ್ಟು ಸಡಗರ, ಉತ್ಸಾಹವಿರಬೇಕಿತ್ತು. ಮಾರುಕಟ್ಟೆಗಳು, ಹೂವು, ಹಣ್ಣು ತರಕಾರಿಗಳು ಬಿಕರಿಯಾಗುವ ಸ್ಥಳಗಳು ಅದೆಷ್ಟು ಜನಜಂಗುಳಿಯಿಂದ ತುಂಬಿ ತುಳುಕಬೇಕಿತ್ತು ? ಆದರೆ, ಅವ್ಯಾವುವೂ ಹಬ್ಬದ ಹಿಂದಿನ ದಿನವಾದ ಶುಕ್ರವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಕಾಣಲಿಲ್ಲ.

Dull business in markets of bengaluru for this sankranti

ಇನ್ನು, ಹೂವು, ಅಗರ್ ಬತ್ತಿ ವ್ಯಾಪಾರಿ ಶಂಕರ್ ಎಂಬುವರದ್ದೂ ಇದೇ ಮಾತು. ಕಳೆದ ಸಂಕ್ರಾತಿಯಲ್ಲಿ ರಾಶಿಗಟ್ಟಲೆ ಹೂವು ಮಾರಿದ ನಾವು ಈ ಬಾರಿ ಕೇವಲ ತಳ್ಳುವ ಗಾಡಿಯಲ್ಲಿ ಒಂದಿಷ್ಟು ಹೂವು ಇಟ್ಟುಕೊಂಡು ಮಾರುವ ಪರಿಸ್ಥಿತಿ ಬಂದಿದೆ ಎನ್ನುತ್ತಾರೆ ಅವರು.[ಸ್ನೇಹ, ಪ್ರೀತಿಯ ಸಂಕೇತ ನಾಡಿನ ಮಕರ ಸಂಕ್ರಾಂತಿ]

ಹಬ್ಬವೆಂದರೆ ಅಬ್ಬರದ ವ್ಯವಹಾರ ನಡೆಯಬೇಕಿದ್ದ ಪ್ರಮುಖ ವ್ಯಾಪಾರ ಸ್ಥಳಗಳಾದ ಕೆ.ಆರ್. ಮಾರುಕಟ್ಟೆ, ವಿಜಯ ನಗರ, ಗಾಂಧಿ ಬಜಾರ್ ಮಾರುಕಟ್ಟೆಗಳಲ್ಲಿ ಅಂಥ ಸಡಗರ ಈ ಬಾರಿ ಇಲ್ಲ. ಇನ್ನು, ಬೆಂಗಳೂರಿನ ಇತರ ಭಾಗಗಳಾದ ಎಚ್ಎಎಲ್, ಆರ್ ಟಿ ನಗರ ಮುಂತಾದ ಕಡೆ ಪರವಾಗಿಲ್ಲ ಎನ್ನಬಹುದಾದರೂ ಹೇಳಿಕೊಳ್ಳುವಂಥ ಲವಿಲವಿಕೆಯಿಲ್ಲ.

Dull business in markets of bengaluru for this sankranti

ಕೇಂದ್ರ ಸರ್ಕಾರದ ಅಪನಗದೀಕರಣವೇ ಹೀಗೆ ಹಬ್ಬದ ವ್ಯಾಪಾರ ಇಳಿಮುಖವಾಗಲು ಪ್ರಮುಖ ಕಾರಣ ಎನ್ನುತ್ತಾರೆ ವ್ಯಾಪಾರಿಗಳು.[ಸಂಕ್ರಾಂತಿ ದಿನ ಎಳ್ಳು-ಬೆಲ್ಲ ಯಾಕೆ ತಿನ್ನಬೇಕು?]

ಇದೇ ಕೇವಲ ಹೂವು ಮಾರಾಟಗಾರರ ಮಾತಲ್ಲ. ಹಣ್ಣು, ಊದುಬತ್ತಿ, ತರಕಾರಿ ಮಾರಾಟಗಾರರದ್ದೂ ಇದೇ ಅಳಲು. ವಿಜಯ ನಗರ, ನಾಗರಭಾವಿಗಳಲ್ಲಿನ ವ್ಯಾಪಾರಿಗಳು 'ಹಬ್ಬಕ್ಕೆ ಜನ ಖರ್ಚು ಮಾಡಲು ಹಿಂದು ಮುಂದೆ ನೋಡುವುದಿಲ್ಲ' ಅನ್ನೋ ನಂಬಿಕೆಯಿಂದ ಈ ಬಾರಿಯ ಸಂಕ್ರಾಂತಿ ವೇಳೆ ಕೊಂಚ ಹೆಚ್ಚೇ ಬಂಡವಾಳ ಹೂಡಿ ಹಣ್ಣು, ಹಂಪಲು ತಂದಿಟ್ಟಿದ್ದಾರೆ. 'ಜನರು ಎರಡು ಸಾವಿರು ರು.ಗಳನ್ನೇ ಹೆಚ್ಚಾಗಿ ತಂದರೆ ಹೇಗೆ ?' ಎಂದು ಯೋಚಿಸಿ ಸುಮಾರು ಸಾವಿರದಷ್ಟು ಚಿಲ್ಲರೆಯನ್ನೂ ಹೊಂದಿಸಿಕೊಂಡು ತಂದಿದ್ದಾರೆ. ಆದರೆ, ಅವರಿಗೆ ವ್ಯಾಪಾರವೇ ಆಗುತ್ತಿಲ್ಲ!

Dull business in markets of bengaluru for this sankranti

ಈ ಬಗ್ಗೆ ವಿಚಾರಿಸಲಾಗಿ, ಗಾಂಧಿ ಬಜಾರಿನ ಷಣ್ಮುಗಂ ಎಂಬ ಹೂವು, ಹಣ್ಣಿನ ವ್ಯಾಪಾರಿ, "ಎಷ್ಟೇ ನಾವು ತಯಾರಿ ನಡೆಸಿದ್ದರೂ ಗ್ರಾಹಕರು ಬರುತ್ತಿಲ್ಲ. ಅದೇ ದುಗುಡವಾಗಿದೆ. ಸಾಮಾನ್ಯವಾಗಿ ಹಬ್ಬದ ವಾತಾವರಣ ಎಂದರೆ ಸಿಕ್ಕಾಬಟ್ಟೆ ವ್ಯಾಪಾರವಾಗುತ್ತಿತ್ತು. ನೋಟು ಬ್ಯಾನ್ ನ ಎಫೆಕ್ಟ್ ಇರಬೇಕು. ಹಾಗಾಗಿ, ಜನರು ಬರುತ್ತಿಲ್ಲ'' ಎನ್ನುತ್ತಾರೆ. ಆದರೂ, ಶುಕ್ರವಾರ ಸಂಜೆ ಅಥವಾ ಶನಿವಾರ ಮಧ್ಯಾಹ್ನದವರೆಗೂ ಟೈಂ ಇದೆ. ಅಷ್ಟರಲ್ಲಿ ವ್ಯಾಪಾರವಾಗಬಹುದು ಎಂಬ ನಿರೀಕ್ಷೆ ಅವರದ್ದು.[ಶಬರಿಮಲೆಯ 'ಮಕರ ಜ್ಯೋತಿ' ಎಂದರೇನು?]

ಆದರೆ, ಇಲ್ಲಿ ಕೆಲವಾರು ಬುದ್ಧಿ ಓಡಿಸಿರುವವರೂ ಇದ್ದಾರೆ. ಇತ್ತೀಚೆಗೆ ವ್ಯಾಪಾರದ ಸ್ಥಿತಿಗತಿಗಳನ್ನು ಆಧಾರಿಸಿ ಈ ಬಾರಿ ಹಣ್ಣುಗಳಿಗೆ ಹೆಚ್ಚಿನ ಬಂಡವಾಳ ಹಾಕಿಲ್ಲ ಎನ್ನುವವರೂ ಇದ್ದಾರೆ. ಈ ಬಗ್ಗೆ ವಿವರ ನೀಡುವ ನಾಗರಬಾವಿಯ ವರ್ತಕರೊಬ್ಬರು, "ಇತ್ತೀಚೆಗೆ ತರಕಾರಿ, ಸೊಪ್ಪಿನ ವ್ಯಾಪಾರವೂ ಕುಸಿದಿತ್ತು. ಹಣ್ಣಿನ ವ್ಯಾಪಾರವೂ ಅಷ್ಟಕ್ಕಷ್ಟೇ. ಹಾಗಾಗಿ, ಸಂಕ್ರಾತಿಯ ಕಾಲಕ್ಕೆ ಜನರು ಅಷ್ಟಾಗಿ ಕೊಳ್ಳಲಾರರು ಎಂದು ಮೊದಲೇ ಅನ್ನಿಸಿದ್ದರಿಂದಾಗಿ ಈ ಬಾರಿ ಹೂವು, ಹಣ್ಣುಗಳ ಮೇಲೆ ಹೆಚ್ಚಿನ ಬಂಡವಾಳ ಹಾಕಲಿಲ್ಲ. ಶುಕ್ರವಾರ ರಾತ್ರಿವರೆಗೂ ಟೈಂ ಇದೆ. ಸಂಜೆ ವೇಳೆಗೆ ವ್ಯಾಪಾರ ಚೇತರಿಸಿಕೊಂಡರೆ ಮತ್ತಷ್ಟು ಆರ್ಡರ್ ಮಾಡಿ ತರಿಸುತ್ತೇವೆ'' ಎನ್ನುತ್ತಾರೆ.[ಬಳ್ಳಾರಿಯಲ್ಲಿ ಗಾಲಿ ರೆಡ್ಡಿ ಸಂಕ್ರಾಂತಿ ಆಚರಣೆಗೆ ಸುಪ್ರೀಂ ಅನುಮತಿ]

Dull business in markets of bengaluru for this sankranti

ಗ್ರಾಹಕರೇನಂತಾರೆ?
ಮಾರುಕಟ್ಟೆಗೆ ಕಳೆ ತರಬೇಕಿದ್ದ ಗ್ರಾಹಕರೂ ನಿರುತ್ಸಾಹ ತೋರಿರುವ ಬಗ್ಗೆ ಗಾಂಧಿಬಜಾರಿನಲ್ಲಿ ಪ್ರತಿಕ್ರಿಯಿಸಿರುವ ರಾಜು ಎಂಬ ಗ್ರಾಹಕ, "ಎಲ್ಲರಿಗೂ ಹಣದ ಮುಗ್ಗಟ್ಟು ಕಾಡುತ್ತಿದೆ. ಕಳೆದ ಬಾರಿಯ ಹಬ್ಬಗಳೆಲ್ಲೆಲ್ಲಾ ದೊಡ್ಡ ದೊಡ್ಡ ಹಾರಗಳನ್ನು ಕೊಂಡು ಹೋಗಿ ಆಡಂಬರ, ಅದ್ಧೂರಿಯಿಂದ ಪೂಜೆ ಮಾಡುವವರು ಈ ಬಾರಿ ಐವತ್ತು ರು., ಇಪ್ಪತ್ತು ರು. ಕೊಟ್ಟು ಅಷ್ಟಕ್ಕೇ ಹೂವು ಕೊಂಡೊಯ್ಯುತ್ತಿದ್ದಾರೆ. ಫೋಟೋಗಳಿಗೆ ದೊಡ್ಡ ಹಾರ ಹಾಕದಿದ್ದರೂ ಒಂದೊಂದು ಹೂವು ಮುಡಿಸಿದರೆ ಸಾಕು ಎಂದು ಯೋಚಿಸುತ್ತಿದ್ದಾರೆ. ಹಾಗಾಗಿಯೇ ಮಾರುಕಟ್ಟೆ ಮಂದಗತಿಯ ವ್ಯವಹಾರಕ್ಕೆ ಕಾರಣವಾಗಿದೆ ಎನ್ನುತ್ತಾರೆ.

ಆದರೆ, ಕೆಲ ಗ್ರಾಹಕರು ಈ ಅಪನಗದೀಕರಣ ಮಾತ್ರವೇ ಇದಕ್ಕೆ ಮುಖ್ಯ ಕಾರಣ ಎಂದು ಹೇಳುವುದನ್ನು ಒಪ್ಪುವುದಿಲ್ಲ. ಈ ನಿಟ್ಟಿನಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ ಗಾಂಧಿ ಬಜಾರು ಬಳಿಯ ವೆಂಕಟರಾಜು ಎಂಬ ಗ್ರಾಹಕರು "ಅಪನಗದೀಕರಣವೊಂದೇ ವ್ಯಾಪಾರ ಕುಸಿತಕ್ಕೆ ಕಾರಣವಲ್ಲ. ಸಂಕ್ರಾಂತಿ ನಮಗೆ ಅಷ್ಟಾಗಿ ದೊಡ್ಡ ಹಬ್ಬವಲ್ಲ. ಸಾಧಾರಣ ಹಬ್ಬವಾದ್ದರಿಂದ ಈ ಬಾರಿ ಜನರು ನಿರಾಸಕ್ತಿ ತೋರಿರಬಹುದು. ಚಿಲ್ಲರೆ ಸಮಸ್ಯೆಯಿದೆ. ಆದರೆ, ಅದು ಒಂದು ತಿಂಗಳ ಹಿಂದೆ ಇದ್ದಷ್ಟು ಭೀಕರವಾಗಿಲ್ಲ. ಖರೀದಿಗೆ ಇನ್ನೂ ಸಮಯವಿರುವುದರಿಂದ ಶುಕ್ರವಾರ ಸಂಜೆ ವೇಳೆಗೆ ಮಾರುಕಟ್ಟೆ ರಂಗು ಪಡೆದುಕೊಳ್ಳಬಹುದು'' ಎನ್ನುತ್ತಾರೆ.

ಒಟ್ಟಾರೆಯಾಗಿ, ಈ ಬಾರಿಯ ಸಂಕ್ರಾಂತಿಯು ಜನಸಾಮಾನ್ಯರಲ್ಲಿ ಹೊಸ, ಪುಳಕ, ಉತ್ಸಾಹ ತಂದಿದ್ದರೂ, ಅದು ಮಾರುಕಟ್ಟೆಯಲ್ಲಿ ಪ್ರತಿಬಿಂಬಿತವಾಗುತ್ತಿಲ್ಲ. ಸಾಮಾನ್ಯ ಜನರ ಮೊಗದಲ್ಲಿ ಇರುವ ನಗು ವ್ಯಾಪಾರಿಗಳಲ್ಲಿ ಕಾಣುತ್ತಿಲ್ಲ ಎಂಬುದು ಅಷ್ಟೇ ಸತ್ಯ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
On the day before sankranthi festival the business in Bengaluru markets has been decreased drastically. Most of the fruit, flower vendors mention demonetisation is the main cause for this low sale.
Please Wait while comments are loading...