ಕ್ಯಾನ್ಸರ್ ಕಥೆ ಹೇಳಿಸಿದ ಲಾಲ್ ಬಾಗ್ ಹಣ್ಣಿನ ಮೇಳ

By: ವನಿತ. ವೈ ಜೈನ್
Subscribe to Oneindia Kannada

ಬದುಕಿನ ಹಾದಿಯಲ್ಲೊಂದು ಕೊನೆಯುಂಟು, ಕೊನೆಯಲ್ಲೊಂದು ವಿಶ್ವಾಸವುಂಟು....ಲಾಲ್ ಬಾಗ್ ಎಂದಾಕ್ಷಣ ಹಸಿರು ಸೌಂದರ್ಯ, ಸಾಲುಗಟ್ಟಿನಿಂತ ಮರಗಳು, ಏಕಾಂತತೆ, ಮಾನಸಿಕ ಸ್ವಾಸ್ಥ್ಯ ಧಾರೆ ಎರೆಯುವ ತಾಣ,ವೈವಿಧ್ಯ ಮೇಳಗಳ ನಂಟು ಹೀಗೆ ಏನೇನೋ ವಿಶೇಷತೆಗಳು ನೆನಪಾಗುತ್ತದೆ. ಇದರ ಜೊತೆಗೆ ಇದೊಂದು ಮಾಹಿತಿಯ ಆಗರ, ಕರುಳು ಹಿಂಡುವ ಕರುಣಾ ಜನಕ ಕಥೆಗಳ ವೇದಿಕೆ, ನೈತಿಕ ಮೌಲ್ಯ ಎಚ್ಚರಿಸುವ ಸ್ಥಳ ಎಂಬ ನಾಮಫಲಕವನ್ನು ನಮ್ಮ ಮನದಲ್ಲಿ ತೂಗು ಹಾಕಿಕೊಳ್ಳಲು ಯಾವುದೇ ಅಡ್ಡಿ ಇಲ್ಲ. ಯಾಕೆ ಗೊತ್ತಾ ನಾ ಹೀಗೆ ಹೇಳ್ತಾ ಇರೋದು?

ನಾನು ಫೆಬ್ರವರಿ 28ರವರೆಗೆ ಲಾಲ್ ಬಾಗಿನಲ್ಲಿ ಆಯೋಜನೆಯಾಗಿರುವ ದ್ರಾಕ್ಷಿ ಮತ್ತು ಕಲ್ಲಂಗಡಿ ಮೇಳವನ್ನು ವರದಿ ಮಾಡಲು ಹೋಗಿದ್ದೆ. ಒಂದೆಡೆ ಬಿರು ಬಿರು ಬಿಸಿಲಿನ ದಾಹ, ಇನ್ನೊಂದೆಡೆ ಹಣ್ಣಿನ ಮೇಳವನ್ನು ಕಣ್ತುಂಬಿಕೊಳ್ಳುವ, ಜನರನ್ನು ಮಾತನಾಡಿಸಿ ಅವರಿಂದ ಅಭಿಪ್ರಾಯ ಸಂಗ್ರಹಿಸುವ ತವಕ. ಈ ಖುಷಿಯಲ್ಲೇ ನಡೆದು ಹಣ್ಣಿನ ಮೇಳವನ್ನು ಏರ್ಪಡಿಸಿರುವ ಅಧಿಕಾರಿಯನ್ನು ಭೇಟಿ ಮಾಡಿ, ಮಾತನಾಡಿ ಮಾಹಿತಿ ಪಡೆದು ಹಣ್ಣಿನ ಮಳಿಗೆ ಬಳಿ ಹೊರಟೆ.[ಲಾಲ್ಬಾಗಿನಲ್ಲಿ ಮೈವೆತ್ತಿದೆ ದೇಶ-ವಿದೇಶಗಳ ಹಣ್ಣಿನ ಸಾಮ್ರಾಜ್ಯ]

ಈ ಹಣ್ಣಿನ ಮೇಳಕ್ಕೆ ಸಣ್ಣ ಮಕ್ಕಳಿಂದ ಹಿಡಿದು, ಕಾಲೇಜು ಹುಡುಗರು ಹುಡುಗಿಯರು, ವಿದೇಶಿಗರು, ವಯೋವೃದ್ಧರು ಸೇರಿದಂತೆ ಪ್ರತಿಯೊಬ್ಬರು ತಮ್ಮ ಆತ್ಮೀಯರೊಂದಿಗೆ ಕೆಲ ಹೊತ್ತು ಕಳೆಯಲು, ಹಣ್ಣಿನ ಮೇಳದ ವಿಶೇಷತೆ ತಿಳಿಯಲು ಬಂದಿದ್ದರು. ಇದೇನಿದು ಜನ ತೀರಾ ಕಡಿಮೆ ಇದ್ದಾರಲ್ಲ ಎಂದುಕೊಂಡು, ಇರುವ ಜನರಲ್ಲೇ ಅಭಿಪ್ರಾಯ ಪಡೆದರಾಯಿತು ಎಂದು ನನ್ನ ಆಶಾವಾದವನ್ನು ಕುಗ್ಗಿಸಿಕೊಳ್ಳದೆ ಮುಂದೆ ನಡೆದೆ.

ಪ್ರತಿ ಮಳಿಗೆಯ ಮಾರಾಟಗಾರರನ್ನು ಮಾತನಾಡಿಸಿಕೊಂಡು, ಬೆಲೆ ಕೇಳುತ್ತಾ ಬರುತ್ತಿರುವಾಗ ನಾ ಯಾರ ಬಳಿ ಅಭಿಪ್ರಾಯ ಕೇಳೋದಪ್ಪಾ, ಇರುವ ಬೆರಳೆಣಿಕೆ ಮಂದಿಯೇ ಹಣ್ಣು ಕೊಳ್ಳೋದ್ರಲ್ಲಿ ಫುಲ್ ಬಿಜಿ ಇದ್ದಾರಲ್ಲಾ ಎಂದು ಯೋಚಿಸುತ್ತಿದ್ದಂತೆ, ಆಗ ಅಲ್ಲಿಗೆ ಬಂದ ವಯಸ್ಸಾದ ವ್ಯಕ್ತಿಯೊಬ್ಬರು 'ಇಲ್ಲಿ ಲಕ್ಷ್ಮಣ ಫಲ ಸಿಗುತ್ತಾ'? ಎಂದು ಕೇಳಿಕೊಂಡು ಅಂಗಡಿ ಮುಂದೆ ಬಂದು ನಿಂತರು.[ನಗುತ್ತಾ,ನಗಿಸುತ್ತಿದ್ದರೆ ಹೃದಯ ಆರೋಗ್ಯ ನಿಮ್ಮಂತೆ ಹಸನ್ಮುಖಿ]

ಆ ವ್ಯಕ್ತಿಯ ಹೆಸರೇ ಶಾಂತ ಮಲೇಗೌಡ. 70 ವರ್ಷದವರಾದ ಇವರು ಪ್ರಸ್ತುತ ಇರುವುದು ಬೆಂಗಳೂರಿನ ದೇವರ ಚಿಕ್ಕನಹಳ್ಳಿಯಲ್ಲಿ. ಇವರು 'ಸರ್ ಲಕ್ಷ್ಮಣ ಫಲ ಸಿಗುತ್ತಾ ಎಂದು ಕೇಳಿದರು. ಅವರು ಇಲ್ಲ ಎಂದು ಉತ್ತರಿಸಿದರು. ಮತ್ತೆ ಎಲ್ಲಿ ಸಿಗುತ್ತೆ ಎಂದು ಕೇಳಿದರು. ಇಲ್ಲಿ ಸಿಗುವುದಿಲ್ಲ ಎಂದು ಹೇಳಿದರು. ಹೀಗೆ ಇವರ ಮತ್ತೆ ಮಾರಾಟಗಾರರ ನಡುವೆ ಮಾತನಾಡುತ್ತಿರುವಾಗ, 'ನೆನ್ನೆ ಟಿವಿಯಲ್ಲಿ ಲಕ್ಷ್ಮಣ ಫಲ ಸಿಗುತ್ತದೆ ಎಂದು ಹೇಳಿದ್ರು ಅದಕ್ಕೆ ಬಂದೆ' ಎಂದು ನಾನು ಅಭಿಪ್ರಾಯ ಸಂಗ್ರಹಿಸಲು ಮಾತನಾಡಿಸಿದಾಗ ತೀರಾ ಹತ್ತಿರದ ಸಂಬಂಧಿಯಂತೆ ನನ್ನೊಂದಿಗೆ ಸಲೀಸಾಗಿ ಮಾತನಾಡಲು ಶುರುವಿಟ್ಟರು.

ನೋಡಮ್ಮ, 'ನನ್ನ ಹೆಂಡತಿಗೆ ಕ್ಯಾನ್ಸರ್ ಇದೆ. ಲಕ್ಷ್ಮಣ ಫಲ ತಿಂದರೆ ಕ್ಯಾನ್ಸರ್ ಕಡಿಮೆಯಾಗುತ್ತದೆ. ಇದು ಕ್ಯಾನ್ಸರ್ ಹತೋಟಿಯಲ್ಲಿಡುತ್ತದೆ ಎಂದು ಕೇಳಿದ್ದೆ. ಆದರೆ ಈ ಹಣ್ಣಿನ ಮೇಳದಲ್ಲಿ ಲಕ್ಷ್ಮಣ ಫಲ ಸಿಗಲೇ ಇಲ್ಲ. ತುಂಬಾ ಬೇಸರವಾಗುತ್ತಿದೆ. ನನ್ನ ಹೆಂಡತಿಯ ಸಲುವಾಗಿ ಲಕ್ಷ್ಮಣಫಲವನ್ನೂ ಎಲ್ಲಿಂದಲಾದರೂ ತರಿಸಬೇಕು.

ನನಗೆ ಮೂವರು ಮಕ್ಕಳು. ಇಬ್ಬರೂ ಇಂಜಿನಿಯರಿಂಗ್ ಓದಿ ಲಂಡನ್ ನಲ್ಲಿ ಕೆಲಸದಲ್ಲಿದ್ದಾರೆ. ನಾನು ಬೆಂಗಳೂರಲ್ಲಿ ಇದ್ದೇನೆ. ಎಲ್ಲಾ ಸುಖವಿದೆ ಆದರೆ ನನ್ನ ಹೆಂಡತಿಗೆ ಕ್ಯಾನ್ಸರ್. ಲಕ್ಷ್ಮಣ ಫಲ ಸಿಗುತ್ತೆ ಎಂದು ಬಂದರೆ ಇಲ್ಲಿಯೂ ನಿರಾಸೆ ಎಂದು ಕುಗ್ಗಿದ ದನಿಯಲ್ಲೇ ಮಾತನಾಡಿದರು, ಮುಂದೆ ತೆರಳಿದರು.[ಕಷ್ಟದ ಸೂಜಿಯಿಂದ ಸುಂದರ ಬದುಕು ಹೊಲಿಯುತ್ತಿರುವ ಯಲ್ಲಮ್ಮ]

ಬದುಕಿನ ಹಾದಿಯಲ್ಲೊಂದು ಕೊನೆಯುಂಟು, ಕೊನೆಯಲ್ಲೊಂದು ವಿಶ್ವಾಸವುಂಟು, ವಿಶ್ವಾಸದ ಹಾದಿಯಲಿ ಹಲವು ನೋವುಂಟು, ಆದರೂ ಅದರಲ್ಲೊಂದು ಛಲವುಂಟು, ಮಾತಿನ ಮೌನದಲಿ ಆಶಾವಾದವುಂಟು, ಹಿತವೂ ಉಂಟು.....ಇಲ್ಲಿ ಗಂಡ ಹೆಂಡತಿಯ ಪ್ರೀತಿ ಇದೆ. ಹೆಂಡತಿಯನ್ನು ಬದುಕಿಸುವ ಛಲವಿದೆ, ಮಕ್ಕಳ ಪ್ರೀತಿ ದಕ್ಕುತ್ತಿಲ್ಲ ಎಂಬ ನೋವಿದೆ. ಕೆಲವು ದಿನಗಳಾದರೂ ನನ್ನೊಂದಿಗೆ ನನ್ನ ಹೆಂಡತಿ ಇರುವಳಲ್ಲ ಎಂಬ ಸಮಾಧಾನವಿದೆ. ಈ ಎಲ್ಲಾ ಭಾವ ಶಾಂತೇ ಮಲೇಗೌಡ ಅವರ ಮಾತಿನ ಪ್ರತಿಯೊಂದು ಅಕ್ಷರದಲ್ಲೂ ಬಿಂಬಿತವಾಗುತ್ತಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
This is sad story of a person who came in search of Lakshman phal (fruit) to Lalbagh Fruit mela. He had read that the cancer curing fruit was available in fruit mela. But, unfortunately the phal was not available in the mela. The elderly person's wife is ailing from Cancer. Does anyone know where it is available?
Please Wait while comments are loading...