ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಪಂಗಿರಾಮನಗರದ ಸಿದ್ದಪ್ಪ ಹೋಟೆಲ್ ಅರ್ಧ ಮಸಾಲೆ ದೋಸೆ ಬಗ್ಗೆ ಗೊತ್ತಾ?

|
Google Oneindia Kannada News

ಬೆಂಗಳೂರು, ಜುಲೈ 7: ಅದೊಂದು ದಿನ ಬೆಳ್ಳಂ ಬೆಳಗ್ಗೆ ಮಧುಸೂದನ್ ಫೋನ್ ಮಾಡಿದರು. ತೀರಾ ಬೆಳಗ್ಗೆ ಆರೂವರೆಗೆ ಫೋನ್ ಮಾಡುವಂಥವರಲ್ಲ. ಆದರೂ ಅಷ್ಟು ಹೊತ್ತಿಗೆ ಮಾತನಾಡುವ ಉಮೇದಿ ಏನು ಅಂತ ವಿಚಾರಿಸುವ ಹೊತ್ತಿಗೆ, ಇನ್ನು ಒಂದು ಗಂಟೆಯೊಳಗೆ ಮನೆ ಹತ್ತಿರ ಬನ್ನಿ ಅಂತ ಅಪ್ಪಣೆ ಮಾಡಿ, ಉತ್ತರಕ್ಕೂ ಕಾಯದೆ ಫೋನ್ ಇಟ್ಟುಬಿಟ್ಟರು.

ಸರಿ, ಅವರ ಮನೆ ಹತ್ತಿರಕ್ಕೆ ಹೋಗಿದ್ದಾಯ್ತು. ಏನು ಅಷ್ಟು ಆತುರವಾಗಿ ಕಾಲ್ ಮಾಡಿ, ಬರುವುದಕ್ಕೆ ಹೇಳಿದರಲ್ಲಾ ಅಂತ ಕೇಳಿದ್ದಕ್ಕೆ ಅವರು ಕೊಟ್ಟ ಉತ್ತರ ಸ್ವಲ್ಪ ಸಿಟ್ಟೇ ತರಿಸಿತು. "ನಾವು ಇವತ್ತು ಸಂಪಂಗಿರಾಮನಗರದ ಸಿದ್ದಪ್ಪ ಹೋಟೆಲ್ ಗೆ ಹೋಗ್ತಿದ್ದೀವಿ. ಎಲ್ಲಿಗೆ ಹೋಗ್ತಿದ್ದೀವಿ ಅನ್ನೋದು ಹೇಳಿದರೆ ಲೇಟ್ ಮಾಡಬಹುದು ಅಂತ ಹೇಳಲಿಲ್ಲ" ಎಂದರು.

ಬಾಯಿ ರುಚಿ ತಣಿಸುವ ವಿಜಯಪುರದ ನಾಣಿ ಹೋಟೆಲ್ ನ ತಿಂಡಿ ಮಜಬೂತುಬಾಯಿ ರುಚಿ ತಣಿಸುವ ವಿಜಯಪುರದ ನಾಣಿ ಹೋಟೆಲ್ ನ ತಿಂಡಿ ಮಜಬೂತು

ಅದಾಗಿ ಸ್ವಲ್ಪ ಹೊತ್ತಿಗೆ ಸಂಪಂಗಿರಾಮನಗರದ ಸಣ್ಣ ಮನೆಯಂಥ ಹೋಟೆಲ್ ಮುಂದೆ ನಿಂತಿದ್ದಿವಿ. ಅದಾಗಲೇ ಸಾಕಷ್ಟು ಜನ ಮರದ ಕೆಳಗೆ ಮಾತನಾಡ್ತಾ ನಿಂತಿದ್ದರು. ಮತ್ತೂ ಕೆಲವರು ಬೇರೆ ಊರು- ದೇಶದಿಂದ ಬೆಂಗಳೂರಿಗೆ ಬಂದಿದ್ದವರು ಸಹ ಇದ್ದರು. ಮಧುಸೂದನ್ ರ ಮುಖ ನೋಡಿದೆ.

ಅರ್ಧ ಮಸಾಲೆ ದೋಸೆ ಕೊಡ್ತಾರೆ

ಅರ್ಧ ಮಸಾಲೆ ದೋಸೆ ಕೊಡ್ತಾರೆ

ನೋಡಿದ್ರಾ ಈ ಹೋಟೆಲ್ ಎಷ್ಟು ಫೇಮಸ್ ಎಂದು ಹುಬ್ಬು ಕುಣಿಸುವಂಥ ಮುಖ ಭಾವ ಕಾಣುತ್ತಿತ್ತು. ಒಳಗೆ ಹೋಗಿ ತಿಂಡಿ ತಿನ್ನೋವಾಗ ಕೊಂಕು ಹೇಳಬಹುದಲ್ಲಾ ಅಂದುಕೊಂಡೆ. ಹೋದೆ. ಮಸಾಲೆ ದೋಸೆ ಇಲ್ಲಿ ಬಹಳ ಫೇಮಸ್. ಜತೆಗೆ ತುಪ್ಪದ ಖಾಲಿ, ರೈಸ್ ಬಾತ್ ಕೂಡ ಅಷ್ಟೇ ಫೇಮಸ್. ಇಡ್ಲಿ ಹೇಳುವ ಹಾಗಿದ್ದರೆ ಈಗಲೇ ಹೇಳಿಬಿಡಿ ಅಂತ ಒಬ್ಬರು ಮಾತನಾಡುತ್ತಿದ್ದರು. ಮೂವತ್ತಕ್ಕೂ ಹೆಚ್ಚು ವರ್ಷದಿಂದ ಇರುವ ಈ ಹೋಟೆಲ್ ಗೆ ಪಲಾವ್ ತಿನ್ನೋದಕ್ಕೆ ಅಂತಲೇ ದೂರದ ಬ್ಯಾಟರಾಯನಪುರದಿಂದ ಬರ್ತಿದ್ದೆ ಎಂದು ಒಬ್ಬರು ಹೇಳಿದರು. ಸರಿ ನಮ್ಮ ಆರ್ಡರ್ ಮಸಾಲೆ ದೋಸೆ ಬಂತು. ಇದೇನು ಅರ್ಧವೇ ಇದೆ, ಇನ್ನರ್ಧ ಎಲ್ಲಿ ಅಂತ ಕೇಳಿದೆ.

ವಾರದ ದಿನಗಳಲ್ಲಿ ಬೆಳಗ್ಗೆ ಎಂಟೂವರೆಯಿಂದ ಮಧ್ಯಾಹ್ನ ಹನ್ನೆರಡು

ವಾರದ ದಿನಗಳಲ್ಲಿ ಬೆಳಗ್ಗೆ ಎಂಟೂವರೆಯಿಂದ ಮಧ್ಯಾಹ್ನ ಹನ್ನೆರಡು

ಇಲ್ಲಿ ದೋಸೆ ಕೊಡುವ ವಿಧಾನವೇ ಅದು. ಸಿಕ್ಕಾಪಟ್ಟೆ ಜನ ಬರ್ತಾರೆ. ವಾರದ ದಿನಗಳಲ್ಲಿ ಬೆಳಗ್ಗೆ ಎಂಟೂವರೆಯಿಂದ ಮಧ್ಯಾಹ್ನ ಹನ್ನೆರಡು ಗಂಟೆ, ವಾರದ ಕೊನೆಗಳಲ್ಲಿ ಬೆಳಗ್ಗೆ ಏಳೂವರೆಯಿಂದ ಹನ್ನೊಂದುವರೆ ತನಕ ಇರುತ್ತದೆ. ಎಲ್ಲರಿಗೂ ದೋಸೆ ಸಿಗಬೇಕು ಅನ್ನೋ ಕಾರಣಕ್ಕೆ ಅರ್ಧ ದೋಸೆ ಕೊಡ್ತಾರೆ ಅನ್ನೋ ವಿವರಣೆ ಸಿಕ್ಕಿತು. ವಾರದ ಏಳು ದಿನವೂ ಬೇರೆ ಬೇರೆ ರೈಸ್ ಬಾತ್ ಗಳು ಇರುತ್ತವೆ. ಪಲಾವ್ ಮಾಡುವ ದಿನ ಆ ಸಂಖ್ಯೆ ಒಂದಿಷ್ಟು ಜಾಸ್ತಿಯೇ ಇರುತ್ತದೆ. ಇಡ್ಲಿ, ತುಪ್ಪದ ಖಾಲಿ ದೋಸೆ, ಮಾಮೂಲಿ ಖಾಲಿ ದೋಸೆ, ರೈಸ್ ಬಾತ್ ಇಷ್ಟು ಮಾತ್ರ ಸಿಗುತ್ತವೆ.

ಪುಟ್ಟ ಮನೆಯಂಥ ಹೋಟೆಲ್

ಪುಟ್ಟ ಮನೆಯಂಥ ಹೋಟೆಲ್

ಒಂದು ಸಲಕ್ಕೆ ಇಷ್ಟು ಜನ ಅಂದರೆ ಇಷ್ಟೇ ಜನರನ್ನು ಒಳಗೆ ಬಿಡುತ್ತಾರೆ. ಪುಟ್ಟ ಮನೆಯಂಥ ಹೋಟೆಲ್ ನಲ್ಲಿ ಕೆಲವು ಬೆಂಚ್ ಗಳಿವೆ. ಅದರ ಮೇಲೆ ಕೂತ ಮೇಲೆ ಒಟ್ಟಿಗೆ ತಿಂಡಿಗಳನ್ನು ಮಾಡಿಕೊಂಡು ಬರ್ತಾರೆ. ಇಡ್ಲಿ ಯಾರಿಗೆ, ರೈಸ್ ಬಾತ್ ಯಾರಿಗೆ, ಮಸಾಲೆ ದೋಸೆ, ತುಪ್ಪದ ಖಾಲಿ ಹೀಗೆ ಬಡಿಸಿಕೊಂಡು ಹೋಗ್ತಾರೆ. ಹೆಚ್ಚಿಗೆ ಹೇಳ್ತೀನಿ, ನಾನು ದುಡ್ಡು ಕೊಡ್ತೀನಲ್ಲ ಕೇಳಿದ್ದನ್ನು ಕೊಡಿ ಎಂದೆಲ್ಲ ಮಾತನಾಡಲು ಸಾಧ್ಯವಿಲ್ಲ. ಏಕೆಂದರೆ ಇಲ್ಲಿ ಹೊರಗಿನ ಕೆಲಸದವರು ಇಲ್ಲ. ಜತೆಗೆ ದೊಡ್ಡ ಹೋಟೆಲ್ ನ ಜತೆಗೆ ಸಿದ್ದಪ್ಪ ಹೋಟೆಲ್ ನ ಹೋಲಿಕೆ ಕೂಡ ಮಾಡಲು ಹೋಗಬಾರದು.

ಸ್ವಲ್ಪ ಮುಂಚಿತವಾಗಿಯೇ ಹೋಗುವುದು ಉತ್ತಮ

ಸ್ವಲ್ಪ ಮುಂಚಿತವಾಗಿಯೇ ಹೋಗುವುದು ಉತ್ತಮ

ಸಂಪಂಗಿರಾಮನಗರದ ಸಿದ್ದಪ್ಪ ಹೋಟೆಲಿಗೆ ಸ್ವಲ್ಪ ಮುಂಚಿತವಾಗಿ ಹೋಗುವುದು ಉತ್ತಮ. ಹೋಟೆಲ್ ತುಂಬ ದೊಡ್ಡದಿರಬೇಕು. ತಿಂಡಿಗಳು ಬಗೆಬಗೆಯಾಗಿರಬೇಕು. ಕಾಯುವುದಕ್ಕೆ ನನ್ನಿಂದ ಆಗಲ್ಲ ಅನ್ನೋವಂಥವರಿಗೆ ಸಿದ್ದಪ್ಪ ಹೋಟೆಲ್ ಸೂಕ್ತವಲ್ಲ. ಒಂದು ಕುಟುಂಬದವರು ನಡೆಸುವ ಈ ಹೋಟೆಲ್ ನಲ್ಲಿ ತಿಂಡಿಯ ರುಚಿ ಬಗ್ಗೆ ಬಹಳ ಮಂದಿ ಒಳ್ಳೆ ಮಾತನಾಡುತ್ತಾರೆ. ಅಂತೂ ನನ್ನ ಸ್ನೇಹಿತ ಮಧುಸೂದನ್ ಒಳ್ಳೆ ತಿಂಡಿ ಕೊಡಿಸಿದ ಹೆಮ್ಮೆಯಿಂದ ಸಿದ್ದಪ್ಪ ಹೋಟೆಲ್ ನಿಂದ ಆಚೆ ಬಂದರು. ಮನೆಗೆ ಒಂದಿಷ್ಟು ಪಾರ್ಸಲ್ ಹೇಳಿ, ಗುಂಪಿನಿಂದ ಹೊರಗೆ ಬರುವುದಕ್ಕೆ ನಾನು ಹೆಣಗ್ತಾ ಇದ್ದಿದ್ದನ್ನ ಅವರು ನಗ್ತಾ ನೋಡ್ತಿದ್ದರು.

English summary
Bengaluru's Sampangirama Nagar Siddappa hotel half masala dosa is very famous. Along with that rice bath, kali dosa, ghee kali dosa also very famous. Here is the article about hotel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X