ಡೇವಿಡ್ ಗುಯೆಟ್ಟಾ ಸಂಗೀತ ಸಂಜೆ ಕಾರ್ಯಕ್ರಮ ರದ್ದು

Posted By:
Subscribe to Oneindia Kannada

ಬೆಂಗಳೂರು, ಜನವರಿ 12: ಫ್ರಾನ್ಸ್ ನ ಡಿಜೆ, ಗೀತ ರಚನೆಗಾರ, ಡೇವಿಡ್ ಗುಯೆಟ್ಟಾ ಅವರ ತಂಡದಿಂದ ಗುರುವಾರ (ಜ. 12) ಸಂಜೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಸಂಗೀತ ಸಂಜೆ ರದ್ದಾಗಿದೆ.

ಬೆಂಗಳೂರಿನಲ್ಲಿ ಡಿ. 31ರ ರಾತ್ರಿ ನಡೆದ ವರ್ಷಾಚರಣೆ ವೇಳೆ ನಡೆದ ಲೈಂಗಿಕ ಹಲ್ಲೆ ಪ್ರಕರಣಗಳ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವುದರಿಂದ ಗುರುವಾರ ನಡೆಯಬೇಕಿದ್ದ ಕಾರ್ಯಕ್ರಮವನ್ನು ಅನಿವಾರ್ಯವಾಗಿ ರದ್ದುಪಡಿಸಲಾಗಿದೆ ಎಂದು ಆಯೋಜಕರು ಹೇಳಿದ್ದಾರೆ.

David Guetta's Bengaluru concert cancelled

ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲೇ ಇದೇ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಆಯೋಜಕರು ಹೇಳಿದ್ದಾರಾದರೂ, ಕಾರ್ಯಕ್ರಮ ಯಾವಾಗ ನಡೆಯಲಿದೆ ಎಂಬ ನಿಖರ ಮಾಹಿತಿ ನೀಡಿಲ್ಲ.

ಆದರೆ, ಬೆಂಗಳೂರು ಹೊರತುಪಡಿಸಿ ದೆಹಲಿ, ಮುಂಬೈ, ಹೈದರಾಬಾದ್ ಗಳಲ್ಲಿ ಅವರು ನೀಡಬೇಕಿರುವ ಸಂಗೀತ ಕಾರ್ಯಕ್ರಮಗಳು ಪೂರ್ವ ನಿಯೋಜನೆಯಂತೆ ಜರುಗಲಿವೆ ಎಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ.

ನಾಲ್ಕು ಮಹಾನಗರಿಗಳಲ್ಲಿ ತಮ್ಮ ಸಂಗೀತ ಕಾರ್ಯಕ್ರಮ ನೀಡಲು ಡೇವಿಡ್ ಗುಯೆಟ್ಟಾ ಅವರು ಭಾರತಕ್ಕೆ ಆಗಮಿಸಿದ್ದಾರೆ. ಬೆಂಗಳೂರಿನಲ್ಲಿ ಮೊದಲು ಅವರ ಕಾರ್ಯಕ್ರಮ ಆರಂಭಗೊಂಡು ಆನಂತರ ಕ್ರಮವಾಗಿ, ಮುಂಬೈ, ಹೈದರಾಬಾದ್ ಹಾಗೂ ನವದೆಹಲಿಗಳಲ್ಲಿ ಕಾರ್ಯಕ್ರಮ ನೀಡಬೇಕಿತ್ತು.

ಯಾರೀ ಡೇವಿಡ್ ಗೊಯೆಟ್ಟಾ?

ಫ್ರಾನ್ಸ್ ನ ಡೇವಿಡ್ ಗೊಯೆಟ್ಟಾ ಎಂದರೆ ಯುವಜನರ ನಾಡಿಮಿಡಿತ ಎನ್ನಲಡ್ಡಿಯಿಲ್ಲ. ಡಿಸ್ಕ್ ಜಾಕಿ, ಸಂಗೀತ ರೆಕಾರ್ಡಿಂಗ್ ತಜ್ಞ, ರೀ ಮಿಕ್ಸರ್, ಪಾಪ್ ಸಾಹಿತಿಯಾಗಿ ಅಪಾರ ಜನಮನ್ನಣೆ ಗಳಿಸಿದ್ದಾರೆ.

ಗಮ್ ಪ್ರೊಡಕ್ಷನ್ ಎಂಬ ತಮ್ಮದೇ ಆದ ಸಂಗೀತ ಬ್ಯಾಂಡ್ ಒಂದು ಸ್ಥಾಪಿಸಿರುವ ಇವರು, 2002ರಲ್ಲಿ ಜಸ್ಟ್ ಎ ಲಿಟಲ್ ಮೋರ್ ಲವ್ ಎಂಬ ಮೊಟ್ಟ ಮೊದಲ ಆಲ್ಪಂ ಬಿಡುಗಡೆಗೊಳಿಸಿದ್ದರು. ಅದು ದೊಡ್ಡ ಯಶಸ್ಸನ್ನು ತಂದುಕೊಟ್ಟಿತು.

ಆನಂತರ, 2009ರಲ್ಲಿ ಒನ್ ಲವ್, ಎಂಬ ಮತ್ತೊಂದು ಸೂಪರ್ ಹಿಟ್ ಆಲ್ಪಂ ಕೊಟ್ಟರು. ಆನಂತರ, ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟ ಮತ್ತೊಂದು ಆಲ್ಬಂ ಎಂದರೆ, ನಥಿಂಗ್ ಬಟ್ ದ ಬೀಟ್. ಈ ಆಲ್ಬಂನ ಪ್ರತಿಯೊಂದು ಹಾಡೂ ನೂತನ ಮಾದರಿಯ ಡಿಜೆ ಸಂಗೀತಕ್ಕೆ ನಾಂದಿ ಹಾಡಿತು.

ಈವರೆಗೆ ಗಯೆಟ್ಟಾ ಅವರ ಆಲ್ಬಂಗಳ ಒಟ್ಟಾರೆ 9 ಮಿಲಿಯನ್ ಪ್ರತಿಗಳು, ಬಿಡಿ ಹಾಡುಗಳು ಸುಮಾರು 30 ಮಿಲಿಯನ್ ನಷ್ಟು ಮಾರಾಟವಾಗಿವೆ.

ಈ ಎಲ್ಲಾ ಸಾಧನೆಗಳಿಂದಾಗಿ 2011ರಲ್ಲಿ ಗಯೆಟ್ಟಾ ಅವರು, ವರ್ಷದ ಡಿಜೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

(ಚಿತ್ರಕೃಪೆ: ಟ್ವಿಟರ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
French DJ David Guetta's concert, scheduled here for tonight, has been scrapped with the organisers citing law and order situation.
Please Wait while comments are loading...