ಅಡುಗೆ ಕೆಲಸದವರ ಮಗಳು ಕುಸುಮಾಗೆ ಪಿಯುಸಿಯಲ್ಲಿ ಶೇ 97 ಅಂಕ

Posted By:
Subscribe to Oneindia Kannada

ಬೆಂಗಳೂರು, ಮೇ 13: ಆ ಹೆಣ್ಣುಮಗಳ ಹೆಸರು ಕುಸುಮಾ. ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ (ಪಿಸಿಎಂಬಿ) 584 ಅಂಕ ಪಡೆದಿದ್ದಾರೆ. ಎಂಇಎಸ್ ಮೈನ್ಸ್ ಕಾಲೇಜಿನಲ್ಲಿ ಓದಿರುವ ಆಕೆ ಕಣ್ಣುಗಳೊಳಗೆ ಅದೆಷ್ಟೋ ಕನಸು. ಪಟ್ಟುಬಿಡದೆ ಬೆನ್ನಟ್ಟಿದರೆ ಎಲ್ಲವನ್ನೂ ಕೈಗೆಟುಕಿಸಿಕೊಳ್ಳುವ ಹುಮ್ಮಸ್ಸು.

ಆರ್ಥಿಕವಾಗಿ ತುಂಬ ಅನುಕೂಲಸ್ಥರೇನಲ್ಲದ ಬಾಬು ಹಾಗೂ ಸುಶೀಲಾ ದಂಪತಿಯ ಎರಡನೇ ಮಗಳು ಕುಸುಮಾ. ಬಸವೇಶ್ವರ ನಗರದಲ್ಲಿ ಈ ಯುವತಿಯ ಮನೆ. ತಂದೆ ಅಡುಗೆ ಕೆಲಸ ಮಾಡ್ತಾರೆ. ಅಮ್ಮ ಗೃಹಿಣಿ. ಅಕ್ಕ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ಕುಸುಮಾ ಈ ಸಾಧನೆ ಹಿಂದಿನ ಸ್ಫೂರ್ತಿ, ಶಕ್ತಿಯಾಗಿ ಕಾಣುವುದು ಆಕೆಯ ಸಂಕಲ್ಪ.[ಎಸ್ಸೆಸ್ಸೆಲ್ಸಿ ಫಲಿತಾಂಶ: ಹಳ್ಳಿಹೈದ ಪೂರ್ಣಾನಂದನ ಅಪ್ರತಿಮ ಸಾಧನೆ]

ಎಸ್ಸೆಸ್ಸೆಲ್ಸಿಯಲ್ಲೂ ಶೇ 97ರಷ್ಟು ಅಂಕ ಪಡೆದಿದ್ದ ಕುಸುಮಾಗೆ ಐವತ್ತು-ಅರವತ್ತು ಸಾವಿರ ಫೀ ಕೊಟ್ಟು ದೊಡ್ಡ ಕಾಲೇಜುಗಳಿಗೆ ಹೋಗುವ ಆರ್ಥಿಕ ಚೈತನ್ಯ ಇರಲಿಲ್ಲ. ಜತೆಗೆ ಇಷ್ಟವೂ ಇರಲಿಲ್ಲ. ಅಂಥ ಸನ್ನಿವೇಶದಲ್ಲಿ ಉಳಿದೆಡೆಗಿಂತ ಕಡಿಮೆ ಫೀ ತೆಗೆದುಕೊಂಡು ಪ್ರವೇಶ ನೀಡಿದೆ ಎಂಇಎಸ್ ಮೇನ್ಸ್ ನ ಆಡಳಿತ ಮಂಡಳಿ.

Kusuma

ಇನ್ನು ದ್ವಿತೀಯ ಪಿಯುಸಿ ಟ್ಯೂಷನ್ ಗೆ ಸೇರಬೇಕು ಅಂದುಕೊಂಡಾಗ ಬಾಬು ಅವರಿಗೆ ಆ ಫೀ ಕೊಡುವಷ್ಟು ಚೈತನ್ಯ ಇರಲಿಲ್ಲ. ಆಗ ಎಸಿ ಸ್ಟಡಿ ಸೆಂಟರ್ ಅವರ ಬಳಿ ತಮ್ಮ ಸ್ಥಿತಿಯನ್ನು ಹೇಳಿಕೊಂಡಿದ್ದಾರೆ. ಅಲ್ಲಿಂದಲೂ ಸ್ವಲ್ಪ ಮಟ್ಟಿಗಿನ ವಿನಾಯಿತಿ ಸಿಕ್ಕಿತು ಎಂಬುದನ್ನು ಕುಸುಮಾ ಮನಸಾರೆ ಸ್ಮರಿಸುತ್ತಾರೆ.

ಅಂದಹಾಗೆ, ಕುಸುಮಾ ಪೋಷಕರಿಬ್ಬರೂ ಓದಿದವರಲ್ಲ. ಈ ಅಕ್ಕ-ತಂಗಿ ಕುಟುಂಬದ ಮೊದಲ ಅಕ್ಷರಸ್ಥ ತಲೆಮಾರು. ಏಳನೇ ಕ್ಲಾಸ್ ವರೆಗೆ ಕನ್ನಡ ಮೀಡಿಯಂನಲ್ಲಿ ಓದಿದ ಕುಸುಮಾ, ಆ ನಂತರ ಇಂಗ್ಲಿಷ್ ಮೀಡಿಯಂ ಸೇರಿದ್ದಂತೆ. ಮೊದಮೊದಲಿಗೆ ಪಾಠ-ಪ್ರವಚನಗಳು ಅರ್ಥವೇ ಆಗ್ತಿರಲಿಲ್ಲವಂತೆ.[ಮಂಗಳೂರಿನ ಎಂಡೋಸಲ್ಫಾನ್ ಪೀಡಿತನ ಅಪೂರ್ವ ಸಾಧನೆ]

ಆದರೆ, ಆ ನಂತರ ಇಷ್ಟೆಲ್ಲ ಸಾಧನೆ ಹೇಗೆ ಸಾಧ್ಯವಾಯಿತು ಅಂತ ಕೇಳಿದರೆ, ಸ್ನೇಹಿತೆ-ಸ್ನೇಹಿತರ ಆಯ್ಕೆಯಿಂದ ಎನ್ನುತ್ತಾರೆ. ನಕಾರಾತ್ಮಕ ಆಲೋಚನೆ ಇರುವವರ ಜತೆ ಇದ್ದರೆ ಅದರ ಪರಿಣಾಮ ಆಗುತ್ತದೆ. ಅದ್ದರಿಂದ ಒಳ್ಳೆ ಸ್ನೇಹ ವಲಯ ಸೃಷ್ಟಿಸಿಕೊಳ್ಳಬೇಕು ಎನ್ನುತ್ತಾರೆ.

ಇನ್ನು ಇಷ್ಟೆಲ್ಲ ಮಾರ್ಕ್ಸ್ ತೆಗೆಯೋದಿಕ್ಕೆ ಹೇಗೆ ಓದಿಕೊಳ್ಳಬೇಕು ಅಂದರೆ, ಕಾಲೇಜು-ಟ್ಯೂಷನ್ ನಲ್ಲಿ ಮೊದಲು ಗಮನವಿಟ್ಟು ಪಾಠ ಕೇಳಬೇಕು. ಪರೀಕ್ಷೆ ಶುರುವಾಗುವ ಹೊತ್ತಿಗಾಗಲೇ ಮೂರು ಸಲ ಇಡೀ ಸಿಲೆಬಸ್ ಓದಿ ಮುಗಿಸಿದ್ದೆ. ಇಷ್ಟು ಸಿದ್ಧತೆ ಇದ್ದರೆ ಆತ್ಮವಿಶ್ವಾಸ ಬಹಳ ಚೆನ್ನಾಗಿರುತ್ತದೆ, ಒಳ್ಳೆ ಮಾರ್ಕ್ಸ್ ಕೂಡ ಬರುತ್ತದೆ ಎನ್ನುತ್ತಾರೆ.

ಹಾಗಿದ್ದರೆ ಮುಂದಿನ ಗುರಿಯೇನು ಎಂದು ಕೇಳಿದರೆ, ಹಣಕಾಸಿನ ವಿಚಾರದಲ್ಲಿ ಅಪ್ಪ ಅಷ್ಟು ಅನುಕೂಲಸ್ಥರಲ್ಲ. ಕಳೆದ ವರ್ಷದವರೆಗೆ ಅಕ್ಕ ಊರಿನಲ್ಲೇ ಓದ್ತಿದ್ದಳು. ಈಗ ಇಲ್ಲಿಗೇ ಬಂದಿದ್ದಾಳೆ. ನಾನು ಮೆಡಿಕಲ್ ಮಾಡಬೇಕು ಅನ್ನೋದು ಕುಟುಂಬದ ಎಲ್ಲರ ಆಸೆ. ಆದರೆ ಅಷ್ಟು ದುಡ್ಡು ಹೊಂದಿಸೋದು ಕಷ್ಟ. ಆದ್ದರಿಂದ ಬಿಎಸ್ ಸಿ ಮಾಡು ಅಂದಿದ್ದಾರೆ. ಸಿಇಟಿ ರಿಸಲ್ಟ್ ಗೆ ಕಾಯ್ತಾ ಇದೀನಿ. ಬ್ಯಾಂಕ್ ಸಾಲಕ್ಕೆ ಪ್ರಯತ್ನಿಸುವ ಬಗ್ಗೆ ಕೂಡ ಯೋಚನೆ ಇದೆ. ಒಟ್ಟಿನಲ್ಲಿ ಭವಿಷ್ಯದ ಬಗ್ಗೆ ಅಷ್ಟು ಸ್ಪಷ್ಟವಾಗಿಲ್ಲ.[ಎಸ್ಸೆಸ್ಸೆಲ್ಸಿಯಲ್ಲಿ ಶೇ.100 ಅಂಕ ಪಡೆದ ಈ ಮೂವರಿಗೆ ಅಭಿನಂದನೆ]

ಇಲ್ಲಿವರೆಗೆ ಓದಿದ ನಿಮಗೆ ಆಕೆಯ ಸ್ಥಿತಿಯ ಬಗ್ಗೆ ಗೊತ್ತಾಗಿರುತ್ತದೆ. ಕುಸುಮಾ ಓದಿಗೆ ನೆರವಾಗುವ ಇಚ್ಛೆ ಇದ್ದರೆ ಬ್ಯಾಂಕ್ ಖಾತೆಯ ಮಾಹಿತಿ ಇಂತಿದೆ.

Name : Sushma B

Bank : Vijaya Bank, Chikkabanavar branch.

SB No. : 182601011000555

IFSC : VIJB0001826

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kusuma, cook's daughter from Bengaluru, scores 97 percent in 2nd PUC Science. Here is her success story.
Please Wait while comments are loading...