ಸ್ಟೀಲ್ ಫ್ಲೈ ಓವರ್ ನಿಂದ ತೆರಿಗೆ ಹಣ ಲೂಟಿ : ಎಎಪಿ

Posted By:
Subscribe to Oneindia Kannada

ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಹೋಗುತ್ತಿದೆ. ಇಂತಹ ಸಮಯದಲ್ಲಿ ನಗರಾಭಿವೃದ್ಧಿ ತಜ್ಞರ ಅಭಿಪ್ರಾಯ ಪಡೆದು ಟ್ರಾಫಿಕ್ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ಕಾರ್ಯತಂತ್ರಗಳನ್ನು ರೂಪಿಸುವುದು ಬೆಂಗಳೂರು ಮಾಹಾನಗರ ಪಾಲಿಕೆ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕೆಲಸವಾಗಬೇಕಿತ್ತು.

ಆದರೆ ಇಲ್ಲಿ ಇದ್ದಕ್ಕಿದ್ದಂತೆ ಮಧ್ಯ ಪ್ರವೇಶಿಸಿರುವ ರಾಜ್ಯ ಸರ್ಕಾರ ಇದೀಗ ಹೆಬ್ಬಾಳದಿಂದ ಚಾಲುಕ್ಯ ವೃತ್ತ (ಬಸವೇಶ್ವರ ವೃತ್ತ) ದವರೆಗೂ ಸ್ಟೀಲ್ ಫ್ಲೈಓವರ್ ಅನ್ನು ನಿರ್ಮಿಸಲು ಹೊರಟಿದೆ. ಸುಮಾರು 6 ಕಿ.ಮೀ ಉದ್ದ ಈ ಸ್ಟೀಲ್ ಫ್ಲೈಓವರ್‍ಗಾಗಿ ರಾಜ್ಯ ಸರ್ಕಾರ 1,800 ಕೋಟಿ ರುಪಾಯಿ ಸಾರ್ವಜನಿಕರ ತೆರಿಗೆ ಹಣವನ್ನು ವ್ಯಯ ಮಾಡಲು ಹೊರಟಿದೆ.

ನಗರಾಭಿವೃದ್ಧಿ ತಜ್ಞರಿಂದ ಈ ಕಾಮಗಾರಿಗೆ ಭಾರೀ ವಿರೋಧ ವ್ಯಕ್ತವಾಗಿದ್ದರೂ, ಇದೇ ಕಾಮಗಾರಿಯನ್ನು ನಿರ್ಮಿಸಿಯೇ ತೀರುವಂತೆ ಹೊರಟು ಟೆಂಡರ್ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಿರುವ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಭಾರಿ ಪ್ರಮಾಣದ ತೆರಿಗೆ ಹಣವನ್ನು ಲಪಟಾಯಿಸಲೆಂದೇ ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವಂತೆ ಕಾಣುತ್ತಿದೆ.

Congress plan to Loot Tax Payer's Money in the name of Steel Flyover : AAP

ಯಾವುದೇ ಸಾರಿಗೆ ಸಂಬಂಧಿತ ಕಾಮಗಾರಿಗಳು ಸದಾ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸುವಂತೆ ರೂಪಿತವಾಗಿರಬೇಕು. ಆದರೆ ಸುಮಾರು 1,800 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಹೊರಟಿರುವ ಸ್ಟೀಲ್ ಫ್ಲೈಓವರ್ ನಿಂದ ಇಂತಹ ಯಾವುದೇ ಉದ್ದೇಶ ಸಾಕಾರಗೊಳ್ಳುವುದಿಲ್ಲ.

ಅದಲ್ಲದೆ, ನಗರಾಭಿವೃದ್ಧಿ ತಜ್ಞರೇ ಹೇಳುತ್ತಿರುವಂತೆ ಈ ಸ್ಟೀಲ್ ಫ್ಲೈಓವರ್‍ನಿಂದಾಗಿ ಇದು ಆರಂಭ ಹಾಗೂ ಕೊನೆಗೊಳ್ಳುವ ಸ್ಥಳಗಳಾದ ಹೆಬ್ಬಾಳ ಹಾಗೂ ಚಾಲುಕ್ಯ ವೃತ್ತ (ಬಸವೇಶ್ವರ ವೃತ್ತ)ದಲ್ಲಿ ಟ್ರಾಫಿಕ್ ಪ್ರಮಾಣ ನಿಯಂತ್ರಿಸಲಾಗದಷ್ಟು ಹೆಚ್ಚಲಿದೆ. ಇಂತಹ ಕಾರ್ಯಸಾಧುವಲ್ಲದೆ, ನಿಷ್ಟ್ರಯೋಜಕ ಕಾಮಗಾರಿಯನ್ನು, ಸಾರ್ವಜನಿಕ ಹಣವನ್ನು ದುಂದು ವೆಚ್ಚ ಮಾಡಿ ನಿರ್ಮಿಸಲು ಹೊರಟಿರುವುದನ್ನು ಆಮ್ ಆದ್ಮಿ ಪಾರ್ಟಿ-ಕರ್ನಾಟಕ ತೀವ್ರವಾಗಿ ಖಂಡಿಸುತ್ತದೆ.

ಈ ಕಾಮಗಾರಿ ನಿರ್ಮಿಸಲು ವೆಚ್ಚ ಮಾಡಲು ಉದ್ದೇಶಿಸಿರುವ 1,800 ಕೋಟಿ ಹಣದಲ್ಲಿ ಸ್ಟೀಲ್ ಫ್ಲೈ ಓವರ್ ನಿರ್ಮಾಣದಿಂದ ಕೇವಲ ಸುಮಾರು 2 ಲಕ್ಷ ಜನರಿಗಷ್ಟೇ ಪ್ರಯೋಜನವಾಗಲಿದೆ.

ಆದರೆ, ಅದೇ ಹಣದಲ್ಲಿ ಸುಮಾರು 30 ಲಕ್ಷದಷ್ಟು ಜನರಿಗೆ ಪ್ರಯೋಜನವಾಗುವಂತೆ 4000 ಸಾರಿಗೆ ಬಸ್‍ಗಳನ್ನು ರಸ್ತೆಗಿಳಿಸಬಹುದು, ಇಲ್ಲವಾದಲ್ಲಿ ಸುಮಾರು 15 ಲಕ್ಷದಷ್ಟು ಜನರಿಗೆ ಪ್ರಯೋಜನವಾಗಬಲ್ಲ, 300 ಕಿ.ಮೀ. ಉದ್ದದ ಟೆಂಡರ್ ಶ್ಯೂರ್ ಮಾದರಿಯ ಪಾದಚಾರಿ ಮಾರ್ಗವನ್ನು ನಿರ್ಮಿಸಬಹುದು.

ಈ ಕಾಮಗಾರಿ ನಡೆಸಲು ಉದ್ದೇಶಿಸಿರುವ ಜಾಗದ ಸುತ್ತಮುತ್ತಲು ವಾಸಿಸುವ ಜನರೂ ಸ್ಟೀಲ್ ಫ್ಲೈಓವರ್ ನಿರ್ಮಾಣವನ್ನು ವಿರೋಧಿಸುತ್ತಿದ್ದು, ಹೈಕೋರ್ಟಿನಲ್ಲಿ ಕಾಮಗಾರಿಯನ್ನು ನಿಲ್ಲಿಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಿದ್ದಾರೆ.

ಭಾರಿ ಪ್ರಮಾಣದಲ್ಲಿ ಸಾರ್ವಜನಿಕ ಹಣ ಲೂಟಿಗಾಗಿ ಒಂದು ಕಿ.ಮೀಟರ್ ಗೆ ಸುಮಾರು 300 ಕೋಟಿ ಎನ್ನುವಂತೆ 6 ಕಿ.ಮೀಗೆ ಸುಮಾರು 1,800 ಕೋಟಿ ಹಣವನ್ನು ವ್ಯರ್ಥವಾಗಿ ವ್ಯಯಿಸಲಾಗುತ್ತಿದೆ.

ಈ ದುಬಾರಿ ವೆಚ್ಚದ ಕಾಮಗಾರಿಗೆ ಕಾಂಗ್ರೆಸ್ ಸರ್ಕಾರ ಈಗ ಕೈಹಾಕಿರುವುದನ್ನು ನೋಡಿದರೆ, ಮುಂದಿನ ಚುನಾವಣಾ ಪ್ರಚಾರಕ್ಕಾಗಿ ತನ್ನ ಪಕ್ಷದ ಖಾತೆಗೆ ಹಣ ಸೇರಿಸಲು ಪಂಚೆ ಎತ್ತಿ ಕಟ್ಟಿ ನಿಂತಂತಿದೆ. ರಾಜ್ಯ ಸರ್ಕಾರದ ಪ್ರತಿಯೊಂದು ನಡೆಯನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸಲು ನಿರ್ಧರಿಸಿದ್ದಾರೆ.

ಪ್ರಸ್ತುತ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರವನ್ನು ಪುನರ್ ಪರಿಶೀಲಿಸುವ ಅಧಿಕಾರ ಮುಂದಿನ ಚುನಾವಣೆಯಲ್ಲಿ ಆಯ್ಕೆಯಾಗುವ ಸರ್ಕಾರಕ್ಕೆ ಸಂಪೂರ್ಣವಾಗಿ ಇರುತ್ತದೆ. 2018ರಲ್ಲಿ ಆಮ್ ಆದ್ಮಿ ಪಾರ್ಟಿ-ಕರ್ನಾಟಕ ರಾಜ್ಯದಲ್ಲಿ ಅಧಿಕಾರ ಸ್ಥಾಪಿಸಿದ ನಂತರ ಇಡೀ ಕಾಮಗಾರಿ ಆರ್ಥಿಕತೆ ಹಾಗೂ ಅದನ್ನು ಜಾರಿಗೊಳಿಸಲು ನಡೆಸಲಾಗಿರುವ ಎಲ್ಲಾ ಪ್ರಕ್ರಿಯೆಗಳನ್ನು ಪುನರ್ ಪರಿಶೀಲಿಸಿ ಅದರಲ್ಲಿ ಯಾವುದೇ ತಪ್ಪು ಕಂಡುಬಂದರೆ ಕೂಡಲೇ ಇದರಲ್ಲಿ ಭಾಗಿಯಾದ ಪ್ರತಿಯೊಬ್ಬರನ್ನು ಜೈಲಿಗಟ್ಟಲಿದೆ ಎಂದು ಈ ಮೂಲಕ ತಿಳಿಸುತ್ತಿದೆ.

ಈ ನಿಟ್ಟಿನಲ್ಲಿ ಸಿದ್ದರಾಮಯ್ಯನವರು ಈ ಕೂಡಲೇ ಎಚೆತ್ತು ಈ ಕಾಮಗಾರಿಯನ್ನು ಕೈ ಬಿಟ್ಟು ಬೆಂಗಳೂರಿನ ಅಭಿವೃದ್ಧಿಗಾಗಿ ವೈಜ್ಞಾನಿಕವಾಗಿ ಅವಲೋಕಿಸಿ, ಅದರ ಕಾರ್ಯಸಾಧುತನವನ್ನು ಪರಿಶೀಲಿಸಿ, ನಗರಾಭಿವೃದ್ಧಿ ತಜ್ಞರ ಅಭಿಪ್ರಾಯ ಪಡೆದ ನಂತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಆಗ್ರಹಿಸುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
This project costing Rs.1,800 cr. will help, at its best, about 2 lakh commuters, whereas with that same money 4,000 buses can be put on the road, which will benefit 30 lakh commuters and take out around 1 lakh private vehicles off the road or a skywalk can be built -AAP
Please Wait while comments are loading...