ನಂದಿ ಬೆಟ್ಟಕ್ಕೆ ರೈಡಿಂಗ್ ಹೋದರೆ ಬೀಳುತ್ತೆ ಗೂಸಾ!

Posted By: Nayana
Subscribe to Oneindia Kannada
ಹೈವೇಯಲ್ಲಿ ಬರುತ್ತಿದ್ದ ಪ್ರತಿಯೊಬ್ಬ ಬೈಕ್ ಸವಾರನಿಗೆ ನಿಲ್ಲಿಸಿ ಗೂಸಾ | Oneindia Kannada

ಬೆಂಗಳೂರು, ಜನವರಿ 08: ವೀಕೆಂಡ್ ಮತ್ತು ಹಬ್ಬದ ರಜೆ ಬಂದರೆ ಬೆಂಗಳೂರಿನ ಜನರಿಗೆ ನಂದಿಬೆಟ್ಟಕ್ಕೆ ಔಟಿಂಗ್ ಹೋಗೊದಂದ್ರೆ ಪಂಚಪ್ರಾಣ. ಅದರಲ್ಲೂ ಯುವಕ-ಯುವತಿಯರಿಗೆ ಬೈಕ್ ರೈಡಿಂಗ್ ಹೊರಟರೆ ಸ್ವರ್ಗಕ್ಕೆ ಮೂರೇ ಗೇಣು!

ಆದರೆ ಪಡ್ಡೆಗಳ ಬೈಕ್ ರೈಡಿಂಗ್, ವಿಪರೀತ ವೇಗ, ವ್ಹೀಲಿಂಗ್ ನಂತಹ ಅಟಾಟೋಪಗಳಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಜನರು ಬೇಸತ್ತು ಹೋಗಿದ್ದಾರೆ.

ನಂದಿ ಬೆಟ್ಟದ ಮಂಜು, ಸೊಗಸು ಕಾಣುವ ರೋಮಾಂಚಕ ಅನುಭವ

ಹೀಗಾಗಿ ಇನ್ನು ಮುಂದೆ ಡುಕಾಟಿಯಂತಹ ದುಬಾರಿ ಬೈಕ್ ಗಳು, ಬುಲೆಟ್‌ಗಳ ಮೇಲೆ ನಂದಿಬೆಟ್ಟಕ್ಕೆ ಹೊರಟರೆ ಗೂಸಾ ಬೀಳುವುದು ಗ್ಯಾರಂಟಿ. ಬೆಂಗಳೂರಿನಿಂದ ನಂದಿಬೆಟ್ಟಕ್ಕೆ ಹೋಗುವ ಮಾರ್ಗದುದ್ದಕ್ಕೂ ಬೈಕ್ ಹಾವಳಿಯಿಂದ ಕಂಗೆಟ್ಟಿರುವ ಜನರು, ಸಿಕ್ಕಸಿಕ್ಕಲ್ಲೇ ಬೈಕ್ ಸವಾರರನ್ನು ಬಾರಿಸಲು ಆರಂಭಿಸಿದ್ದಾರೆ!

Bike riding not pleasure to Nandi Hills now!

ಇಂತಹುದೊಂದು ಘಟನೆ ಭಾನುವಾರ ಬುಲ್ಲಳ್ಳಿ ಕ್ರಾಸ್‌ನಲ್ಲಿ ನಡೆದಿದೆ. ಭಾರಿ ದುಬಾರಿ ಮೌಲ್ಯದ ಬೈಕ್ ಮೇಲೆ ಹೊರಟಿದ್ದ ಯುವಕನೊಬ್ಬ ವಿಪರೀತ ವೇಗದಿಂದ ಸಮತೋಲನ ಕಳೆದುಕೊಂಡು 11 ವರ್ಷದ ಬಾಲಕಿಗೆ ಡಿಕ್ಕಿ ಹೊಡೆದಿದ್ದಾನೆ. ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಡಿಕ್ಕಿ ಹೊಡೆದ ಬೈಕ್ ಸವಾರನನ್ನು ರಸ್ತೆ ತುಂಬಾ ಓಡಾಡಿಸಿ ಮನಬಂದಂತೆ ಬಾರಿಸಿದ್ದಾರೆ. ಅಷ್ಟೇ ಅಲ್ಲ, ಲಕ್ಷಾಂತರ ಮೌಲ್ಯದ ಬೈಕ್ ನ್ನು ಕಲ್ಲಿನಿಂದ ಜಜ್ಜಿ ಚಿಂದಿ ಉಡಾಯಿಸಿದ್ದಾರೆ.

ವಿಷಯ ಇಷ್ಟಕ್ಕೆ ಮುಗಿದಿಲ್ಲ. ಇದೇ ಮಾರ್ಗದಲ್ಲಿ ನಂದಿಬೆಟ್ಟಕ್ಕೆ ಹೊರಟಿದ್ದ ಬೈಕ್ ಗಳನ್ನು ನಿಲ್ಲಿಸಿ, ಧ್ವಂಸಗೊಳಿಸಿ, ಸವಾರರನ್ನು ಥಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಂದಿಬೆಟ್ಟಕ್ಕೆ ಹೋಗುವ ಬೈಕ್ ಸವಾರರ ಅಟಾಟೋಪದಿಂದ ಮಡುಗುಗಟ್ಟಿದ್ದ ಸಾರ್ವಜನಿಕರ ಆಕ್ರೋಶ ಸ್ಪೋಟಗೊಂಡಿದೆ.

ಕೆಲ ಗಂಟೆಗಳ ಕಾಲ ಶವ ಇಟ್ಟು ಪ್ರತಿಭಟನೆ ಮಾಡಿದ್ದ ಸ್ಥಳೀಯರು ಹೆದ್ದಾರಿಯನ್ನೇ ಬಂದ್ ಮಾಡಿದ್ದರು. ಇದರಿಂದ ಬೈಕ್ ಗಳು ಮಾತ್ರವಲ್ಲ, ಇತರೆ ವಾಹನಗಳು ಕೂಡ ನಂದಿಬೆಟ್ಟ ತಲುಪಲು ಕಷ್ಟವಾಯಿತು.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇನ್ನು ಮುಂದೆ ಬೈಕ್ ಮೇಲೆ ನಂದಿಬೆಟ್ಟ ಹೋಗುವವರು ಒಂದಲ್ಲ, ಹತ್ತು ಸಲ ಯೋಚಿಸುವಂತಾಗಿದೆ. ಅದರಲ್ಲೂ ಡೆಕೊರೇಟ್ ಆದ, ವಿಪರೀತ ವೇಗ ಹಾಗ ಶಬ್ದ ಮಾಡುವ ಬೈಕ್ ಗಳನ್ನು ತೆಗೆದುಕೊಂಡು ಹೋದರೆ ದಾರಿಯುದ್ದಕ್ಕೂ ಸಾರ್ವಜನಿಕರು ಸುಮ್ಮನಿರುವುದು ಅನುಮಾನ.

ಹೀಗಾಗಿ ಬೆಂಗಳೂರಿನ ಪಡ್ಡೆಗಳು ಬೈಕ್ ಮೇಲೆ ನಂದಿಬೆಟ್ಟಕ್ಕೆ ಹೋಗುವುದಾದರೆ ಹೇಗೆ ಹೋದರೆ ಕ್ಷೇಮ ಎಂಬುದನ್ನು ಅವರೇ ನಿರ್ಧರಿಸಬೇಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Recent road accident near Bullal cross has made tough ride to Nandi Hills as the bike hit 11 years old and claimed her life. After this incident, localities were started attacking bike riders in the highway.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ