ಬೀದರ್‌ನ ಈ ಬಾಲಕನ ಜೀವ ದಾನಿಗಳ ಕೈಯಲ್ಲಿದೆ

Posted By:
Subscribe to Oneindia Kannada

ಬೀದರ/ಬೆಂಗಳೂರು, ಜೂನ್ 27 : ಆತ ಎಲ್ಲ ಹುಡುಗರಂತೆಯೇ ತುಂಟ. ಓದುವುದೆಂದರೆ ಬಲು ಬೇಜಾರು, ಆಟವೆಂದರೆ ಜೋರು. ಬೀದರ ಜಿಲ್ಲೆಯ ಗಡೇಲ್ಗಾಂವ್ ಹಳ್ಳಿಯಲ್ಲಿ ರೈತನಾಗಿರುವ ಆತನ ತಂದೆ ಮತ್ತು ದಿನಗೂಲಿ ಕೆಲಸ ಮಾಡುತ್ತಿರುವ ತಾಯಿ ಆತನ ಆಟಪಾಟದ ಬಗ್ಗೆ ಎಂದೂ ತಲೆಕೆಡಿಸಿಕೊಂಡಿಲ್ಲ. ಕಡು ಬಡವರಾದರೂ ಅವರದು ಸುಖೀ ಸಂಸಾರ.

ಈ ಸುಖೀ ಸಂಸಾರದ ಮೇಲೆ ಈಗ ಬರಸಿಡಿಲು ಬಂದೆರಗಿದೆ. ತಂದೆ ರೈತ ವಿಠಲ ಮತ್ತು ತಾಯಿ ಸುನೀತಾ ಮುಖದಲ್ಲಿನ ಆ ನಿಷ್ಕಲ್ಮಶ ನಗು ಮಾಯವಾಗಿದೆ. ಪಾಠಕ್ಕೆ ಚಕ್ಕರ್ ಹಾಕಿ ಸ್ನೇಹಿತರೊಂದಿಗೆ ಆಟದಲ್ಲಿ ತಲ್ಲೀನನಾಗಿರುತ್ತಿದ್ದ 13 ವರ್ಷದ ಅಕ್ಷಯ್ ಕುಮಾರ್ ಮುಖ ವಿವರ್ಣವಾಗಿದೆ. ಅಕ್ಷಯ್‌ಗೆ ರಕ್ತ ಕ್ಯಾನ್ಸರ್! ಆತ ಬಳಲುತ್ತಿರುವುದು acute myeloid leukemia ರೋಗದಿಂದ.

ಒಂದು ದಿನ ಶಾಲೆಯ ಮಾಸ್ತರಿಂದ ವಿಠಲನಿಗೆ ಫೋನ್ ಬಂದಿತ್ತು. ಅಕ್ಷಯ್ ಮೂಗಿನಿಂದ ಒಂದೇ ಸವನೆ ರಕ್ತ ಹರಿಯುತ್ತಿದೆ ಎಂದು ಅವರು ತಿಳಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ತಂದೆತಾಯಿಯರಿಬ್ಬರು, ಏನಾಯ್ತಪ್ಪಾ ಮಗನಿಗೆ ಅಂತ ಉಸಿರು ಬಿಗಿಹಿಡಿದು ಶಾಲೆಗೆ ಓಡಿದ್ದಾರೆ. ಶಾಲೆ ಮುಟ್ಟುವವರೆಗೂ ಮತ್ತು ಮನೆಗೆ ಕರೆದುಕೊಂಡು ಬಂದ ಮೇಲೆ ಇಡೀ ರಾತ್ರಿ ಸುನೀತಾ ದೇವರಲ್ಲಿ ಪ್ರಾರ್ಥಿಸುತ್ತಲೇ ಇದ್ದರು, 'ತನ್ನ ಮಗನಿಗೆ ಏನೂ ಆಗದಿರಲಪ್ಪಾ ದೇವರೇ' ಎಂದು. [ಕ್ಯಾನ್ಸರ್ ವಿರುದ್ಧ ಸಹೋದರನ ಸವಾಲ್!]

Bidar boy suffering from blood cancer, needs helping hand

ಬೆಳಗಾಗುತ್ತಲೇ ಎದ್ದುಬಿದ್ದು ಮಗನೊಂದಿಗೆ ಸೊಲ್ಲಾಪುರದ ಆಸ್ಪತ್ರೆಯೊಂದಕ್ಕೆ ತೆರಳಿದ್ದಾರೆ. ಪ್ರಾಥಮಿಕ ವಿಚಾರಣೆ ನಡೆಸಿದ ವೈದ್ಯರು, ಅಕ್ಷಯ್ ಸ್ಥಿತಿ ಗಂಭೀರವಾಗಿದ್ದು, ಕನಿಷ್ಠ ಎರಡು ಲಕ್ಷ ರು. ಇಟ್ಟುಕೊಂಡು ಆತನನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕೆಂದು ಹೇಳಿದ್ದಾರೆ. ಹಿಂದೆಮುಂದೆ ನೋಡದೆ ತನ್ನೆರಡೆಕರೆ ಜಮೀನನ್ನು ಒತ್ತೆಯಿಟ್ಟು ಎರಡು ಲಕ್ಷ ರು.ಗಳೊಂದಿಗೆ ಬೆಂಗಳೂರಿಗೆ ಬಂದಿದ್ದಾರೆ.

ಅಲ್ಲಿ ವೈದ್ಯರು ಕೆಮೋಥೆರಪಿ ಆರಂಭಿಸಿದ್ದಾರೆ. ಅಕ್ಷಯ್ ಪೂರ್ತಿ ಗುಣಮುಖನಾಗಬೇಕಿದ್ದರೆ ಮೂಳೆ ಮಜ್ಜೆಯ (bone marrow) ಬದಲಾವಣೆ ಆಗಲೇಬೇಕು ಎಂದು ವೈದ್ಯರು ಸೂಚಿಸಿದ್ದಾರೆ. ಕುಟುಂಬದಲ್ಲಿಯೇ ದಾನಿಯನ್ನು ಹುಡುಕಲಾಗಿ, ಅದೃಷ್ಟವಶಾತ್ ಅಕ್ಷಯ್ ಅಣ್ಣ ಕೀರ್ತಿ ಕುಮಾರ್‌ನ ರಕ್ತವೇ ಹೊಂದಾಣಿಕೆಯಾಗಿದೆ. ಆದರೆ, ಮೂಳೆ ಮಜ್ಜೆ ಬದಲಾವಣೆಗೆ ತಲಗುವ ವೆಚ್ಚ ಕೇಳಿ, ಅಕ್ಷಯ್ ತಂದೆತಾಯಿಯ ಕೆಳಗಿನ ನೆಲವೇ ಬಿರಿದಂತಾಗಿದೆ. ಮೂಳೆ ಮಜ್ಜೆಯ ಬದಲಾವಣೆಗೆ ಬೇಕಿದ್ದುದು 12 ಲಕ್ಷ ರು. ಮತ್ತು ನಂತರದ ಚಿಕಿತ್ಸೆಗೆ ಕನಿಷ್ಠ 2ರಿಂದ 3 ಲಕ್ಷ ರು. ಏನು ಮಾಡಬೇಕೆಂದು ತೋಚದೆ ಕಂಗಾಲಾಗಿದ್ದಾರೆ. [ಮಾರಣಾಂತಿಕ ಕ್ಯಾನ್ಸರ್ ಮೆಟ್ಟಿನಿಂತ ಹಿರಿಯಜ್ಜನ ಯಶೋಗಾಥೆ]

Bidar boy suffering from blood cancer, needs helping hand

ಪರಿಸ್ಥಿತಿಯನ್ನು ಅರಿತ ವಿಠಲದ ಮೊದಲ ಮಗ ಓದನ್ನು ಬಿಟ್ಟು ದಿನಗೂಲಿ ನೌಕರಿಗಿಳಿದಿದ್ದಾನೆ. ಅಕ್ಕನೂ ಅನ್ಯ ದಾರಿಯಿಲ್ಲದೆ ಕಾಲೇಜನ್ನು ಬಿಟ್ಟಿದ್ದಾಳೆ. ಅಕ್ಷಯ್ ಅಣ್ಣನಾದರೂ ಗಳಿಸುವ ಹಣ ಎಷ್ಟು ದಿನಕ್ಕೆ ಆದೀತು? ಬೇರೆ ದಾರಿ ಇಲ್ಲದೆ, ವಿಠಲ ಜನರಿಂದ ಸಹಾಯ ಬೇಕೆಂದು ಕೋರಿದ್ದಾರೆ. "ನನ್ನ ಇಡೀ ಜೀವನ ಭೂತಾಯಿಯ ಸೇವೆಗಾಗಿ ಮೀಸಲಿಟ್ಟೆ. ಈಗ ಆಕೆಯೇ ನನಗೆ ದಾರಿ ತೋರಿಸುತ್ತಾಳೆ" ಎಂದು ವಿಠಲ ಗದ್ಗಿತರಾಗುತ್ತಾರೆ.

ಆಟಪಾಟ ಕನಸುಗಳಲ್ಲಿ ಮಜವಾಗಿ ಕಾಲ ಕಳೆಯುತ್ತಿದ್ದ ಅಕ್ಷಯ್‌ಗೆ ಇರುವುದು ಈಗ ಒಂದೇ ಕನಸು. ಅದು, ಮತ್ತೊಂದು ಬೆಳಗನ್ನು ನೋಡುವುದು ಮತ್ತು ತನ್ನ ಕುಟುಂಬದವರೊಡನೆ ಇರುವುದು. ಆತ, ಮತ್ತೊಂದು ಮುಂಜಾವನ್ನು ಕಾಣಬೇಕಿದ್ದರೆ ಧಾರಾಳಿ ದಾನಿಗಳಿಂದ ಕೂಡಲೆ ಸಹಾಯಹಸ್ತ ಬೇಕಾಗಿದೆ.

ಮಿಲಾಪ್ ವೆಬ್ ಸೈಟಿನಲ್ಲಿ ಅಕ್ಷಯ್‌ನ ಹೃದಯವಿದ್ರಾವಕ ಕಥೆಯ ಜೊತೆಗೆ ಆತನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಾದ ಡಾ. ಸುನೀಲ್ ಭಟ್ ಅವರ ಪತ್ರವನ್ನೂ ಲಗತ್ತಿಸಲಾಗಿದೆ. ಅದರಲ್ಲಿ ಆತನ ಸ್ಥಿತಿ ಮತ್ತು ಚಿಕಿತ್ಸೆಗಾಗಿ ತಗಲುವ ವೆಚ್ಚಗಳ ಬಗ್ಗೆ ಬರೆದಿದ್ದಾರೆ.

ಈಗಾಗಲೆ 9 ಲಕ್ಷ ರು.ನಷ್ಟು ಹಣ ಸಂಗ್ರವಾಗಿದೆ. ಅಕ್ಷಯ್ ಚಿಕಿತ್ಸೆಗೆ ದಾನ ನೀಡಬೇಕೆಂಬ ಇಚ್ಛೆ ಇರುವವರು, ಸಕಲ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಸ್ವಇಚ್ಛೆಯಿಂದ ದಾನ ಮಾಡಬಹುದು. ಅದಕ್ಕೆ ಕೊಂಡಿ ಇಲ್ಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 13-year-old boy Akshay Kumar, from Gadlegaon in Bidar district, is diagnosed with Acute Myeloid Leukemia. Admitted to Narayana Hrudalaya in Bengaluru for bone marrow transplantation. His father farmer and mother daily wage worker are looking donor to get his son treated.
Please Wait while comments are loading...