ಬೆಂಗಳೂರಿನ ಸಂಡೇ ಬಜಾರ್: ಇಲ್ಲಿ ಚೌಕಾಸಿ ಗೊತ್ತಿದ್ದವನೇ ಬಾಸ್

By: ಬಾಲರಾಜ್ ತಂತ್ರಿ
Subscribe to Oneindia Kannada

ಐವತ್ತು.. ಐವತ್ತು.. ನೂರಕ್ಕೆ ಮೂರು..ನೂರಕ್ಕೆ ಮೂರು.. ಬಾ ಅಣ್ಣಾ.. ಏನ್ ರೇಟ್ ಕೊಡ್ತೀಯಾ ಹೇಳು.. ವ್ಯಾಪಾರ ಮಾಡೋ ಜಾಗದಲ್ಲಿ ಮುಖ ಯಾಕೆ ಸಿಟ್ ಮಾಡ್ಕೋತೀಯಾ.. ನೀ ಕೇಳೊ ರೇಟಿಗೆ ಪುಟ್ಕೋಸಿನೂ ಬರಾಕಿಲ್ಲಾ.. ಇದೆಲ್ಲಾ ಈ ರಸ್ತೆಯಲ್ಲಿ ವಾರಕ್ಕೊಮ್ಮೆ ನಡೆಯುವ ಸಂತೆಯ ವೇಳೆ, ವ್ಯಾಪಾರಿಗಳು ಆಡೋ ಮಾತು.

ನಗರದ ಕೃಷ್ಣರಾಜೇಂದ್ರ ಮಾರುಕಟ್ಟೆಯಿಂದ ಕೆಂಪೇಗೌಡ ರಸ್ತೆಗೆ (ಮೆಜಿಸ್ಟಿಕ್) ಸಂಪರ್ಕ ಕಲ್ಪಿಸುವ ಜನನಿಬಿಡ ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಪ್ರತೀ ಭಾನುವಾರ ನಡೆಯುವ 'ಸಂಡೇ ಬಜಾರ್' ಅಥವಾ 'ಸೆಕೆಂಡ್ ಹ್ಯಾಂಡ್ ಬಜಾರ್' ವ್ಯಾಪಾರಿಗಳ ಪಾಲಿಗೆ ಸುಗ್ಗಿ. (ಬೆಂಗ್ಳೂರು ಒಂಥರಾ ಫ್ರೂಟ್ ಸಲಾಡ್ ಇದ್ದ ಹಾಗೆ)

ಬಿಬಿಎಂಪಿಯ ಯಾವುದೇ ಆಸರೆಯಿಲ್ಲದೇ, ಪೊಲೀಸ್ ಇಲಾಖೆಯ ಲಿಖಿತ ಅನುಮತಿಯೂ ಇಲ್ಲದೇ, ಸ್ವಚ್ಚತೆಯ ಗೋಜಿಗೂ ಹೋಗದೇ ನಡೆಯುವ ಈ 'ಸಂಡೇ ಬಜಾರ್' ಮಧ್ಯಮವರ್ಗದವರಿಗೆ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಒಂದು ರೀತಿಯ ಸೂಪರ್ ಮಾರ್ಕೆಟ್ ಅಂದರೆ ತಪ್ಪಾಗಲಾರದು.

Bengaluru Sunday Bazar round-up: From bolt to AC, can buy anything in one street

ಸಂಡೇ ಬಜಾರ್ ನಲ್ಲಿ ಮಾರಕಾಸ್ತ್ರಗಳು ದೊರೆತಿದ್ದರಿಂದ ಈ ಮಾರುಕಟ್ಟೆಯನ್ನು 2009ರಲ್ಲಿ ಮುಚ್ಚಲು ಪೊಲೀಸ್ ಇಲಾಖೆ ನಿರ್ಧರಿಸಿತ್ತು. ಆದರೆ, ವ್ಯಾಪಾರಿಗಳ ಪ್ರತಿಭಟನೆ, ರಾಜಕಾರಣಿಗಳ ಆಸರೆಯಿಂದ ಅದು ಇದುವರೆಗೂ ಸಾಧ್ಯವಾಗಿಲ್ಲ. ಪ್ರತೀ ಭಾನುವಾರ ಜೋರಾಗಿ ನಡೆಯುವ ಈ ಬಜಾರ್ ಬಗ್ಗೆ ಯಾರೂ ತುಟಿಕ್ ಪಿಟಿಕ್ ಅನ್ನುತ್ತಿಲ್ಲ.

ಅಪ್ಪಅಮ್ಮ ಬಿಟ್ಟು ಬೇರೆಲ್ಲಾ ಸಿಗುತ್ತೆ ಅನ್ನುವ ಆಡೋ ಮಾತಿನಂತೆ, ಗುಂಡು ಪಿನ್ನಿನಿಂದ ಹಿಡಿದು ಲಿಫ್ಟ್ ಬಿಡಿಭಾಗ ತನಕ ಏನು ಬೇಕು ಎಲ್ಲಾ ಇಲ್ಲಿ ಸಿಗುತ್ತದೆ. ಇಲ್ಲಿ ಇಂತದ್ದು ಸಿಗುವುದಿಲ್ಲ ಎನ್ನುವಂತಿಲ್ಲ, ಆದರೆ ವ್ಯಾಪಾರಿಗಳಿಂದ ಯಾಮಾರಿಸಿಕೊಳ್ಳದಂತೇ ಗ್ರಾಹಕ ಎಚ್ಚರ ವಹಿಸಿಕೊಳ್ಳಬೇಕು ಅಷ್ಟೇ..

ಐದಾರು ವರ್ಷಗಳ ಹಿಂದೆ ಕಂಪೆನಿಯೊಂದರ ಕಿರ್ಲೋಸ್ಕರ್ ಜನರೇಟರಿನ ಮೋಟಾರ್ ದುಡಿದು ದುಡಿದೂ ಸುಸ್ತಾಗಿ ಕೈಕೊಟ್ಟಿತ್ತು. ಡೀಲರುಗಳು ಈ ಬಿಡಿಭಾಗವನ್ನು ದೆಹಲಿ, ಚೆನ್ನೈ, ಮುಂಬೈ, ಪುಣೆಯಲ್ಲಿ ಎಷ್ಟೇ ತಡಕಾಡಿದರೂ ಸಿಗಲಿಲ್ಲ. ಕೊನೆಗೆ ಬೆಂಗಳೂರಿನ ಸಂಡೇ ಬಜಾರಿನಲ್ಲಿ ರಿವೈಂಡೆಡ್ ಮೋಟಾರ್ ಲಭ್ಯವಾಗಿತ್ತು. ಇದು ಈ ಸಂಡೇ ಬಜಾರಿನ ಹೆಗ್ಗಳಿಕೆ.. (ಬೆಂಗಳೂರು ಕೆರೆ ಸಂರಕ್ಷಣೆಗೆ ಅಳಿಲು ಸೇವೆ ನೀಡಿ)

ಗಬ್ಬೆದ್ದು ಹೋಗಿರುವ ರಸ್ತೆ, ನಾರುತ್ತಿರುವ ತಾಜ್ಯಗಳು, ಮೈಮೇಲೆ ಬರುವ ವಾಹನಗಳು, ಒಂದು ಹೆಜ್ಜೆ ಇಡಲೂ ತಡಕಾಡ ಬೇಕಾದ ಪರಿಸ್ಥಿತಿಯಿದ್ದರೂ, ಇದ್ಯಾವುದರ ಪರಿವೆಯೇ ಇಲ್ಲದೇ, ಗ್ರಾಹಕರನ್ನು ಸೆಳೆಯಲು ಸಂಡೇ ಬಜಾರ್ ವ್ಯಾಪಾರಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಾರೆ.

ರೇಟ್ ಎಷ್ಟು ಎಂದು ಬರುವ ಗ್ರಾಹಕನಿಂದ ಏನಾದರೂ ವ್ಯಾಪಾರ ಮಾಡಿಸುವ ತನಕ ಬಿಡದಂತಹ ಸೆಳೆಯುವ ಮಾತುಗಾರಿಕೆಯನ್ನು ಇಲ್ಲಿನ ವ್ಯಾಪಾರಿಗಳು ಕರಗತ ಮಾಡಿಕೊಂಡಿರುತ್ತಾರೆ.

Bengaluru Sunday Bazar round-up: From bolt to AC, can buy anything in one street

ಐವತ್ತು ರೂಪಾಯಿಗೆ ನೈಟಿ, ಟೀಶರ್ಟ್, ನೂರು ರೂಪಾಯಿಗೆ 32GB ಪೆನ್ ಡ್ರೈವ್, ಸಿಎಫ್ಎಲ್ ಬಲ್ಬ್, ಐನೂರು ರೂಪಾಯಿಗೆ ಮಿಕ್ಸಿ, ಎರಡು ಮೂರು ಸಾವಿರ ರೂಪಾಯಿಗೆ ಎಲ್ಇಡಿ ಟಿವಿಗಳು, ಡಬಲ್ ಡೋರ್ ರೆಫ್ರಿಜರೇಟರುಗಳು ಹೀಗೆ ಚಿಲ್ಲರೆ ಮೊತ್ತಕ್ಕೆ ದುಬಾರಿ ವಸ್ತುಗಳು ಇಲ್ಲಿ ಲಭ್ಯವಿರುತ್ತದೆ. ಆದರೆ, ಗ್ಯಾರಂಟಿ ಕೇಳೋ ಹಾಗಿಲ್ಲಾ.. ಬಿಲ್ ಬಗ್ಗೆ ಮಾತಾಡೋ ಹಾಗಿಲ್ಲಾ..

ಪ್ರಮುಖವಾಗಿ ಇಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ಅಲ್ಲೇ ಒಂದು ಬಾರಿ ಡೆಮೋ ತೋರಿಸಿದರೂ, ಮನೆಗೆ ಹೋದಮೇಲೆ ಅದು ಕೈಕೊಡುವ ಉದಾಹರಣೆಗಳೂ ಇವೆ. ಎಲ್ಲಿ ತೆಗೆದುಕೊಂಡಿದ್ದೀವೋ, ಅವನನ್ನು ಹಿಡಿದು ಹಾಕೋಣ ಎಂದರೆ, ಅದೇ ಜಾಗದಲ್ಲಿ ಅವನು ಸಿಗುತ್ತಾನೆ ಎನ್ನುವ ಗ್ಯಾರಂಟಿ ಇರೋದಿಲ್ಲ.

ಇವೆಲ್ಲಾ ವ್ಯಾಪಾರಿಗಳ ನಡುವೆ ಐನೂರು.. ಐನೂರು ಅನ್ಕೊಂಡು ಬ್ರಾಂಡೆಡ್ ಮೊಬೈಲ್ ಫೋನ್ ಗಳನ್ನು ಮಾರಾಟ ಮಾಡುವ ಮಂಗಳಮುಖಿಯರಿಗೂ ಇಲ್ಲಿ ಬರವಿಲ್ಲ, ಆದರೆ ಇವರು ಒಂದು ಜಾಗದಲ್ಲಿ ನಿಂತಲ್ಲಿ, ನಿಲ್ಲೋದಿಲ್ಲಾ ಅನ್ನೋದು ನಿಮಗೆ ಐದೇ ನಿಮಿಷ ಅಲ್ಲಿ ಅಡ್ಡಾಡಿದರೆ ಗೊತ್ತಾಗಿ ಬಿಡುತ್ತೆ.

ಮಚ್ಚು, ಲಾ೦ಗ್, ಆಟಿಕೆಗಳು, ಎಲೆಕ್ಟ್ರಾನಿಕ್ ವಸ್ತುಗಳು, ಗಡಿಯಾರಗಳು, ಫೋಟೋಗಳು, ಚಿತ್ರಗಳು, ನಟ್ಟು, ಬೋಲ್ಟ್, ಬಟ್ಟೆಬರೆಗಳು ಹೀಗೆ ನಾನಾ ರೀತಿಯ ವಸ್ತುಗಳು ಇಲ್ಲಿ ಮಾರಾಟವಾಗುತ್ತದೆ. ಗುಣಮಟ್ಟವಿಲ್ಲದ ಹಳೆಯ ತುಕ್ಕು ಹಿಡಿದ ವಸ್ತುಗಳು ಬೇಕೋ ಅದು ಕೂಡಾ ಇಲ್ಲಿ ತೀರಾ ಕಡಿಮೆ ಬೆಲೆಗೆ ಮಾರಾಟವಾಗುತ್ತದೆ.

ಸರಕಾರಕ್ಕೆ ತೆರಿಗೆ ಕಟ್ಟುವುದನ್ನು ತಪ್ಪಿಸಲು, ಅದರಲ್ಲೂ ಪ್ರಮುಖವಾಗಿ ರೆಡಿಮೇಡ್ ಗಾರ್ಮೆಂಟ್ಸ್ ವಸ್ತುಗಳು ಇಲ್ಲಿ ಹೇರಳವಾಗಿ ಲಭ್ಯವಾಗುತ್ತದೆ. ಜೊತೆಗೆ ಕದ್ದ ಮಾಲುಗಳು ಭರ್ಜರಿಯಾಗಿ ಇಲ್ಲಿ ಸುಳಿದಾಡುತ್ತವೆ. ಮಾಲು ಎಲ್ಲಿಂದ ಇವರಿಗೆ ತಲುಪುತ್ತದೆ ಎನ್ನುವುದು ಮಾತ್ರ ಚಿದಂಬರ ರಹಸ್ಯ. (ಮುಂಗಾರು ಮಳೆ ಎದುರಿಸಲು ಬೆಂಗಳೂರು ಸಿದ್ದವೇ)

Bengaluru Sunday Bazar round-up: From bolt to AC, can buy anything in one street

ರೆಡಿಮೇಡ್ ಗಾರ್ಮೆಂಟ್ಸ್, ದಿಂಬು, ಬೆಡ್ಶೀಟ್, ಪ್ಲಾಸ್ಟಿಕ್ ಸಾಮಾನುಗಳು, ಸುಗಂಧದ್ರವ್ಯಗಳು, ಕಬ್ಬಿಣದ ವಸ್ತುಗಳನ್ನು ಇಲ್ಲಿಂದ ಖರೀದಿಸಿದರೆ ಓಕೆ, ಆದರೆ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವ ಮುನ್ನ ಆಲೋಚಿಸುವುದು ಲೇಸು.

ಒಟ್ಟಿಗೆ ಸಂಡೇ ಬಜಾರಿನಲ್ಲಿ ಖರೀದಿಸಲು ಬರುವ ಗ್ರಾಹಕ ಯಾಮಾರಿಸಿಕೊಳ್ಳದಂತೇ ಮುಂಜಾಗ್ರತೆ ವಹಿಸಿಕೊಳ್ಳಬೇಕು, ಜೊತೆಗೆ ಇಲ್ಲಿ ಚೌಕಾಸಿ ಮಾಡೋಕೆ ಗೊತ್ತಿದ್ದವನೇ ಬಾಸ್.. ಇಲ್ಲಾಂದ್ರೆ ಬರೀ ಲಾಸ್..

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru Sunday Bazar on BVK Iyengar Road : From hair pins to room heaters! Name it and you will find it at the Sunday Bazaar. Customer who has better bargaining skills, will pick it up for sure.
Please Wait while comments are loading...