ಬೆಂಗಳೂರಿಗೆ 'ಪಾಡ್ ಕಾರ್', ಟ್ರಾಫಿಕ್ ನಿಯಂತ್ರಣಕ್ಕೆ ಹೊಸ ತಂತ್ರ

Subscribe to Oneindia Kannada

ಬೆಂಗಳೂರು, ಮೇ 18: ಮೆಟ್ರೋ, ರಿಂಗ್ ರೋಡ್, ಎಲಿವೇಟೆಡ್ ಕಾರಿಡಾರ್, ಸುರಂಗ ರಸ್ತೆ ಮತ್ತು ಇದೀಗ 'ಪಾಡ್ ಕಾರ್'.. ಬೆಂಗಳೂರು ಮಹಾನಗರದ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಹಾಡಲು ಸರಕಾರ ದಿನಕ್ಕೊಂದು ಪರಿಹಾರ ಮುಂದಿಡುತ್ತಿದ್ದು ಇದೀಗ ಪಾಡ್ ಕಾರ್ ಮೊರೆ ಹೋಗಿದೆ.

ರಾಜಧಾನಿಯ ವಾಹನ ದಟ್ಟಣೆಗೆ ಪರಿಹಾರ ನೀಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಪಾಡ್ ಕಾರ್ ಯೋಜನೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಗೆ ಬಿಬಿಎಂಪಿ ಕೈಗೆತ್ತಿಕೊಂಡಿದೆ. ಜತೆಗೆ ಯೋಜನೆಯನ್ನು ತ್ವರಿತವಾಗಿ ಜಾರಿಗೆ ತರಲು ಟೆಂಡರ್ ಕೂಡಾ ಕರೆದಿದೆ.

ಇದೇ ವೇಳೆ ಸ್ಟೀಲ್‌ ಬ್ರಿಡ್ಜ್‌ ಯೋಜನೆ ಕೈತಪ್ಪಿದ ಕಾರಣಕ್ಕೆ ಹಣ ಲೂಟಿ ಹೊಡೆಯಲು ಪಾಡ್‌ ಕಾರ್‌ ಯೋಜನೆಯನ್ನು ಸರಕಾರ ಕೈಗೆತ್ತಿಕೊಂಡಿದೆ ಎಂಬ ಟೀಕೆಯೂ ಕೇಳಿ ಬಂದಿದೆ.

 ಏನಿದು ಪಾಡ್‌ ಕಾರ್‌?

ಏನಿದು ಪಾಡ್‌ ಕಾರ್‌?

5ರಿಂದ 6 ಮಂದಿಯನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ಸಣ್ಣ ಕಾರುಗಳಿವು. ಪರ್ಸನಲ್‌ ರ್‍ಯಾಪಿಡ್‌ ಟ್ರಾನ್ಸಿಟ್‌ (ಪಿಆರ್‌ಟಿ) ಎಂಬುದು ಈ ‘ಪಾಡ್‌ ಕಾರ್‌'ನ ವಿಸ್ತೃತ ರೂಪ. ಇವು ಚಿಕ್ಕ ವಾಹನಗಳಾಗಿದ್ದು ಸ್ವಯಂ ಚಾಲಿತವಾಗಿ ಚಲಿಸುತ್ತವೆ.

ಕಂಬಿ ಕೆಳಗೆ ನೇತಾಡುವಂತೆ ಇವು ಚಲಿಸುತ್ತವೆ. ಗಂಟೆಗೆ ಸರಾಸರಿ 60 ಕಿ.ಮೀ ವೇಗದಲ್ಲಿ ಚಲಿಸುವ ಇವುಗಳಿಗೆ ಅಲ್ಲಲ್ಲಿ ನಿಲ್ದಾಣಗಳನ್ನು ಮಾಡಲಾಗಿರುತ್ತದೆ. ಇಳಿಯುವ ನಿಲ್ದಾಣಗಳನ್ನು ಟಚ್ ಸ್ಕ್ರೀನ್‌ನಲ್ಲಿ ಪ್ರಯಾಣಿಕರಿಗೆ ಆಯ್ಕೆ ಮಾಡಿಕೊಳ್ಳುವ ಅವಕಾಶಗಳಿರುತ್ತವೆ.

ಉದ್ದೇಶವೇನು?

ಉದ್ದೇಶವೇನು?

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಹಾಡುವುದು ಈ ಪಾಡ್ ಕಾರಿನ ಮುಖ್ಯ ಉದ್ದೇಶ. ಜತೆಗೆ ಈಗಾಗಲೇ ಬೆಂಗಳೂರಿನಲ್ಲಿ ಸ್ಥಾಪಿತವಾಗಿರುವ ಮೆಟ್ರೋ ವ್ಯವಸ್ಥೆಗೆ ಪೂರಕವಾಗಿ ಅಂದರೆ ಸಂಪರ್ಕ ರಸ್ತೆಗಳಾಗಿ ಇವು ಕೆಲಸ ಮಾಡಲಿದೆ. ಮೆಟ್ರೋ ರೈಲ್ವೇ ನಿಲ್ದಾಣಗಳಿಗೆ ಸರಿಯಾದ ಸಂಪರ್ಕಗಳಿಲ್ಲದೇ ಇರುವುದರಿಂದ ಇದು ಸಹಾಯಕ್ಕೆ ಬರಲಿದೆ ಎನ್ನಲಾಗಿದೆ.

6-8 ತಿಂಗಳಲ್ಲಿ ಜಾರಿ

6-8 ತಿಂಗಳಲ್ಲಿ ಜಾರಿ

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಮತ್ತು ಮೇಯರ್‌ ಜಿ.ಪದ್ಮಾವತಿ ‘ಪಾಡ್‌ ಕಾರ್‌' ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಸೂಚಿಸಿದ್ದಾರೆ. ಈಗಾಗಲೇ ಜಾಗತಿಕ ಟೆಂಡರ್ ಕೂಡಾ ಕರೆಯಲಾಗಿದೆ. 6-8 ತಿಂಗಳಲ್ಲಿ ಇದರ ಕಾಮಗಾರಿ ಆರಂಭವಾಗಲಿದೆ ಎಂದುಕೊಳ್ಳಲಾಗಿದೆ.

ಪ್ರಾಯೋಗಿಕ ಜಾರಿ

ಪ್ರಾಯೋಗಿಕ ಜಾರಿ

ಈ ಪಾಡ್ ಕಾರ್ ಯೋಜನೆಯನ್ನು ಇಂದಿರಾ ನಗರ ಮತ್ತು ವೈಟ್‌ಫೀಲ್ಡ್‌ ನಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತದೆ. ಇದರ ಯಶಸ್ಸು ನೋಡಿಕೊಂಡು ಇತರ ಸ್ಥಳಗಳಲ್ಲಿ ಯೋಜನೆ ಜಾರಿಗೆ ತರುವುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಈಗಾಗಲೇ ಪಾಡ್ ಕಾರ್ ಯೋಜನೆ ಜಾರಿಗೆ ತರಬಹುದಾದ 35 ಕಿಲೋಮೀಟರ್ ಉದ್ದದ ಒಟ್ಟು 6 ರಸ್ತೆಗಳನ್ನು ಗುರುತಿಸಲಾಗಿದೆ.

ಪರಿಸರಕ್ಕೆ ಯಾವುದೇ ಹಾನಿಯಿಲ್ಲ

ಪರಿಸರಕ್ಕೆ ಯಾವುದೇ ಹಾನಿಯಿಲ್ಲ

ಈ ಪಾಡ್‌ ಕಾರ್‌ ಯೋಜನೆ ಈಗಾಗಲೇ ಮುಂದುವರಿದ ರಾಷ್ಟ್ರಗಳಲ್ಲಿ ಯಶಸ್ವಿಯಾಗಿದೆ ಮತ್ತು ಇದಕ್ಕಾಗಿ ಭೂಸ್ವಾಧೀನ ನಡೆಸುವ, ಮರಗಿಡ ತೆಗೆಯುವ ಅಗತ್ಯವಿಲ್ಲ ಎಂದು ಸರಕಾರ ವಾದಿಸಿದೆ. ರಸ್ತೆ ಮಧ್ಯದ ವಿಭಜಕದಲ್ಲಿ ಪಿಲ್ಲರ್‌ ಮತ್ತು ಕಂಬಿ ಅಳವಡಿಸಿ ಈ ಪಾಡ್ ಕಾರ್ ಯೋಜನೆ ಜಾರಿಗೆ ತರಲಾಗುತ್ತದೆ.

ಇದನ್ನು ಖಾಸಗಿ ಸಂಸ್ಥೆಗಳೇ ವಿನ್ಯಾಸಗೊಳಿಸಿ, ನಿರ್ಮಿಸುವುದಲ್ಲದೆ ನಿರ್ವಹಣೆಯನ್ನೂ ಮಾಡಲಿವೆ. ಇದರಿಂದ ಬಿಬಿಎಂಪಿಗೆ ಯಾವುದೇ ಖರ್ಚು ಇರುವುದಿಲ್ಲ.

 ತಜ್ಞರ ವಿರೋಧ

ತಜ್ಞರ ವಿರೋಧ

ಆದರೆ ಬಿಬಿಎಂಪಿಯ ಈ ಪಾಡ್ ಕಾರ್ ಯೋಜನೆಗೆ ತಜ್ಞರು ವಿರೊಧ ವ್ಯಕ್ತಪಡಿಸಿದ್ದಾರೆ. ಮೊದಲೇ ಬೆಂಗಳೂರಿನ ರಸ್ತೆಗಳು ಕಿರಿದಾಗಿವೆ. ಇದರ ಮಧ್ಯೆ ಮತ್ತೆ ಪಾಡ್ ಕಾರಿಗಾಗಿ ರಸ್ತೆಗಳ ನಡುವೆ ಡಿವೈಡರ್ ನಿರ್ಮಿಸಿದರೆ ರಸ್ತೆ ಮತ್ತಷ್ಟು ಕಿರಿದಾಗುತ್ತದೆ ಎಂದು ಟ್ರಾಫಿಕ್ ಎಂಜಿನಿಯರ್ ಎಸ್ ನರೇಶ್ ಕುಮಾರ್ ಹಾಗೂ ಸಾರಿಗೆ ತಜ್ಞ ಎಂ.ಎನ್ ಶ್ರೀಹರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Bruhat Bengaluru Mahanagara Palike (BBMP) is exploring the concept of a Personal Rapid Transit (PRT) system or Pod Car, which the civic body hopes will address the problem of last-mile connectivity.
Please Wait while comments are loading...