ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಂ.ಕಾಂ ವಿದ್ಯಾರ್ಥಿನಿ, ಜೆಡಿಎಸ್ ಅಭ್ಯರ್ಥಿ ಅಶ್ವಿನಿ ಸಂದರ್ಶನ

By ವನಿತ ವೈ ಜೈನ್
|
Google Oneindia Kannada News

ಬೆಂಗಳೂರು,ಆಗಸ್ಟ್, 18 : ಸ್ನಾತಕೋತ್ತರ ಪದವಿ ಓದುತ್ತಿದ್ದರೂ ದೇಶವೆಂಬ ರಥವನ್ನು ಮುನ್ನಡೆಸುವ ಸಾರಥಿಯಾಗಬೇಕೆಂಬ ಅಭಿಲಾಷೆ ಹೊತ್ತು ಮುನ್ನಡೆದಿದ್ದಾರೆ ಎಂ.ಕಾಂ ವಿದ್ಯಾರ್ಥಿನಿ ಅಶ್ವಿನಿ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆಗೆ ದೀಪಾಂಜಲಿ ವಾರ್ಡ್ (158)ರಿಂದ ಜೆಡಿಎಸ್ ಅಭ್ಯರ್ಥಿಯಾಗಿ ಅಶ್ವಿನಿ ಕಣಕ್ಕಿಳಿದಿದ್ದಾರೆ.

'ಹಿಂದಿನ ಪಕ್ಷದವರು ಯಾವುದೇ ಕಾರ್ಯಗಳನ್ನು ಮಾಡಿಲ್ಲ. ಈ ಎಲ್ಲಾ ಕಾರ್ಯಗಳನ್ನು ನಾನು ಮಾಡುತ್ತೇನೆ. ಇದುವರೆಗೆ ಮನೆ ಮಗಳಾಗಿದ್ದ ನಾನು ವಾರ್ಡಿನ ಮಗಳಾಗುತ್ತೇನೆ' ಎನ್ನುತ್ತಾರೆ ಅಶ್ವಿನಿ. ಚುನಾವಣಾ ಕಣದಲ್ಲಿರುವ ಅತ್ಯಂತ ಕಿರಿಯ ಅಭ್ಯರ್ಥಿ ಅಶ್ವಿನಿ.

ಪಟಪಟನೇ ಮಾತಿನ ಮಳೆಗರೆಯುವ ಆಶ್ವಿನಿಯವರ ಆಂತರ್ಯದ ಮಾತುಗಳೇನು? ಯುವಜನಾಂಗವನ್ನು ಪ್ರತಿನಿಧಿಸುವ ಇವರ ಚಿಂತನೆಗಳೇನು? ಇವರ ಬದುಕಿನ, ಆಲೋಚನಾ ಸುಧೆ ಎಂತದ್ದು ಎಂಬುದನ್ನು ಒನ್ ಇಂಡಿಯಾ ಕನ್ನಡದೊಂದಿಗೆ ಹಂಚಿಕೊಂಡಿದ್ದಾರೆ. ಅಶ್ವಿನಿ ಅವರ ಸಂದರ್ಶನದ ಪೂರ್ಣಪಾಠ ಇಲ್ಲಿದೆ.....[ಬಿಬಿಎಂಪಿ ಎಲೆಕ್ಷನ್ ಎನ್ಎಂಕೆಆರ್ ವಿ ಹುಡುಗಿಯರ ರಿಯಾಕ್ಷನ್]

BBMP election 2015 : interview M.com student Ashwini T JDS candidate in Deepanjali ward

* ವಿದ್ಯಾಭ್ಯಾಸ ಮಾಡುವವರು ರಾಜಕೀಯಕ್ಕೆ ಬಂದಿದ್ದು ಏಕೆ?

ನಾನು ವಿದ್ಯಾಭ್ಯಾಸ ಪಡೆದಿದ್ದೇನೆ. ನನ್ನಲ್ಲಿ ಜ್ಞಾನ ಮತ್ತು ಮಾಹಿತಿ ಎರಡೂ ಇದೆ. ಆದರೆ ನನ್ನ ವಾರ್ಡಿನ ಜನರಲ್ಲಿ ಬೆರಳೆಣಿಕೆ ಮಂದಿ ಮಾತ್ರ ವಿದ್ಯಾವಂತರು. ನನ್ನಲ್ಲಿರುವ ಜ್ಞಾನ ಮತ್ತು ಮಾಹಿತಿಯನ್ನು ಜನರಿಗೆ ಹಂಚುವುದರ ಮೂಲಕ ಜನರ ಹಣವನ್ನು ಜನರೇ ಸರಿಯಾಗಿ ಕೇಳಿ ಉಪಯೋಗಿಸಿಕೊಳ್ಳುವಂತೆ ಮಾಡಬೇಕು. ಹಾಗಾಗಿ ಅವರಿಗೆ ಒಬ್ಬ ಮಾರ್ಗದರ್ಶಕರ ಕೊರತೆ ಇದೆ. ಆ ಸ್ಥಳವನ್ನು ಭರ್ತಿ ಮಾಡಲು ನಾನು ಬಂದಿದ್ದೇನೆ.

* ರಾಜಕೀಯ ಪ್ರವೇಶಿಸಲು ನಿಮಗೆ ಯಾರು ಸ್ಫೂರ್ತಿ?

ನನ್ನ ಅಣ್ಣನೇ ನನ್ನ ಸ್ಫೂರ್ತಿ. ನನ್ನ ದೊಡ್ಡಪ್ಪನ ಮಗ ಜಯಂತ್ ಮೊದಲು ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡವರು. ರಾಜಕೀಯಕ್ಕೆ ಬರಲು ಅವರೇ ನನಗೆ ಸ್ಫೂರ್ತಿ.

ಐಎಎಸ್ ಅಧಿಕಾರಿ ಡಿಕೆ ರವಿ, ಎಪಿಜೆ ಅಬ್ದುಲ್ ಕಲಾಂ ಅವರು ನನ್ನ ಹಾದಿಗೆ ಚೈತನ್ಯ ತುಂಬಿದವರು. ಅವರಂತೆ ಆಗಬೇಕು. ಅವರ ಪ್ರಾಮಾಣಿಕ ಬದುಕಿನಂತೆಯೇ ನನ್ನ ಬದುಕನ್ನು ಪ್ರಾಮಾಣಿಕವಾಗಿ ಜನರ ಸೇವೆಗೆ ಮೀಸಲಿಡಬೇಕು ಎನ್ನುತ್ತಾರೆ ಅಶ್ವಿನಿ.

* ಕುಟುಂಬದವರಿಂದ, ಸ್ನೇಹಿತರಿಂದ ಬೆಂಬಲ ಹೇಗಿದೆ?

ಯಾವುದೇ ರೀತಿಯಲ್ಲಿಯೂ ಭಿನ್ನ ಭಾವ ತೋರದೆ ನನ್ನ ವಾರ್ಡಿನ ಜನರು ತಮ್ಮ ಮಗಳಂತೆ ಕಾಣುತ್ತಿದ್ದಾರೆ. ಇದರಲ್ಲಿ ಅನುಮಾನವೇ ಇಲ್ಲಾ. ಇನ್ನು ನನ್ನ ತುಂಬು ಕುಟುಂಬ ತುಂಬು ಮನಸ್ಸಿನಿಂದಲೇ ಹಾರೈಸುತ್ತಿದೆ. ಇವರ ಸಲಹೆ ಸೂಚನೆಗಳು ಪ್ರತಿದಿನ ನನ್ನ ಗೆಲುವಿನ ನಂಬಿಕೆಯನ್ನು ಗಾಢವಾಗಿ ಬೇರೂರುವಂತೆ ಮಾಡುತ್ತಿದೆ.

ಸ್ನೇಹಿತರು ಮೊದಲು ರಾಜಕೀಯ ಕ್ಷೇತ್ರ ಚೆನ್ನಾಗಿಲ್ಲ. ಆದರೂ ನೀ ಹೋಗುತ್ತಿದ್ದೀಯಾ..ಆದರೆ ಯಾರು ನಿನಗೆ ಕೈ ತೋರಿ ಮಾತನಾಡುವ ಹಾಗೆ ಮಾಡಿಕೊಳ್ಳಬೇಡಿ, ಕೈಮುಗಿದು ಬರಮಾಡಿಕೊಳ್ಳುವಂತೆ ಬದುಕು ಎಂಬ ಶುಭ ಹಾರೈಸಿದರು.

* ನೀವು ನಿಮ್ಮ ವಾರ್ಡ್ ನ್ನು ಯಾವ ರೀತಿಯಲ್ಲಿ ರೂಪಿಸಬೇಕೆಂದು ಬಯಸಿದ್ದೀರಾ?

ನನ್ನ ವಾರ್ಡಿನ ಪರಿಸರ ಸ್ವಲ್ಪವೂ ಶುಚಿಯಾಗಿಲ್ಲ. ಮೊದಲು ಜನರಿಗೆ ಅವರವರ ಸುತ್ತಮುತ್ತಲಿನ ಪರಿಸರ ಶುಚಿಯಾಗಿ ಇಟ್ಟುಕೊಳ್ಳುವುದು ಹೇಗೆ ಎಂದು ಕಲಿಸುತ್ತೇನೆ. ನಮ್ಮ ಮನೆ ಶುಚಿಯಾಗಿದ್ದಲ್ಲಿ ಇಡೀ ಪರಿಸರ ವ್ಯವಸ್ಥೆ ಸರಿಯಾಗಿರುವುದು ಸಾಧ್ಯ.

ಶೌಚಾಲಯ ನಿರ್ಮಾಣ, ಬೀದಿ ದೀಪ, ಚರಂಡಿ ದುರಸ್ತಿ, ವಿದ್ಯಾಭ್ಯಾಸ ಮುಂದುವರೆಸಲು ಸಹಾಯ ಮಾಡುವುದು, ಆರೋಗ್ಯ ಕೇಂದ್ರ ಸ್ಥಾಪನೆ, ಚುನಾವಣಾ ಗುರುತಿನ ಚೀಟಿ, ಪಡಿತರ ಕಾರ್ಡ್ ವಿತರಣೆ, ರಸ್ತೆಗಳ ರಿಪೇರಿ ಮಾಡಿಸುತ್ತೇನೆ ಎನ್ನುತ್ತಲೇ ಬೆಂಗಳೂರು 'ಉದ್ಯಾನ ನಗರಿ' ಹೆಮ್ಮೆಯ ಕಿರೀಟವನ್ನು ಧರಿಸಿಯೇ ಇರುವಂತೆ ಮಾಡುತ್ತೇನೆ. ಬೆಂಗಳೂರನ್ನು Green city, Clean city ಮಾಡುತ್ತೇನೆ ಎಂದು ಹೇಳಿದರು.[ಬೆಂಗಳೂರು ಅಭಿವೃದ್ಧಿ ಮಾಡಿದವರಾರು, ಬನ್ನಿ ಚರ್ಚೆ ಮಾಡೋಣ]

BBMP election 2015 : interview M.com student Ashwini T JDS candidate in Deepanjali ward

* ಯುವ ಪೀಳಿಗೆಗೆ ನಿಮ್ಮ ಸಂದೇಶವೇನು?

ಭ್ರಷ್ಟಾಚಾರದ ಕುರಿತಾಗಿ ಕಾಡು ಹರಟೆ ಮಾತನಾಡುವುದನ್ನು ಬಿಡಿ. ರಾಜಕೀಯದಲ್ಲಿ ಶ್ರಮವಹಿಸಿ ಕೆಲಸ ಮಾಡುವವರು ಬೇಕು. ರಾಜಕೀಯ ವ್ಯಾಪಾರವಲ್ಲ. ನೀಚರ ಪ್ರಪಂಚವಲ್ಲ. ರಾಜಕೀಯದಲ್ಲಿ ಭರವಸೆ ನೀಡುವ ವ್ಯಕ್ತಿಗಳು ಬಹಳ ಮಂದಿ ಇದ್ದಾರೆ. ಆದರೆ ನಮಗೆ ಭರವಸೆ ಈಡೇರಿಸುವವರು ಬೇಕಾಗಿದ್ದಾರೆ.

ಈ ಎಲ್ಲಾ ಚೈತನ್ಯ ಚಿಲುಮೆಗಳು ಯುವಜನಾಂಗದಲ್ಲಿ ಇದೆ. ಬೆಂಗಳೂರು ಒಂದು 'ಮಿನಿ ಭಾರತ'. ಇದನ್ನು ಉದ್ಯಾನ ನಗರಿ ಮಾಡಲು ಎಲ್ಲಾ ಕೈಜೋಡಿಸಿ. ವಿದ್ಯಾವಂತರಾದ ನೀವು ಎಲ್ಲರನ್ನು ವಿದ್ಯಾವಂತರಾಗುವಂತೆ ಮಾಡಲು ಪ್ರಯತ್ನಿಸಿ ಎನ್ನುತ್ತಾ Lets starts by one, It will be a thousand ಎನ್ನುತ್ತಾರೆ. ದೂರುತ್ತಾ ಕೂರುವ ಬದಲು ಸೇವೆ ಮಾಡುತ್ತಾ ಎಲ್ಲರಿಗೂ ಮಾದರಿಯಾಗೋಣ ಎಂದು ಸಂದೇಶ ನೀಡುತ್ತಾರೆ.

* ರಾಜಕೀಯದಲ್ಲಿ ಏನಾದರೂ ಬದಲಾವಣೆ ಬಯಸುತ್ತೀರಾ?

ರಾಜಕೀಯ ಅನ್ನೊದು ಒಂದು ಹಸಿಯಾದ ಮಣ್ಣಿನ ರೀತಿ ಇದೆ. ಅದನ್ನು ತಿದ್ದಿ ತೀಡಿದಾಗ ಮಾತ್ರ ಅದು ಸುಂದರ ಶಿಲ್ಪವಾಗಿ ರೂಪುಗೊಳ್ಳುತ್ತದೆ. ಮಣ್ಣು ಎಂದು ಒಣಗೋದಕ್ಕೆ ಬಿಡಬಾರದು ಅದು ಒಣಗೋದರೊಳಗೆ ಸುಂದರ ಶಿಲ್ಪವಾಗಿ ಮಾಡಿ ಎಲ್ಲರಿಗೂ ಉತ್ತೇಜಕವಾಗುವಂತೆ ಮಾಡಬೇಕು ಎನ್ನುತ್ತಲೇ ರಾಜಕೀಯ ಕ್ಷೇತ್ರದಲ್ಲಿ ಸಂಪೂರ್ಣ ಬದಲಾವಣೆ ಬೇಕಿದೆ. ರಾಜಕೀಯದಲ್ಲಿ ಕೆಲವು ಬದಲಾವಣೆ ತಂದು Model of India ಮಾಡುತ್ತೇನೆ ಎನ್ನುತ್ತಾರೆ ಅಶ್ವಿನಿ.

* ವೈಯಕ್ತಿಕ ಬದುಕಿನ ಚಿತ್ರಣ

ಮೂಲತಃ ಬೆಂಗಳೂರಿನವರಾದ ಇವರು ತುಂಬು ಕುಟುಂಬದ ಮಗಳು. ಇವರು ಇಬ್ಬರು ಅಣ್ಣ ಮತ್ತು ಅತ್ತಿಗೆಯವರೊಂದಿಗೆ, ಅಮ್ಮನೊಂದಿಗೆ ತಮ್ಮ ಬಾಳನ್ನು ಸಾಗಿಸುತ್ತಿದ್ದಾರೆ.

English summary
Ashwini T, an M.Com student, who is the youngest contestant from 158-ward, Deepanjalinagar on JD(S) ticket. Talking about politics, she said, "Politics is not considered good but I believe that not all the politicians are corrupt. I want to be a politician with a clear image".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X