ಅರಳುಮಲ್ಲಿಗೆ ಪ್ರತಿಷ್ಠಾನದಿಂದ ವಿಶಿಷ್ಟ ದಾಸಸಾಹಿತ್ಯೋತ್ಸವ

Posted By:
Subscribe to Oneindia Kannada

ಬೆಂಗಳೂರು, ಜನವರಿ 20: "ಅರಳುಮಲ್ಲಿಗೆ ಪ್ರತಿಷ್ಠಾನ" ಸಂಸ್ಥೆಯು ಗಣರಾಜ್ಯೋತ್ಸವ ದಿನವಾದ ಜನವರಿ 26ರಂದು ಗುರುವಾರ ಸಂಜೆ 4 ಘಂಟೆಗೆ ನಗರದ ಗಾಯನ ಸಮಾಜದ ನವೀಕೃತ ಸಭಾಂಗಣದಲ್ಲಿ ವಿಶಿಷ್ಟವಾದ ದಾಸಸಾಹಿತ್ಯ ಉತ್ಸವವನ್ನು ಏರ್ಪಡಿಸಿದೆ. ಪುರಂದರದಾಸರ ಆರಾಧನಾ ಪ್ರಯುಕ್ತ ನಡೆಯಲಿರುವ ಈ ಸಮಾರಂಭದಲ್ಲಿ ರಾಷ್ಟ್ರೀಯ ಸನ್ಮಾನ ಹಾಗೂ ಅಪೂರ್ವ ಗ್ರಂಥಗಳ ಬಿಡುಗಡೆ ಕಾರ್ಯಕ್ರಮವನ್ನು ಅಯೋಜಿಸಲಾಗಿದೆ.

ಭಾವಿ ಪರ್ಯಾಯ ಪೀಠವೇರಲಿರುವ ಉಡುಪಿಯ ಫಲಿಮಾರು ಪೀಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿರುವ ಈ ದಾಸಸಾಹಿತ್ಯೋತ್ಸವ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ವಿದ್ವಾನ್ ಆರ್.ಕೆ.ಪದ್ಮನಾಭ, ಶಾಸಕರಾದ ರವಿ ಸುಬ್ರಹ್ಮಣ್ಯ ಹಾಗೂ ಪ್ರಸನ್ನಕುಮಾರ್, ನಿರ್ಮಾಣ್ ಸಂಸ್ಥೆಯ ನೇತಾರರಾದ ವಿ.ಲಕ್ಷ್ಮೀನಾರಾಯಣ್, ಡಾ|| ಎಂ. ಆರ್. ವಿ. ಪ್ರಸಾದ್, ಶ್ರೀನಿವಾಸರಾವ್ ಕಸಬೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ದಾಸವಾಣಿ ಖ್ಯಾತಿಯ ಶಶಿಧರ ಕೋಟೆ ಅವರಿಂದ ವಿಶೇಷ ಭಕ್ತಿಗಾಯನ ಕಾರ್ಯಕ್ರಮವಿದೆ.

ರಾಜ್ಯದ ಗ್ರಾಮೀಣ ಭಾಗದಲ್ಲಿ ವ್ಯಾಪಕವಾಗಿ ಭಜನ ಆಂದೋಲನ ಮಾಡಿರುವ ಹರಿದಾಸ ಸಂಘದ ಸಂಸ್ಥಾಪಕರೂ, ಖ್ಯಾತ ಪ್ರವಚನಕಾರರೂ ಆದ ಹರಾ ನಾಗರಾಜಾಚಾರ್ಯರಿಗೆ ಇಂಡಿಯನ್ ಪೀಸ್ ಯೂನಿವರ್ಸಿಟಿಯು ಗೌರವ ಡಾಕ್ಟರೇಟ್ ಪದವಿ ನೀಡಿರುವ ಸಂದರ್ಭದಲ್ಲಿ ಶ್ರೀಯುತರಿಗೆ ರಾಷ್ಟ್ರೀಯ ಸನ್ಮಾನ ಕಾರ್ಯಕ್ರಮವನ್ನು ಅರಳುಮಲ್ಲಿಗೆ ಪ್ರತಿಷ್ಠಾನ ವ್ಯವಸ್ಥೆ ಮಾಡಿದೆ.

ಹರಿದಾಸ ಗ್ರಂಥ ಲೋಕಾರ್ಪಣೆ

ಹರಿದಾಸ ಗ್ರಂಥ ಲೋಕಾರ್ಪಣೆ

ಈಗಾಗಲೇ ಐವತ್ನಾಲ್ಕು ಹರಿದಾಸ ಗ್ರಂಥಗಳನ್ನು ಸಮಾಜಕ್ಕೆ ನೀಡಿ, ಜಗತ್ತಿನ ನಾನಾ ರಾಷ್ಟ್ರಗಳಲ್ಲಿ ಅತ್ಯಂತ ಪ್ರಭಾವಪೂರ್ಣವಾಗಿ ದಾಸಸಾಹಿತ್ಯ ಪ್ರಚಾರ ಮಾಡಿ ಬಂದಿರುವ ಅಂತರರಾಷ್ಟ್ರೀಯ ಖ್ಯಾತಿಯ ಹರಿದಾಸ ವಿದ್ವಾಂಸರಾದ ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿಯವರಿಂದ ರಚಿತವಾದ "ಪಾರ್ಥಸಾರಥಿ ವಿಠಲದಾಸರ ಸಹಸ್ರಾರು ಕೀರ್ತನೆಗಳು" ಎಂಬ ಏಳು ನೂರು ಪುಟಗಳ ಗ್ರಂಥ ಹಾಗೂ ಒಂದು ಸಾವಿರದ ಒಂಭೈನೂರು ಪುಟಗಳ ಉದ್ಗ್ರಂಥ "ಹರಿದಾಸರ ಹತ್ತುಸಾವಿರ ಹಾಡುಗಳು" ಕೃತಿಯ ನಾಲ್ಕನೆಯ ಆವೃತ್ತಿಯ ಲೋಕಾರ್ಪಣೆಯೂ ನಡೆಯಲಿದೆ.

ಹರಿದಾಸವಾಣಿ

ಹರಿದಾಸವಾಣಿ

ಅಸಗೋಡು ಜಯಸಿಂಹ, ಎಸ್. ವೆಂಕಟೇಶ್ ಮೂರ್ತಿ, ಶಿವಮೊಗ್ಗ ಸುರೇಶ್, ಕ್ಯಾಪ್ಟನ್ ಮಣಿ, ಡಾ. ರಾಮಶೇಷನ್, ಡಾ. ವಾಸುದೇವ ಅಗ್ನಿಹೋತ್ರಿ, ಭಾನುಪ್ರಕಾಶ್, ಶ್ರೀಮತಿ ಮಂಗಳಾ ಭಾಸ್ಕರ್, ಸಚ್ಚಿದಾನಂದಮೂರ್ತಿ ಮುಂತಾದವರು ವಿಶೇಷ ಆಹ್ವಾನಿತರಾಗಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಹರಾ ನಾಗರಾಜಾಚಾರ್ಯರಿಂದ ಸಂಪಾದಿತ ಕೃತಿ ಹರಿದಾಸವಾಣಿ ಈಗಾಗಲೇ 2 ಲಕ್ಷ ಪ್ರತಿಗಳು ಓದುಗರಿಗೆ ತಲುಪಿದ್ದು, ತೆಲುಗು, ತಮಿಳು ಭಾಷೆಗೂ ಅನುವಾದವಾಗಿದೆ. ವಾದಿರಾಜ ಪ್ರಶಸ್ತಿ, ವಿಜಯೀಂದ್ರ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಪುರಂದರ ಪ್ರಶಸ್ತಿ, ಮುಂತಾದ ಗೌರವ ಪ್ರಶಸ್ತಿ ಭಾಜನರಾಗಿದ್ದಾರೆ.

ವಿಷ್ಣು ಸಹಸ್ರನಾಮ ಸತ್ಸಂಗ ಫೆಡರೇಷನ್

ವಿಷ್ಣು ಸಹಸ್ರನಾಮ ಸತ್ಸಂಗ ಫೆಡರೇಷನ್

ಐವತ್ನಾಲ್ಕು ಗ್ರಂಥಗಳು ಹಾಗೂ ನಲವತ್ತು ಧ್ವನಿ ಮುದ್ರಿಕೆಗಳು, ನಾಲ್ಕು ಸಹಸ್ರಕ್ಕೂ ಹೆಚ್ಚು ದೇಶವಿದೇಶಗಳಲ್ಲಿ ಮಾಡಿರುವ ಅಪೂರ್ವ ಪ್ರವಚನಗಳಿಂದಾಗಿ ವಿಶ್ವವಿಖ್ಯಾತರಾಗಿರುವ ಅರಳುಮಲ್ಲಿಗೆ ಪಾರ್ಥಸಾರಧಿಯವರು ಜಗತ್ತಿನ ನಾನಾ ರಾಷ್ಟ್ರಗಳ ಗಣ್ಯಾತಿಗಣ್ಯರಿಂದ ಹಾಗೂ ಪ್ರತಿಷ್ಠಿತ ಸಂಘಸಂಸ್ಥೆಗಳಿಂದ ವಿಶೇಷ ಗೌರವ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ ಫೆಡರೇಷನ್ ನಂಥ ಅಂತರರಾಷ್ಟ್ರೀಯ ಮಹತ್ವದ ಸಂಸ್ಥೆಯ ಸಂಸ್ಥಾಪಕರಾಗಿ, ದಾಸಸಾಹಿತ್ಯ ಹಾಗೂ ವಿಷ್ಣುಸಹಸ್ರನಾಮಗಳ ಬೃಹತ್ ಸಂಚಲನವನ್ನು ವಿಶ್ವಮಟ್ಟದಲ್ಲಿ ಶ್ರೀಯುತರು ಮೂಡಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿರುವ ಉತ್ಸವ

ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿರುವ ಉತ್ಸವ

ಈ ಕಾರ್ಯಕ್ರಮದಲ್ಲಿ ನಾಡಿನ ನಾನಾ ಭಜನಾ ಮಂಡಲಿಗಳು, ದಾಸಸಾಹಿತ್ಯ ತಂಡಗಳು ಹಾಗೂ ದಾಸಸಾಹಿತ್ಯದ ಹರಿದಾಸರುಗಳು, ಸಂಗೀತ ಸಂಸ್ಥೆಗಳ ಸದಸ್ಯರುಗಳು, ವ್ಯಾಪಕವಾಗಿ ಭಾಗವಹಿಸಲಿದ್ದಾರೆ. ದಾಸಸಾಹಿತ್ಯಾಭಿಮಾನಿಗಳು ಹಾಗೂ ಭಕ್ತಪಂಥದ ಎಲ್ಲ ಸಂಸ್ಥೆಗಳ ಸದಸ್ಯರೂ ಈ ಮಹತ್ವದ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಇದರ ಯಶಸ್ಸಿಗೆ ಸಹಕರಿಸಬೇಕೆಂದು ಪ್ರಾಯೋಜಕರಾದ ಶ್ರೀನಿವಾಸ ಕಲ್ಯಾಣ ಖ್ಯಾತಿಯ ಎಸ್. ವೆಂಕಟೇಶ್ ಮೂರ್ತಿಯವರು ವಿನಂತಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Aralumallige Foundation is celebrating Purandara Aradhana on 26th Jan. at 4 pm at Gayana Samaja. As part of the Adradhana Dasasahithya Festival has been organized. Vidyadeesha Theertha Swamji of Udupi, Palimaru Mutt will inaugurate the festival.
Please Wait while comments are loading...