ಪಂಕ್ಚರ್ ಮಾಫಿಯಾ ಪತ್ತೆ ಹಚ್ಚಿದ ಬೆಂಗಳೂರು ಇಂಜಿನಿಯರ್?!

Posted By: Staff
Subscribe to Oneindia Kannada

ಬೆಂಗಳೂರು, ಜನವರಿ 15: ಡಿಲಿಜೆಂಟ್ ಬೆನೆಡಿಕ್ಟ್ ಜೆಬಕುಮಾರ್ ಎಂಬ ಬೆಂಗಳೂರಿನ ಇಂಜಿನಿಯರ್ ಒಬ್ಬರು ಕಳೆದೈದು ವರ್ಷಗಳಿಂದ ಔಟರ್ ರಿಂಗ್ ರೋಡ್ ನಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತಿದ್ದ ಮೊಳೆಗಳನ್ನು ಹೆಕ್ಕುವ ಕೆಲಸ ಮಾಡಿದ್ದಾರೆ. ಈವರೆಗೆ ಇವರು 50 ಕೆಜಿಗಿಂತಲೂ ಹೆಚ್ಚು ಮೊಳೆಗಳನ್ನು ಸಂಗ್ರಹಿಸಿದ್ದಾರೆ.

ಇಷ್ಟು ಹೇಳಿದರೆ, ಖಂಡಿತವಾಗಿ ಇದರ ಹಿಂದಿನ ಗಂಭೀರ ವಿಚಾರ ಗೊತ್ತಾಗುವುದೇ ಇಲ್ಲ. ಬೆನೆಡಿಕ್ಟ್ ಹಾಗೆ ಮೊಳೆ ಆಯುವ ಕೆಲಸಕ್ಕೆ ಕೈ ಹಾಕಿದ್ದು, ಅವರಿಗೆ ಮಾಡಲೇನೂ ಕೆಲಸವಿಲ್ಲ ಅಂತಲ್ಲ.

An engineer collect more than 50 kilograms of nails scattered over a road

ಅಸಲಿಗೆ, ಪ್ರತಿಷ್ಠಿತ ಕಂಪನಿಯೊಂದರಲ್ಲಿ ಸಿಸ್ಟಂ ಇಂಜಿನಿಯರ್ ಆಗಿ ಕಾರಿನಲ್ಲಿ ಓಡಾಡುವ ಅವರಿಗೆ ಅದರ ಜರೂರತ್ತೂ ಇರಲಿಲ್ಲ. ಆದರೆ, ಐದು ವರ್ಷಗಳಿಗೂ ಮುನ್ನ ದಿನನಿತ್ಯವೂ ಬೈಕಿನಲ್ಲಿ ಓಡಾಡುತ್ತಿದ್ದ ಬೆನೆಡಿಕ್ಟ್ ಅವರ ಬೈಕು ಆಗಾಗ ಪಂಕ್ಚರ್ ಗೆ ಒಳಗಾಗುತ್ತಿತ್ತು. ತಾವು ಮಾತ್ರವಲ್ಲದೇ, ಔಟರ್ ರಿಂಗ್ ರೋಡಿನಲ್ಲಿ ಸಾಗುವ ಹಲವಾರು ಮಂದಿ ಇದೇ ಬವಣೆಗೆ ಒಳಗಾಗುತ್ತಿದ್ದುದನ್ನು ನೋಡಿದ ಅವರು, ಇದರ ಹಿಂದೆ ಅದ್ಯಾರದ್ದೋ ಮಸಲತ್ತು ಇರಬೇಕೆಂದು ಅನುಮಾನಪಟ್ಟರು.

ರಿಂಗ್ ರೋಡಿನಲ್ಲಿ ಸಾಗುತ್ತಿದ್ದ ವಾಹನಗಳನ್ನು ಪಂಕ್ಚರ್ ಮಾಡುತ್ತಿದ್ದ ಈ ಮೊಳೆಗಳಿಗೂ ಹತ್ತಿರದಲ್ಲೇ ಇರುತ್ತಿದ್ದ ಪಂಕ್ಚರ್ ಶಾಪುಗಳಿಗೂ ಏನೋ ಸಂಬಂಧವಿರಬೇಕೆಂದುಕೊಂಡರು. ತಮ್ಮ ಊಹೆ ಸರಿಯೋ, ತಪ್ಪೋ ಗೊತ್ತಿರಲಿಲ್ಲ. ಹಾಗೆಂದು, ಅದನ್ನು ವಿಚಾರಿಸಲೂ ಅವರು ಹೋಗಲಿಲ್ಲ. ಹಾಗೆ ವಿಚಾರಿಸುವ ಮುನ್ನ ತಾವು ಒಂದು ಪರೀಕ್ಷೆ ಮಾಡಬೇಕೆಂದುಕೊಂಡ ಅವರು, ಅಂದಿನಿಂದಲೇ ರಸ್ತೆಗಳಲ್ಲಿ ಬಿದ್ದಿರುತ್ತಿದ್ದ ಮೊಳೆಗಳನ್ನು ಹೆಕ್ಕಲು ಆರಂಭಿಸಿದರು.

An engineer collect more than 50 kilograms of nails scattered over a road

ಮೊದಲೆಲ್ಲಾ, ಗಾಡಿ ಓಡಿಸುವಾಗ ಮೊಳೆ ಕಣ್ಣಿಗೆ ಬಿದ್ದ ಕೂಡಲೇ ಬೈಕು ನಿಲ್ಲಿಸಿ ಕೆಳಗಿಳಿದು ಬಂದು ಅವರನ್ನು ಹೆಕ್ಕಿಕೊಂಡು ಹೋಗುತ್ತಿದ್ದ ಅವರು, ಆನಂತರ ತಮ್ಮ ಇಂಜಿನಿಯರ್ ತಲೆ ಓಡಿಸಿ ಬೈಕಿಗೆ ಮ್ಯಾಗ್ನೆಟ್ ಅಳವಡಿಸಿದ ಹಲಗೆಯನ್ನು ಅಳವಡಿಸಿ ಆ ಮೂಲಕ ರಸ್ತೆಯಲ್ಲಿ ಬಿದ್ದಿರುತ್ತಿದ್ದ ಮೊಳೆಗಳನ್ನು ಹೆಕ್ಕಲು ಆರಂಭಿಸಿದರು.

ಆದರೆ, ಅವರಿಗೆ ಅಚ್ಚರಿಯ ಮೇಲೆ ಅಚ್ಚರಿಗಳು ಎದುರಾದವು. ಎಷ್ಟು ಮೊಳೆಗಳನ್ನು ಹೆಕ್ಕಿದರೂ ಪುನಃ ಪುನಃ ಹಳೆಯ ಕಾಲದ, ತುಕ್ಕು ಹಿಡಿದ ಮೊಳೆಗಳು ರಿಂಗ್ ರೋಡ್ ನ ಕೆಲವಾರು ಭಾಗಗಳಲ್ಲಿ ಬಿದ್ದಿರುತ್ತಿದ್ದುದು ಇವರಿಗೆ ಅಚ್ಚರಿ ತರುತ್ತಿದ್ದವು.

2012ರಲ್ಲಿ ಈ ಕೆಲಸ ಆರಂಭಿಸಿರುವ ಅವರು, ಈವರೆಗೆ ಸುಮಾರು 50 ಕೆಜಿಗಿಂತಲೂ ಅಧಿಕ ಮೊಳೆಗಳನ್ನು ಹೆಕ್ಕಿದ್ದಾರೆ.

ಹಾಗಂತ ಇವರು ಯಾರ ಮೇಲೂ ಆರೋಪ ಮಾಡಲಿಲ್ಲ. ಆನ್ ಲೈನ್ ಮೂಲಕ ಸೀದಾ ಬೆಂಗಳೂರು ಪೋಲೀಸರಿಗೆ ಈ ವಿಚಾರ ತಿಳಿಸಿ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೋರಿದ್ದರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹೇಳಿರುವ ಪೊಲೀಸ್ ಇಲಾಖೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಬೇರೆ ಮಾತು.

An engineer collect more than 50 kilograms of nails scattered over a road

ಆದರೆ, ಇಷ್ಟಕ್ಕೆ ಬೆನೆಡಿಕ್ಟ್ ಸುಮ್ಮನಾಗಿಲ್ಲ. ಫೇಸ್ ಬುಕ್ ನಲ್ಲಿ 'ಮೈ ರೋಡ್, ಮೈ ರೆಸ್ಪಾಂಸಿಬಿಲಿಟಿ' ಎಂಬ ಪೇಜ್ ಓಪನ್ ಮಾಡಿ, ತಮ್ಮ ಅಭಿಯಾನವೊಂದನ್ನು ಶುರು ಮಾಡಿದ್ದಾರೆ.

ಫೇಸ್ ಬುಕ್ ನ ಸರ್ಚ್ ಜಾಗದಲ್ಲಿ ಮೈ ರೋಡ್ ಮೈ ರೆಸ್ಪಾಂಸಿಬಿಲಿಟಿ ಎಂದು ಇಂಗ್ಲೀಷ್ ನಲ್ಲಿ ಟೈಪ್ ಮಾಡಿದರೆ, ಅವರ ಪೇಜ್ ಓಪನ್ ಆಗುತ್ತೆ. ಈ ರೀತಿಯಾಗಿ ಪಂಕ್ಚರ್ ಮಾಫಿಯಾ ಬಗ್ಗೆ ಜನರಲ್ಲಿ ಜಾಗೃತರನ್ನಾಗಿಸುವ ಪ್ರಯತ್ನ ಮಾಡಿದ್ದಾರೆ. ಆಸಕ್ತರು ಈ ಪೇಜ್ ಗೆ ಭೇಟಿ ನೀಡಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Bangalore engineer has spent the past five years collecting more than 50 kilograms of rusty nails scattered across a busy commuter road allegedly by nearby tyre repair companies trying to drum up business.
Please Wait while comments are loading...