ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಕುರಿ ಕಾಯಲು ತೋಳಕ್ಕೆ ಜವಾಬ್ದಾರಿ ನೀಡಿದ ರಾಜ್ಯ ಸರ್ಕಾರ'

ಲೋಕಾಯುಕ್ತ ಸಂಸ್ಥೆಗೆ ಹೊಸ ಲೋಕಾಯುಕ್ತರ ನೇಮಕಾತಿಗೆ ವಿಚಾರವಾಗಿ ಮಾನ್ಯ ಮುಖ್ಯಮಂತ್ರಿಗಳು ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಯವರ ಹೆಸರನ್ನು ಅಂತಿಮಗೊಳಿಸಿರುವುದು ರಾಜ್ಯದ ಜನರಿಗೆ ಆಘಾತಕಾರಿ ವಿಷಯವಾಗಿದೆ.

By Mahesh
|
Google Oneindia Kannada News

ಬೆಂಗಳೂರು, ಜನವರಿ 10: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಈಗಾಗಲೇ ಸ್ವತಂತ್ರ ಸಂಸ್ಥೆಯಾದ ಲೋಕಾಯುಕ್ತದ ಅಡಿಯಿಂದ ತನಿಖಾ ಅಧಿಕಾರವನ್ನು ಕಿತ್ತು ತನ್ನ ಕೈಗೊಂಬೆಯಾದ ಎಸಿಬಿಗೆ ವಹಿಸಿದಾಗಲೇ ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ಎಳ್ಳುನೀರು ಬಿಟ್ಟಿಂತಾಗಿದೆ.

ಇದೀಗ ಲೋಕಾಯುಕ್ತ ಸಂಸ್ಥೆಗೆ ಹೊಸ ಲೋಕಾಯುಕ್ತರ ನೇಮಕಾತಿಗೆ ವಿಚಾರವಾಗಿ ಮಾನ್ಯ ಮುಖ್ಯಮಂತ್ರಿಗಳು ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಯವರ ಹೆಸರನ್ನು ಅಂತಿಮಗೊಳಿಸಿರುವುದು ರಾಜ್ಯದ ಜನರಿಗೆ ಆಘಾತಕಾರಿ ವಿಷಯವಾಗಿದೆ.

ಲೋಕಾಯುಕ್ತಕ್ಕೆ ತನಿಖಾ ಅಧಿಕಾರವಿಲ್ಲದಿದ್ದರೂ ಈಗಾಗಲೇ ರಾಜ್ಯದ ಪ್ರಭಾವಿ ರಾಜಕಾರಣಿಗಳ ವಿರುದ್ಧದ ಇನ್ನೂ ಸುಮಾರು 2,300 ಪ್ರಕರಣಗಳು ಲೋಕಾಯುಕ್ತದ ಅಡಿಯಲ್ಲೇ ಇವೆ. ಸ್ವತಃ ಮುಖ್ಯಮಂತ್ರಿಗಳ ವಿರುದ್ಧದ ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣ ಲೋಕಾಯುಕ್ತದಲ್ಲಿದೆ.[ಲೋಕಾಯುಕ್ತ ಹುದ್ದೆಗೆ ನ್ಯಾ ವಿಶ್ವನಾಥ್ ಶೆಟ್ಟಿ ಹೆಸರು ಅಂತಿಮ]

ಅಷ್ಟೇ ಅಲ್ಲದೇ, ರಾಜ್ಯ ಸರ್ಕಾರದಲ್ಲಿ ಸಚಿವರಾಗಿರುವ ಆರ್.ವಿ ದೇಶಪಾಂಡೆ, ಕೆ.ಜೆ ಜಾರ್ಜ್ ಕುರಿತ ಭ್ರಷ್ಟಾಚಾರ ಪ್ರಕರಣಗಳೂ ಹಾಗೂ ವಿರೋಧ ಪಕ್ಷವಾದ ಬಿಜೆಪಿಯ ರಾಜ್ಯಾಧ್ಯಕ್ಷರಾದ ಯಡಿಯೂರಪ್ಪ, ಕಟ್ಟಾ ಸುಬ್ರಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ ಮುಂತಾದವರ ಭ್ರಷ್ಟಾಚಾರದ ಪ್ರಕರಣಗಳು ಲೋಕಾಯುಕ್ತದಲ್ಲಿ ದಾಖಲಾಗಿವೆ.

AAP Karnataka oppose on Justice Vishwanath Shetty as Lokayukta

ಈ ನಡುವೆ, ಇಂತಹ ಪ್ರಕರಣಗಳನ್ನು ತಾತ್ವಿಕ ಅಂತ್ಯಕ್ಕೆ ಕರೆದೊಯ್ಯಲು, ಯಾವುದೇ ಪ್ರಭಾವಕ್ಕೆ ಒಳಗಾಗದೆ, ಅಂಜಿಕೆಯಿಲ್ಲದೆ, ನ್ಯಾಯದ ಪರವಾಗಿ ಕೆಲಸ ಮಾಡುವ, ಕಳಂಕರಹಿತ ಹಾಗೂ ಕ್ರಿಯಾಶೀಲ ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ಲೋಕಾಯುಕ್ತಕ್ಕೆ ನೇಮಿಸುವ ಅಗತ್ಯವಿದೆ.

ಆದರೆ, ಪಕ್ಷಬೇದವಿಲ್ಲವೆಂಬಂತೆ, ಲೋಕಾಯುಕ್ತವೇ ದಾಖಲಿಸಿರುವ ಪ್ರಕರಣಗಳಲ್ಲಿ ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿರುವ ಸದ್ಯದ ಇಂಧನ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಭ್ರಷ್ಟಾತಿ ಭ್ರಷ್ಟ ನಾಯಕರಲ್ಲಿ ಒಬ್ಬರಾದ ಜರ್ನಾಧನ ರೆಡ್ಡಿ ಪರವಾಗಿ ವಕೀಲಿಕೆ ನಡೆಸುವ ವಿಶ್ವನಾಥ್ ಶೆಟ್ಟಿಯವರಿಗೆ ಲೋಕಾಯುಕ್ತ ಸಂಸ್ಥೆಯ ಆಡಳಿತ ಜವಾಬ್ದಾರಿಯನ್ನು ನೀಡುವುದು, ತೋಳಕ್ಕೆ ಕುರಿ ಕಾಯುವಂತೆ ಹೇಳಿದಂತೆ ಎಂದು ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಪರಿಭಾವಿಸುತ್ತದೆ.

ಅಷ್ಟೇ ಅಲ್ಲದೆ, ನ್ಯಾಯಾಂಗ ಬಡಾವಣೆಯ ಅಕ್ರಮದಲ್ಲಿ ವಿಶ್ವನಾಥ್ ಶೆಟ್ಟಿಯವರ ಹೆಸರೂ ಕೇಳಿಬಂದಿರುವುದು ಮತ್ತೊಂದು ಆಘಾತಕಾರಿ ವಿಚಾರವಾಗಿದ್ದು, ಆರ್.ಟಿ ನಗರದಲ್ಲಿ ಬಿಡಿಎಯಿಂದ (ನಿವೇಶನ ಸಂಖ್ಯೆ 71) ಇವರು ನಿವೇಶನವನ್ನು ಹೊಂದಿದ್ದರೂ ತಮ್ಮ ಬಳಿ ಯಾವುದೇ ನಿವೇಶನವಿಲ್ಲವೆಂದು 2001ರಲ್ಲಿ ಸುಳ್ಳು ಪ್ರಮಾಣಪತ್ರ ನೀಡಿ ನ್ಯಾಯಾಂಗ ಬಡಾವಣೆಯಲ್ಲಿ (ನಿವೇಶನ ಸಂಖ್ಯೆ 1395) ನಿವೇಶನವನ್ನು ಪಡೆದಿದ್ದಾರೆ.

ಈ ಹಿಂದೆ ನಿವೃತ್ತ ಲೋಕಾಯುಕ್ತ ಶಿವರಾಜ್ ಪಾಟೀಲ್ ಮೇಲೆ ಇದೇ ಆರೋಪ ಕೇಳಿಬಂದಾಗ ಅವರೇ ಖುದ್ದು ರಾಜೀನಾಮೆ ಸಲ್ಲಿಸಿದ್ದರು. ನ್ಯಾಯಮೂರ್ತಿ ಎಸ್.ಆರ್. ನಾಯಕ್‍ರ ಹೆಸರನ್ನೂ ಮಾನ್ಯ ರಾಜ್ಯಪಾಲರು ಇದೇ ಆರೋಪದ ಆಧಾರದ ಮೇಲೆ ತಿರಸ್ಕರಿಸಿದ್ದರು.

ಇದೀಗ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಯವರ ವಿರುದ್ಧ ಇಂತಹ ಗಂಭೀರ ಆರೋಪಗಳಿದ್ದರೂ ಲೋಕಾಯುಕ್ತಕ್ಕೆ ಮಾನ್ಯ ಮುಖ್ಯಮಂತ್ರಿಗಳೂ ಸೇರಿದಂತೆ ವಿರೋಧ ಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್ ಇವರ ಹೆಸರಿಗೆ ಒಪ್ಪಿಗೆ ಸೂಚಿಸಿರುವುದು ಇಡೀ ಲೋಕಾಯುಕ್ತ ಸಂಸ್ಥೆಯನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಿ, ಅಲ್ಲಿ ತಮ್ಮ ತಮ್ಮ ಪಕ್ಷದ ಮುಖಂಡರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಸಕ್ರಮವಾಗಿ ಹಳ್ಳ ಹಿಡಿಯುವಂತೆ ನೋಡಿಕೊಳ್ಳುವುದಕ್ಕಾಗಿ ಅಷ್ಟೇ ಎಂದು ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಆರೋಪಿಸುತ್ತದೆ.

ಕರ್ನಾಟಕ ಲೋಕಾಯಕ್ತ ಸಂಸ್ಥೆಯನ್ನು ಬುಡಸಮೇತ ಕಿತ್ತುಹಾಕಲು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳೆರಡೂ ಪಣತೊಟ್ಟಿ ನಿಂತಿದ್ದು, ಇನ್ನೂ ಜೆಡಿಎಸ್ ಪಕ್ಷ, ತನಗೇನೂ ಗೊತ್ತೇ ಎಲ್ಲವೇನೋ ಎಂಬಂತೆ ವರ್ತಿಸುತ್ತಿದೆ, ಆದರೆ ಆಮ್ ಆದ್ಮಿ ಪಾರ್ಟಿ-ಕರ್ನಾಟಕ ರಾಜ್ಯ ಸರ್ಕಾರದ ಈ ಕುತಂತ್ರಗಳಿಗೆ ಯಾವುದೇ ಅವಕಾಶ ನೀಡುವುದಿಲ್ಲ ಎಂದು ಈ ಮೂಲಕ ಎಚ್ಚರಿಸುತ್ತಿದೆ.

ಮಾನ್ಯ ರಾಜ್ಯಪಾಲರು ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಯವರನ್ನು ಲೋಕಾಯುಕ್ತರಾಗಿ ನೇಮಿಸಲು ಅವಕಾಶ ನೀಡಬಾರದು, ಅವರ ಹೆಸರನ್ನು ತಿರಸ್ಕರಿಸಬೇಕು, ಲೋಕಾಯುಕ್ತಕ್ಕೆ ಕ್ರಿಯಾಶೀಲ ಹಾಗೂ ಕಳಂಕರಹಿತ ವ್ಯಕ್ತಿಯನ್ನು ನೇಮಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಈ ಮೂಲಕ ಆಗ್ರಹಿಸುತ್ತದೆ.

English summary
It comes as a shock, to the people of the state, that the CM Siddaramaiah has finalized the name of Justice Vishwanath Shetty for the post of Lokayukta said AAP Karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X