ಜನಾರ್ದನ ರೆಡ್ಡಿ ಬಂಧನಕ್ಕೆ ಆಮ್ ಆದ್ಮಿ ಪಕ್ಷ ಒತ್ತಾಯ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 16: ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯುತ್ತಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಮಗಳ ಮದುವೆ ಖರ್ಚಿನ ಬಗ್ಗೆ ಆಮ್ ಆದ್ಮಿ ಪಕ್ಷ ಪ್ರಶ್ನೆ ಎತ್ತಿದ್ದು, ಮದುವೆ ಖರ್ಚಿನ ಮೂಲದ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ.

500, 1000 ಮುಖಬೆಲೆಯ ನೋಟುಗಳ ರದ್ದು ನಿರ್ಧಾರದಿಂದ ಇಡೀ ದೇಶದಲ್ಲಿ ಜನಸಾಮಾನ್ಯರು ಪರದಾಡುತ್ತಿದ್ದಾರೆ. ಆದರೆ ಅಕ್ರಮ ಗಣಿಗಾರಿಕೆ ನಡೆಸಿ ಜೈಲು ಸೇರಿದ್ದ ಗಾಲಿ ಜನಾರ್ದನ ರೆಡ್ಡಿ ತಮ್ಮ ಮಗಳ ಮದುವೆಗೆ ಗಾಗಿ 500 ರಿಂದ 1000 ಕೋಟಿ ರುಪಾಯಿ ವೆಚ್ಚ ಮಾಡುತ್ತಿರುವುದು ಜನಸಾಮಾನ್ಯರಿಗೆ ಅಚ್ಚರಿಗೆ ಕಾರಣವಾಗಿದೆ ಎಂದಿದೆ.

ಒಂದೆಡೆ ಕೇಂದ್ರ ಸರಕಾರ 2.5 ಲಕ್ಷಕ್ಕಿಂತ ಅಧಿಕ ಹಣ ಬ್ಯಾಂಕಿಗೆ ತುಂಬಿಸುವ ಬಡ ಮತ್ತು ಮಧ್ಯಮ ವರ್ಗದ ಜನರ ಮೇಲೆ ತೆರಿಗೆ ಹಾಗೂ ಶೇ 200ರಷ್ಟು ದಂಡ ವಿಧಿಸುವ ಬೆದರಿಕೆ ಹಾಕುತ್ತಿದೆ. ಆದರೆ ಲೂಟಿ ಮಾಡಿದ ಹಣದ ದರ್ಪವನ್ನು ರಾಜಾರೋಷವಾಗಿ ಪ್ರದರ್ಶಿಸುವ ರಾಜಕಾರಣಿಗಳನ್ನು ಪ್ರಶ್ನಿಸುವವರೇ ಯಾರೂ ಇಲ್ಲದಂತಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದೆ.[ಗಾಲಿ ರೆಡ್ಡಿ ಮಗಳ ಮದುವೆಯಲ್ಲಿ ಕಂಡ ಮುಖಗಳು]

AAP

ಬಿಜೆಪಿಯಿಂದ ಯಡಿಯೂರಪ್ಪ ಸೇರಿದಂತೆ ಅನೇಕರು ಮದುವೆಯಲ್ಲಿ ಭಾಗವಹಿಸಿದ್ದಾರೆ. ಕೇಂದ್ರ ಸರಕಾರವೇ ಭ್ರಷ್ಟಾಚಾರಿಗಳ ವಿರುದ್ಧ ಕ್ರಮ ಜರುಗಿಸದೆ, ಜನಸಾಮಾನ್ಯರ ಮೇಲೆ ಬರೆ ಎಳೆಯಲು ಹೊರಟಿದೆ ಎಂದ ಆಮ್ ಆದ್ಮಿ ಪಕ್ಷ ಆರೋಪ ಮಾಡಿದೆ. ಜನಾರ್ದನ ರೆಡ್ಡಿ ಅವರು ಜಾಮೀನಿನ ಮೇಲೆ ಹೊರಗೆ ಬಂದಿದ್ದು, ಸಿಬಿಐ ಮತ್ತು ಇತರ ತನಿಖಾ ತಂಡಗಳು ಅವರ ಆಸ್ತಿ ಮತ್ತು ಖಾತೆಗಳನ್ನು ಸ್ಥಗಿತಗೊಳಿಸಬೇಕಿತ್ತು ಎಂದಿದೆ.

ಅವರು ಖರ್ಚಿಗೆ ನಗದು ಬಳಸುತ್ತಿದ್ದಲ್ಲಿ ಇಷ್ಟೊಂದು ಹಣ ಚಲಾವಣೆಯಿಂದ ಹಿಂಪಡೆದ ಹಳೆಯ 500, 1000 ಮುಖಬೆಲೆಯ ನೋಟುಗಳೋ ಅಥವಾ ದೊಡ್ಡ ಪ್ರಮಾಣದಲ್ಲಿ ಹೊಸ ನೋಟುಗಳು ಈಗಾಗಲೇ ಲಭ್ಯವಾಗಿವೆಯೇ? ಒಂದು ವೇಳೆ ದೊರೆತಿದ್ದರೆ ಅದು ಹೇಗೆ ಸಾಧ್ಯ ಎಂದು ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಘಟಕವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದೆ.['ಪ್ರಧಾನಿಗಳೇ ನಿಮ್ಮದೇ ಪಕ್ಷದವರ ಅದ್ಧೂರಿ ಖರ್ಚು ಕಾಣ್ತಿಲ್ವಾ?']

Reddy daughter wedding

ಮದುವೆಗೆ ಆಗುತ್ತಿರುವ ಖರ್ಚು, ಆ ಹಣದ ಮೂಲ ಮತ್ತು ಹಣ ಪಡೆಯುತ್ತಿರುವವರ ಬಗ್ಗೆ ತನಿಖೆಯಾಗಬೇಕು. ಜನಾರ್ದನ ರೆಡ್ಡಿ ಅವರ ಜಾಮೀನು ರದ್ದುಗೊಳಿಸಿ ಮತ್ತೆ ಬಂಧಿಸಬೇಕು. ಸಾಮಾಜಿಕ ಕಾರ್ಯಕರ್ತರೊಬ್ಬರು ಕೇಂದ್ರದ ಐಟಿ ಇಲಾಖೆಗೆ ನೀಡಿದ ದೂರಿನ ಅನ್ವಯ ಕ್ರಮ ಜರುಗಿಸಬೇಕು ಎಂದು ಪಕ್ಷವು ಒತ್ತಾಯಿಸಿದೆ.

ಸರಕಾರ ಕೂಡಲೇ ಕ್ರಮ ಜರುಗಿಸದಿದ್ದಲ್ಲಿ ರೆಡ್ಡಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಇತರ ಹೋರಾಟಗಾರರೊಂದಿಗೆ ಸೇರಿ ಆಮ್ ಆದ್ಮಿ ಪಾರ್ಟಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಪಕ್ಷವು ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
AAP insist former minister Janardhana reddy's arrest and to probe on his daughter wedding expenditure.
Please Wait while comments are loading...