ರಸ್ತೆಗುಂಡಿಗಳೋ, ಮೃತ್ಯುಕೂಪಗಳೋ? ಇದು ನಮ್ಮ ಬೆಂಗಳೂರಿನ ಪಾಡು!

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 12: ಬೆಳ್ಳಂಬೆಳಗ್ಗೆ ಗಡಿಬಿಡಿಯಲ್ಲಿ ತಿಂಡಿ ತಿಂದು, ಕಚೇರಿಯ ತಲೆಬಿಸಿಯನ್ನೇ ತಲೆತುಂಬ ತುಂಬಿಕೊಂಡು ಗಾಡಿ ಓಡಿಸುತ್ತಿರುವವರನ್ನು ಬೆಂಗಳೂರಿನ ರಕ್ಕಸ ರಸ್ತೆ ಗುಂಡಿಗಳು ಸ್ವಾಗತಿಸುತ್ತವೆ. ಯಾವುದೋ ತಲೆಬಿಸಿಯಲ್ಲಿ ಸ್ವಲ್ಪ ಯಾಮಾರಿದಿರೋ... ಅಷ್ಟೇ ನಿಮ್ಮ ಕತೆ!

ಬೆಂಗಳೂರು ರಸ್ತೆ ಗುಂಡಿಗಳು, ಓದುಗರು ಕಳಿಸಿದ ಚಿತ್ರಗಳು

"ಆವತ್ತೂ ಹಾಗೇ ಆಯ್ತು. ಬೆಳಿಗ್ಗೆ ಬಸವನಗುಡಿ ನ್ಯಾಶನಲ್ ಕಾಲೇಜ್ ಫ್ಲೈ ಓವರ್ ದಾಟಿ ಸ್ವಲ್ಪ ಮುಂದೆ ಬಂದಿದ್ದೆವಷ್ಟೆ. ಕೇವಲ 30 ಕಿ.ಮೀ.ವೇಗದಲ್ಲಿ ಹೋಗುತ್ತಿದ್ದ ನಮಗೆ ರಸ್ತೆಯ ಮಧ್ಯ ರಕ್ಕಸ ಗುಂಡಿಯೊಂದು ಇದ್ದಕ್ಕಿದ್ದಂತೇ ಎದುರಾಗಿಬಿಡಬೇಕೆ? ತಕ್ಷಣಕ್ಕೆ ಏನು ಮಾಡಬೇಕೋ ತಿಳಿಯದೆ, ಬೈಕನ್ನು ಬಲಗಡೆ ತಿರುಗಿಸಿದರೆ ಅಲ್ಲೊಂದು ದೈತ್ಯ ಬಸ್ಸು! ಆವತ್ತು ಬೆಳಿಗ್ಗೆ ಎದ್ದಾಗ ಯಾರು ಯಾರ ಮುಖ ನೋಡಿದ್ದೆವೋ ಗೊತ್ತಿಲ್ಲ, ಗಾಡಿಗೆ ಬಸ್ಸು ಸ್ವಲ್ಪ ತಾಕಿದ್ದು ಬಿಟ್ಟರೆ ನಮಗೆ ಯಾವ ಸಮಸ್ಯೆಯೂ ಆಗಲಿಲ್ಲ. ದೇವರನ್ನು ನೆನೆಯುತ್ತಾ, ಗಡ ಗಡ ನಡುಗುತ್ತಲೇ ಆಫೀಸು ಸೇರಿಕೊಂಡವು!"

'ಜನರಿಗೆ ಗುಂಡಿ ಭಾಗ್ಯ, ಕಾಂಗ್ರೆಸ್‌ಗೆ ಹುಂಡಿ ಭಾಗ್ಯ'

ಇದು ಯಾರದೋ ಒಬ್ಬರ ಅನುಭವವಲ್ಲ. ನಿರಂತರ ಮಳೆಯಿಂದ ಕೆಟ್ಟಿರುವ ಬೆಂಗಳೂರಿನ ರಸ್ತೆಗಳು ಪ್ರತಿದಿನವೂ ಇಂಥ ಅನುಭವ ನೀಡುತ್ತಿವೆ. ಈ ರಸ್ತೆ ಎಂಬ ಮೃತ್ಯಕೂಪಕ್ಕೆ ಒಂದೇ ವಾರದಲ್ಲಿ ಬಲಿಯಾದವರು ಐವರಾದರೆ, ಪ್ರತಿದಿನವೂ ಸಾವಿನ ದವಡೆಯನ್ನು ಮುಟ್ಟಿ ಬರುತ್ತಿರುವವರು ಅದೆಷ್ಟು ಜನರೋ! ಕೂದಲೆಳೆಯ ಅಂತರದಲ್ಲಿ ಪಾರಾದ ನಮ್ಮಂಥವರು ಮತ್ತೆಷ್ಟೋ ಜನ!

ತಮಾಷೆ ಮಾಡಿಕೊಂಡೇ ಇದ್ದೀವಾ?

ತಮಾಷೆ ಮಾಡಿಕೊಂಡೇ ಇದ್ದೀವಾ?

ಈ ರಸ್ತೆ ಗುಂಡಿ ಐವರನ್ನು ಬಲಿಪಡೆದ ಮೇಲೂ ನಾವಿನ್ನೂ ರಸ್ತೆ ಗುಂಡಿಗಳ ಕುರಿತು ತಮಾಷೆ ಮಾಡುತ್ತ, ಜೋಕು ಪಾರ್ವರ್ಡ್ ಮಾಡುತ್ತಲೇ ಕಾಲ ಕಳೆಯುತ್ತಿದ್ದೇವಾ? ಒಂದು ಮಳೆಬಂದರೆ ಸಾಕು ಬಾವಿಯಂತಾಗುವ ರಸ್ತೆಗಳು ಕಳಪೆ ಕಾಮಗಾರಿಗೆ ಹಿಡಿದ ಕನ್ನಡಿ. 'ಇನ್ನೇನು ಕೆಲವೇ ತಿಂಗಳಲ್ಲಿ ಚುನಾವಣೆ, ಸದ್ಯದಲ್ಲೇ ರಸ್ತೆಯನ್ನು ಸರಿಮಾಡ್ತಾರೆ ಬಿಡಿ' ಎಂಬ ಬೇಜವಾಬ್ದಾರಿ ಭಾವದಲ್ಲೇ ಪ್ರತಿಯೊಬ್ಬರೂ ಇದ್ದಾರಾ?

ಟ್ರಾಫಿಕ್ ನಿಯಮ ಲೆಕ್ಕಕ್ಕಿಲ್ಲ

ಟ್ರಾಫಿಕ್ ನಿಯಮ ಲೆಕ್ಕಕ್ಕಿಲ್ಲ

ಇದು ರಸ್ತೆ ಗುಂಡಿಗಳ ಪಾಡಾದರೆ, ಈ ಪರಿ ಕೆಟ್ಟಿರುವ ರಸ್ತೆಯಲ್ಲೂ 60-80 ಕಿ.ಮೀ.ವೇಗದಲ್ಲೇ ಗಾಡಿ ಓಡಿಸುವ ಹುಚ್ಚುತನ ಬೇರೆ. ಟ್ರಾಫಿಕ್ ನಿಯಮಗಳನ್ನು ಪಾಲಿಸುವ ವ್ಯವಧಾನ ಹಲವರಿಗಿಲ್ಲ. ಎಲ್ಲೆಂದರಲ್ಲಿ ನುಗ್ಗಿ, ಒನ್ ವೆಯಲ್ಲಿ ತೂರಿಬಂದು, ತಾವೇ ಮೊದಲು ಹೋಗಬೇಕೆಂಬ ಧಾವಂತ, ಲಕ್ಷಗಟ್ಟಲೆ ಖರ್ಚು ಮಾಡಿ ಬೈಕು ಖರಿದಿಸುವ ಸಾಮರ್ಥ್ಯವಿದ್ದರೂ, ಸಾವಿರ ರೂ. ಖರ್ಚು ಮಾಡಿ ಹೆಲ್ಮೇಟ್ ಖರೀದಿಸುವುದಕ್ಕೆ ಹಲವರು ಸಿದ್ಧರಿಲ್ಲ! ವಿದ್ಯಾವಂತರೇ ಹೀಗೆ ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರುವುದು ಸರಿಯೇ?

ಸಾಕಪ್ಪಾ ಸಹವಾಸ

ಸಾಕಪ್ಪಾ ಸಹವಾಸ

ಟ್ರಾಫಿಕ್ ನಿಯಮ ಗಾಳಿಗೆ ತೂರುವವರಿಂದ ತೊಂದರೆ ಅನುಭವಿಸುವ ಜೊತೆಗೆ ಇದೀಗ ರಸ್ತೆ ಗುಂಡಿಗಳೂ ಸೇರಿ, ಸಾಕಪ್ಪಾ ಬೆಂಗಳೂರು ರಸ್ತೆಯಲ್ಲಿ ವಾಹನ ಓಡಿಸುವ ಸಹವಾಸ ಎಂಬ ಸ್ಥಿತಿಗೆ ಇಲ್ಲಿನ ಜನರು ತಲುಪಿದ್ದರೆ ಅಚ್ಚರಿಯೇನಿಲ್ಲ. ಹೀಗಿದೆ ನಮ್ಮ ಬೆಂಗಳೂರಿನ ಪಾಡು!

ಹೊಣೆಗೇಡಿ ವರ್ತನೆ ತರವೇ?

ಹೊಣೆಗೇಡಿ ವರ್ತನೆ ತರವೇ?

ಪ್ರತಿಬಾರಿ ಮಳೆ ಬಂದಾಗಲೂ ಬೆಂಗಳೂರು ರಸ್ತೆಗಳ ಅಸಲಿ ಬಂಡವಾಳ ಬಯಲಾಗುತ್ತೆ. ರಸ್ತೆ ನಿರ್ಮಾಣಕ್ಕಾಗಿ ಬಿಡುಗಡೆಯಾಗುವ ಸಾವಿರಾರು ಕೋಟಿ ರೂ.ಗಳು ಯಾರದೋ ಜೇಬು ಸೇರುತ್ತವೆ! ಕೊನೆಯಲ್ಲಿ ಉಳಿದ ಅಲ್ಪ ಸ್ವಲ್ಪ ಹಣದಲ್ಲೇ ರಸ್ತೆಗೆ ತೇಪೆ ಹಚ್ಚಿ, ಹೊಸ ರಸ್ತೆ ಕೊಟ್ಟಿದ್ದೇವೆಂದು ಯಾಮಾರಿಸಿದರೂ ನಾವು ತುಟಿಪಿಟಿಕ್ಕೆನುವುದಿಲ್ಲ. ಮತ್ತೆ ಮಳೆಗಾಲ ಬಂದು, ನಾಲ್ಕೈದು ಜನ ಅಸುನೀಗಿದಾಗಲೇ ದನಿಯೆತ್ತುತ್ತೇವೆ! ನಮ್ಮ ಈ ಹೊಣೆಗೇಡಿ ವರ್ತನೆಯೇ ಸರ್ಕಾರದ ನಿರ್ಲಕ್ಷ್ಯ, ಬೇಜವಾಬ್ದಾರಿತನಕ್ಕೆ ದಾರಿಮಾಡಿಕೊಟ್ಟಿದೆಯೇ? ಪ್ರತಿಯೊಬ್ಬರೂ ಯೋಚಿಸಬೇಕಾದ ಗಂಭೀರ ಪ್ರಶ್ನೆ ಇದು!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Potholes in road become a major problem in Bengaluru. 5 people died by pothole in Bengaluru in a week. But Karnataka government has not taken serious desision to fill potholes yet.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ