ಬಸ್ಸು ಸುಡಲು ಕುಮ್ಮಕ್ಕು ನೀಡಿದ್ದು ಯಾದಗಿರಿಯ 22ರ ಯುವತಿ

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 17: ಕೆಪಿಎನ್ ಟ್ರಾವೆಲ್ಸ್ ಬಸ್ ಸುಟ್ಟ ಪ್ರಕರಣದ ವಿಚಾರಣೆಯನ್ನು ಸಿಐಡಿಗೆ ವಹಿಸಲು ನಿರ್ಧರಿಸಲಾಗಿದೆ. ಇಡೀ ಪ್ರಕರಣದ ಬಗ್ಗೆ ಹಲವು ಅನುಮಾನಗಳು ಇರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೇಲಂ ಮೂಲದ ಕೆ.ಪಿ.ನಟರಾಜನ್ ಅವರಿಗೆ ಸೇರಿದ ಕೆಪಿಎನ್ ಟ್ರಾವೆಲ್ಸ್ ನ ನಲವತ್ತೆರಡು ಬಸ್ ಗಳು ಈಚೆಗೆ ನಡೆದ ಕಾವೇರಿ ಗಲಭೆಯಲ್ಲಿ ಸುಟ್ಟುಹೋಗಿದ್ದವು.

ಈ ಪ್ರಕರಣದಲ್ಲಿ ನಾಯಂಡಹಳ್ಳಿಯಲ್ಲಿರುವ ಕೆಪಿಎನ್ ಟ್ರಾವೆಲ್ಸ್ ಬಸ್ ಡಿಪೋ ಬಳಿಯೇ ಇರುವ ಗಿರಿ ನಗರದಲ್ಲಿ ಇಪ್ಪತ್ತೆರಡು ವರ್ಷದ ಭಾಗ್ಯಶ್ರೀ ಎಂಬಾಕೆಯನ್ನು ಬಂಧಿಸಲಾಗಿದೆ. ಆಕೆ ಮೂಲತಃ ಯಾದಗಿರಿಯವಳು. ದಿನಗೂಲಿ ನೌಕರಳಾಗಿ ಕೆಲಸ ಮಾಡುತ್ತಿದ್ದಳು. ಎರಡು ವರ್ಷದ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದಳು.[ಕೆಪಿಎನ್ ಟ್ರಾವೆಲ್ಸ್ ಪ್ರಕರಣ ತನಿಖೆಗೆ ಪರಮೇಶ್ವರ ಆದೇಶ]

KPN Travels

"ಘಟನೆ ನಡೆದ ದಿನದ ಸಿಸಿ ಟಿವಿ ಫೂಟೇಜ್ ಅಧಾರದಲ್ಲಿ ಭಾಗ್ಯಶ್ರೀಯನ್ನ ಗುರುವಾರ ರಾತ್ರಿ ಬಂಧಿಸಲಾಗಿದೆ. ಬಸ್ ಗೆ ಬೆಂಕಿ ಹಚ್ಚುವಲ್ಲಿ ಆಕೆಯ ಪಾತ್ರದ ಬಗ್ಗೆ ಇನ್ನೂ ಹೆಚ್ಚು ಸ್ಪಷ್ಟವಾಗಬೇಕು. ಸದ್ಯಕ್ಕೆ ಮಡಿವಾಳದ ರಿಮ್ಯಾಂಡ್ ಹೋಮ್ ನಲ್ಲಿ ಇರಿಸಿದ್ದೀವಿ. ಶನಿವಾರ ರಾಜರಾಜೇಶ್ವರಿ ನಗರದಲ್ಲಿ ಆಕೆಯ ವಿಚಾರಣೆ ಮಾಡಲಾಗುತ್ತದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು ಆರು ತಿಂಗಳು ಆಕೆಗೆ ಜಾಮೀನು ಸಿಗುವುದು ಅನುಮಾನ. ಆಕೆಯನ್ನು ನ್ಯಾಯಾಂಗ ಬಂಧನದಲ್ಲಿಡಲಾಗುವುದು. ಆಕೆಯ ಆರ್ಥಿಕ ಸ್ಥಿತಿ ಗಮನಿಸಿದರೆ ವಕೀಲರನ್ನು ಇಡುವಷ್ಟು ಅನುಕೂಲ ಇಲ್ಲ. ಆದರೆ ಕಾವೇರಿ ಹೋರಾಟದಲ್ಲಿ ಕೇಸು ದಾಖಲಾಗಿರುವವರ ಪರವಾಗಿ ಉಚಿತವಾಗಿ ಕಾನೂನು ಹೋರಾಟ ಮಾಡುವುದಾಗಿ ನಗರ ವಕೀಲರ ಸಂಘ ಹೇಳಿದ್ದು, ಇದರಿಂದ ಆಕೆಗೆ ನೆರವಾಗಬಹುದು.[ಕೆಪಿಎನ್ ಟ್ರಾವೆಲ್ಸ್ ಬಸ್ ಗೆ ಬೆಂಕಿ: ಏಳು ಜನ ಪೊಲೀಸರ ಬಲೆಗೆ]

ಪ್ರಾಥಮಿಕ ತನಿಖೆ ಪ್ರಕಾರ ಮತ್ತು ಸಿಸಿ ಟಿವಿ ಫೂಟೇಜ್ ನಲ್ಲಿ ಕಂಡಂತೆ ಭಾಗ್ಯಶ್ರೀ ಪ್ರತಿಭಟನಾಕಾರರಿಗೆ ಡೀಸೆಲ್, ಪೆಟ್ರೋಲ್ ಸರಬರಾಜು ಮಾಡಿದ್ದಾಳೆ, ಬಸ್ ಗಳ ಮೇಲೆ ಸುರಿದಿದ್ದಾಳೆ. ಆದರೆ ಆಕೆ ಕನ್ನಡಪರ ಸಂಘಟನೆಗಳಿಗೆ ಸೇರಿದವಳಾ ಅಥವಾ ಇಂಥ ಅಪರಾಧಗಳಲ್ಲಿ ಈ ಹಿಂದೆ ಕೂಡ ಪಾಲ್ಗೊಂಡಿದ್ದಳಾ ಎಂಬುದು ತಿಳಿಯಬೇಕಿದೆ.

ರಾಜರಾಜೇಶ್ವರಿ ನಗರ ಪೊಲೀಸರು ಇದೇ ಪ್ರಕರಣದಲ್ಲಿ ಏಳು ಮಂದಿಯನ್ನು ಬಂಧಿಸಿದ್ದರು. ಆ ಪೈಕಿ ಐವರು ಡಿಸೋಜಾ ನಗರದವರು. ಬಂಧಿತರು ನೀಡಿದ ಮಾಹಿತಿ ಅನ್ವಯ ಭಾಗ್ಯಳನ್ನು ವಶಕ್ಕೆ ಪಡೆಯಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಕೆಪಿಎನ್ ಟ್ರಾವೆಲ್ಸ್ ನ ಡ್ರೈವರ್ಸ್ ಗಳ ಕೂಡ ಬೆಂಕಿ ಹಚ್ಚುವುದಕ್ಕೆ ಉತ್ತೇಜನ ನೀಡಿದ ಹೆಂಗಸು ಆಕೆಯೇ ಎಂದು ಗುರುತಿಸಿದ್ದಾರೆ.[ಕೆಪಿಎನ್ ಟ್ರಾವೆಲ್ಸ್ ಬಸ್ ಗೆ ಬೆಂಕಿ: ಓದುಗರು ಏನಂತಾರೆ?]

"ಪೊಲೀಸರು ಬಂಧಿಸಿರುವ ಹೆಂಗಸೇ ಪ್ರತಿಭಟನೇ ವೇಳೆ ಅಲ್ಲಿದ್ದು, ಪ್ರೋತ್ಸಾಹ ನೀಡಿದವಳು ಎಂದು ನಮ್ಮ ಡ್ರೈವರ್ ಗಳು ಈಗಾಗಲೇ ಹೇಳಿದ್ದಾರೆ. ನಮಗೆ ಆಕೆ ಹಿನ್ನೆಲೆ ಬಗ್ಗೆ ಏನೂ ಗೊತ್ತಿಲ್ಲ. ಬಸ್ ಗೆ ಬೆಂಕಿ ಹಾಕಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಅಂತ ಕರ್ನಾಟಕ ಮುಖ್ಯಮಂತ್ರಿಗಳಿಗೆ ಮನವಿ ಕೊಡಬೇಕು ಅಂತ ನಿರ್ಧರಿಸಿದ್ದೀವಿ" ಎಂದು ಟ್ರಾವೆಲ್ಸ್ ಮಾಲೀಕ ಕೆ.ಪಿ.ನಟರಾಜನ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
22 year woman from Yadagiri arrested in KPN travels bus burn case. KPN Travels more than 30 bus burned in Dwarakanatha nagar, Bengaluru during cauvery riot.
Please Wait while comments are loading...