ಬಿಬಿಎಂಪಿಗೆ ಸೇರಿದ 110 ಗ್ರಾಮಗಳಿಗೆ ಶೀಘ್ರವೇ ನೀರಿನ ಭಾಗ್ಯ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 17 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಹೊಸದಾಗಿ ಸೇರಿದ 110 ಗ್ರಾಮಗಳಿಗೆ ನೀರು ಪೂರೈಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಪೋಲಾಗುತ್ತಿರುವ ನೀರನ್ನು ತಡೆಗಟ್ಟುವ ಯೋಜನೆಯಿಂದ ಉಳಿತಾಯವಾಗುವ ನೀರನ್ನು ಈ ಗ್ರಾಮಗಳಿಗೆ ಪೂರೈಕೆ ಮಾಡಲಾಗುತ್ತದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಕಾವೇರಿ 5ನೇ ಹಂತದ ಯೋಜನೆ ಅನುಷ್ಠಾನದ ಬಗ್ಗೆ ಸಭೆ ನಡೆಯಿತು. ಸಭೆಯಲ್ಲಿ 110 ಗ್ರಾಮಗಳಿಗೆ ನೀರು ಪೂರೈಕೆ ಮಾಡಲು ಅಗತ್ಯವಿರುವ ಯೋಜನೆಯ ವಿವರವನ್ನು ಸಿದ್ಧಪಡಿಸುವಂತೆ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.

siddaramaiah

ಕಾವೇರಿ 5ನೇ ಹಂತದ ಯೋಜನೆ ಬಗ್ಗೆ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ಸಿಕ್ಕರೆ ಜಪಾನ್‌ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ (ಜೈಕಾ) ಸಾಲದ ನೆರವುಪಡೆದು ಯೋಜನೆ ಜಾರಿಗೊಳಿಸಲು ನಿರ್ಧರಿಸಲಾಗಿದೆ.

ಪೋಲಾಗುತ್ತಿರುವ ನೀರನ್ನು ತಡೆಗಟ್ಟುವ ಯೋಜನೆ (UFW)ನಗರದ ದಕ್ಷಿಣ ವಿಭಾಗದಲ್ಲಿ ಈಗಾಗಲೇ ಪೂರ್ಣಗೊಂಡಿದ್ದು, ಇದರಿಂದಾಗಿ ಪ್ರತಿದಿನ 40 ದಶಲಕ್ಷ ಲೀಟರ್ ನೀರು ಉಳಿತಾಯವಾಗುತ್ತಿದೆ. ಮುಂದಿನ ಆರು ತಿಂಗಳಿನಲ್ಲಿ ಕೇಂದ್ರ ಮತ್ತು ಪಶ್ಚಿಮ ವಿಭಾಗದಲ್ಲಿ ಯೋಜನೆ ಪೂರ್ಣಗೊಳ್ಳಲಿದ್ದು ಇದರಿಂದಾಗಿ 120 ರಿಂದ 130 ದಶಲಕ್ಷ ಲೀಟರ್ ನೀರು ಉಳಿತಾಯವಾಗುವ ನಿರೀಕ್ಷೆ ಇದೆ.

ಈಗ ತಯಾರಿಸಿರುವ ಯೋಜನೆ ಅನ್ವಯ 100 ಗ್ರಾಮಗಳಿಗೆ ಪ್ರತಿದಿನ 263 ದಶಲಕ್ಷ ಲೀಟರ್‌ ನೀರಿನ ಅಗತ್ಯವಿದೆ. ಯೋಜನೆ ಆರಂಭವಾದರೆ ಅರ್ಧದಷ್ಟು ನೀರು ಪೂರೈಸಬಹುದು. ಕಾವೇರಿ 5ನೇ ಹಂತದ ಯೋಜನೆ ಆರಂಭವಾದ ಬಳಿಕ ಪೂರ್ಣ ಪ್ರಮಾಣದ ನೀರು ಪೂರೈಸಬಹುದಾಗಿದೆ.

110 ಗ್ರಾಮಗಳಲ್ಲಿ ಪೈಪ್ ಲೈನ್ ಅಳವಡಿಕೆ ಮಾಡಿ ನೀರು ಪೂರೈಕೆ ಮಾಡಲು 1885 ಕೋಟಿ ಅಗತ್ಯವಿದೆ ಎಂದು ಅಂದಾಜಿಸಲಾಗಿದ್ದು, ಸರ್ಕಾರ 1200 ಕೋಟಿ ನೀಡಿದರೆ ಉಳಿದ 300 ಕೋಟಿ ಹಣವನ್ನು ಜಲಮಂಡಳಿ ಭರಿಸಲಿದೆ. ಉಳಿದ ಮೊತ್ತಕ್ಕೆ ಸಾಲ ಪಡೆಯಲಾಗುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
110 villages which were added to the Bengaluru city limits in 2007, may get Cauvery water from the core area under the Unaccounted for Water (UFW) project.
Please Wait while comments are loading...