ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನುಪಮಾ ವರ್ಸಸ್ ಪರಮೇಶ್ವರ್ : ಇದುವರೆಗಿನ ಕಥೆಗಳು

By Prasad
|
Google Oneindia Kannada News

ಬೆಂಗಳೂರು, ಜೂನ್ 08 : ಡಿಕೆ ರವಿ ನಂತರ ಇಡೀ ಕರ್ನಾಟಕದ ಗಮನವನ್ನು ಸೆಳೆದಿರುವ ದಿಟ್ಟ ಪೊಲೀಸ್ ಅಧಿಕಾರಿ, ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ಎಲ್ಲಿದ್ದಾರೆ? ಪರಮೇಶ್ವರ ನಾಯ್ಕ ವಿರುದ್ಧ ಮಾಡಿರುವ ಆರೋಪ ಸತ್ಯವೇ ಆಗಿದ್ದಲ್ಲಿ ದಾಖಲೆ ಏಕೆ ಬಿಡುಗಡೆ ಮಾಡುತ್ತಿಲ್ಲ? ಫೇಸ್ ಬುಕ್ ನಲ್ಲಿ ಹರಿಯಬಿಡುತ್ತಿರುವ ಸ್ಟೇಟಸ್ಸುಗಳು ಅವರದಾ ಅಥವಾ ಬೇರೆಯವರದಾ?

ಇಂಥ ಹಲವಾರು ಪ್ರಶ್ನೆಗಳಿಗೆ ರಾಜೀನಾಮೆ ಬಿಸಾಕಿ ಭೂಗತವಾಗಿರುವ, ಉಡುಪಿ ಮೂಲದ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ನಡೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಅವರು ಪಡೆಯುತ್ತಿರುವ ಬೆಂಬಲ, ಜನಪ್ರಿಯತೆ ಗಮನಿಸಿದರೆ, ಈಕ್ಷಣವೇ ಚುನಾವಣೆ ನಡೆದರೂ ಅವರು ವಿಧಾನಸೌಧದ ಮೆಟ್ಟಿಲೇರುತ್ತಾರೆ.[ಅನುಪಮಾ ಶೆಣೈಗೆ ನ್ಯಾಯ ಸಿಗಬೇಕಿದೆ? ಸರ್ಕಾರಕ್ಕೆ ಜನತೆ ಸವಾಲ್!]

ಹಿಂದೆಯೂ ಪರಮೇಶ್ವರ್ ನಾಯಕ್ ಅವರೊಂದಿಗೆ ಕಿತ್ತಾಡಿಕೊಂಡಿದ್ದ ಅನುಪಮಾ ಶೆಣೈ ದಿಢೀರನೆ ರಾಜೀನಾಮೆ ನೀಡಲು ಕಾರಣವೇನು? ಕಿರಿಯ ಅಧಿಕಾರಿಗಳು ತಮ್ಮ ಮಾತು ಕೇಳುತ್ತಿಲ್ಲವೆಂದಾ? ಲಿಕ್ಕರ್ ಲಾಬಿಯಿಂದ ಒತ್ತಡವಿದೆಯಾ? ಅಥವಾ ರಾಜಕೀಯ ಅಂಗಳ ಅವರನ್ನು ಬಾಬಾ ಎಂದು ಕರೆಯುತ್ತಿದೆಯಾ? [ಪರಮೇಶಿಪ್ರೇಮ ಪ್ರಸಂಗ... ಸಿಡಿ ಬೇಕೆ, ಆಡಿಯೋ ಬೇಕೆ?]

The adamant politician and an uninhibited police officer

ಯಾವುದೇ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದಾಗಲಿ, ಅನುಪಮಾ ಬಗ್ಗೆ ಯಾವುದೇ ನಿರ್ಧಾರಕ್ಕೆ ಬರುವುದಾಗಲಿ ಈಗಲೇ ಸಾಧ್ಯವಿಲ್ಲ. ತಿಳಿದುಕೊಳ್ಳಬೇಕೆಂದರೆ ಅವರು ಎಲ್ಲಿದ್ದಾರೆಂದೇ ಗೊತ್ತಿಲ್ಲ. ಮೊನ್ನೆ ಉಡುಪಿ, ನಿನ್ನೆ ಶಿವಮೊಗ್ಗ, ಇಂದು ಚಿಕ್ಕಮಗಳೂರು, ನಾಳೆ ಇನ್ನೆಲ್ಲಿಯೋ! ಮಾಧ್ಯಮದವರಿಗಿರಲಿ, ಸರಕಾರಕ್ಕೂ ಅವರು ಒಂದು ಸವಾಲಾಗಿದ್ದಾರೆ.[ಈಸಬೇಕು ಇದ್ದು ಜಯಿಸಬೇಕು ಅನುಪಮಾ ಶೆಣೈ ಮೇಡಂ]

ಈ ರಾದ್ಧಾಂತಕ್ಕೆಲ್ಲ ವೇದಿಕೆ ಕಲ್ಪಿಸಿದ್ದು ಕೂಡ್ಲಿಗಿಯಲ್ಲಿ ಅಂಬೇಡ್ಕರ್ ಭವನದ ಬಳಿ ಇರುವ ಖಾಲಿ ಜಾಗದಲ್ಲಿ ನಿರ್ಮಿತವಾಗುತ್ತಿದ್ದ ಮದ್ಯದಂಗಡಿ. ಇದನ್ನು ಅನುಪಮಾ ಶೆಣೈ ವಿರೋಧಿಸಿದ್ದು. ವಿರೋಧವಿದ್ದರೂ ಧಿಕ್ಕರಿಸಿ ಅಂಗಡಿ ನಿರ್ಮಿಸುತ್ತಿದ್ದ ಮಾಲಿಕ ರವಿ ಮತ್ತಿಬ್ಬರನ್ನು ಕರೆಸಿ ಅನುಪಮಾ ತದಕಿ ಬಂಧಿಸಿದ್ದರು. ನಂತರ ಬಂಧಿತರನ್ನು ಅವರ ಅನುಮತಿ ಇಲ್ಲದೆ ಜಾಮೀನು ನೀಡಿ ಬಿಡುಗಡೆ ಮಾಡಲಾಗಿತ್ತು. ಇದೇ ಕಿಡಿ ಈಗ ಬೃಹದಾಕಾರವಾಗಿ ಬೆಳೆದು ನಿಂತಿದೆ.['ಪರಮೇಶ್ವರ ನಾಯ್ಕರೇ ನಿಮ್ಮ ರಾಜೀನಾಮೆ ಯಾವಾಗ?']

ಬಾಲಿಶ ಫೇಸ್ ಬುಕ್ ಸ್ಟೇಟಸ್ಸುಗಳು : ಇನ್ನು ಅವರ 'ಅಧಿಕೃತ' ಫೇಸ್ ಬುಕ್ ಸ್ಟೇಟಸ್ ನಲ್ಲಿ ಬರುತ್ತಿರುವ ಒಂದೊಂದು ಸಾಲುಗಳು ಬಾಲಿಶಕ್ಕಿಂತ ಬಾಲಿಶವಾಗಿವೆ. 'ನಾನು ಬಿಡುಗಡೆ ಮಾಡಲಿರುವ ಸಿಡಿ ಮಧ್ಯರಾತ್ರಿ ನೋಡುವಂಥದ್ದು, ಕೊಲೆ ಬೆದರಿಕೆ ಹಾಕಿದರೆ ದೆವ್ವವಾಗಿ (ಬದುಕಿದ್ದಾಗಲೇ?) ಕಾಡುತ್ತೇನೆ, ಬೃಹನ್ನಳೆಗೆ ಬೃಹನ್ನಳೆತನ ಬಿಡಿಸಿ ಕೌರವನ ವಿರುದ್ಧ ಯುದ್ಧ ಮಾಡಿಸಿದವಳು....' ಇತ್ಯಾದಿ ಇತ್ಯಾದಿ ಇತ್ಯಾದಿ. ['ಕೊಲೆ ಬೆದರಿಕೆ ಹಾಕ್ತೀರಾ? ದೆವ್ವವಾಗಿ ಬಂದು ಕಾಡ್ತೀನಿ']

ಈ ಹೇಳಿಕೆಗಳಲ್ಲಿ ಒಬ್ಬ ಪೊಲೀಸ್ ಅಧಿಕಾರಿಯಲ್ಲಿ ಇರಬೇಕಾದ ಗಂಭೀರತೆ, ಪ್ರಬುದ್ಧತೆ ಸ್ವಲ್ಪವೂ ಇಲ್ಲ. ಓದುಗರಿಗೆ ಮಾತ್ರ ಸಖತ್ ಮಜಾ ಕೊಡುತ್ತಿದೆ. ಆದರೆ, ಕೂಲಂಕಷವಾಗಿ ಗಮನಿಸಿದರೆ, ಇದು ನಿಜವಾಗಿಯೂ ಅನುಪಮಾ ಶೆಣೈ ಅವರೇ ಇದನ್ನು ಹಾಕಿದ್ದಾ ಎಂಬ ಗುಮಾನಿಯೂ ಬರುತ್ತದೆ. ಇದಕ್ಕೆಲ್ಲ ಸ್ಪಷ್ಟೀಕರಣ ನೀಡಬೇಕಾಗಿರುವವರು ಅವರೇ.

ಫೇಕ್ ಖಾತೆ? : ಅನುಪಮಾ ಅವರ ಫೇಸ್ ಬುಕ್ ಸ್ಟೇಟಸ್ಸುಗಳು ಫೇಕ್ ಇರಬಹುದಾ ಎಂಬ ಅನುಮಾನ ಅವರ ಬೆಂಬಲಿಗರಲ್ಲಿಯೂ ಆರಂಭವಾಗಿದೆ. ಸಾಮಾಜಿಕ ತಾಣದಲ್ಲಿ ಅನುಪಮಾ ವಿರುದ್ಧ ಕೆಲ ಟೀಕಾ ಪ್ರಹಾರಗಳೂ ಶುರುವಾಗಿವೆ. ಅದೇನು ಘನಂದಾರಿ ಕೆಲಸ ಮಾಡಿದ್ದಾರೆಂದು ಅವರಿಗೆ ಇಷ್ಟು ಬೆಂಬಲ ವ್ಯಕ್ತಪಡಿಸಲಾಗುತ್ತಿದೆ ಎಂಬ ಟೀಕೆಗಳೂ ಬರುತ್ತಿವೆ.

ಈ ಪ್ರಕರಣದ ಸತ್ಯಾಸತ್ಯತೆಗಳು ಏನೇ ಇರಲಿ ಅವು ಹೊರಗೆ ಬರಲೇಬೇಕು. ಆದರೆ, ಈ ಪ್ರಕರಣ ಮಾತ್ರ ಸಿದ್ದರಾಮಯ್ಯನವರಿಗೆ ಬಿಸಿತುಪ್ಪವಾಗಿದೆ. ಹೀಗೆ ರಾಜೀನಾಮೆ ನೀಡಿ, ತಲೆಮರೆಸಿಕೊಂಡು ಆಟವಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸಿದ್ದರಾಮಯ್ಯನವರು ಅನುಪಮಾರನ್ನು ಗದರಿದ್ದಾರೆ.

ಗುರುವಾರ ಪ್ರತ್ಯಕ್ಷ? : ಇತ್ತೀಚಿನ ವರದಿಗಳು ಬಂದಾಗ, ಅನುಪಮಾ ಅವರು ಕುಟುಂಬ ಸಮೇತ ನಾಳೆ ಗುರುವಾರ ಬಳ್ಳಾರಿಯಲ್ಲಿ ಪ್ರತ್ಯಕ್ಷವಾಗಿ ಇಡೀ ಪ್ರಕರಣವನ್ನು ಮಾಧ್ಯಮದ ಮುಂದೆ ಇಡುವ ಸಾಧ್ಯತೆಗಳಿವೆ. ಸದ್ಯಕ್ಕೆ ಅವರು ತಮ್ಮ ಫೇಸ್ ಬುಕ್ ಪುಟವನ್ನೇ ಅಸ್ತ್ರವಾಗಿ ಬಳಸಿಕೊಂಡು ಸಚಿವ ಪರಮೇಶ್ವರ್ ನಾಯಕ್ ವಿರುದ್ಧ ಯುದ್ಧ ಸಾರಿದ್ದಾರೆ.

ಇದುವರೆಗೂ ಸುಮ್ಮನೆ ಇದ್ದುಬಿಟ್ಟಿದ್ದ ಸಚಿವ ಪರಮೇಶ್ವರ್ ನಾಯಕ್, ಖಾಸಗಿ ಟಿವಿ ಚಾನಲ್ಲಿಗೆ ಸಂದರ್ಶನದಲ್ಲಿ ಅನುಪಮಾ ಅವರ ಎಲ್ಲ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಅವರ ವಿರುದ್ಧ ನನಗೆ ವೈಯಕ್ತಿಕವಾದ ದ್ವೇಷ ಇಲ್ಲ, ಸುಖಾಸುಮ್ಮನೆ ಅವರು ರಂಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. [ಮೌನ ಮುರಿದ ಪರಮೇಶ್ವರ ನಾಯಕ್]

ಇದೇ ವೇಳೆ, ಬುಧವಾರ ಮಧ್ಯಾಹ್ನ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಪಮಾ ಅವರ ರಾಜೀನಾಮೆ ಪ್ರಕರಣ ಪ್ರಮುಖವಾಗಿ ಪ್ರಸ್ತಾಪವಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಡೀ ಪ್ರಕರಣದ ಬಗ್ಗೆ ಸವಿಸ್ತಾರವಾದ ವರದಿ ಬೇಕೆಂದು ಬಯಸಿದರು. ಮೂಲಗಳ ಪ್ರಕಾರ, ಸಂಪುಟ ಸಭೆಯಲ್ಲಿ ಹಾಜರಿದ್ದ ಕೆಲವು ಸಚಿವರು ಅನುಪಮಾ ಶೆಣೈ ವಿರುದ್ಧ ಕೆಂಡ ಕಾರಿದರು.

ಇಲಾಖೆಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಈ ಸಂದರ್ಭದಲ್ಲಿ ಅನುಪಮಾ ಬರೆದಿದ್ದಾರೆ. ರಾಜಕೀಯದಲ್ಲಾಗಲಿ, ಪೊಲೀಸ್ ಇಲಾಖೆಯಲ್ಲಾಗಲಿ ಇರುವ ಹುಳುಕುಗಳನ್ನು ದಿಟ್ಟವಾಗಿ ಹೊರಹಾಕಲು ಇದಕ್ಕಿಂತ ಉತ್ತಮ ಸಮಯ ಮತ್ತೊಂದಿಲ್ಲ. ಆದರೆ, ಯಾರಿಗೂ ಸಿಗದಂತೆ ಅನುಪಮಾ ಭೂಗತರಾಗಿರುವುದು ಯಾಕೋ?

English summary
Karnataka minister for labor Parameshwara Naik vs Kudligi DySP Anumapa Shenoy. The adamant politician and an uninhibited police officer's war of words goes viral on public domains. The story so far.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X