ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಲೆಕ್ಷನ್ನೂ ಬೇಡ, ಕಲೆಕ್ಷನ್ನೂ ಬೇಡವೆಂದ ಸಿರುಗುಪ್ಪ ಜನ ಗುಳೆ ಹೊರಟ್ರು

By ಜಿಎಂಆರ್
|
Google Oneindia Kannada News

ಬಳ್ಳಾರಿ, ಏಪ್ರಿಲ್. 12 : ಕರ್ನಾಟಕದಾದ್ಯಂತ ವಿಧಾನಸಭಾ ಚುನಾವಣೆ ಬಿಸಿ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಕಾರ್ಯಕರ್ತರು ಬಿಸಿಲ ತಾಪಕ್ಕೆ ತತ್ತರಿಸುತ್ತಲೇ ಇದ್ದಾರೆ. ಆದರೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಜನ ಮಾತ್ರ ಚುನಾವಣೆ ಬಿಸಿ ಅನುಭವಿಸದೇ ಹೊಟ್ಟೆ ತುಂಬಿಸಿಕೊಳ್ಳಲು ಬೆಂಗಳೂರು ತಲುಪಿದ್ದಾರೆ.

ಹೌದು, ಕೂಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ಬಡಜನರಿಗೆ ಎಲೆಕ್ಷನ್, ಪ್ರಚಾರ, ಓಟು ಇವೆಲ್ಲಾ ಬೇಕಿಲ್ಲ. ಹೊಟ್ಟೆಪಾಡಿಗಾಗಿ ವಲಸೆ ಹೋಗಿ, ಒಂದಿಷ್ಟು ಆಪತ್ ಧನ ಕೂಡಿಟ್ಟುಕೊಳ್ಳುವುದೇ ಗುರಿ. ಈ ನಿಟ್ಟಿನಲ್ಲಿ ಉದ್ಯೋಗ ಹುಡುಕಿಕೊಂಡು ಬೆಂಗಳೂರು ಸೇರುವವರ ಸಂಖ್ಯೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹೆಚ್ಚುತ್ತಲೇ ಇದೆ.

ಜನಾರ್ಧನ ರೆಡ್ಡಿಗೆ ಹೈಮಾಂಡ್ ಕಡಿವಾಣ, ಶ್ರೀರಾಮುಲುಗೆ ಹಿನ್ನಡೆ?ಜನಾರ್ಧನ ರೆಡ್ಡಿಗೆ ಹೈಮಾಂಡ್ ಕಡಿವಾಣ, ಶ್ರೀರಾಮುಲುಗೆ ಹಿನ್ನಡೆ?

ಸಿರುಗುಪ್ಪ ತಾಲೂಕಿನ ಜೀವ ನದಿಗಳಾದ ತುಂಗಭದ್ರ, ವೇದಾವತಿ ಮತ್ತು ಹಗರಿ ನದಿ ಬತ್ತಿ ಕುಡಿಯುವ ಗುಟುಕು ನೀರಿಗೂ ಬಾಯಿ ಒಣಗಿಸಿಕೊಳ್ಳಬೇಕಿದೆ. ತುಂಗಭದ್ರಾ ಜಲಾಶಯದಲ್ಲಿ ಇರುವ ನೀರನ್ನು ಕಾಲುವೆಗೆ ಹರಿ ಬಿಡದೆ ಅಧಿಕಾರಿಗಳು ರೈತರ ಬದುಕು - ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.

Siruguppa people reached Bangalore to fill the stomach

ಆಕಾಶದಲ್ಲಿ ದಟ್ಟವಾಗಿ ಕೂಡುವ ಮೋಡಗಳು ಹನಿಯಾಗಿ ಭುವಿ ತಲುಪುತ್ತಿಲ್ಲ. ಮಳೆ ನೀರು ಸಂಗ್ರಹಿಸಲು ನಿರ್ಮಿಸಿದ್ದ ಕೃಷಿ ಹೊಂಡಗಳಲ್ಲಿ ಕೆಸರೇ ಇಲ್ಲ. ಬೆಳೆದು ನಿಂತ ಹತ್ತಿ, ಮೆಣಸಿನಕಾಯಿ, ಭತ್ತ ನೆಲಕ್ಕೆ ಬಾಗಿ ಒಣಗುತ್ತಲೇ ಇವೆ. ಕೃಷಿಕ ಕೈಕಟ್ಟಿ ಕಟ್ಟೆ ಸೇರಿದ್ದರೆ, ಕೂಲಿಗಳು ಕಂಗೆಟ್ಟು ಊರು ಬಿಡುತ್ತಿದ್ದಾರೆ.

ಬಳ್ಳಾರಿ, ಸಿರುಗುಪ್ಪ, ಕುರುಗೋಡು, ಕಂಪ್ಲಿ ಸೇರಿ ವಿವಿಧ ಬಸ್ ನಿಲ್ದಾಣಗಳಲ್ಲಿ, ಬಳ್ಳಾರಿಯ ರೈಲ್ವೆ ನಿಲ್ದಾಣದಲ್ಲಿ ಪ್ರತಿನಿತ್ಯ ನೂರಾರು ಕುಟುಂಬಗಳು ಗಂಟುಮೂಟೆ ಕಟ್ಟಿಕೊಂಡು, ಸೊಂಟದಲ್ಲಿ ಕೂಸನ್ನು ಕೂರಿಸಿಕೊಂಡು, ಬಸ್ಸಿಗಾಗಿ ಕಾದು ನಿಂತು, ಬಸ್ಸಲ್ಲೂ ಗಂಟೆಗಟ್ಟೆ ನಿಂತುಕೊಂಡೇ ಪ್ರಯಾಣಿಸಿ ಬೆಂಗಳೂರು ತಲುಪುತ್ತಿದ್ದಾರೆ.

ಬೆಂಗಳೂರು ಬಸ್ಸಿಗಾಗಿ ಸಿರುಗುಪ್ಪದಲ್ಲಿ ಕಾಯುತ್ತಾ ನಿಂತಿದ್ದ ಓರ್ವ "ಮಳೆ ಇಲ್ಲ, ಬೆಳೆ ಇಲ್ಲ. ಎಷ್ಟು ದಿನಾ ಅಂತಾ ಹಿಂಗೇ ಕೈಬೀಸಿಕೊಂತಾ ಊರು ತುಂಬಾ ಅಡ್ಡಾಡೋದು. ಕೆಲ್ಸ ಐತೆ ಅಂತ ನಮ್ಮೂರು ಹುಡ್ಗ ಕರ್ದಾನ, ಎಲ್ಲರೂ ಹೋಗ್ತೀವಿ. ಈ ಎಲೆಕ್ಷನ್ನೂ ಬೇಡ, ಅವರ ಕಲೆಕ್ಷನ್ನೂ ಬೇಕಾಗಿಲ್ಲ" ಎನ್ನುತ್ತಾನೆ.

ಗೃಹಿಣಿ ಶಾರದಮ್ಮ, "ಹುಡುಗ್ರಿಗೆ ಬಿಸಿ ಊಟ ಸಿಗ್ತಿತ್ತು. ಈಗೆಲ್ಲಾ ಎಲೆಕ್ಷನ್ ಅಂತ ಸಾಲಿ ಮೇಸ್ಟ್ರು ಉಂಬಾಕ ಕೊಡ್ತಿಲ್ಲ. ಮಕ್ಳುಮರಿನ ಒಡ್ಲಾಗ ಕಟ್ಟಿಕೊಂಡು, ದುಡಿಯಾಗ ಒಂಟೀವಿ. ಏನ್ ಮಾಡೋದು? ನಮ್ ಕಷ್ಟ ಯಾರಿಗೆ ಹೇಳೋದು?' ಎಂದು ಬೇಸರ ವ್ಯಕ್ತಪಡಿಸುತ್ತಾಳೆ.

ನಾಗಮ್ಮ(63) ನಮ್ದು ಆಧಾರ್ ಕಾರ್ಡ್ ಐತೆ, ಓಟರ್ ಕಾರ್ಡೂ ಐತೆ. ಗ್ರಾಮ ಪಂಚಾಯ್ತಿಗೆ ತಿರಿಗಿ ತಿರುಗಿ ಸಾವಿರಾರು ರೂಪಾಯಿ ರೊಕ್ಕ ಖರ್ಚು ಮಾಡಿಕೊಂಡ್ರೂ ಅಕ್ಕಿಕಾರ್ಡ್ ಸಿಗಲೇ ಇಲ್ಲ. ಬರೀ ಮೋಸ, ಲಂಚ ಲಂಚ, ದುಡ್ಡು ದುಡ್ಡ ಅಂತ ಸತಾಯಿಸಿ, ನಮ್ಮನ್ನ ತಿರುಗಾಡ್ಸಿ ತಿರುಗಾಡ್ಸಿ ಸತಾಯಿಸ್ತಾರೆ' ಎನ್ನುತ್ತಾಳೆ.

ಓರ್ವ ವಿದ್ಯಾವಂತ ಯುವಕ, ನಮ್ಮೂರು ಲೀಡ್ರು ನಮ್ ಮೊಬೈಲ್ ನಂಬರ್ ತಗಂಡಾರ ಸಾರ್. ಅವರು ಏನಾರ ಹೋಗಿ ಬರೋ ಖರ್ಚು, ದಾರಿ ಖರ್ಚು ಕೊಟ್ರೆ ಒಂದೆರೆಡು ದಿನದ ಮಟ್ಟಿಗೆ ಬಂದು ಓಟು ಹಾಕ್ತೀವಿ. ಇಲ್ಲಪ್ಪಾ ಅಂದ್ರೆ, ನಾವೇನು ಮಾಡೋಣ? ನಮ್ಗೆ ದುಡಿಮೆ ಮುಖ್ಯ' ಎನ್ನುತ್ತಾನೆ.

English summary
Across Karnataka Assembly elections are rising day by day. Candidates of various political parties, activists are still in the heat of temperatures. ButBut Siruguppa Taluk people are not heated and reached Bangalore to fill the stomach.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X