ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಳೆ ಹಂಪಿ ಉತ್ಸವ 2020; ವಿಜಯನಗರ ವೈಭವ ಸಾರುವ ಈ ಉತ್ಸವದಲ್ಲೊಂದು ಸುತ್ತು...

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಜನವರಿ 9: 2020ನೇ ಸಾಲಿನ ಹಂಪಿ ಉತ್ಸವಕ್ಕೆ ಜಿಲ್ಲೆ ಸಜ್ಜಾಗುತ್ತಿದೆ. ಜನವರಿ 10 ಮತ್ತು 11ರಂದು ಕನ್ನಡ ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ನಡೆಯಲಿರುವ ಈ ಅದ್ದೂರಿ ಉತ್ಸವಕ್ಕಾಗಿ ತಯಾರಿ ನಡೆಯುತ್ತಿದ್ದು, ಜನರನ್ನು ಸೆಳೆಯಲು ಹಲವು ಕಾರ್ಯಕ್ರಮಗಳು ಆಯೋಜನೆಗೊಂಡಿವೆ.

ಹಂಪಿ ಉತ್ಸವದ ಅಂಗವಾಗಿ ಬಳ್ಳಾರಿ ಜಿಲ್ಲಾಡಳಿತ ಈ ಬಾರಿ ಹಲವು ನೂತನ ಕಾರ್ಯಕ್ರಮಗಳ ಪಟ್ಟಿಯನ್ನು ತಯಾರಿಸಿದೆ. 'ಹಂಪಿ ಬೈಸ್ಕೈ', ಬೃಹತ್ ಧ್ವನಿ ಮತ್ತು ಬೆಳಕಿನ ರೂಪಕ, ಮರಳು ಶಿಲ್ಪ, ಉದ್ಯಾನ ಉದ್ಘಾಟನೆ, ಮತ್ಸ್ಯ ಮೇಳ, ಸಾಹಸ ಕ್ರೀಡೆ... ಹೀಗೆ ಥರಾವರಿ ಕಾರ್ಯಕ್ರಮಗಳು ನೋಡುಗರ ಕಣ್ಸೆಳೆಯುವ ಸಿದ್ಧತೆಯಲ್ಲಿವೆ. ಬನ್ನಿ, ಹಂಪಿ ಉತ್ಸವದ ತಯಾರಿ ಹೇಗಿದೆ ನೋಡೋಣ...

 ನಾಳೆ ಸಿಎಂ ಯಡಿಯೂರಪ್ಪರಿಂದ ಅದ್ಧೂರಿ ಹಂಪಿ ಉತ್ಸವ ಉದ್ಘಾಟನೆ

ನಾಳೆ ಸಿಎಂ ಯಡಿಯೂರಪ್ಪರಿಂದ ಅದ್ಧೂರಿ ಹಂಪಿ ಉತ್ಸವ ಉದ್ಘಾಟನೆ

ನಾಳೆ, ಜನವರಿ 10ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 2020ನೇ ಸಾಲಿನ ಹಂಪಿ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಶ್ರೀ ಕೃಷ್ಣದೇವರಾಯ ವೇದಿಕೆ (ಗಾಯತ್ರಿ ಪೀಠ)ಯಲ್ಲಿ ಸಂಜೆ 7.30ಕ್ಕೆ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿಗಳು, ಸಾರಿಗೆ ಮತ್ತು ಕೃಷಿ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷಣ ಸಂಗಪ್ಪ ಸವದಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಬಿ. ಶ್ರೀ ರಾಮುಲು, ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ವಿಜಯನಗರ ವಿಧಾನಸಭಾ ಕ್ಷೇತ್ರ ಶಾಸಕ ಆನಂದ್ ಸಿಂಗ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಖ್ಯಾತ ಚಲನಚಿತ್ರ ನಟ ಯಶ್ ಆಗಮಿಸಲಿದ್ದಾರೆ.

ಉದ್ಘಾಟನೆ ನಂತರ ಶೋಭಾಯಾತ್ರೆ ನಡೆಯಲಿದೆ. ನಾದಸ್ವರ, ಕಹಳೆ, ಡೊಳ್ಳು ಕುಣಿತ, ತಾಷರಂಡೋಲ್, ವೀರಗಾಸೆ, ಉರುಮೆವಾದ್ಯ, ಹಗಲುವೇಷ, ನಂದಿ ಧ್ವಜ ಕುಣಿತಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿವೆ.

 ಆಗಸದಿಂದ ಹಂಪಿ ಸೌಂದರ್ಯ ಸವಿಯಲು 'ಹಂಪಿ ಬೈಸ್ಕೈ' ಆಗಸದಿಂದ ಹಂಪಿ ಸೌಂದರ್ಯ ಸವಿಯಲು 'ಹಂಪಿ ಬೈಸ್ಕೈ'

 ಜ.10ರಿಂದ 16ರವರೆಗೆ ಬೆಳಕು, ಧ್ವನಿ ರೂಪಕ

ಜ.10ರಿಂದ 16ರವರೆಗೆ ಬೆಳಕು, ಧ್ವನಿ ರೂಪಕ

ಹಂಪಿ ಉತ್ಸವದಲ್ಲಿ ಜನ ಸಾಮಾನ್ಯರಿಗೆ ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಪರಿಚಯ ಮಾಡಿಕೊಡುವ ಉದ್ದೇಶದಿಂದ, ಬೆಂಗಳೂರಿನ ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಮಂತ್ರಾಲಯದ ಪ್ರಾದೇಶಿಕ ಜನ ಸಂಪರ್ಕ ಕಾರ್ಯಾಲಯವು ವಿಜಯನಗರ ವೈಭವ, ಬೃಹತ್ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಹಮ್ಮಿಕೊಂಡಿದೆ. ಹಂಪಿಯ ಗಜಶಾಲೆ ಆವರಣದಲ್ಲಿ ಜ.10ರಿಂದ ಸಂಜೆ 16ರವರೆಗೆ ಪ್ರತಿನಿತ್ಯ ಸಂಜೆ 7ರಿಂದ 9.30ರವರೆಗೆ ಈ ಕಾರ್ಯಕ್ರಮ ನಡೆಯಲಿದೆ. ಖ್ಯಾತ ನಟಿ ಉಮಾಶ್ರೀ, ಡಾ.ಬಿ.ವಿ.ರಾಜಾರಾಮ್, ಹೂಗೊಪ್ಪಲು ಕೃಷ್ಣಮೂರ್ತಿ ಅವರು ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ಹೊಗೊಪ್ಪಲು ಕೃಷ್ಣಮೂರ್ತಿ ದೃಶ್ಯವಿನ್ಯಾಸ ಮತ್ತು ಪರಿಕಲ್ಪನೆ, ಡಾ.ಶೀಲಾ ಶ್ರೀಧರ್ ಅವರು ನೃತ್ಯ ಸಂಯೋಜನೆ ಮಾಡಲಿದ್ದಾರೆ.

 11 ಅಡಿಯ ಸುರಂಗ ಮಾದರಿಯ ಅಕ್ವೇರಿಯಂ

11 ಅಡಿಯ ಸುರಂಗ ಮಾದರಿಯ ಅಕ್ವೇರಿಯಂ

ಉತ್ಸವದ ಪ್ರಯುಕ್ತ ನಾಲ್ಕು ವೇದಿಕೆಗಳಲ್ಲಿ ಲಲಿತಕಲೆಗಳು ಅನಾವರಣಗೊಳ್ಳುವುದರ ಜೊತೆಗೆ ವಿವಿಧ ರೀತಿಯ ಕಲಾ ಪ್ರದರ್ಶನಗಳು ಮತ್ತು ವಸ್ತು ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ಈ ಬಾರಿ ವಿಶೇಷವಾಗಿ ಮತ್ಸ್ಯಮೇಳವನ್ನು ಸಹ ಆಯೋಜಿಸಿದ್ದು ಪ್ರೇಕ್ಷಕರನ್ನು ಮತ್ತಷ್ಟು ಮನಸೂರೆಗೊಳಿಸಲಿವೆ. ಜಿಲ್ಲಾಡಳಿತ ಬಳ್ಳಾರಿ ಹಾಗೂ ಮೀನುಗಾರಿಕೆ ವತಿಯಿಂದ ಆಯೋಜಿಸಲಾಗಿರುವ ಮತ್ಸ್ಯಮೇಳವು ಹಂಪಿಯ ಗ್ರಾಮ ಪಂಚಾಯತಿ ಮುಂಭಾಗದ ಮಾತಂಗ ಪರ್ವತ ಮೈದಾನದಲ್ಲಿ ಜ.10ರಂದು ಉದ್ಘಾಟನೆಗೊಳ್ಳಲಿದೆ. ಮೇಳದಲ್ಲಿ 11 ಅಡಿಯ ಸುರಂಗ ಮಾದರಿಯ ಅಕ್ವೇರಿಯಂ ನಿರ್ಮಿಸಲಾಗಿದ್ದು, ಅದರೊಂದಿಗೆ 50ಕ್ಕಿಂತ ಹೆಚ್ಚಿನ ಫಿಶ್ ಟ್ಯಾಂಕ್ ಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಒಂದೊಂದು ಬಾಕ್ಸ್ ಗಳಲ್ಲಿ 10-15 ಬಗೆಬಗೆಯ ಜಾತಿಯ ಮೀನುಗಳನ್ನು ಪ್ರದರ್ಶನಕ್ಕಿಡಲಾಗುತ್ತದೆ ಎಂದು ಮತ್ಸ್ಯಮೇಳದ ನಿರ್ವಹಣಕಾರರು ತಿಳಿಸಿದ್ದಾರೆ.

 ಉದ್ಯಾನವನದ ಮೂಲಕ 2020ರ ಹಂಪಿ ಉತ್ಸವ ಅಜರಾಮರ

ಉದ್ಯಾನವನದ ಮೂಲಕ 2020ರ ಹಂಪಿ ಉತ್ಸವ ಅಜರಾಮರ

ಪ್ರತಿ ವರ್ಷದ ಹಂಪಿ ಉತ್ಸವ 2-3 ದಿನಗಳ ಕಾಲವಷ್ಟೇ ಪ್ರವಾಸಿಗರಲ್ಲಿ ನೆನಪಲ್ಲುಳಿಯುತ್ತವೆ. ಆದರೆ ಈ ಬಾರಿಯ ಹಂಪಿ ಉತ್ಸವ ಸ್ಮಾರಕಗಳಂತೆ ವರ್ಷವಿಡೀ ನೆನಪಲ್ಲಿ ಉಳಿಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ವಿನೂತನ ಯೋಜನೆಯೊಂದನ್ನು ಪ್ರಸ್ತುತಪಡಿಸಿದೆ. ಅದು ಉದ್ಯಾನವನದ ಮುಖಾಂತರ. ಹಂಪಿ ಉತ್ಸವ 2020 ಕೇವಲ ಉತ್ಸವಕ್ಕೆ ಸಾಕ್ಷಿಯಾದವರಿಗಲ್ಲದೇ ಉತ್ಸವದ ನಂತರ ಭೇಟಿ ನೀಡುವ ಪ್ರವಾಸಿಗರಿಗೂ ನೆನಪಿಸುವ ಸಲುವಾಗಿ ಕಮಲಾಪುರ ಹತ್ತಿರದ ಐತಿಹಾಸಿಕ ಸ್ಮಾರಕ ರಾಣಿ ಸ್ನಾನದ ಗೃಹ ಪಕ್ಕದಲ್ಲಿನ ಜಾಗದಲ್ಲಿ ಸುಮಾರು 3 ಎಕರೆ ಪ್ರದೇಶದಲ್ಲಿ ಫ್ಲೋರ್ ಪಾರ್ಕ್ ಹಾಗೂ ರಾಕ್ ಗಾರ್ಡನ್ ನಿರ್ಮಿಸಲಾಗುತ್ತಿದೆ. ಬೆಂಗಳೂರಿನ ಲಾಲ್ ಬಾಗ್ ಪಾರ್ಕ್ ನಿರ್ವಾಹಕ ಪ್ರಸನ್ನರವರ ನೇತೃತ್ವದಲ್ಲಿ ನಿರ್ಮಾಣವಾಗಿದೆ.

ಮರಳಲ್ಲಿ ಮೂಡುತ್ತಿರುವ ತಾಜ್‍ ಮಹಲ್ ನೋಡಲು ಬನ್ನಿಮರಳಲ್ಲಿ ಮೂಡುತ್ತಿರುವ ತಾಜ್‍ ಮಹಲ್ ನೋಡಲು ಬನ್ನಿ

 ಉತ್ಸವದಲ್ಲಿ ಇನ್ನೂ ಏನೆಲ್ಲಾ ಇದೆ?

ಉತ್ಸವದಲ್ಲಿ ಇನ್ನೂ ಏನೆಲ್ಲಾ ಇದೆ?

ಜ.10ರಿಂದ 11ರವರೆಗೆ ಬೆಳಗ್ಗೆ 9.30ರಿಂದ ಸಾಸುವೆಕಾಳು ಗಣಪ ಮುಂಭಾಗದಲ್ಲಿ ಸಾಹಸ ಕ್ರೀಡೆಗಳು ನಡೆಯಲಿವೆ. ಜ.11ರಂದು ಕಮಲಾಪುರ ಕೆರೆಯಲ್ಲಿ ಸಂಜೆ 4ಕ್ಕೆ ಪಾರಂಪರಿಕ ಸ್ಪರ್ಧೆ ಇರಲಿದೆ. ಜ.10 ಮತ್ತು 11ರಂದು ಬೆಳಗ್ಗೆ 11ರಿಂದ ವಿರೂಪಾಕ್ಷೇಶ್ವರ ದೇವಸ್ಥಾನದ ಮುಂಭಾಗದಲ್ಲಿ ರಂಗೋಲಿ ಹಾಗೂ ಮೆಹಂದಿ ಪ್ರದರ್ಶನ ನಡೆಯಲಿದೆ. ಇದರ ಜೊತೆಗೆ ಶಿಲ್ಪಕಲೆ ಪ್ರದರ್ಶನ, ಚಿತ್ರಕಲಾ ಪ್ರದರ್ಶನ, ಪುಸ್ತಕಮೇಳ, ಗ್ರಾಮೀಣ ಕ್ರೀಡೆಗಳು, ಫಲಫುಷ್ಪ ಪ್ರದರ್ಶನ, ಜಲಕ್ರೀಡೆಗಳು, ಛಾಯಾಚಿತ್ರ ಪ್ರದರ್ಶನ, ಆಹಾರ ಮೇಳ, ಮರಳು ಶಿಲ್ಪಕಲೆ ಉತ್ಸವ, ರಾಕ್‍ ಕ್ಲೈಂಬಿಂಗ್ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜ.10 ಮತ್ತು 11ರಂದು ಬೆಳಗ್ಗೆ 10ರಿಂದ ರಾತ್ರಿ 10ರವರೆಗೆ ಮಾತಂಗಪರ್ವತ ಮೈದಾನದ ಗ್ರಾಪಂ ಮುಂಭಾಗದಲ್ಲಿ ವಸ್ತುಪ್ರದರ್ಶನ ಆಯೋಜಿಸಲಾಗಿದೆ.

ಹಂಪಿ ಉತ್ಸವದ ಸಮಾರೋಪ ಸಮಾರಂಭವು ಇದೇ ಜ.11 ರಂದು ಸಂಜೆ 6ಕ್ಕೆ ನಡೆಯಲಿದೆ. ಭಾರತ ಸರ್ಕಾರದ ಸಂಸ್ಕೃತಿ ಸಚಿವರಾದ ಪ್ರಲ್ಹಾದ್ ‍ಸಿಂಗ್ ಪಟೇಲ್ ಸಮಾರೋಪ ಭಾಷಣ ಮಾಡಲಿದ್ದಾರೆ.

English summary
The district is gearing up for the 2020 Hampi Festival. On the 10th and 11th of January, the Kannada Culture Department, the Department of Tourism and the District administration has conducted several programmes,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X