ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸಪೇಟೆ ಮಹಾನಗರ ಪಾಲಿಕೆ ರಚನೆಗೆ ಸಾರ್ವಜನಿಕರಿಂದ ವಿರೋಧ

By ಭೀಮರಾಜ. ಯು. ವಿಜಯನಗರ
|
Google Oneindia Kannada News

ವಿಜಯನಗರ. ಸೆಪ್ಟೆಂಬರ್ 23: ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಫೆ.2ರಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೊಸಪೇಟೆ ಕೇಂದ್ರವಾಗಿಟ್ಟುಕೊಂಡು ವಿಜಯನಗರ ಜಿಲ್ಲೆ ಎಂದು ಘೋಷಣೆ ಮಾಡಿದ್ದರು. ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ರಚನೆಗೊಂಡು ಹಲವು ತಿಂಗಳಾದರೂ ಜಿಲ್ಲಾಮಟ್ಟದ ಅಧಿಕಾರಿಗಳು ಇನ್ನೂ ನೇಮಕವಾಗಿಲ್ಲ, ಜಿಲ್ಲಾ ಕಚೇರಿಗಳೂ ಬಂದಿಲ್ಲ. ಅಷ್ಟರಲ್ಲಿಯೇ ಮಹಾನಗರ ಪಾಲಿಕೆ ಮಾಡುವುದಕ್ಕೆ ಸಚಿವ ಆನಂದ್ ಸಿಂಗ್ ಹೊರಟಿದ್ದಾರೆ.

ವಿಜಯನಗರ ಜಿಲ್ಲೆಯಾಗಿ ಸರಿಸುಮಾರು 7- 8 ತಿಂಗಳುಗಳು ಕಾಲ ಕಳೆಯುತ್ತಾ ಬಂದರೂ ವಿಜಯನಗರ ವಿಶೇಷ ಅಧಿಕಾರಿಯನ್ನು ಹೊರತುಪಡಿಸಿದರೆ ಉಳಿದ ಜಿಲ್ಲಾಮಟ್ಟದ ಅಧಿಕಾರಿಗಳು ನೇಮಕಗೊಂಡಿಲ್ಲ. ಇದರ ಮಧ್ಯೆಯೇ ಹೊಸಪೇಟೆ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಉನ್ನತೀಕರಿಸಲು ಸಚಿವ ಆನಂದ್ ಸಿಂಗ್ ಮುಂದಾಗಿದ್ದಾರೆ. ಆದರೆ, ನಗರಸಭೆಯಿಂದ ಮಹಾನಗರ ಪಾಲಿಕೆ ಮಾಡುವುದಕ್ಕೆ ಸರ್ಕಾರ ಕೆಲ ಮಾರ್ಗಸೂಚಿಗಳನ್ನು ನೀಡಲಾಗಿದೆ.

 ಮಹಾನಗರ ಪಾಲಿಕೆ ರಚನೆಗೆ ಷರತ್ತುಬದ್ಧ ನಿಯಮಾವಳಿ

ಮಹಾನಗರ ಪಾಲಿಕೆ ರಚನೆಗೆ ಷರತ್ತುಬದ್ಧ ನಿಯಮಾವಳಿ

ನಗರಸಭೆಯಿಂದ ಮಹಾನಗರ ಪಾಲಿಕೆ ಮಾಡುವುದಕ್ಕೆ ಜಿಲ್ಲೆಯಾಗಿರಬೇಕು, 3 ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರಬೇಕು, ನೀರಾವರಿ ಪ್ರದೇಶಗಳನ್ನು ಒಳಗೊಂಡಿರಬಾರದು, ಕೃಷಿ ಭೂಮಿ ವ್ಯಾಪ್ತಿಯಿಂದ ಹೊರಗೊರಬೇಕು, ಎನ್.ಎ ಸೈಟ್‌ಗಳು ಅಧಿಕ ಪ್ರಮಾಣದಲ್ಲಿರಬೇಕು, ಪಟ್ಟಣ ಪಂಚಾಯಿತಿ ಒಳಗೊಂಡಿರಬಾರದು ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳನ್ನು ಸೇರಿಸುವಂತಿಲ್ಲ. ಎಲ್ಲದಕ್ಕಿಂತಲೂ ಮುಖ್ಯವಾಗಿ ಲೋಕಸಭಾ ಕ್ಷೇತ್ರವನ್ನು ಹೊಂದಿರಬೇಕು.

 ಸದ್ದಿಲ್ಲದೇ ಮಾಹಾನಗರ ಪಾಲಿಕೆ ಕರಡು ತಯಾರಿ

ಸದ್ದಿಲ್ಲದೇ ಮಾಹಾನಗರ ಪಾಲಿಕೆ ಕರಡು ತಯಾರಿ

ಹೊಸಪೇಟೆ ನಗರಸಭೆಯನ್ನು ಮಹಾನಗರ ಪಾಲಿಕೆ ಮಾಡಲು ಉಸ್ತುವಾರಿ ಸಚಿವ ಆನಂದ್ ಸಿಂಗ್ ಸದ್ದಿಲ್ಲದೇ ತಯಾರಿ ನಡೆಸಿದ್ದಾರೆ. ಮಹಾನಗರ ಪಾಲಿಕೆಗೆ ಇಷ್ಟೊಂದು ಅವಸರ ಏಕೆ? ಇನ್ನೂ ಜಿಲ್ಲಾಮಟ್ಟದ ಅಧಿಕಾರಿಗಳು ನೇಮಕವಾಗಿಲ್ಲ, ಕಚೇರಿಗಳು ಬಂದಿಲ್ಲ. ಈಗ ಆಗಿರುವ ಜಿಲ್ಲೆ ಸಂಪೂರ್ಣವಾಗಿ ಕಾರ್ಯರಂಭ ಮಾಡದೇ ತರಾತುರಿ ಯಾಕೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ. ಯಾವುದೋ ಉದ್ದೇಶ ಇಟ್ಟುಕೊಂಡು ಮಹಾನಗರ ಪಾಲಿಕೆ ಮಾಡುವುದಕ್ಕೆ ಹೊರಟಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿವೆ.

 ಮಹಾನಗರ ಪಾಲಿಕೆಗೆ ನಗರಸಭೆ ಜನಸಂಖ್ಯೆ ಕಡಿಮೆ

ಮಹಾನಗರ ಪಾಲಿಕೆಗೆ ನಗರಸಭೆ ಜನಸಂಖ್ಯೆ ಕಡಿಮೆ

"ಹೊಸಪೇಟೆ ನಗರಸಭೆ ವ್ಯಾಪ್ತಿಯು ಮಹಾನಗರ ಪಾಲಿಕೆಯಾಗುವ ಅರ್ಹತೆಯನ್ನು ಹೊಂದಿಲ್ಲ. ನಗರಸಭೆಯಿಂದ ಮಹಾನಗರ ಪಾಲಿಕೆಯಾಗುವುದಕ್ಕೆ ಕನಿಷ್ಟ 3 ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರಬೇಕು, ಆದರೆ ನಗರಸಭೆ ವ್ಯಾಪ್ತಿಯಲ್ಲಿ 2011ರ ಜನಗಣತಿ ಪ್ರಕಾರ ಎರಡು ಲಕ್ಷದ 6 ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿ ಮಹಾನಗರ ಪಾಲಿಕೆ ಆಗುವ ಅರ್ಹತೆಯನ್ನು ಹೊಂದಿಲ್ಲದಿದ್ದರೂ, ಸುತ್ತಮುತ್ತಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳನ್ನು ಸೇರ್ಪಡೆ ಮಾಡಿಕೊಂಡು ಮಹಾನಗರ ಪಾಲಿಕೆ ಮಾಡುವುದಕ್ಕೆ ಹೊರಟಿದ್ದಾರೆ. ಅರ್ಹತೆಯನ್ನು ಹೊಂದಿಲ್ಲದಿದ್ದರೂ ಮಹಾನಗರ ಪಾಲಿಕೆ ಮಾಡುವುದಕ್ಕೆ ಹೊರಟಿರುವುದು ಎಷ್ಟರ ಮಟ್ಟಿಗೆ ಸರಿ?," ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. "ಈಗಾಗಲೇ ನಗರಸಭೆಯ ಅಧಿಕಾರಿಗಳಿಗೆ ಪಾಲಿಕೆ ರಚನೆಗೆ ಬೇಕಾದ ಕರಡು ಪ್ರತಿ ತಯಾರಿಗೆ ಸೂಚನೆ ನೀಡಿದ್ದೇನೆ. ಈ ಸಂಬಂಧ ನಾನು ಶೀಘ್ರದಲ್ಲೇ ಸಚಿವ ಸಂಪುಟದಲ್ಲಿ ಚರ್ಚಿಸುತ್ತೇನೆ," ಎಂದು ಪ್ರವಾಸೋದ್ಯಮ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದರು.

 ಪಾಲಿಕೆ ರಚನೆಯಾಗುವಷ್ಟು ಜನಸಂಖ್ಯೆಯನ್ನು ಹೊಂದಿಲ್ಲ

ಪಾಲಿಕೆ ರಚನೆಯಾಗುವಷ್ಟು ಜನಸಂಖ್ಯೆಯನ್ನು ಹೊಂದಿಲ್ಲ

"ಹೊಸಪೇಟೆ ನಗರಸಭೆ ಮಹಾನಗರ ಪಾಲಿಕೆ ರಚನೆಯಾಗುವಷ್ಟು ಜನಸಂಖ್ಯೆಯನ್ನು ಹೊಂದಿಲ್ಲ, ಹಾಗಾಗಿ ಸಚಿವರು ಹೊಸಪೇಟೆಯಿಂದ ಹತ್ತಾರು ಕಿಲೋಮೀಟರ್ ದೂರದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳನ್ನು ಸೇರಿಸಿಕೊಂಡು ಪಾಲಿಕೆ ಮಾಡುವುದಕ್ಕೆ ಹೊರಟಿದ್ದಾರೆ. ಹೊಸಪೇಟೆ ನಗರಸಭೆಯು ಮಹಾನಗರ ಪಾಲಿಕೆಯಾಗಲು ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಅದಕ್ಕಾಗಿ ದೂರದ ನಮ್ಮ ಹಳ್ಳಿಗಳನ್ನು ಸೇರಿಸಿದರೆ, ಗ್ರಾಮೀಣ ಕೃಪಾಂಕ ರದ್ದು, ಜಮೀನುಗಳ ಬೆಲೆ ಹೆಚ್ಚಳ, ರಿಯಲ್ ಎಸ್ಟೇಟ್ ಉದ್ಯಮಕ್ಕೆ ಪ್ರೋತ್ಸಾಹದಂತಹ ತೊಂದರೆ, ತೆರಿಗೆ ಹಣದಲ್ಲಿ ನೂರು ಪಟ್ಟು ಹೆಚ್ಚಳ ಎನ್ನುವಂತಹ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ಹಳ್ಳಿಗಳನ್ನು ಬಿಟ್ಟು ಮಹಾನಗರ ಪಾಲಿಕೆ ಮಾಡಿದರೆ ನಮ್ಮದೇನು ಅಭ್ಯಂತರವಿಲ್ಲ," ಎಂದು ಹೊಸಪೇಟೆ ನಿವಾಸಿ ರಾಮಕೃಷ್ಣ ವಿರೋಧ ವ್ಯಕ್ತಪಡಿಸಿದರು.

 ಮಹಾನಗರ ಪಾಲಿಕೆ ಮಾಡುವ ಅವಶ್ಯಕತೆ ಏನಿದೆ?

ಮಹಾನಗರ ಪಾಲಿಕೆ ಮಾಡುವ ಅವಶ್ಯಕತೆ ಏನಿದೆ?

"ನಗರಸಭೆಯನ್ನು ಮೇಲ್ದರ್ಜೆಗೇರಿಸಿ ಮಹಾನಗರ ಪಾಲಿಕೆ ಮಾಡುವ ಅವಶ್ಯಕತೆ ಏನಿದೆ? ಇದರಿಂದ ಜನರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ನಗರದಲ್ಲಿನ ಮನೆ ತೆರಿಗೆ, ವಾಣಿಜ್ಯ ತೆರಿಗೆ ಹೆಚ್ಚಾಗುತ್ತದೆ. ಜತೆಗೆ ನಗರ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯಿತಿ ಮಟ್ಟದಲ್ಲಿನ ಸಾರ್ವಜನಿಕರಿಗೆ ತೊಂದರೆ ಉಂಟಾಗಲಿದೆ. ಮೂಲಭೂತ ಸೌಕರ್ಯ, ಶಿಕ್ಷಣ, ಉದ್ಯೋಗ, ಆರೋಗ್ಯ ಸೇರಿದಂತೆ ಇನ್ನಿತರ ಸೌಲಭ್ಯಗಳು ಬಡವರಿಗೆ ಲಭ್ಯವಾಗುವುದಿಲ್ಲ," ಎಂದು ಇನ್ನೋರ್ವ ಹೊಸಪೇಟೆ ನಿವಾಸಿ ನಾಗರಾಜ್ ಗುಜ್ಜಲ್ ಹೇಳಿದರು.

 ಮುಂದೆ ಏನು ಕಾದು ನೋಡಬೇಕಿದೆ

ಮುಂದೆ ಏನು ಕಾದು ನೋಡಬೇಕಿದೆ

ಹೊಸಪೇಟೆ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲು ಕನಿಷ್ಠ ಮೂರು ಲಕ್ಷ ಜನಸಂಖ್ಯೆ ಇರಬೇಕೆಂಬ ನಿಯಮದ ಹಿನ್ನೆಲೆಯಲ್ಲಿ ಹಳ್ಳಿಗಳನ್ನು ಸೇರಿಸಿ ಕರಡು ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ನಗರಸಭೆ ಅಧಿಕಾರಿಗಳು ಮುಂದಾಗಿದ್ದಾರೆ. ಈ ನಿರ್ಧಾರ ಕೈಬಿಡದಿದ್ದರೆ ಹೋರಾಟ ಮಾಡುವುದು ಅನಿವಾರ್ಯ ಎನ್ನುತ್ತಿದ್ದಾರೆ ಸ್ಥಳೀಯರು. ಆದರೆ ವಿರೋಧದ ನಡುವೆಯೂ ಸಚಿವ ಆನಂದ್ ಸಿಂಗ್ ಮಹಾನಗರ ಪಾಲಿಕೆಯನ್ನು ರಚನೆ ಮಾಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

English summary
Minister Anand Singh has come forward to creation the Hospet City corporation, it has been opposed by the public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X