ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶೇಷ ವರದಿ: ಉದ್ಯೋಗ ಅರಸಿ ಗುಳೆ ಹೋಗುತ್ತಿರುವ ಉತ್ತರ ಕರ್ನಾಟಕದ ಜನತೆ

By ಭೀಮರಾಜ. ಯು. ವಿಜಯನಗರ
|
Google Oneindia Kannada News

ವಿಜಯನಗರ, ಜುಲೈ 24: ಉತ್ತರ ಕರ್ನಾಟದ ಕಡೆ ಬಹುತೇಕವಾಗಿ ಬಂಜಾರ ಸಮುದಾಯ ತಮ್ಮ ಬದುಕನ್ನು ಕಟ್ಟಿಕೊಳ್ಳಲು ನಿತ್ಯದ ಕೂಲಿ ಅರಸಿ ಗುಳೆ ಹೊಗುತ್ತಿದ್ದಾರೆ.

ಉತ್ತರ ಕರ್ನಾಟಕದ ಬಹುತೇಕ ತಾಂಡಗಳ ಬಂಜಾರ ಸಮುದಾಯಗಳು ಗುಳೆ ಹೋಗುವಾಗ ಮಕ್ಕಳನ್ನು ಕರೆದೊಯ್ಯುತ್ತಾರೆ. ತಮ್ಮ ಊರುಗಳಲ್ಲಿ ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ಯಾರು ಇಲ್ಲದೇ ಇರುವುದರಿಂದ ತಮ್ಮ ಮಕ್ಕಳನ್ನು ಜತೆಯಲ್ಲಿಯೇ ಕರೆದುಕೊಂಡು ಹೋಗುತ್ತಾರೆ. ಹಾಗಾಗಿ ಮಕ್ಕಳ ಕಲಿಕೆಗೆ ತೊಂದರೆಯಾಗುವುದರಿಂದ ವಿದ್ಯಾಭ್ಯಾಸವನ್ನು ಮುಂದುವರೆಸದೇ ಶಾಲೆಗಳನ್ನು ಮಕ್ಕಳು ತೊರೆಯುತ್ತಿದ್ದಾರೆ. ತಮ್ಮ ನಿತ್ಯದ ಬದುಕು ಸಾಗಿಸುವುದಕ್ಕಾಗಿ ಬಂಜಾರ ಸಮುದಾಯಗಳು ಮಂಡ್ಯ, ಮೈಸೂರು, ತಮಿಳುನಾಡು, ಹುಬ್ಬಳ್ಳಿ, ಶಿವಮೊಗ್ಗ, ಬೆಂಗಳೂರು ಕಾಫಿ ಸೀಮೆ ಹೀಗೆ ವಿವಿಧ ಜಿಲ್ಲೆಗಳಿಗೆ ಕುಟುಂಬ ಸಮೇತರಾಗಿ ಗುಳೆ ಹೋಗುತ್ತಾರೆ.

 ಪ್ರತಿವರ್ಷ ಗುಳೆ

ಪ್ರತಿವರ್ಷ ಗುಳೆ

ಗುಳೆ ಹೋದವರು ಹೊಲ- ಗದ್ದೆಗಳಲ್ಲಿ ಗುಡಾರಗಳನ್ನು ಹಾಕಿಕೊಂಡು ಅಲ್ಲಿಯೇ ಜೀವನ ಮಾಡುತ್ತಾರೆ. ಗಂಡ, ಹೆಂಡತಿ ಹಾಗೂ ಮಕ್ಕಳು ಕೆಲಸ ಮಾಡುತ್ತಾರೆ. ಕಬ್ಬು ಕಟಾವು ಮಾಡುವುದಕ್ಕೆ ಗುತ್ತಿಗೆ ಹಿಡಿದುಕೊಂಡು ಕೆಲಸ ಬೇಗ ಮಾಡಬೇಕೆನ್ನುವ ದೃಷ್ಟಿಯಿಂದ ಸಣ್ಣ ಮಕ್ಕಳಿಂದ ಹಿಡಿದು ಕುಟುಂಬದವರೆಲ್ಲರೂ ಕೆಲಸ ಮಾಡುತ್ತಾರೆ. ಒಂದು ದಿನಕ್ಕೆ‌ ಕೂಲಿ 600 ರೂ. ರಿಂದ 700 ರೂ.ವರೆಗೆ ಕೂಲಿಯನ್ನು ದುಡಿಯುತ್ತಾರೆ.

ಉತ್ತರ ಕರ್ನಾಟಕವನ್ನು ಬಯಲು ಸೀಮೆ ಎಂದು ಕರೆಯಲಾಗುತ್ತದೆ. ಅದರಲ್ಲಿ ಕೊಪ್ಪಳ, ಗದಗ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ತಾಂಡದ ಬಂಜಾರ ಸಮುದಾಯದವರು ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಉದ್ಯೋಗವನ್ನು ಅರಸಿ ಗುಳೆ ಹೋಗುತ್ತಾರೆ. ಕಬ್ಬು ಕಟಾವು ಕೆಲಸ ಮುಗಿಸಿಕೊಂಡು ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ತಮ್ಮ ಹಳ್ಳಿಗಳಿಗೆ ಹಿಂತಿರುಗಿ ಬರುತ್ತಾರೆ. 5- 6 ತಿಂಗಳ ಕಾಲ ಕಬ್ಬು ಕಟಾವಿಗೆ ಕುಟುಂಬ ಸಮೇತರಾಗಿ ಪ್ರತಿವರ್ಷ ಹೋಗುತ್ತಾರೆ.

 14 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ಕಡ್ಡಾಯ

14 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ಕಡ್ಡಾಯ

ರಾಜ್ಯ ಹಾಗೂ ಕೇಂದ್ರ ಸರ್ಕಾರ ಪ್ರತಿಯೊಬ್ಬರೂ ಶಿಕ್ಷಿತರಾಗಬೇಕು ಎನ್ನುವ ದೃಷ್ಠಿಯಿಂದ 14 ವರ್ಷದವರೆಗಿನ ಮಕ್ಕಳಿಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಕಡ್ಡಾಯಗೊಳಿಸಿ, ಅಗತ್ಯ ಸೌಲಭ್ಯಗಳನ್ನು ಉಚಿತವಾಗಿ ನೀಡುತ್ತಿದೆ. ಸದ್ಯ ಕೊರೊನಾ ಹಾವಳಿಯಿಂದ ಲಾಕ್‌ಡೌನ್ ಮಾಡಿದ ಪರಿಣಾಮ ಮೊದಲೇ ಆರ್ಥಿಕ‌ ಸಂಕಷ್ಟದಲ್ಲಿದ್ದ ಈ ಸಮುದಾಯಗಳು ಲಾಕ್‌ಡೌನ್‌ನಿಂದ‌ ಇನ್ನಷ್ಟು ಜೀವನ ನಡೆಸುವುದಕ್ಕೂ ಆಗದೇ ಸಂಕಷ್ಟಕ್ಕೀಡಾಗಿವೆ. ಕೊರೊನಾದಿಂದ ಶಾಲಾ- ಕಾಲೇಜುಗಳು ಮುಚ್ಚಲಾಗಿವೆ. ಹಾಗಾಗಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ.

 ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿ

ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿ

ತಾಂಡಗಳಲ್ಲಿ ಉದ್ಯೋಗವನ್ನು ಅರಸಿ ಗುಳೆ ಹೋಗುವುದು ಸಾಮಾನ್ಯವಾಗಿದ್ದು, ಪ್ರತಿಯೊಬ್ಬರಿಗೂ ಉದ್ಯೋಗ ನೀಡಬೇಕಿರುವುದು ಸರ್ಕಾರದ ಕರ್ತವ್ಯವಾಗಿದೆ. ಕಳೆದ ಒಂದು ವರ್ಷಗಳಿಂದ ಕೊರೊನಾ ಲಾಕ್‌ಡೌನ್‌ನಿಂದಾಗಿ ಹಲವು ಜನರು ಉದ್ಯೋಗ ಕಳೆದುಕೊಂಡಿದ್ದಾರೆ.

ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳಿಂದ ಶೇ.65ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ‌ ವಲಸೆ ಹೋಗುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯ 8 ತಾಂಡಾ, ವಿಜಯನಗರ ಜಿಲ್ಲೆಯಲ್ಲಿ 85 ತಾಂಡಾಗಳಿದ್ದು, ಕೊಪ್ಪಳದಲ್ಲಿ 108 ತಾಂಡಾಗಳಿವೆ. ಈ ಮೂರು ಜಿಲ್ಲೆಯಲ್ಲಿ ಕಳೆದ 5- 6 ವರ್ಷಗಳಲ್ಲಿ ತಾಂಡಾಗಳಿಂದ ಶೇ.65 ರಿಂದ 70 ರಷ್ಟು ಕುಟುಂಬಗಳು ಮೈಸೂರು, ಮಂಡ್ಯ, ಹುಬ್ಬಳ್ಳಿ ಸೇರಿ ತಮಿಳುನಾಡು, ಆಂಧ್ರಪ್ರದೇಶಕ್ಕೆ ಮಕ್ಕಳೊಂದಿಗೆ ಗುಳೆ ಹೋಗುತ್ತಿದ್ದಾರೆ.

 ಗುತ್ತಿಗೆದಾರರಿಂದ ಒತ್ತಡದ ಕೆಲಸ

ಗುತ್ತಿಗೆದಾರರಿಂದ ಒತ್ತಡದ ಕೆಲಸ

ಗುತ್ತಿಗೆದಾರರು ಕಡಿಮೆ ಸಂಬಳ ಕೊಟ್ಟು ಕಾರ್ಮಿಕರಿಂದ ಅಧಿಕ ಕೆಲಸ ಮಾಡಿಸಿಕೊಳ್ಳುತ್ತಾರೆ. ಗುತ್ತಿಗೆದಾರರು ಹಗಲು- ರಾತ್ರಿಯನ್ನದೇ ತಮ್ಮ ಲಾಭಕ್ಕಾಗಿ ಕಾರ್ಮಿಕರಿಂದ ಅಧಿಕ ಕೆಲಸ ಮಾಡಿಸಿಕೊಳ್ಳುತ್ತಾರೆ. ಜೀವನ ನಿರ್ವಹಣೆಗಾಗಿ ತಮ್ಮ ಗಂಟು ಮೂಟೆ ಕಟ್ಟಿಕೊಂಡು, ಮಕ್ಕಳೊಂದಿಗೆ ಅಹೋರಾತ್ರಿ ತೆರಳುತ್ತಾರೆ. ಗುತ್ತಿಗೆದಾರರು ತೋರಿದ ಕೆಲಸ ಅಷ್ಟೇನೂ ಸರಳವಾಗಿರಲ್ಲ, ಬಿಸಿಲೆನ್ನದೇ ಕಷ್ಟಕರ ಸ್ಥಿತಿಯಲ್ಲಿ ಸಮಯ ಮೀರಿ ದುಡಿದು ಹಣ ಉಳಿಸಿಕೊಳ್ಳುವ ಆತುರದಲ್ಲಿ ಎಷ್ಟೋ ಕಾರ್ಮಿಕರು ರೋಗ ರುಜಿನಗಳಿಗೆ ತುತ್ತಾಗಿದ್ದಾರೆ. ಇನ್ನು ಕೆಲ ಮಕ್ಕಳು ಮತ್ತು ಹಿರಿಯರು ಸೇರಿದಂತೆ ಅವಘಡಗಳಿಗೆ ಸಿಲುಕಿ ಮೃತಪಟ್ಟಿದ್ದಾರೆ. ಗುಳೆ ಹೋಗುವ ಬಹುತೇಕ ಬಡ ಕುಟುಂಬಗಳು ಎಲ್ಲವನ್ನೂ ಬಿಟ್ಟು ಮನೆಗೆ ಬೀಗ ಹಾಕಿ ತಮ್ಮ ಪುಟ್ಟ ಮಕ್ಕಳನ್ನು ಜತೆಗೆ ಕರೆದೊಯ್ಯುತ್ತಾರೆ.

 ಜೀವನ ನಡೆಸುವುದಕ್ಕೂ ಬಹಳ ತೊಂದರೆಯಾಗೈತಿ

ಜೀವನ ನಡೆಸುವುದಕ್ಕೂ ಬಹಳ ತೊಂದರೆಯಾಗೈತಿ

"ಲಾಕ್‌ಡೌನ್‌ನಿಂದಾಗಿ ಬಹಳ ಜೀವನ ನಡೆಸುವುದಕ್ಕೂ ಬಹಳ ತೊಂದರೆಯಾಗೈತಿ, ಇಲ್ಲಿ ಕೆಲಸ ಇಲ್ಲ, ಕೆಲಸ ಇಲ್ದಾಗ ಸಾಲ ಮಾಡಿಕೊಂಡೀವಿ. ಅದರ ಬಡ್ಡಿ ಕಟ್ಟುವುದಕ್ಕೆ ಆಗ್ತಿಲ್ಲ, ಅಲ್ಲಿ ಕಬ್ಬು ಕಡಿಯುವುದಕ್ಕೆ ಹೋದರೆ ನಮ್ಮ ಹೆಂಡತಿದೂ ಕೂಲಿ ಬರತೈತಿ. ಇಬ್ಬರು ದುಡಿದರೆ ಯಾವುದಕ್ಕಾದರೂ ಆಗುತ್ತೆ, ಮಕ್ಕಳನ್ನು ಕರೆದುಕೊಂಡು ಹೋಗುತ್ತೇವೆ. ಸರ್ಕಾರ ನಮಗೆ ಏನಾದರೂ ಕೆಲಸ ಮಾಡಿ ಕೊಟ್ಟರೆ ಅನುಕೂಲ ಆಗುತ್ತದೆ,'' ಎಂದು ಮರಿಯಮ್ಮನಹಳ್ಳಿ ತಾಂಡ ನಿವಾಸಿ ಕೃಷ್ಣಾ ನಾಯ್ಕ್ ಹೇಳುತ್ತಾರೆ.

 ನರೇಗಾ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ

ನರೇಗಾ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ

ಅವಳಿ ಜಿಲ್ಲೆಗಳಾದ ಬಳ್ಳಾರಿ ಮತ್ತು ವಿಜಯನಗರದ ನರೇಗಾ ಯೋಜನೆಯಲ್ಲಿ ಕೆಲಸ ನೀಡುವಲ್ಲಿ ಇಡೀ ರಾಜ್ಯಕ್ಕೆ ಪ್ರಥಮವಾಗಿದೆ. ಆದರೆ ಇನ್ನು ಕೆಲ ಹಳ್ಳಿಗಳ ಭಾಗದಲ್ಲಿ ಸರಿಯಾದ ಮಾಹಿತಿ ಕೊರತೆಯಿಂದ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಗ್ರಾಮೀಣ ಪ್ರದೇಶದ ಪ್ರತಿ ಹಳ್ಳಿ ಹಾಗೂ ತಾಂಡಾಗಳ ಬಡ ಜನತೆಯ ಅನುಕೂಲಕ್ಕಾಗಿ ನರೇಗಾ ಸೇರಿ ಹತ್ತಾರು ಯೋಜನೆಗಳು ಅನುಷ್ಠಾನಕ್ಕೆ ತಂದಿರುವ ಸರಕಾರ ಸಮರ್ಪಕ ನಿರ್ವಹಣೆಯಿಲ್ಲದೇ ಸ್ಥಿತಿವಂತರ ಕೈ ಸೇರಿವೆ.

 ಕೂಲಿಯನ್ನೇ ನೆಚ್ಚಿದ ಜನರು

ಕೂಲಿಯನ್ನೇ ನೆಚ್ಚಿದ ಜನರು

ಈ ಭಾಗದ ಬಡ ಜನರು ಕೂಲಿಯನ್ನೇ ನೆಚ್ಚಿಕೊಂಡಿದ್ದಾರೆ. ಕೃಷಿ ಮಾಡಿ ಬದುಕು ಸಾಗಿಸಲು ಅಗತ್ಯ ಜಮೀನು ಇಲ್ಲ. ಕೆಲವರಿಗೆ ಒಣ ಬೇಸಾಯ ಭೂಮಿಯಲ್ಲಿ ದುಡಿದರೂ ಹೊಟ್ಟೆಗೆ ಸಾಲುವುದಿಲ್ಲ. ಇನ್ನೂ ಕೆಲವರಿಗೆ ಪುಟ್ಟ ಮನೆ ಬಿಟ್ಟರೆ ಜೀವನಕ್ಕೆ ಬೇರೆ ಆಶ್ರಯ ಇಲ್ಲದಂತಾಗಿದೆ. ಮಕ್ಕಳ ಮದುವೆ ಮುಂಜಿಗೆಂದು ಸಾಲ ಮಾಡಿ ಮರಳಿ ತುಂಬಲಾರದೇ ಬರೀ ಬಡ್ಡಿ ಕಟ್ಟುವುದರಲ್ಲೇ ಬದುಕು ಕೊಳೆಯುವಂತಾಗಿದೆ. ಇದರ ಬದಲು ಕೈತುಂಬ ಕೂಲಿ ಸಿಗುವ ಪ್ರದೇಶಗಳಿಗೆ ತೆರಳುವುದೊಂದೇ ದಾರಿ ಎನ್ನುತ್ತಾರೆ ಗುಳೆ ಹೊರಟ ಕಾರ್ಮಿಕರು.

"ಗುಳೆ ಅನ್ನೋದು ಲಂಬಾಣಿ ಹಾಗೂ ತಳ ಸಮುದಾಯಗಳಿಗೆ ಅಂಟಿರುವ ಶಾಪವಾಗಿದೆ. ಸರಕಾರ ಗುಳೆ ಹೋಗುವವರನ್ನು ತಡೆಗಟ್ಟುವಲ್ಲಿ ಸಂಪೂರ್ಣ ವಿಫಲವಾಗಿದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸ ಕುಂಠಿತವಾಗುತ್ತಿದ್ದು, ಸರಕಾರ ಕ್ರಮ ಕೈಗೊಳ್ಳಬೇಕು,'' ಎಂದು ಬೆಂಗಳೂರಿನ ಹಂ-ಗೋರ್ ಕಟಮಾಳೋ ಸಂಚಾಲಕ ಅನಂತ್ ನಾಯ್ಕ ತಿಳಿಸಿದರು.

English summary
North karnataka Banjara tanda people expatriation to other districts in search of employment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X