ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉದಯವಾಯಿತು ವಿಜಯನಗರ: ನೂತನ ಜಿಲ್ಲೆ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ

|
Google Oneindia Kannada News

ವಿಜಯನಗರ, ಅಕ್ಟೋಬರ್ 2: ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಸಾರಿ ಹೇಳುವ ನಿಟ್ಟಿನಲ್ಲಿ ಉದಯಗೊಂಡ ವಿಜಯನಗರ ಜಿಲ್ಲೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಉದ್ಘಾಟಿಸಿದ್ದಾರೆ. ಹೊಸಪೇಟೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವ ಮೂಲಕ ಕರ್ನಾಟಕದ 31ನೇ ಜಿಲ್ಲೆಗೆ ಅಧಿಕೃತ ಚಾಲನೆ ನೀಡಲಾಯಿತು.
ನೂತನ ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಸರ್ಕಾರದ ಆದೇಶವನ್ನು ಸಿಎಂ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡುತ್ತಿದ್ದಂತೆ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ವರ್ಣರಂಜಿತ ಕಾರ್ಯಕ್ರಮದಲ್ಲಿ ನೂತನ ಜಿಲ್ಲೆ ಘೋಷಣೆ ಆಗುತ್ತಿದ್ದಂತೆ ಆಕಾಶದಲ್ಲಿ ರಂಗಿನ ಚಿತ್ತಾರ ಮೂಡಿತು. ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಿಸಲಾಯಿತು.

ವಿಜಯನಗರ ಜಿಲ್ಲೆ ಉದ್ಘಾಟನೆ; ವಿಶೇಷತೆಗಳನ್ನು ತಿಳಿಯಿರಿ
ವಿಜಯನಗರ ಜಿಲ್ಲೆಯ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಚಿವ ಆನಂದ್ ಸಿಂಗ್, ಗೋವಿಂದ ಕಾರಜೋಳ, ಡಾ. ಸಿಎನ್ ಅಶ್ವತ್ಥ ನಾರಾಯಣ, ಸಿ ಸಿ ಪಾಟೀಲ್, ಬೈರತಿ ಬಸವರಾಜ ಸೇರಿದಂತೆ ಸಚಿವರು, ಶಾಸಕರು ಹಾಗೂ ವಿವಿಧ ಮಠಾಧೀಶರು ಹಾಜರಾಗಿದ್ದರು. ಈ ವೇಳೆ ಭವ್ಯ ವೇದಿಕೆಯನ್ನು ಉದ್ದೇಶಿಸಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೂತನ ಜಿಲ್ಲೆಯ ಬಗ್ಗೆ ಮಾತನಾಡಿದರು. ಇದು ಸಚಿವ ಆನಂದ್ ಸಿಂಗ್ ಸಂತಸ ಪಡಬೇಕಾದ ಘಳಿಗೆ ಎಂದು ಹೇಳಿದರು.

New Vijayanagara District Inaugurated by Karnataka CM Basavaraj Bommai

ಫೆಬ್ರುವರಿ ತಿಂಗಳಿನಲ್ಲಿ ವಿಜಯನಗರ ಜಿಲ್ಲೆ ಘೋಷಣೆ:
ಬಳ್ಳಾರಿಯಿಂದ ಬೇರ್ಪಡಿಸಿ ವಿಜಯನಗರ ಜಿಲ್ಲೆಯನ್ನು ರಾಜ್ಯದ 31ನೇ ಜಿಲ್ಲೆಯಾಗಿ ರಾಜ್ಯ ಸರ್ಕಾರ 2021ರ ಫೆಬ್ರವರಿ 8ರಂದು ರಚನೆ ಮಾಡಿತ್ತು. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಅಧಿಕೃತವಾಗಿ ಜಿಲ್ಲೆಗೆ ಚಾಲನೆ ದೊರೆತಿರಲಿಲ್ಲ. ಈಗ ಚಾಲನೆ ದೊರೆಯುತಿರುವ ಹಿನ್ನೆಲೆ ಜಿಲ್ಲೆಯ ಹೊಸಪೇಟೆ, ಹೂವಿನಹಡಗಲಿ, ಹರಪನಹಳ್ಳಿ, ಕೊಟ್ಟೂರು, ಕೂಡ್ಲಿಗಿ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕಿನ ಜನರಲ್ಲಿ ಉತ್ಸಾಹ ಹೆಚ್ಚಿದೆ. ಹಳ್ಳಿ, ಪಟ್ಟಣ, ತಾಂಡಾ, ಕ್ಯಾಂಪ್‌, ಕಾಲೋನಿಗಳಲ್ಲೂ ಜಿಲ್ಲೆಯ ಉದ್ಘಾಟನೆಯ ಸಂಭ್ರಮ ಕಳೆಗಟ್ಟಿದೆ.

New Vijayanagara District Inaugurated by Karnataka CM Basavaraj Bommai

ಗತವೈಭವ ಸಾರುವ ಭವ್ಯ ವೇದಿಕೆ:
ವಿಜಯನಗರದ ಗತವೈಭವವನ್ನು ಸಾರಿ ಹೇಳುವ ರೀತಿ ಶ್ರೀವಿದ್ಯಾರಣ್ಯ ವೇದಿಕೆ ನಿರ್ಮಿಸಲಾಗಿದೆ. ಮಾತಂಗ ಪರ್ವತದ ವಿಹಂಗಮ ನೋಟ ಹಾಗೂ 60 ಅಡಿ ಎತ್ತರದ ಶ್ರೀವಿರೂಪಾಕ್ಷೇಶ್ವರ ದೇಗುಲದ ರಾಜ ಗೋಪುರವನ್ನು ಸೃಜಿಸಲಾಗಿದೆ. ಬೆಂಗಳೂರಿನ ಎಂ.ವಿ. ಕನ್ಸಲ್ಟಂಟ್‌ ಸಂಸ್ಥೆ ಈ ವೇದಿಕೆಯನ್ನು ನಿರ್ಮಾಣ ಮಾಡಿದ್ದು, ನೆಲದಿಂದ ಏಳು ಅಡಿ ಎತ್ತರದಲ್ಲಿ ವೇದಿಕೆ ನಿರ್ಮಿಸಲಾಗಿದೆ. 180/70 ಅಡಿ ಉದ್ದಗಲವನ್ನು ವೇದಿಕೆ ಹೊಂದಿದೆ. ಇದೇ ವೇದಿಕೆಯಲ್ಲಿ ಕಲ್ಲಿನರಥ, ಉಗ್ರ ನರಸಿಂಹ ವಿನ್ಯಾಸವನ್ನು ಸೃಜಿಸಲಾಗಿದ್ದು, ಮಹಾನವಮಿ ದಿಬ್ಬದ ಮಾದರಿಯ ವೇದಿಕೆಯಲ್ಲಿ ಆಸನದ ವ್ಯವಸ್ಥೆ ಮಾಡಲಾಗಿದೆ. ಹಂಪಿ ಸ್ಮಾರಕಗಳಿಗೆ ಕೈಗನ್ನಡಿಯಂತೆ ವೇದಿಕೆ ಬಳಿ ಸ್ಮಾರಕಗಳನ್ನು ರಚಿಸಲಾಗಿದೆ.

ವಿಜಿಯನಗರದಲ್ಲಿ ತೆರೆದುಕೊಂಡ ಜಾನಪದ ಲೋಕ:
ವಿಜಯನಗರದ ನೆಲದಲ್ಲಿ ಜಾನಪದ ಕಲಾಲೋಕವೇ ಸೃಷ್ಟಿಯಾಗಿತ್ತು. ಶನಿವಾರ ನಡೆದ ವಿಜಯನಗರ ಜಿಲ್ಲೆ ಉದ್ಘಾಟನೆ ಸಮಾರಂಭಕ್ಕೂ ಮೊದಲು ಸಂಜೆ 4 ಗಂಟೆಗೆ ವಿಜಯನಗರ ವೈಭವವನ್ನು ಸಾರಿ ಹೇಳುವ ಮೆರವಣಿಗೆ ನಡೆಯಿತು. 80 ಕಲಾವಿದರು ಮೆರವಣಿಗೆಯಲ್ಲಿ ಭಾಗವಹಿಸಿದ್ದು, ಆಳ್ವಾಸ್ ಸಂಸ್ಥೆಯ 25 ಕಲಾವಿದರೂ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಅಕ್ಟೋಬರ್ 3ರಂದು ಕನ್ನೇ ಅದಿರಿಂದಿ ಹಾಡು ಖ್ಯಾತಿಯ ಗಾಯಕಿ ಮಂಗ್ಲಿ ಜಾನಪದ ಮತ್ತು ಚಲನಚಿತ್ರ ಗೀತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಖ್ಯಾತ ಗಾಯಕರಾದ ಅನುರಾಧಾ ಭಟ್, ಶಮಿತಾ ಮಲ್ನಾಡ್ ಚಲನಚಿತ್ರ ಗೀತೆಗಳನ್ನು ಹಾಡಲಿದ್ದಾರೆ. ಖ್ಯಾತ ಗಾಯಕರಾದ ವಿಜಯಪ್ರಕಾಶ್ ಮತ್ತು ಅವರ ತಂಡವು ಚಲನಚಿತ್ರ ಗೀತೆಗಳನ್ನು ಪ್ರಸ್ತುತಪಡಿಸಲಿದೆ. ಲಕ್ಷ್ಮೀದುಬೆ ಮತ್ತು ತಂಡದವರು ದೇಶಭಕ್ತಿ ಮತ್ತು ಆಶು ಗೀತೆಗಳನ್ನು ಹಾಡಲಿದ್ದಾರೆ.

ವಿಜಯನಗರದ ಆರು ತಾಲೂಕುಗಳಲ್ಲಿ ಪರದೆ:
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ವೇದಿಕೆ ಮಧ್ಯ 400 ಅಡಿಯ ರ್ಯಾಂಪ್ ನಿರ್ಮಿಸಲಾಗಿದ್ದು, ಇದರ ಮೂಲಕವೇ ಗಣ್ಯರು ವೇದಿಕೆಗೆ ತೆರಳಲಿದ್ದಾರೆ. ನಿಗದಿತ ಅಂತರವನ್ನು ಕಾಯ್ದುಕೊಂಡು 2000 ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಉಳಿದ ಕಡೆಗಳಲ್ಲಿ ಮ್ಯಾಟ್ ಅಳವಡಿಸಲಾಗಿದೆ. ಅಲ್ಲದೇ ಜನದಟ್ಟಣೆ ತಪ್ಪಿಸಲು ವಿಜಯನಗರದ ಆರು ತಾಲೂಕು ಕೇಂದ್ರಗಳಲ್ಲೂ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲೇ ಏಳೆಂಟು ಕಡೆಯಲ್ಲಿ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿದೆ.

English summary
New Vijayanagara District Inaugurated by Karnataka CM Basavaraj Bommai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X