ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಬಿಎಸ್ಸಾರ್ ವಿಲೀನ, ರೆಡ್ಡಿ ಬಿಡುಗಡೆ ಯಾವಾಗ?

By Srinath
|
Google Oneindia Kannada News

ಬಳ್ಳಾರಿ, ಮೇ 20: ಎಲ್ಲ ಚುನಾವಣೆಗಳಂತೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ತಮ್ಮ ಪ್ರತಿಷ್ಠೆ ಮೆರೆದಿರುವ ಶ್ರೀರಾಮುಲು ಅವರು ಬಳ್ಳಾರಿ ಲೋಕಸಭಾ ಕ್ಷೇತ್ರವನ್ನು ಮತ್ತೆ ತಮ್ಮ ಕುಟುಂಬದ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಕಳೆದ ಬಾರಿ ಜೆ ಶಾಂತಾ ಅವರು ಇಲ್ಲಿ ಜಯ ಸಾಧಿಸಿದ್ದರು.

ಇದೀಗ ತಮ್ಮ ಗೆಲುವಿನ ಬಳಿಕ ಶ್ರೀರಾಮುಲು ಅವರು ಇಂದು ದೆಹಲಿ ತಲುಪಿಕೊಂಡಿದ್ದು, ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡುವ ಉದ್ದೇಶ ಹೊಂದಿದ್ದಾರೆ. ಅದಾದ ನಂತರ ವಾರಾಂತ್ಯ ನಡೆಯುವ ಬಿಜೆಪಿ ನೇತೃತ್ವದ ನೂತನ ಸರಕಾರ ಪದಗ್ರಹಣ ಸಮಾರಂಭಕ್ಕೂ ಸಾಕ್ಷಿಯಾಗಲಿದ್ದಾರೆ.

ಇದೇ ವೇಳೆ, ತಮ್ಮ ಮತ್ತು ಸುಷ್ಮಾ ಸ್ವರಾಜ್ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲವೆಂದಿರುವ ಶ್ರೀರಾಮುಲು ಅವರು, ಸುಷ್ಮಾರನ್ನು ಸಹ ತಾವು ಭೇಟಿಯಾಗುವುದಾಗಿ ಹೇಳಿದ್ದಾರೆ. ಇನ್ನು ಜೈಲಿನಲ್ಲಿರುವ ಜನಾರ್ದನ ರೆಡ್ಡಿಯ ಬಿಡುಗಡೆ ವಿಚಾರ ಏನಾಯಿತು? ಎಂದು ಕೇಳಿದಾಗ 'ವಿಚಾರ ನ್ಯಾಯಾಲಯದೆದುರು ಇದೆ. ಇದರಲ್ಲಿ ಕೋರ್ಟ್ ತೀರ್ಮಾನವೇ ಅಂತಿಮ. ನೂತನ ಪ್ರಧಾನಿ ಮೋದಿ ಅವರ ಮೇಲೆ ಈ ವಿಷಯವಾಗಿ ಯಾವುದೇ ರೀತಿಯ ಒತ್ತಡ ಹಾಕುವುದಿಲ್ಲ' ಎಂದೂ ರಾಮುಲು ದಿಲ್ಲಿಯಲ್ಲಿಂದು ಪ್ರತಿಕ್ರಿಯಿಸಿದ್ದಾರೆ.

ls-polls-result-2014-bjp-bsr-congress-merger-intesifies-ramulu-in-delhi

ಈ ಮಧ್ಯೆ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಂದಿನ ನಡೆಯೇನು? ಜತೆಗೆ ತಾವು ತೆರವುಗೊಳಿಸಿರುವ ಬಳ್ಳಾರಿ ನಗರ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಯನ್ನಾಗಿ ರಾಮುಲು ಯಾರನ್ನು ಕಣಕ್ಕಿಳಿಸಲಿದ್ದಾರೆ ಎಂಬ ಕುತೂಹಲವೂ ಮೂಡಿದೆ.

ಮೊದಲನೆಯದಾಗಿ, ಅಭೂತಪೂರ್ವ ಲೋಕಸಭೆ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಬಿಎಸ್‌ಆರ್ ಕಾಂಗ್ರೆಸನ್ನು ಅಧಿಕೃತವಾಗಿ ಬಿಜೆಪಿಯೊಳಗೆ ವಿಲೀನಗೊಳಿಸಲು ಚಟುವಟಿಕೆಗಳು ತಕ್ಷಣದಿಂದಲೇ ಆರಂಭಗೊಂಡಿವೆ.

ಗಮನಾರ್ಹವೆಂದರೆ ಶ್ರೀರಾಮುಲು ಅವರನ್ನು ಹೊರತುಪಡಿಸಿ ಬಿಎಸ್‌ಆರ್ ಕಾಂಗ್ರೆಸ್ಸಿನ ಇನ್ನೂ ಮೂವರು ಶಾಸಕರು, ಇತರ ಮುಖಂಡರು ಬಿಜೆಪಿಗೆ ಇನ್ನೂ ಸೇರಿಲ್ಲ. ಆದರೆ ತಕ್ಷಣಕ್ಕೆ, ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆ ಜೂನ್‌ ತಿಂಗಳಲ್ಲಿ ನಡೆಯುವುದರಿಂದ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಅನುಕೂಲವಾಗಲೆಂದು ವಿಲೀನಕ್ಕೆ ಬಿಜೆಪಿ ನಾಯಕರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಅಭ್ಯರ್ಥಿಯ ಗೆಲುವಿಗೆ ಬಿಎಸ್‌ಆರ್ ಕಾಂಗ್ರೆಸ್ಸಿನ ಮೂವರು ಶಾಸಕರ ಬೆಂಬಲ ಅಗತ್ಯವಿದೆ.

ಆದರೆ ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಬಿಎಸ್‌ಆರ್ ಕಾಂಗ್ರೆಸ್‌ನ ಕಂಪ್ಲಿ ಶಾಸಕ ಸುರೇಶ್‌ಬಾಬು ಸಿಬಿಐ ತನಿಖೆ ಎದುರಿಸುತ್ತಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ. ಹೀಗಾಗಿ ಸುರೇಶ್‌ ಬಾಬು ಸೇರ್ಪಡೆಗೆ ಬಿಜೆಪಿ ವರಿಷ್ಠ ನಾಯಕರು ಒಪ್ಪಿಗೆ ಸೂಚಿಸುವ ಸಾಧ್ಯತೆಗಳು ಕಡಿಮೆ ಇದೆ. ಉಳಿದ ಇಬ್ಬರು ಶಾಸಕರಾದ ಕುಡುಚಿಯ ಪಿ ರಾಜು ಹಾಗೂ ಮೊಳಕಾಲ್ಮೂರಿನ ಎಸ್ ತಿಪ್ಪೇಸ್ವಾಮಿ ಅವರನ್ನು ಮಾತ್ರ ಪಕ್ಷಕ್ಕೆ ಸೇರಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ.

ಕೆಜೆಪಿ ವಿಲೀನದಿಂದ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಬಲ 40ರಿಂದ 44ಕ್ಕೆ ಏರಿದೆ. ಈಗ ಬಿಎಸ್‌ಆರ್ ಕಾಂಗ್ರೆಸ್‌ನ ಇಬ್ಬರು ಶಾಸಕರು ಸೇರಿದರೆ ಬಿಜೆಪಿ ಬಲ 46 ಆಗಲಿದೆ. ರಾಜ್ಯಸಭೆ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರ ಗೆಲುವಿಗೆ 45 ಶಾಸಕರ ಬೆಂಬಲ ಬೇಕಿದೆ. ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಇದರಲ್ಲಿ ಬಿಜೆಪಿಗೆ ಒಂದು ಸ್ಥಾನ ಗೆಲ್ಲುವ ಶಾಸಕರ ಬಲವಿದೆ.

English summary
Karnataka Lok Sabha election 2014 Results- BJP BSR Congress merger intesifies- Sreeramulu in New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X