"ಕಾಂಗ್ರೆಸ್ ಸೇರಲು ಬೇರೆ ಪಕ್ಷದ ನಾಯಕರು ನನ್ನ ಬಳಿ ಬಂದಿದ್ದಾರೆ''
ಬಳ್ಳಾರಿ, ನವೆಂಬರ್ 22: ಕಾಂಗ್ರೆಸ್ ಪಕ್ಷವನ್ನು ಸೇರಲು ಬಿಜೆಪಿ ಸೇರಿದಂತೆ ಬೇರೆ ಪಕ್ಷದ ನಾಯಕರು ನನ್ನ ಬಳಿ ಬಂದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೊಸ ಬಾಂಬ್ ಸಿಡಿಸಿದರು. ಕಾಂಗ್ರೆಸ್ ಸೇರಬಯಸುವವರಿಗೆ ಯಾವುದೇ ಷರತ್ತನ್ನು ಹಾಕುವುದಿಲ್ಲ. ನಾನು ಯಾರ ಮೇಲೂ ವೈಯಕ್ತಿಕ ದ್ವೇಷ ಮಾಡುವುದಿಲ್ಲವೆಂದು ಹೊಸಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕರ್ತರು ಬೆಳೆಯಬೇಕು, ಅವರಿಗೆ ಗೌರವ ಕೊಡಬೇಕು. ಪಕ್ಷದ ನಾಯಕರು ಬಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕೆಲಸ ಮಾಡಿ ಎಂದು ಕರೆ ನೀಡಿದ ಡಿ.ಕೆ ಶಿವಕುಮಾರ್, ಬೇರೆ ಪಕ್ಷದ ನಾಯಕರು ಕಾಂಗ್ರೆಸ್ ಸೇರಲಿದ್ದಾರೆ ಎಂದರು.
ಜಿಲ್ಲೆ ವಿಭಜನೆ: ಬಳ್ಳಾರಿ ಬಂದ್ ಯಶಸ್ವಿಯಾಗಲಿ ಎಂದ ಬಿಜೆಪಿ ಶಾಸಕ
ನಾವು ಅಧಿಕಾರದಲ್ಲಿದ್ದಾಗ ಈ ಕ್ಷೇತ್ರದ ಶಾಸಕರನ್ನು ಕರೆದುಕೊಂಡು ಹೋಗಿ ಅಧಿಕಾರ ಹಿಡಿದರು. ಬಿಜೆಪಿಗೆ ಜನ ಅಧಿಕಾರ ಕೊಟ್ಟಿಲ್ಲ. ದೇಶದ ಚರಿತ್ರೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಒಂದು ಕಾಲದಲ್ಲಿ ಜನತಾದಳ 104 ಇತ್ತು, ಕಾಂಗ್ರೆಸ್ 34 ಇತ್ತು. ಬಿಜೆಪಿ ಒಂದು ಕಾಲದಲ್ಲಿ ಕೇವಲ 2 ಸೀಟ್ ಪಡೆದಿತ್ತು ಈಗ ಅಧಿಕಾರ ಹಿಡಿದಿದ್ದಾರೆ ಎಂದು ತಿಳಿಸಿದರು.

ನನಗೆ ಸನ್ಮಾನ ಖುಷಿ ಕೊಡಲ್ಲ
ಕಾಲ ಬದಲಾಗುತ್ತಿರುತ್ತದೆ, ನನಗೆ ಸನ್ಮಾನ ಖುಷಿ ಕೊಡಲ್ಲ. ಬೂತ್ ಮಟ್ಟದಲ್ಲಿ ಮೆಜಾರಿಟಿ ಕೊಟ್ಟರೆ ಅದೇ ನನಗೆ ಸನ್ಮಾನ ಮಾಡಿದಂತೆ ಎಂದ ಶಿವಕುಮಾರ್, ಬಿಜೆಪಿ ಸರ್ಕಾರ ಕೊರೊನಾ ಕಾಲದಲ್ಲಿ ಭ್ರಷ್ಟಾಚಾರ ಮಾಡಿದೆ. ಅವರು ಕೇವಲ ಬೈ ಎಲೆಕ್ಷನ್, ವರ್ಗಾವಣೆ, ವೈಯಕ್ತಿಕ ಹಿತಾಸಕ್ತಿ ನೋಡುತ್ತಿದ್ದಾರೆ ಎಂದು ಆರೋಪಿಸಿದರು.

ಸೋಲನ್ನು ಒಪ್ಪಿಕೊಂಡಿದ್ದೇನೆ
ಎಚ್.ಡಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ, ಅವರನ್ನು ಭೇಟಿ ಮಾಡಿ ಕೆಲವರು ಹಣ ಬಿಡುಗಡೆ ಮಾಡಿಸಿಕೊಂಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬದಲಾವಣೆ ಆಗತ್ತದೆ ಎಂದು ಅವರ ಪಕ್ಷದವರೇ ಮಾತಾಡಿಕೊಳ್ಳುತ್ತಿದ್ದಾರೆ ಎಂದು ಹೊಸಪೇಟೆ ಕಾರ್ಯಕರ್ತರ ಸಭೆಯಲ್ಲಿ ಡಿ.ಕೆ ಶಿವಕುಮಾರ್ ಭಾಷಣ ಮಾಡಿದರು. ಉಪ ಚುನಾವಣೆಯಲ್ಲಿ ಸೋಲನ್ನು ಒಪ್ಪಿಕೊಂಡಿದ್ದೇನೆ, ಆದರೆ ಈಗ ಅದರ ಬಗ್ಗೆ ಚರ್ಚೆ ಬೇಡ. ಎರಡು ಕ್ಷೇತ್ರದಲ್ಲೂ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. ಎಲ್ಲರ ಒಗ್ಗಟ್ಟು ಪ್ರದರ್ಶನ ನನಗೆ ಸಮಾಧಾನ ತಂದಿದೆ ಎಂದು ಇದೇ ವೇಳೆ ಹೇಳಿದರು.

ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ
ಬಳ್ಳಾರಿಯಲ್ಲಿ ಜವಾಬ್ದಾರಿ ತೆಗೆದುಕೊಂಡಾಗ ಬಿಜೆಪಿಗಿಂತಲೂ ಹೆಚ್ಚಿನ ಲೀಡ್ ನಲ್ಲಿ ಗೆಲ್ಲಿಸಿದ್ದೆ. ನಂಜನಗೂಡು, ಗುಂಡ್ಲುಪೇಟೆಯಲ್ಲಿ ಬೈ ಎಲೆಕ್ಷನ್ ಗೆದ್ದಿದ್ವಿ, ಆದರೆ ಸಾರ್ವತ್ರಿಕ ಚುನಾವಣೆಯಲ್ಲಿ ಸೋತಿದ್ದೇವೆ. ಆದರೆ ರಾಜ್ಯ ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲವೆಂದರು. ಮುಂದಿನ ದಿನಗಳಲ್ಲಿ ಕಾರ್ಯಕರ್ತರಿಗೂ ಚುನಾವಣೆ ಟಿಕೆಟ್ ಕೊಡಲಾಗುವುದು. ನಾನು ಕೆಪಿಸಿಸಿ ಅಧ್ಯಕ್ಷನಾದ ಮೇಲೆ ವಿಜಯನಗರದಿಂದ ಪ್ರವಾಸ ಆರಂಭಿಸಿದ್ದೇನೆ. ವಿಜಯನಗರದಿಂದ ಆರಂಭವಾದ ಪ್ರವಾಸಕ್ಕೆ ವಿಜಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿಮ್ಮ ಜೊತೆಯಲ್ಲಿ ಪಕ್ಷಕ್ಕಾಗಿ ದುಡಿಯುತ್ತೇನೆ
ಬಳ್ಳಾರಿ ಜಿಲ್ಲೆಯಲ್ಲಿ ಮುಂದೆ 10 ಕ್ಕೆ 10 ಸ್ಥಾನ ಗೆಲ್ಲುವ ವಿಶ್ವಾಸವಿದ್ದು, ಪಕ್ಷವನ್ನು ಕೇಡರ್ ಬೇಸ್ ಪಾರ್ಟಿಯಾಗಿ ಮಾಡುವೆ. ಅದಕ್ಕೆ ಕಾರ್ಯಕರ್ತರು ಸಹಕರಿಸಬೇಕು. ಬೂತ್ ಮಟ್ಟದಿಂದಲೂ ಪಕ್ಷ ಸಂಘಟನೆ ಮಾಡುವೆ. ನಾನು ನಿಮ್ಮ ಜೊತೆಯಲ್ಲಿ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಮನವಿ ಮಾಡಿದರು.
ನೀವು ನಮ್ಮ ಚುನಾವಣೆಯಲ್ಲಿ ದುಡಿಯುವ ಹಾಗೆ, ನಾನು ನಿಮ್ಮ ಚುನಾವಣೆಯಲ್ಲಿ ಶ್ರಮಿಸುವೆ. ಯಾರೂ ಪೋಸ್ ಕೊಡುವುದು ಮಾಡಬೇಡಿ.ಮುಂದಿನ ದಿನಗಳಲ್ಲಿ ಜಿಲ್ಲಾ ಕಾಂಗ್ರೆಸ್ ಆದಿಯಾಗಿ ಎಲ್ಲರೂ ಬೂತ್ ಮಟ್ಟದಲ್ಲಿ ನೋಂದಣಿ ಮಾಡಿಸಬೇಕು ಎಂದು ಸೂಚಿಸಿದರು.

ಮುಂದೆ ಅಧಿಕಾರಕ್ಕೆ ಬರುತ್ತೇವೆ
ಕಾಂಗ್ರೆಸ್ ಸಮಾವೇಶದಲ್ಲಿ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಭಾಷಣ ಮಾಡಿ, ಡಿಕೆಶಿ ಹಾಗೂ ಸಿದ್ದರಾಮಯ್ಯ ಜೋಡೆತ್ತು ಅಲ್ಲ, ಜೋಡಿ ಹುಲಿಗಳು. ಅವರ ನೇತೃತ್ವದಲ್ಲಿ ಮುಂದೆ ಅಧಿಕಾರಕ್ಕೆ ಬರುತ್ತೇವೆ ಎಂದರು.
ಕಾಂಗ್ರೆಸ್ ಕಾರ್ಯಕರ್ತರು ಭಿನ್ನಾಭಿಪ್ರಾಯ ಬದಿಗೊತ್ತಿ, ಕೆಲಸ ಮಾಡಿ ಗೆಲ್ಲಿಸಿ ಎಂದು ಮನವಿ ಮಾಡಿದ ನಾಗೇಂದ್ರ, ಹೊಸಪೇಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಒಳ ಒಡಕಿನಿಂದ ಸೋಲಾಯಿತು. ಮುಂದೆ ಹೊಸಪೇಟೆ ಅಲ್ಲ, ಇಡೀ ಬಳ್ಳಾರಿ ಜಿಲ್ಲೆಯನ್ನು ಗೆಲ್ಲುತ್ತೇವೆ. ಸೋಲೇ ಗೆಲುವಿನ ಮೆಟ್ಟಿಲು ಎಂದು ಹುರಿದುಂಬಿಸಿದರು.

ಸ್ವಾರ್ಥ ರಾಜಕೀಯದಿಂದ ಬಳ್ಳಾರಿ ವಿಭಜನೆ
ಸ್ವಾರ್ಥ ರಾಜಕೀಯದಿಂದ ಬಳ್ಳಾರಿ ವಿಭಜನೆಯಾಗಿದ್ದು, ಒಬ್ಬ ವ್ಯಕ್ತಿಯ ಸಲುವಾಗಿ ಜಿಲ್ಲಾ ವಿಭಜನೆ ಮಾಡಲಾಗಿದೆ. ಹಿಂದೆ ಜನರು ಹೋರಾಟ ಮಾಡಿದಾಗ ಏಕೆ ಜಿಲ್ಲೆ ವಿಭಜಿಸಲಿಲ್ಲ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇನೆ.
ಜಿಲ್ಲೆ ವಿಭಜನೆ ವಿಚಾರದಲ್ಲಿ ಕಾಂಗ್ರೆಸ್ ಶಾಸಕರು ಭಿನ್ನ ಭಿನ್ನ ಹೇಳಿಕೆ ಕೊಡುವುದು ಬೇಡವೆಂದು ಮನವಿ ಮಾಡಿದ ಶಾಸಕ ನಾಗೇಂದ್ರ, ಪಕ್ಷ ತನ್ನ ನಿಲುವು ಹೇಳಿದರೆ ಜಿಲ್ಲೆ ವಿಭಜನೆ ವಿಚಾರದಲ್ಲಿ ಹೋರಾಟ ಮಾಡುವುದಕ್ಕೆ ಅನುಕೂಲವಾಗುತ್ತದೆ ಎಂದರು.