ಕಂಪ್ಲಿ ಪಟ್ಟಣ ಬಂದ್: ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ
ಬಳ್ಳಾರಿ, ನವೆಂಬರ್ 30: ಬಳ್ಳಾರಿ ಜಿಲ್ಲೆಯಿಂದ ನೂತನ ವಿಜಯನಗರ ಜಿಲ್ಲೆಗೆ ಕಂಪ್ಲಿ ತಾಲ್ಲೂಕು ಸೇರಿಸುವಂತೆ ಆಗ್ರಹಿಸಿ ಕಂಪ್ಲಿ ಪಟ್ಟಣ ಬಂದ್ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಕೈ ಕೈ ಮಿಲಾಯಿಸಿದ ಪ್ರಸಂಗ ಸೋಮವಾರ ನಡೆಯಿತು.
ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ಮತ್ತು ಮಾಜಿ ಬಿಜೆಪಿ ಶಾಸಕ ಬೆಂಬಲಿಗರ ನಡುವೆ ಗಲಾಟೆಯಾಗಿದ್ದು, ಕೆಲ ಕಾಲ ಬಿಗುವಿನ ವಾತಾವರಣ ಸೃಷ್ಟಿಯಾಯಿತು.
ಆನಂದ್ ಸಿಂಗ್‌ಗೆ ಹೊಸ ಬೇಡಿಕೆ ಇಟ್ಟ ಕಂಪ್ಲಿಯ ಜನರು
ವಿಜಯನಗರ ನೂತನ ಜಿಲ್ಲೆಗೆ ಕಂಪ್ಲಿ ತಾಲ್ಲೂಕನ್ನು ಸೇರಿಸುವಂತೆ ಕಂಪ್ಲಿ ಬಂದ್ ಕರೆ ನೀಡಿದ್ದ ಹಿನ್ನಲೆಯಲ್ಲಿ ಆಕ್ರೋಶ ಭುಗಿಲೆದ್ದಿದೆ. ಬಂದ್ ಪ್ರತಿಭಟನೆ ವೇಳೆ ಶಾಸಕ ಜೆ.ಎನ್ ಗಣೇಶ ಆಗಮಿಸುತ್ತಿದ್ದಂತೆ, ಅವರ ವಿರುದ್ಧ ಬಿಜೆಪಿ ಕಾರ್ಯಕರ್ತರು ಘೋಷಣೆ ಹಾಕಿದರು.
ಇದರಿಂದ ಆಕ್ರೋಶಗೊಂಡ ಶಾಸಕ ಜೆ.ಎನ್.ಗಣೇಶ ಹಾಗೂ ಬೆಂಬಲಿಗರು, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆಯಾಯಿತು. ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರ ಹರಸಾಹಸ ಪಡಬೇಕಾಯಿತು.
ಪ್ರತಿಭಟನಾ ಮೆರವಣಿಗೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಬಿಜೆಪಿ ಬೆಂಬಲಿತ ಕಾರ್ಯಕರ್ತರು, ಶಾಸಕ ಜೆ.ಎನ್ ಗಣೇಶ್ ಅವರ ವಿರುದ್ಧ ಧಿಕ್ಕಾರ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಂಪ್ಲಿ ಶಾಸಕ ಜೆ.ಎನ್ ಗಣೇಶ್, ""ಒಬ್ಬ ಶಾಸಕನಿಗೆ ಇಲ್ಲಿ ರಕ್ಷಣೆ ಇಲ್ಲ, ಇದು ಒಂದು ಗುಂಡಾ ಸರ್ಕಾರ. ಪಕ್ಷಾತೀತವಾಗಿ ಇಂದು ಕಂಪ್ಲಿ ಬಂದ್ ಕರೆ ನೀಡಲಾಗಿದ್ದು, ಆದರೆ ಕೆಲವರು ರಾಜಕೀಯ ಲಾಭಕ್ಕಾಗಿ ಗಲಾಟೆ ಮಾಡುತ್ತಾರೆ ಎಂದರು.
ಸ್ಥಳೀಯ ಕಮಲ ನಾಯಕರು ನನ್ನ ಮೇಲೆ ಹಲ್ಲೆಮಾಡಲು ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ಈ ಹೋರಾಟ ನಿಲ್ಲುವುದಿಲ್ಲ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳ್ಳಾರಿ ಜಿಲ್ಲೆ ವಿಭಜನೆ ಮಾಡಿದ್ದಾರೆ. ಸರ್ಕಾರ ರಚನೆಗೆ ಕಾರಣವಾದವರ ಆಸೆಯನ್ನು ಸಿಎಂ ಯಡಿಯೂರಪ್ಪ ಈಡೇರಿಸಿದ್ದಾರೆ ಎಂದು ಪರೋಕ್ಷವಾಗಿ ಸಚಿವ ಆನಂದ್ ಸಿಂಗ್ ಅವರಿಗೆ ಶಾಸಕ ಜೆ.ಎನ್ ಗಣೇಶ್ ಟಾಂಗ್ ನೀಡಿದರು.