ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಟ್ಟೂರು ವ್ಯಾಪ್ತಿಯಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಅಕ್ರಮ ಮರಳು ಮಾಫಿಯಾ

By ಭೀಮರಾಜ.ಯು ಬಿಜಯನಗರ
|
Google Oneindia Kannada News

ವಿಜಯನಗರ, ಜುಲೈ 2: ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಜಾಗಟಗೆರೆ, ಮರೂರು ಗ್ರಾಮಗಳ ವ್ಯಾಪ್ತಿಯ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಅಕ್ರಮ ಮರಳು ಧಂದೆ ಮತ್ತು ಮಣ್ಣು ಸಾಗಾಣಿಕೆ‌ ನಡೆಯುತ್ತಿದೆ.

ಇಲ್ಲಿನ ಧಂದೆಕೋರರು ಹಗಲು- ರಾತ್ರಿ ಎನ್ನದೇ ಅಕ್ರಮ ಮಣ್ಣು ಮತ್ತು ಮರಳನ್ನು ಟ್ರ್ಯಾಕ್ಟರ್‌ಗಳ ಮೂಲಕ ಕದಿಯುತ್ತಿದ್ದಾರೆ. ಮಳೆಗಾಲ ಆರಂಭವಾಗಿರುವುದರಿಂದ ಹಳ್ಳ- ಕೊಳ್ಳಗಳಲ್ಲಿ ಮರಳು ನೀರಿನ‌ ಜತೆ ಹರಿದು ಬರುತ್ತದೆ. ಧಂದೆಕೋರರು ಇದನ್ನೇ ಬಂಡವಾಳವಾಗಿಸಿಕೊಂಡು ರಾತ್ರಿ ಹೊತ್ತಲ್ಲಿ ಅಕ್ರಮವಾಗಿ ಮರಳನ್ನು ಸಂಗ್ರಹಣೆ ಮಾಡುತ್ತಾರೆ.

ಈ‌ ದೇಶದ ಬೆನ್ನೆಲುಬು ಅಂತ ಕರೆಯಿಸಿಕೊಳ್ಳುವ ರೈತನ ಹೊಲ ಗದ್ದೆಗಳಿಗೆ ನುಗ್ಗಿ, ಫಸಲುಗಳು ಇವೆ ಎಂಬುದನ್ನು ಲೆಕ್ಕಿಸದೇ ಬೆಳೆಯನ್ನು ಹಾಳು ಮಾಡಿ ಅಲ್ಲಲ್ಲಿ ಸಣ್ಣ ಪುಟ್ಟ ಪ್ರಮಾಣದಲ್ಲಿರುವ ಮರಳನ್ನು ತುಂಬಿಕೊಂಡು ಪರಾರಿಯಾಗುತ್ತಾರೆ.

ಅಕ್ರಮ ಮಣ್ಣು ಸಾಗಣಿಕೆಗೆ ದರ ನಿಗದಿ

ಅಕ್ರಮ ಮಣ್ಣು ಸಾಗಣಿಕೆಗೆ ದರ ನಿಗದಿ

ಕೊಟ್ಟೂರು ತಾಲೂಕಿನಲ್ಲಿ ನಿತ್ಯವೂ ಒಂದಲ್ಲ ಒಂದು ರೀತಿಯಲ್ಲಿ ಅಕ್ರಮ ಮಣ್ಣನ್ನು ಸಾಗಿಸುವಲ್ಲಿ ನಿರತರಾಗಿರುತ್ತಾರೆ. ಇಲ್ಲಿ ಒಂದು ಟ್ರ್ಯಾಕ್ಟರ್ ಲೋಡ್ ಮಣ್ಣಿಗೆ 800 ರೂ. ನಿಗದಿ ಮಾಡಿ ಮಾರಾಟ ಮಾಡಲಾಗುತ್ತದೆ. ಕೊಟ್ಟೂರು ಪಟ್ಟಣದ ವ್ಯಾಪ್ತಿಯಲ್ಲಿ ಸುಮಾರು ಹಳ್ಳಿಗಳಿವೆ. ಎಲ್ಲಾ ಹಳ್ಳಿಗಳಿಂದ ಬರುವ ನೀರು ಕೊಟ್ಟೂರು ಪಟ್ಟಣದ ಪಕ್ಕದಲ್ಲಿರುವ ಕೆರೆಗೆ ಹರಿದುಕೊಂಡು ಹೋಗುತ್ತದೆ. ಹಾಗಾಗಿ ಇಲ್ಲಿ ಮಣ್ಣು ಮತ್ತು ಮರಳು ಲಭ್ಯವಾಗುತ್ತದೆ. ಧಂದೆಕೋರರು ಟ್ರ್ಯಾಕ್ಟರ್‌ಗಳ ಮೂಲಕ ಮಣ್ಣು ಹಾಗೂ ಮರಳನ್ನು ಸಾಗಿಸುತ್ತಾರೆ.

ಅಕ್ರಮ ಮರಳು ಸಾಗಾಣಿಕೆ ದರ ನಿಗದಿ

ಅಕ್ರಮ ಮರಳು ಸಾಗಾಣಿಕೆ ದರ ನಿಗದಿ

ಕೊಟ್ಟೂರು ಪಟ್ಟಣ ವ್ಯಾಪ್ತಿಯಲ್ಲಿ ಬಹಳ ಹಳ್ಳಿಗಳಿದ್ದು, ಈ ಹಳ್ಳಿಗಳಿಂದ ಹಳ್ಳ- ಕೊಳ್ಳಗಳು ಹರಿಯುತ್ತಿವೆ. ಹಾಗಾಗಿ ಹಳ್ಳಗಳಲ್ಲಿ ಬರುವ ಮರಳನ್ನು ತುಂಬಿ ಪಟ್ಟಣದಲ್ಲಿ ಒಂದು ಟ್ರ್ಯಾಕ್ಟರ್ ಲೋಡ್ ಮರಳಿಗೆ 2,500 ರೂ.ನಿಂದ 3,000 ರೂ. ವರೆಗೂ ಮರಳನ್ನು ಮಾರಾಟ ಮಾಡುತ್ತಾರೆ.

ರೈತರ ರಸ್ತೆಯನ್ನೇ ಅಗೆದರು

ರೈತರ ರಸ್ತೆಯನ್ನೇ ಅಗೆದರು

ರೈತರು ತಮ್ಮ ಹೊಲ ಗದ್ದೆಗಳಿಗೆ ಹೋಗುವುದಕ್ಕೆ ದಾರಿ ಮಾಡಿಕೊಂಡಿದ್ದ ರಸ್ತೆಯನ್ನೇ ಅಗೆದು ಸಂಪೂರ್ಣ ನಾಶ ಮಾಡಿ ಮಣ್ಣನ್ನು ಮಾರಾಟ ಮಾಡಿದ್ದಾರೆ. ಕೊಟ್ಟೂರು ಪಟ್ಟಣವು ನೂತನ ತಾಲೂಕು ಕೇಂದ್ರವಾಗಿದೆ. ಇದರ ವ್ಯಾಪ್ತಿಗೆ ಅತಿ ಹೆಚ್ಚು ಹಳ್ಳಿಗಳು ಸೇರಿವೆ. ಇಲ್ಲಿನ ಧಂದೆಕೋರರು ವಾಣಿಜ್ಯಕ್ಕಾಗಿ ಬಳಸಿಕೊಳ್ಳುವ ಟ್ರ್ಯಾಕ್ಟರ್‌ಗಳನ್ನು ತೆಗೆದುಕೊಳ್ಳದೆ, ರೈತರ ಹೆಸರಲ್ಲಿ ವೈಟ್‌ಬೋರ್ಡ್ ಟ್ರ್ಯಾಕ್ಟರ್‌ಗಳನ್ನು ಖರೀದಿ ಮಾಡಿ, ರಸ್ತೆ ತೆರಿಗೆ ಕಟ್ಟದೇ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ದೊಖಾ ಮಾಡುತ್ತಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ, ಕೊಟ್ಟೂರು ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಕಂಡು ಕಾಣದೇ ಕಣ್ಮುಚ್ಚಿ ಕುಳಿತಿದೆ.

ಶಾಸಕ ಭೀಮಾನಾಯ್ಕ್ ಆಪ್ತರಿಂದ ಮರಳು ಧಂದೆ

ಶಾಸಕ ಭೀಮಾನಾಯ್ಕ್ ಆಪ್ತರಿಂದ ಮರಳು ಧಂದೆ

ಇಲ್ಲಿನ ಧಂದೆಕೋರರು ತಮ್ಮ ಕಳ್ಳ ಕೆಲಸ ಕಾರ್ಯಗಳನ್ನು ಸಾಧಿಸಿಕೊಳ್ಳುವುದಕ್ಕೆ ಪೊಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ತಿಂಗಳ ಹಫ್ತಾ ಕೊಡಲಾಗುತ್ತದೆ ಎಂದು ಸಾರ್ವಜನಿಕರಿಂದ ಗಂಭೀರ ಆರೋಪ ಕೇಳಿ ಬರುತ್ತಿದೆ. ಕೊಟ್ಟೂರು ನಗರ ಹೊರವಲಯದ ಕೆರೆ ಹಿಂಭಾಗದಲ್ಲಿನ ಹೊಲ ಗದ್ದೆಗಳಿಗೆ ಹೋಗುವ ರಸ್ತೆಗಳನ್ನು ಅಗೆದು ಮಣ್ಣು ಮಾರಾಟ ಮಾಡಿದ್ದಾರೆ. ಇಷ್ಟೆಲ್ಲ ನಡೆಯುತ್ತಿದ್ದರೂ ತಾಲೂಕು ಆಡಳಿತ ಮಾತ್ರ ತನಗೆ ಏನು ಗೊತ್ತಿಲ್ಲ ಎನ್ನುವಂತೆ ಮೌನವಹಿಸಿದೆ.

"ಕೊಟ್ಟೂರು ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಮರಳು ಮಾಫಿಯಾದಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕರ ಆಪ್ತರಿಂದ ಅಕ್ರಮ ಮರಳು ಮತ್ತು ಮಣ್ಣು ಸಾಗಾಣಿಕೆ ನಡೆಸುತ್ತಿದ್ದಾರೆ. ಇವರಿಗೆ ಇಲ್ಲಿನ ತಾಲ್ಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಮೌನವಹಿಸಿ ಸಾಥ್ ನೀಡುತ್ತಿದೆ,'' ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ.
ಮರಳು ಧಂದೆಕೋರರ ಮೇಲೆ ಕಾನೂನು ಕ್ರಮ

ಮರಳು ಧಂದೆಕೋರರ ಮೇಲೆ ಕಾನೂನು ಕ್ರಮ

"ಅಕ್ರಮ ಮರಳು ಮತ್ತು ಮಣ್ಣು ಸಾಗಾಣಿಕೆ ಮಾಡುವವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ,'' ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ನಾಮಕಾವಸ್ಥೆಗೆ ಮಾತ್ರ ಅಕ್ರಮ ಮರಳು ಮಾಡುವ ಸ್ಥಳಕ್ಕೆ ಭೇಟಿ ನೀಡುತ್ತಾರೆ, ಆದರೆ ಕ್ರಮ ಕೈಗೊಳ್ಳುವಲ್ಲಿ ಮೀನಾಮೇಷ ಎಣಿಸುತ್ತಾರೆ ಎಂದು ದೂರಿದ್ದಾರೆ.

4 ಕಿ.ಮೀ ರಸ್ತೆ ನಿರ್ಮಾಣಕ್ಕೆ ಮುಂದಾದ ರೈತರು

4 ಕಿ.ಮೀ ರಸ್ತೆ ನಿರ್ಮಾಣಕ್ಕೆ ಮುಂದಾದ ರೈತರು

ಮರಳು ಹಾಗೂ ಮಣ್ಣು ಧಂದೆಕೋರರನ್ನು ಮಟ್ಟ ಹಾಕುವಂತೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತಾದರೂ, ಯಾವುದೇ ಕ್ರಮಕೈಗೊಳ್ಳದೇ ಇರುವುದರಿಂದ ಅಧಿಕಾರಿಗಳಿಂದ ಬೇಸತ್ತು, ಹಾಳಾಗಿದ್ದ ರಸ್ತೆಯನ್ನು ತಾವೇ ದುರಸ್ಥಿ ಮಾಡಿಕೊಳ್ಳುವುದಕ್ಕೆ ರೈತರು ಮುಂದಾಗಿದ್ದಾರೆ.

ಮರಳುಗಾರಿಕೆಗೆ ಪ್ರೋತ್ಸಾಹ ನೀಡುವುದಿಲ್ಲ

ಮರಳುಗಾರಿಕೆಗೆ ಪ್ರೋತ್ಸಾಹ ನೀಡುವುದಿಲ್ಲ

"ಕೊಟ್ಟೂರು ವ್ಯಾಪ್ತಿಯಲ್ಲಿ ನನ್ನ ಆಪ್ತರು ಯಾರೂ ಸಹ ಮರಳು ಧಂದೆಯನ್ನು ಮಾಡುತ್ತಿಲ್ಲ. ಅಕ್ರಮ ಮರಳುಗಾರಿಕೆಗೆ ಪ್ರೋತ್ಸಾಹ ನೀಡುವುದಿಲ್ಲ, ಇದು ಸತ್ಯಕ್ಕೆ ದೂರವಾದ ಮಾತು,'' ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಭೀಮನಾಯ್ಕ್ ಹೇಳಿದ್ದಾರೆ. ಇನ್ನು "ನಮ್ಮ ಕೊಟ್ಟೂರು ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಮರುಳು ಮತ್ತು ಮಣ್ಣು ಸಾಗಾಣಿಕೆ ಮಾಡುತ್ತಿರುವವರನ್ನು ಪತ್ತೆ ಹಚ್ಚಿ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇನೆ,'' ಎಂದು ಕೊಟ್ಟೂರು ತಹಶೀಲ್ದಾರ ಅನಿಲ್ ಕುಮಾರ ತಿಳಿಸಿದ್ದಾರೆ.

English summary
Illegal sand dumping and mud trafficking is taking place in Jagatagere and Maruru villages in Kottur taluk of Vijayanagar district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X