ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರೀಕೃಷ್ಣದೇವರಾಯ ವೇದಿಕೆಯಲ್ಲಿ ಹಂಪೆ ಉತ್ಸವ 2015

By ರೋಹಿಣಿ, ಬಳ್ಳಾರಿ
|
Google Oneindia Kannada News

ಬಳ್ಳಾರಿ, ಡಿ.24: ಮೂರು ದಿನಗಳ ಅಂತಾರಾಷ್ಟ್ರೀಯ ಮಟ್ಟದ 'ಹಂಪಿ ಉತ್ಸವ - 2015' ಜನವರಿ 9, 10 ಮತ್ತು 11 ರಂದು ಐದು ವೇದಿಕೆಗಳಲ್ಲಿ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪೆಯಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಸಮೀರ್ ಶುಕ್ಲ ಹೇಳಿದ್ದಾರೆ.

ಜನವರಿ 9ರ ಶುಕ್ರವಾರ ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೀಕೃಷ್ಣದೇವರಾಯ ವೇದಿಕೆಯಲ್ಲಿ ಉತ್ಸವ ಉದ್ಘಾಟಿಸುವರು. ಪ್ರವಾಸೋದ್ಯಮ ಮತ್ತು ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಸಚಿವರಾದ ಪಿ.ಟಿ. ಪರಮೇಶ್ವರನಾಯಕ್, ಉಮಾಶ್ರೀ ಮತ್ತು ರೋಷನ್ ಬೇಗ್ ಮುಖ್ಯ ಅತಿಥಿಗಳಾಗಿದ್ದಾರೆ ಎಂದರು.

ಉತ್ಸವದ ಖರ್ಚು ವೆಚ್ಚ: 6 ರಿಂದ 6.50 ಕೋಟಿ ರೂಪಾಯಿ ವೆಚ್ಚದಲ್ಲಿ ಉತ್ಸವವನ್ನು ನಡೆಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 1 ಕೋಟಿ ರೂಪಾಯಿ, ಪ್ರವಾಸೋದ್ಯಮ ಇಲಾಖೆ 50 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ.

Sameer Shukla

ಕಾಮಗಾರಿ ಆರಂಭ: ವೇದಿಕೆ, ಸ್ವಾಗತ ಕಮಾನುಗಳ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದೆ. ಗಾಯತ್ರಿ ಪೀಠದ ಸಮೀಪ ಮುಖ್ಯ ವೇದಿಕೆಯಾದ ಶ್ರೀಕೃಷ್ಣದೇವರಾಯ ವೇದಿಕೆ, ಶ್ರೀಕೃಷ್ಣ ದೇವಸ್ಥಾನ ಹಿಂಭಾಗದಲ್ಲಿ ಎಂ.ಪಿ. ಪ್ರಕಾಶ್ ವೇದಿಕೆ, ಎದುರು ಬಸವಣ್ಣ ಮಂಟಪದ ಹತ್ತಿರ ವಿದ್ಯಾರಣ್ಯ ವೇದಿಕೆ, ಶ್ರೀಕೃಷ್ಣ ದೇವಸ್ಥಾನದ ಮುಂಭಾಗದ ಪುಷ್ಕರಣಿ ಸಮೀಪ ಬುರ್ರಕಥಾ ದರೋಜಿ ಈರಮ್ಮ ವೇದಿಕೆ ಮತ್ತು ಶ್ರೀವಿರೂಪಾಕ್ಷ ದೇವಸ್ಥಾನದ ಆವರಣದಲ್ಲಿ ಹಕ್ಕ-ಬುಕ್ಕ ವೇದಿಕೆಯನ್ನು ನಿರ್ಮಿಸಲಾಗುತ್ತಿದೆ.

ಕಾಷ್ಠ ಶಿಲ್ಪ ಶಿಬಿರ: ಹಂಪಿ ಉತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಶಿಲ್ಪಕಲಾ ಅಕಾಡಮಿ ಮತ್ತು ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಚಾಲುಕ್ಯ ಶೈಲಿಯ ಶಿಲಾ ಶಿಲ್ಪ ಶಿಬಿರ ಮತ್ತು ಹೊಯ್ಸಳ ಶೈಲಿಯ ಕಾಷ್ಠ ಶಿಲ್ಪ ಶಿಬಿರವನ್ನು ಡಿಸೆಂಬರ್ 27 ರಿಂದ ಜನವರಿ 7ರವರೆಗೆ ಏರ್ಪಡಿಸಿವೆ. ಶಿಲ್ಪ ರಚನೆಯನ್ನು ಸಾರ್ವಜನಿಕರು ಮುಕ್ತವಾಗಿ ವೀಕ್ಷಿಸಬಹುದಾಗಿದೆ

ಬೃಹತ್ ಕಲಾವಿದರ ಮೇಳ: ಒಟ್ಟು 2500 ಕಲಾವಿದರು ಉತ್ಸವದ ಐದು ವೇದಿಕೆಗಳಲ್ಲಿ ಪ್ರತಿಭೆ ಪ್ರದರ್ಶನ ಮಾಡಲಿದ್ದಾರೆ. ಈ ನಿಟ್ಟಿನಲ್ಲಿ ಸ್ಥಳೀಯ 1250 ಕಲಾವಿದರು 140 ತಂಡಗಳಲ್ಲಿ, ರಾಜ್ಯಮಟ್ಟದ 850 ಕಲಾವಿದರು 100 ತಂಡಗಳಲ್ಲಿ, ಹೊರ ರಾಜ್ಯದ 340 ಕಲಾವಿದರು 17 ತಂಡಗಳಲ್ಲಿ ಮತ್ತು ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಆಫ್ರಿಕದ 60 ಕಲಾವಿದರು 4 ತಂಡಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

Hampi Vedike

ನೃತ್ಯ ವೈಭವ: ಮಧ್ಯಪ್ರದೇಶದ ಬದಾಯಿ ನೃತ್ಯ, ಮಹಾರಾಷ್ಟ್ರದ ಸೋಂಗಿ ಮುಖವಾಟೆ ನೃತ್ಯ, ಮಣಿಪುರದ ರಾಸಲೀಲೆ ನೃತ್ಯ ಪ್ರದರ್ಶನಕ್ಕಾಗಿ 3 ಜಾನಪದ ತಂಡಗಳ 48 ಕಲಾವಿದರು. ಆಂಧ್ರದ ಮಾಥುರಿ ಮತ್ತು ಬೋನಾಲ ನೃತ್ಯ, ತೆಲಂಗಾಣದ ಲಂಬಾಡಿ ದಿಂಸ ನೃತ್ಯ, ಪುಡಿಚೆರಿಯ ವಿರೈ ವೀರನಾಟ್ಯಂ, ತಮಿಳುನಾಡಿನ ದುಮ್ಮಿಹಾರ್ಸ್, ಖರ್ಗಂ, ಕಾವಡಿ, ನ್ಯಾಂದಿಮಿಲಮ್, ಕೇರಳದ ಒಪನಾ ನೃತ್ಯ ಸೇರಿ ಒಟ್ಟು 5 ರಾಜ್ಯಗಳ 5 ತಂಡಗಳ 75 ಕಲಾವಿದರು ಸೇರಿದ್ದಾರೆ.

ಎರಡು ಶೋಭಾಯಾತ್ರೆ : ಉತ್ಸವದ ಮೊದಲ ದಿನ ಶ್ರೀವಿರೂಪಾಕ್ಷೇಶ್ವರ ದೇವಸ್ಥಾನ ಮತ್ತು ಉದ್ಧಾನ ವೀರಭದ್ರ ದೇವಸ್ಥಾನದಿಂದ ಪ್ರತ್ಯೇಕವಾಗಿ ಎರಡು ಶೋಭಾಯಾತ್ರೆ ಪ್ರಾರಂಭವಾಗಿ ಮುಖ್ಯವೇದಿಕೆಯಲ್ಲಿ ಸಮಾರೋಪಗೊಳ್ಳುತ್ತವೆ. ಧ್ವನಿ ಮತ್ತು ಬೆಳಕಿನ 'ವಿಜಯನಗರ ವೈಭವ' ಪ್ರದರ್ಶನಗೊಳ್ಳಲಿದೆ. ಕುಸ್ತಿ, ಮಲ್ಲಕಂಭ, ಗುಂಡು ಎತ್ತುವುದು, ಕಬಡ್ಡಿ ಇತರೆ ದೇಶೀ - ಸಾಹಸ: ಜಲ ಕ್ರೀಡೆಗಳನ್ನು ಏರ್ಪಡಿಸಲಾಗುತ್ತದೆ.

'ಹಂಪಿ ಬೈ ಸ್ಕೈ' ವ್ಯವಸ್ಥೆಗಾಗಿ ಪ್ಯಾರಾಪ್ಲೇನ್ ಗಳು, ಹೆಲಿಕಾಪ್ಟರ್ ಗಳನ್ನು ಬಳಕೆ ಮಾಡಲಾಗುತ್ತದೆ. ಕಿಡ್ ಜೋನ್, ಗಾಳಿಪಟ ಉತ್ಸವ, ಆಹಾರ ಮೇಳ, ಪುಸ್ತಕ ಪ್ರದರ್ಶನ ಮತ್ತು ಪುಷ್ಪ ಪ್ರದರ್ಶನ ನಡೆಯಲಿದೆ

ಜನವರಿ 11ರ ಸಮಾರೋಪ ಸಮಾರಂಭಕ್ಕೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಮತ್ತು ಸಚಿವ ಡಿ.ಕೆ. ಶಿವಕುಮಾರ್ ಅವರು ಆಗಮಿಸಲಿದ್ದಾರೆ. ಹೆಚ್ಚಿನ ಮಾಹಿತಿಗೆ ಹಂಪಿಉತ್ಸವ್.ಕಾಂ ವೆಬ್ ತಾಣ ವೀಕ್ಷಿಸಬಹುದು ಎಂದು ಜಿಲ್ಲಾಧಿಕಾರಿ ಸಮೀರ್ ಶುಕ್ಲ ವಿವರಿಸಿದರು.

English summary
Sameer Shukla, Deputy Commissioner and Chairman district-level Hampi Utsav celebration committee, told The three-day cultural extravaganza to be held during January 9-11 at Hampi. Various committees have been formed to take care of all aspects related to the Utsav. Details of the events during the Utsav will be on the website ‘hampiutsav.com’.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X