ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲ್ಲಿಕಾ ಘಂಟಿ ವಿರುದ್ಧ 36 ಕೋಟಿ ಅವ್ಯವಹಾರದ ಆರೋಪ

By Prasad
|
Google Oneindia Kannada News

ಬಳ್ಳಾರಿ, ಸೆಪ್ಟೆಂಬರ್ 16 : ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಯಾಗಿರುವ ಡಾ. ಮಲ್ಲಿಕಾ ಘಂಟಿಯವರು ತಮಗೆ ನೀಡಲಾಗಿದ್ದ ಅನುದಾನವನ್ನು ದುರ್ಬಳಕೆ ಮಾಡಿಕೊಂಡು ಭ್ರಷ್ಟಾಚಾರ ಎಸಗಿದ್ದು, ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿಯಲ್ಲಿ ದೂರು ದಾಖಲಿಸಲು ಅನುಮತಿ ನೀಡಬೇಕೆಂದು ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆಯಲಾಗಿದೆ.

ಹಂಪಿ ವಿವಿ ಉಪ ಕುಲಪತಿಯ 'ಸೂಟ್ ಕೇಸ್' ಆಪಾದನೆ ವಿರುದ್ಧ ಸಿಎಂ ಗರಂಹಂಪಿ ವಿವಿ ಉಪ ಕುಲಪತಿಯ 'ಸೂಟ್ ಕೇಸ್' ಆಪಾದನೆ ವಿರುದ್ಧ ಸಿಎಂ ಗರಂ

ಕನ್ನಡ ವಿಶ್ವವಿದ್ಯಾಲಯದ ಅಧೀಕ್ಷಕರಾಗಿರುವ ಸೋಮನಾಥ ಎಚ್.ಎಂ. ಎಂಬುವವರು ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರೆಡ್ಡಿ ಅವರಿಗೆ ಶನಿವಾರ ಪತ್ರ ಬರೆದಿದ್ದು, ತಾವು ಮಾಡುತ್ತಿರುವ ಆರೋಪವನ್ನು ಸಾಬೀತುಪಡಿಸಲು ತಮ್ಮ ಬಳಿ ಎಲ್ಲ ದಾಖಲೆಗಳಿವೆ ಎಂದು ಹೇಳಿಕೊಂಡಿದ್ದಾರೆ.

Corruption charges Mallika Ghanti by Somanath HM

'ಸೂಟ್ ಕೇಸ್' ಹೇಳಿಕೆ ತಿರುಚಲಾಗಿದೆ, ಮಲ್ಲಿಕಾ ಘಂಟಿ ಸ್ಪಷ್ಟನೆ'ಸೂಟ್ ಕೇಸ್' ಹೇಳಿಕೆ ತಿರುಚಲಾಗಿದೆ, ಮಲ್ಲಿಕಾ ಘಂಟಿ ಸ್ಪಷ್ಟನೆ

ಕನ್ನಡ ನಾಡು, ನುಡಿಗಾಗಿಯೇ ಸ್ಥಾಪಿತವಾದ ಕನ್ನಡ ವಿಶ್ವವಿದ್ಯಾಲಯವನ್ನು ರಕ್ಷಿಸಲು, ಭ್ರಷ್ಟಾಚಾರ ಎಸಗಿಸದವರಿಗೆ ಶಿಕ್ಷೆಗೆ ಗುರಿಪಡಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಸೋಮನಾಥ ಅವರು ಆಗ್ರಹಿಸಿದ್ದಾರೆ. ಸೋಮನಾಥ ಅವರು ಉನ್ನತ ಶಿಕ್ಷಣ ಸಚಿವರಿಗೆ ಬರೆದಿರುವ ಪತ್ರವನ್ನು ಇಲ್ಲಿ ಯಥಾವತ್ ಪ್ರಕಟಿಸುತ್ತಿದ್ದೇವೆ.

16/09/2017
ಇವರಿಂದ
ಸೋಮನಾಥ ಎಚ್.ಎಂ.
ಅಧೀಕ್ಷಕರು, ಕನ್ನಡ ವಿಶ್ವವಿದ್ಯಾಲಯ, ಹಂಪಿ
ಹೊಸಪೇಟೆ-583201, ಬಳ್ಳಾರಿ ಜಿಲ್ಲೆ.
ಮೊಬೈಲ್ : 7899726055

ಇವರಿಗೆ
ಸನ್ಮಾನ್ಯ ಶ್ರೀ ಬಸವರಾಜ ರಾಯರೆಡ್ಡಿ
ಕನ್ನಡ ವಿಶ್ವವಿದ್ಯಾಲಯದ ಘನತೆವೆತ್ತ ಸಮ ಕುಲಾಧಿಪತಿಯವರು ಹಾಗೂ
ಕರ್ನಾಟಕ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಸಚಿವರು,
ವಿಧಾನಸೌಧ, ಬೆಂಗಳೂರು-560 001

ಮಹೋದಯರೇ,

ವಿಷಯ : ಸನ್ಮಾನ್ಯ ಡಾ. ಮಲ್ಲಿಕಾ ಘಂಟಿ ಅವರು ತಮ್ಮ ಅಧಿಕಾರಾವಧಿಯಲ್ಲಿ ನಮ್ಮ ಘನ ರಾಜ್ಯ ಸರಕಾರವು ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಕೊಟ್ಟ ಇಡೀ ಅನುದಾನದಲ್ಲಿ ಶೇ.100 ಭ್ರಷ್ಟಾಚಾರ ನಡೆಸಿರುವುದನ್ನು ನಾನು ರುಜುವಾತುಪಡಿಸಲು ಸಿದ್ಧನಿದ್ದು, ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿಯಲ್ಲಿ ದೂರು ದಾಖಲಿಸಲು ಅನುಮತಿ ಕೋರಿ ಮನವಿ.

ಉಲ್ಲೇಖ : 1. ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದು, ಯಾವೊಂದು (ಹಂಪಿ ಕನ್ನಡ ವಿಶ್ವವಿದ್ಯಾಲಯವೂ) ವಿಶ್ವವಿದ್ಯಾಲಯವೂ ಹೊರತಾಗಿಲ್ಲ, ಡಕಾಯಿತರಿಗಿಂತ ಹೆಚ್ಚಿನ ಲೂಟಿ ಮಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿರುವ ತಮ್ಮ ಹೇಳಿಕೆ.

2. 2017ರ ಮೇ 14 ಮತ್ತು 15 ಎರಡು ದಿನಗಳ ರಾಜ್ಯದ ಪ್ರಮುಖ ದಿನ ಪತ್ರಿಕೆಗಳ ಮುಖಪುಟ ವರದಿ ಮತ್ತು ದೃಶ್ಯ ಮಾಧ್ಯಮಗಳು ಬಿತ್ತರಿಸಿದ ವರದಿ.

*****
ನಾನು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ಅಧೀಕ್ಷಕ ಹುದ್ದೆಯಲ್ಲಿದ್ದು, 1994ರಿಂದ ಸಾರ್ವಜನಿಕ ಸೇವೆ ಸಲ್ಲಿಸುತ್ತಿದ್ದೇನೆ. ಸರ್ಕಾರ ಮತ್ತು ವ್ಯಕ್ತಿಗಳು ಬೇರೆ ಬೇರೆಯಾಗಿದ್ದು, ಸರ್ಕಾರದ ಅಧೀನದಲ್ಲಿ ಕೆಲಸ ಮಾಡುವ ವ್ಯಕ್ತಿಗಳು ನಡೆಸುವ ಭ್ರಷ್ಟಾಚಾರವನ್ನು ಬೆಳಕಿಗೆ ತರುವುದು ಸರ್ಕಾರದ ಸೇವಾ ನಿಯಮಗಳ ಅಡಿಯಲ್ಲಿ ಸದ್ಭಾವನೆಯಿಂದ ಕೈಗೊಂಡ ಕಾರ್ಯಗಳೆಂದು ಪರಿಗಣಿಸಲ್ಪಡುತ್ತವೆ ಎಂದೂ ಸಾರ್ವಜನಿಕ ತೆರಿಗೆ ಹಣದ ದುರ್ಬಳಕೆ ತಡೆಯುವುದು ಮತ್ತು ಭ್ರಷ್ಟಾಚಾರವನ್ನು ತಡೆಯುವುದು ಸಾರ್ವಜನಿಕ ಸೇವಕನಾದ ನನ್ನ ಕರ್ತವ್ಯದ ಭಾಗವೆಂದೂ ಪರಿಭಾವಿಸಿ, ತಮ್ಮಲ್ಲಿ ಗೌರವ ಪೂರ್‍ವಕವಾಗಿ ಈ ನಿವೇದನೆ ಸಲ್ಲಿಸುತ್ತಿದ್ದೇನೆ.

ನನ್ನದು ಕೇವಲ ಸಂಸ್ಥೆಯ ಬಗೆಗಿನ ಕಾಳಜಿ, ಸಾರ್ವಜನಿಕ ನಿಧಿ ರಕ್ಷಣೆ ಮತ್ತು ಸಾರ್ವಜನಿಕ ಹಿತಾಸಕ್ತಿ ಇದ್ದು, ಅನ್ಯಥಾ ಉದ್ದೇಶಗಳಿಲ್ಲ. ನನ್ನ ನಿವೇದನೆ ಶುದ್ಧ ಸರಕಾರದ ಪರವಾಗಿದೆ, ಭ್ರಷ್ಟಾಚಾರ ಮಾಡುತ್ತಿರುವವರ ವಿರುದ್ಧವಾಗಿದೆ.

ರಾಜ್ಯದ ಎಲ್ಲ ವಿಶ್ವವಿದ್ಯಾಲಯದ ಕುಲಪತಿಗಳೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದು ಯಾವೊಂದು (ಕನ್ನಡ ವಿಶ್ವವಿದ್ಯಾಲಯವೂ) ವಿಶ್ವವಿದ್ಯಾಲಯವೂ ಹೊರತಾಗಿಲ್ಲ, ಕಟ್ಟಡ ಕಾಮಗಾರಿಗಳಲ್ಲಿ ಡಕಾಯಿತರಿಗಿಂತ ಹೆಚ್ಚಿನ ಲೂಟಿ ಮಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾದ ತಮ್ಮ ಹೇಳಿಕೆಗಳನ್ನು ನಾನು ಓದಿದ್ದೇನೆ, ವಿಶ್ವವಿದ್ಯಾಲಯಗಳಲ್ಲಿ ನೇರಾನೇರ ನಡೆಯುತ್ತಿರುವ ಭ್ರಷ್ಟಾಚಾರವನ್ನು ತೆರೆದಿಟ್ಟು, ಶಿಕ್ಷಣ ಇಲಾಖೆಯನ್ನು ಭ್ರಷ್ಟಮುಕ್ತಗೊಳಿಸುವ ನಿಟ್ಟಿನಲ್ಲಿ ಪಾರದರ್ಶಕ ನಿಲುವನ್ನು ವ್ಯಕ್ತಪಡಿಸಿದ ಮೊಟ್ಟಮೊದಲ ಸನ್ಮಾನ್ಯ ಸಚಿವರು ತಾವು ಎಂದು ಹೇಳಿಕೊಳ್ಳಲು ನನಗೆ ಅತ್ಯಂತ ಹೆಮ್ಮೆ ಎನಿಸುತ್ತದೆ.

ನನಗೆ ತಿಳಿದಂತೆ, ಪ್ರಾಮಾಣಿಕವಾಗಿ ಮತ್ತು ಪಾರದರ್ಶಕವಾಗಿ ಕೆಲಸ ಮಾಡಿದ ಬಗ್ಗೆ ಅಧಿಕೃತ ದಾಖಲೆಗಳನ್ನು ರಾಜ್ಯದಲ್ಲಿರುವ ಯಾರೊಬ್ಬ ಗೌರವಾನ್ವಿತ ಕುಲಪತಿಗಳೂ ತಮಗೆ ಸಲ್ಲಿಸಿ, ವಿಶ್ವವಿದ್ಯಾಲಯಗಳಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ತಾವು ಕೊಟ್ಟ ಹೇಳಿಕೆಗಳನ್ನು ಅವರು ಅಲ್ಲಗಳೆದಿಲ್ಲ. ಎಲ್ಲವನ್ನೂ ಅವರು ನಿರಾಪೇಕ್ಷಣೆಗಳಿಲ್ಲದೆ ಅಂಗೀಕರಿಸಿಯಾಗಿದೆ.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸನ್ಮಾನ್ಯ ಕುಲಪತಿಯವರು ಮತ್ತು ಕುಲಸಚಿವರುಗಳಿಗೆ ದಿ.14-08-2017ರಂದು ನಾನು ಪತ್ರವೊಂದನ್ನು ಬರೆದು, ರೂ.36 (ಮೂವತ್ತಾರು) ಕೋಟಿ ರೂಪಾಯಿಗಳ ಕಾಮಗಾರಿಗಳಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಯಾವುದೇ ತನಿಖೆಯಲ್ಲಿ ದಾಖಲೆಗಳ ಸಮೇತ ಸಾಬೀತುಪಡಿಸಲು ಸಿದ್ಧನಿದ್ದೇನೆ ಎಂದು ಲಿಖಿತವಾಗಿ ತಿಳಿಸಿರುತ್ತೇನೆ. ಒಂದು ತಿಂಗಳು ಕಳೆದಿದ್ದು, ಇದನ್ನು ಸನ್ಮಾನ್ಯ ಕುಲಪತಿಯವರಾಗಲೀ ಕುಲಸಚಿವರಾಗಲೀ ಅಲ್ಲಗಳೆದಿಲ್ಲ, ಪ್ರತಿಕ್ರಿಯಿಸಿಲ್ಲ, ನಿರಾಕ್ಷೇಪಣೆಯಿಲ್ಲದೆ ಅಂಗೀಕರಿಸಲ್ಪಟ್ಟಿರುತ್ತಾರೆ.

ನಾನು ಪತ್ರ ಬರೆದ ಒಂದು ತಿಂಗಳ ನಂತರ ಸರಿಯಾಗಿ ದಿ.14-09-2017ರಂದು ಮುದ್ರಣ ಮಾಧ್ಯಮ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಡಾ. ಮಲ್ಲಿಕಾ ಎಸ್. ಘಂಟಿ ಅವರು ಮಾತನಾಡಿರುವ ಹಣದ ಸೂಟ್‌ಕೇಸ್ ಕುರಿತು ಪ್ರಸಾರ ಮಾಡಿವೆ. ಅದನ್ನು ಇಲ್ಲಿ ಹೆಚ್ಚು ವಿಸ್ತರಿಸಲು ಹೋಗುವುದಿಲ್ಲ. ಆದರೆ, ಅವರು ಸರಕಾರಕ್ಕೆ ಹಣ ಕೊಡಬೇಕು ಎಂದು ಹೇಳಿಕೊಂಡು ಶೇ.100ರಷ್ಟು ಭ್ರಷ್ಟಾಚಾರ ನಡೆಸಿರುವುದಂತೂ ಹೌದು ಎಂಬುದನ್ನು ರುಜುಪಡಿಸಬಲ್ಲ ಕೆಳಕಂಡ ದಾಖಲೆಗಳನ್ನು ಪರಾಮರ್ಶಿಸಬಹುದು. ಕರ್ನಾಟಕ ರಾಜ್ಯ ನಮ್ಮ ಘನ ಸರಕಾರವು ಅಭಿವೃದ್ಧಿಗಾಗಿ ಕೊಟ್ಟ ಇಡೀ ಅನುದಾನದಲ್ಲಿ ಶೇ.100ರಷ್ಟು ಸಂಪೂರ್ಣ ಭ್ರಷ್ಟಾಚಾರ ಎಸಗಿದ್ದಾರೆ ಎಂಬುದನ್ನು ನಾನು ಸಾಬೀತು ಮಾಡಲು ಸಿದ್ಧನಿದ್ದೇನೆ.

ಭ್ರಷ್ಟಾಚಾರ ರುಜುಪಡಿಸುವ ಆಧಾರಗಳು :

1. ಇವರ ಅಧಿಕಾರಾವಧಿಯಲ್ಲಿ ಯಾವುದೇ ಕಾಮಗಾರಿಗಳ ಟೆಂಡರ್ ಕರೆದಿಲ್ಲ. ರೂ. 36 ಕೋಟಿ ಮೊತ್ತದ ಕಾಮಗಾರಿಗಳು SINGLE CONTRACTOR, 100% WITHOUT TENDER, 100% PIECE WORKS, 100% VIOLATION OF KTPP ACT.

2. ಹೆಸರು ಮಾತ್ರ ಕ್ರಿಡಲ್ (KRIDL-old land Army), ಒಬ್ಬರೇ ಗುತ್ತಿಗೆದಾರರಿಂದ ಕಾಮಗಾರಿಗಳ ಸಂಪೂರ್ಣ ನಿರ್ವಹಣೆ ಮಾಡಿದ್ದು, ಆ ಗುತ್ತಿಗೆದಾರರು ಇಡೀ ರೂ.36 ಕೋಟಿಗಳ ಕಾಮಗಾರಿ ನಿರ್ವಹಣೆ ಮಾಡಿರುವ ಸಾಕ್ಷ್ಯವುಳ್ಳ (ಸಿ.ಸಿ.ಟಿ.ವಿ) ನಾಶಗೊಳಿಸದಂತೆ ರಕ್ಷಿಸುವ ಅಗತ್ಯವಿದೆ.

3. ಸಮಾಜ ಕಲ್ಯಾಣ ಇಲಾಖೆಯು ಬಿಡುಗಡೆ ಮಾಡಿರುವ ಅನುದಾನದ ಆದೇಶದಲ್ಲಿ ವಿಧಿಸಿರುವ ಷರತ್ತು ಕಟ್ಟಡ ನಿರ್ಮಾಣವನ್ನು ಕೆ.ಟಿ.ಪಿ.ಪಿ. ಕಾಯ್ದೆ ಪ್ರಕಾರ ನಿರ್ವಹಿಸತಕ್ಕದ್ದು. ವಿಶ್ವವಿದ್ಯಾಲಯದವರೇ ಅವರ ಸಿಬ್ಬಂದಿಯೊಂದಿಗೆ ನಿರ್ವಹಿಸತಕ್ಕದ್ದು ಎಂಬುದನ್ನು ಶೇ.100ರಷ್ಟು ಉಲ್ಲಂಘಿಸಲಾಗಿದೆ.

4. ಕರ್ನಾಟಕ ಆರ್ಥಿಕ ಸಂಹಿತೆ ಕಲಂ 181 ಉಲ್ಲಂಘಿಸಿ ಗುತ್ತಿಗೆದಾರರಿಗೆ [KRIDL-old land Army] ಮುಂಗಡ ನೀಡಲಾಗಿದೆ. ತದನಂತರ ದಿ. 07.12.2016ರಂದು ನಡೆಸಿದ ಪತ್ರವ್ಯವಹಾರದಲ್ಲಿ ಉನ್ನತ ಶಿಕ್ಷಣ ಇಲಾಖೆಯು (ಇಡಿ 22 ಕೆವಿವಿ 2016) ರೂ. 6.50 ಕೋಟಿ ಮೊತ್ತದ ಕಾಮಗಾರಿಗಳನ್ನು ಕ್ರಿಡಲ್ ಸಂಸ್ಥೆಯ ಮೂಲಕ ನಿರ್ವಹಿಸಲು, ಪಾರದರ್ಶಕ ಕಾಯಿದೆ ಸೆಕ್ಷನ್ ೪(ಜಿ) ಅನ್ವಯ ವಿನಾಯಿತಿ ನೀಡಲು ಅವಕಾಶವಿಲ್ಲವೆಂದು ತಿರಸ್ಕರಿಸಿದೆ. ಇಡೀ ಸರ್ಕಾರಕ್ಕೆ ಕಾಯಿದೆಗಳು, ಪಾರದರ್ಶಕ ನಿಯಮಗಳು ಒಂದೇ ಇರುವಾಗ, ತಮ್ಮ ಕಣ್ಗಾವಲಿನ ಉನ್ನತ ಶಿಕ್ಷಣ ಇಲಾಖೆ ತಿರಸ್ಕರಿಸಿದ್ದ ಪ್ರಸ್ತಾವನೆಯನ್ನು, ಪಿ.ಡಬ್ಲೂ.ಡಿ. ಇಲಾಖೆಗೆ ಮಂಡಿಸಿ, ರೂ. 8 ಕೋಟಿ ಕಾಮಗಾರಿಗಳಿಗೆ ಅನುಮತಿ ಪಡೆದುಕೊಂಡಿದ್ದು, ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿಯಲ್ಲಿ ಶಿಕ್ಷಾರ್ಹವಾಗಿದೆ. ಕೆ.ಟಿ.ಪಿ.ಪಿ. ಕಾಯಿದೆ ನಿಯಮ 4ರಲ್ಲಿ ವಿನಾಯಿತಿ ನೀಡುವ ಅವಕಾಶ ಇರುವುದು ಕೇವಲ ರಾಷ್ಟ್ರೀಯ ವಿಕೋಪಸಂದರ್ಭಗಳಲ್ಲಿ ಮಾತ್ರ.

5. ಕೆ.ಟಿ.ಪಿ.ಪಿ. ಕಾಯ್ದೆ 4(ಡಿ) ಪ್ರಕಾರ ಮತ್ತು ರಾಜ್ಯ ಹೈಕೋರ್ಟ್ ತೀರ್ಪು ಪ್ರಕಾರ (ಎನ್.ಜಿ.ಪುಟ್ಟಸ್ವಾಮಿ ಮತ್ತು ಇತರರು ವಿರುದ್ಧ ರಾಜ್ಯ ಸರ್ಕಾರ ದಿ. 12.01.2009) ದಿ. 04.10.2003ರ ನಂತರ ಕೆ.ಆರ್.ಐ.ಡಿ.ಎಲ್. ಅಥವಾ ಇನ್ನಾವುದೇ ಸರ್ಕಾರಿ ಏಜೆನ್ಸಿಗಳಿಗೆ ಟೆಂಡರ್ ಆಹ್ವಾನಿಸದೆ ಕಾಮಗಾರಿಗಳನ್ನು ವಹಿಸಿಕೊಡುವುದು ಅಕ್ರಮವಾಗುತ್ತದೆ. ಈ ತೀರ್ಪು ಮತ್ತು ಕೆ.ಟಿ.ಪಿ.ಪಿ. ಕಾಯಿದೆ ನಿಯಮಗಳನ್ನು ಉಲ್ಲಂಘಿಸಿ ಕಾಮಗಾರಿಗಳನ್ನು ನೆರವೇರಿಸಲಾಗಿದೆ.

6. ಲೋಕೋಪಯೋಗಿ ಇಲಾಖೆ ಆದೇಶ ಸಂಖ್ಯೆ 07 ಐ.ಎಫ್.ಎ.2013 ದಿ. 16.01.2013 ಮತ್ತು 17 ಐ.ಎಫ್.ಎ.2016 ದಿ. 25.06.2016 ಆದೇಶಗಳನ್ನು ಉಲ್ಲಂಘಿಸಿ, ಕೆ.ಟಿ.ಪಿ.ಪಿ. ಕಾಯಿದೆ ನಿಯಮಗಳನ್ನು ಉಲ್ಲಂಘಿಸಿ ತುಂಡುಗುತ್ತಿಗೆ ನೀಡಲಾಗಿದೆ. ಸ್ಪರ್ಧಾತ್ಮಕ ದರಗಳಲ್ಲಿ ಗುತ್ತಿಗೆದಾರರು ಭಾಗವಹಿಸಲು ಅವಕಾಶಕೊಡಬೇಕೆಂದು ಸಾಂವಿಧಾನಿಕ ಹಕ್ಕುಗಳನ್ವಯ ಕಡ್ಡಾಯಗೊಳಿಸಿರುವ ಪಾರದರ್ಶಕ ಕಾಯಿದೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ.

7. ಭ್ರಷ್ಟಾಚಾರ ಮಾಡುವ ಉದ್ದೇಶಕ್ಕಾಗಿಯೇ ಕರ್ನಾಟಕ ಆರ್ಥಿಕ ಸಂಹಿತೆ ನಿಯಮಗಳನ್ನು ಉಲ್ಲಂಘಿಸಿ, ಬಹುಪಾಲು ಹಣಕಾಸಿನ ವ್ಯವಹಾರಗಳನ್ನು, ಇಲಾಖೆಯ ಖರ್ಚು-ವೆಚ್ಚಗಳನ್ನು ನಗದು ರೂಪದಲ್ಲಿ ನಿರ್ವಹಣೆ ಮಾಡಲಾಗುತ್ತಿದೆ.

8. ಅವರು ಬಾದಾಮಿ ಕ್ಷೇತ್ರದಿಂದ ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಮಾಧ್ಯಮಗಳು ಈಗಾಗಲೇ ಪ್ರಕಟಿಸಿದ್ದು, ಚುನಾವಣೆಗಾಗಿ ಸರಕಾರದ ಹಣವನ್ನು ರಾಜಕೀಯ ಲಾಭಕ್ಕಾಗಿ ಭ್ರಷ್ಟಾಚಾರ ರೂಪದಲ್ಲಿ ಸಂಗ್ರಹಿಸುತ್ತಿರುವರೆಂಬುದಕ್ಕೆ ಕಾಯಿದೆ ಉಲ್ಲಂಘನೆ ನಡವಳಿಕೆಗಳು ಇಂಬುಕೊಡುತ್ತವೆ.

9. ಭ್ರಷ್ಟಾಚಾರ ನಡೆಸುವ ಉದ್ದೇಶ ಇಲ್ಲದಿದ್ದರೆ, ಸಂಪೂರ್ಣವಾಗಿ ಪಾರದರ್ಶಕ ಕಾಯಿದೆಯನ್ನು ವಿಫಲಗೊಳಿಸುವ ಯತ್ನದಲ್ಲಿ ತೊಡಗಿಕೊಳ್ಳುತ್ತಿರಲಿಲ್ಲ.

Karnataka Transparency in Public Procurements Act 1999 (KTPP) ಕಾಯ್ದೆ ಸೆಕ್ಷನ್ 23 ಮೇರೆಗೆ ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಒಂದು ಅವಧಿಯ ಕಾರಾವಾಸದಿಂದ ಮತ್ತು ಐದು ಸಾವಿರ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ಜುಲ್ಮಾನೆಯಿಂದ ದಂಡಿತವಾಗತಕ್ಕಂತಹ ಕಾರ್ಯಗಳಲ್ಲಿ ನಿರತರಾಗಿ, ಕೆ.ಟಿ.ಪಿ.ಪಿ.ಕಾಯಿದೆ ಉಲ್ಲಂಘಿಸಿ, ಭ್ರಷ್ಟಾಚಾರವನ್ನು ನಡೆಸಿದ್ದಾರೋ ಇಲ್ಲವೋ ಎಂಬ ಅಂಶಗಳನ್ನು ಮಾನ್ಯ ಕುಲಪತಿಯವರ ಮೇಲಾಧಿಕಾರಿಯವರೂ ಹಾಗೂ ಸನ್ಮಾನ್ಯ ಸಮಕುಲಾಧಿಪತಿಗಳಾದ ತಾವು ಕೂಲಂಕಷವಾಗಿ ಅವಲೋಕಿಸಿ, ದಯಮಾಡಿ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿಯಲ್ಲಿ ದೂರು ದಾಖಲಿಸಲು ನನಗೆ ಅನುಮತಿ ನೀಡಬೇಕೆಂದು ಕಳಕಳಿಯಿಂದ ಬಿನ್ನವಿಸಿಕೊಳ್ಳುತ್ತೇನೆ.

ಕನ್ನಡ ನಾಡು, ನುಡಿಗಾಗಿಯೇ ಸ್ಥಾಪಿತವಾದ ಕನ್ನಡ ವಿಶ್ವವಿದ್ಯಾಲಯವನ್ನು ರಕ್ಷಿಸಲು, ಭ್ರಷ್ಟಾಚಾರ ಎಸಗಿಸದವರಿಗೆ ಶಿಕ್ಷೆಗೆ ಗುರಿಪಡಿಸಲು ತಾವು ಗಂಭೀರವಾಗಿ ಕ್ರಮಗಳನ್ನು ಜರುಗಿಸುವಿರೆಂದು ಆಶಿಸುತ್ತೇನೆ.

ಸನ್ಮಾನ್ಯ ಡಾ. ಮಲ್ಲಿಕಾ.ಎಸ್.ಘಂಟಿ ಅವರು ಕಾರ್‍ಯಕ್ರಮವೊಂದರಲ್ಲಿ ಮಾತನಾಡಿದ್ದಾರೆಂದು ಮಾಧ್ಯಮಗಳಲ್ಲಿ ಪ್ರಸಾರಗೊಂಡ ಮಾತುಗಳು ಸಂಪೂರ್ಣವಾಗಿ ಸರಕಾರದ ವಿರುದ್ಧವಾಗಿದ್ದು, ಸೇವಾ ನಿಯಮಗಳ ಅಡಿಯಲ್ಲಿ ಶಿಕ್ಷಾರ್ಹ ಮಾತುಗಳಾಗಿರುತ್ತವೆ. ನಾನು ಇಲ್ಲಿ ತಮ್ಮ ಗಮನಕ್ಕೆ ತರುತ್ತಿರುವ ವಿಷಯಗಳು, ಸರಕಾರದ ಪರವಾಗಿದ್ದು ಸರಕಾರದ ನಿಧಿಯ ರಕ್ಷಣೆ ಮತ್ತು ಸಂಸ್ಥೆಯ ಹಿತದೃಷ್ಟಿಯಿಂದ ಕೂಡಿರುತ್ತವೆ.

ವಂದನೆಗಳು,
ತಮ್ಮ ವಿಶ್ವಾಸಿ
(ಸೋಮನಾಥ.ಎಚ್.ಎಂ)

English summary
Somanath HM, Superintendent at Kannada University, Hampi has made an allegation against vice-chancellor Mallika Ghanti of misusing the fund for the development of the university, without calling for any tender. He has written a letter to higher education minister to permit him file a case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X