ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅ.02ರಂದು ವಿಜಯನಗರ ಜಿಲ್ಲೆಗೆ ಸಿಎಂ ಬೊಮ್ಮಾಯಿ ಅಧಿಕೃತ ಚಾಲನೆ

|
Google Oneindia Kannada News

ವಿಜಯನಗರ, ಸೆಪ್ಟೆಂಬರ್ 17: "ವಿಜಯನಗರ ಜಿಲ್ಲೆ ಅಧಿಕೃತವಾಗಿ ಅಕ್ಟೋಬರ್ 02ರಂದು ಉದ್ಘಾಟನೆಯಾಗಲಿದ್ದು, ಅ.02 ಮತ್ತು 03ರಂದು ಎರಡು ದಿನಗಳ ಕಾಲ ಹೊಸಪೇಟೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ," ಎಂದು ಸಚಿವ ಆನಂದ್ ಸಿಂಗ್ ತಿಳಿಸಿದರು.

"ವಿಜಯನಗರ ಜಿಲ್ಲೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಅನೇಕ ಸಚಿವರು ಉಪಸ್ಥಿತರಿರಲಿದ್ದಾರೆ," ಎಂದು ಪ್ರವಾಸೋದ್ಯಮ, ಪರಿಸರ, ಜೀವಿಶಾಸ್ತ್ರ ಹಾಗೂ ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಆನಂದ್ ಸಿಂಗ್ ಹೇಳಿದರು.

ಕಲ್ಯಾಣ ಕರ್ನಾಟಕ ಉತ್ಸವದ ನಿಮಿತ್ತ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಸಚಿವ ಆನಂದ್ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ವಿಜಯನಗರ ಜಿಲ್ಲೆ ಅಧಿಕೃತ ಉದ್ಘಾಟನೆ ಬಗ್ಗೆ ಮಾಹಿತಿ ನೀಡಿದರು.

CM Basavaraj Bommai To Officially Launch Vijayanagara District On Oct 2

"ವಿಜೃಂಭಣೆ ಮತ್ತು ಸರಳ ಎರಡನ್ನು ಗಮನದಲ್ಲಿಟ್ಟುಕೊಂಡು ವೈಭವದ ವಿಜಯನಗರ ಜಿಲ್ಲೆಗೆ ಚಾಲನೆ ನೀಡಲಾಗುತ್ತದೆ. ಇದಕ್ಕಾಗಿ ಬೃಹತ್ ವೇದಿಕೆ ಸಿದ್ದಪಡಿಸಲಾಗುತ್ತಿದ್ದು, ಉದ್ಘಾಟನಾ ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲ ಅಗತ್ಯ ಸಿದ್ಧತಾ ಕಾರ್ಯಗಳು ಶನಿವಾರದಿಂದ ಹೊಸಪೇಟೆ ನಗರದಲ್ಲಿ ನಡೆಯಲಿವೆ. ಇದಕ್ಕಾಗಿ ತಂಡಗಳು ಬರಲಿವೆ," ಎಂದು ಸಚಿವ ಸಿಂಗ್ ವಿವರಿಸಿದರು.

"ಮುಖ್ಯಮಂತ್ರಿಗಳು ವಿಜಯನಗರ ಜಿಲ್ಲೆಗೆ ಚಾಲನೆ ನೀಡುವುದರ ಜೊತೆಗೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಇದೇ ಸಂದರ್ಭದಲ್ಲಿ ಚಾಲನೆ ನೀಡಲಿದ್ದಾರೆ," ಎಂದು ಅವರು ತಿಳಿಸಿದರು.

"ವಿಜಯನಗರ ಜಿಲ್ಲೆ ಕಾರ್ಯಾರಂಭ ಮಾಡುವ ಸಂದರ್ಭದಲ್ಲಿ ಅನೇಕ ಸವಾಲುಗಳಿರುತ್ತವೆ. ಕಚೇರಿಗಳ ಕಾರ್ಯಾರಂಭ ಮಾಡುವುದು, ಯುವ ಮತ್ತು ಉತ್ಸಾಹಿ ಹಾಗೂ ಅನುಭವಿಗಳ ಅಧಿಕಾರಿಗಳನ್ನು ಕರೆತರುವುದು. ಈ ಭಾಗದ ಜನರು ವಿವಿಧ ಸರಕಾರಿ ಸೌಲಭ್ಯಗಳಿಗೆ ಬಳ್ಳಾರಿಗೆ ಅಲೆದಾಡುವುದನ್ನು ತಪ್ಪಿಸಿ, ಎಲ್ಲ ಸೌಲಭ್ಯಗಳನ್ನು ವಿಜಯನಗರದಲ್ಲಿ ಸಿಗುವಂತೆ ನೋಡಿಕೊಳ್ಳುವುದು. ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳು ಆರಂಭ ಮಾಡುವ ಸಂದರ್ಭದಲ್ಲಾದ ಲೋಪಗಳನ್ನು ಗಮನದಲ್ಲಿಟ್ಟುಕೊಂಡು ಈ ಜಿಲ್ಲೆಯಲ್ಲಿ ಆ ರೀತಿಯ ಸಮಸ್ಯೆಗಳಾಗದಂತೆ ಜಿಲ್ಲೆಯನ್ನು ಕಟ್ಟಲಾಗುವುದು ಮತ್ತು ಮಾದರಿ ಜಿಲ್ಲೆಯನ್ನಾಗಿ ರೂಪಿಸಲಾಗುವುದು," ಎಂದರು.

CM Basavaraj Bommai To Officially Launch Vijayanagara District On Oct 2

"ಟಿಎಸ್‍ಪಿ ಕಚೇರಿ ಆವರಣದಲ್ಲಿ ಸ್ಥಾಪಿಸಲಾಗುತ್ತಿರುವ ಜಿಲ್ಲಾಡಳಿತದ ಕಟ್ಟಡ 6 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಳ್ಳುತ್ತಿದ್ದು, ಈಗಾಗಲೇ 3 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕಾರಿಗನೂರ ಬಳಿಯ ಇಎಸ್‍ಐ ಕಟ್ಟಡದಲ್ಲಿ ಎಸ್ಪಿ ಕಚೇರಿ ಸ್ಥಾಪಿಸಲಾಗುತ್ತಿದೆ," ಎಂದು ಅವರು ವಿವರಿಸಿದರು.

"ಟಿಎಸ್‍ಪಿ ಕಚೇರಿ ಆವರಣದಲ್ಲಿಯೇ 35 ಎಕರೆ ವಿಶಾಲ ಜಾಗದಲ್ಲಿ ಮೆಡಿಸಿಟಿ ಸ್ಥಾಪಿಸಲಾಗುತ್ತಿದೆ. ಇದರಲ್ಲಿ 110 ಕೋಟಿ ರೂ. ವೆಚ್ಚದ 250 ಹಾಸಿಗೆ ಆಸ್ಪತ್ರೆ, ಮೆಡಿಕಲ್ ಕಾಲೇಜು, ನರ್ಸಿಂಗ್ ಕಾಲೇಜುಗಳಿರಲಿವೆ," ಎಂದು ಹೇಳಿದರು.

ಎಲ್ಲರ ಸಮ್ಮತಿ ಇದ್ದರೇ ಮಹಾನಗರ ಪಾಲಿಕೆ
"ಜನರಿಗಾಗಿಯೇ ಹೊಸಪೇಟೆ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ. ಹೊಸಪೇಟೆ ನಗರಸಭೆ ಮಹಾನಗರ ಪಾಲಿಕೆಯಾಗಿ ಪರಿವರ್ತನೆಯಾದರೇ ಅಭಿವೃದ್ಧಿಗೆ ಅನುದಾನ ಬರುತ್ತದೆ. ಸಾಕಷ್ಟು ಪ್ರಮಾಣದ ಅಭಿವೃದ್ಧಿಯಾಗುತ್ತದೆ ಎಂಬ ಉದ್ದೇಶದಿಂದ ಕರಡು ಸಿದ್ಧಪಡಿಸಲಾಗುತ್ತಿದೆ," ಎಂದು ಸಚಿವ ಸಿಂಗ್ ವಿವರಿಸಿದರು.

ಕಮಲಾಪುರ ಪಟ್ಟಣ ಪಂಚಾಯಿತಿ, ನಾಗೇನಹಳ್ಳಿ ಗ್ರಾ.ಪಂ.ಗಳು ಈ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿಸದಂತೆ ಗೊತ್ತುವಳಿ ಅಂಗೀಕರಿಸಿರುವುದಕ್ಕೆ ಉತ್ತರಿಸಿದ ಸಚಿವ ಆನಂದ್ ಸಿಂಗ್, "ಎಲ್ಲರೊಂದಿಗೆ ಚರ್ಚಿಸಿ ಸಮ್ಮತಿ ಪಡೆದುಕೊಳ್ಳಲಾಗುವುದು. ಆದರೂ ಜನರು ಸದ್ಯ ಈಗ ಬೇಡ, ಮುಂದೆ ನೋಡಿದರಾಯ್ತು ಅಂತ ಅಂದರೆ ಪಾಲಿಕೆಯನ್ನಾಗಿ ಮಾಡುವ ಪ್ರಸ್ತಾಪ ಕೈಬಿಡಲಾಗುವುದು," ಎಂದರು.

ಇದೇ ವೇಳೆ ಹಂಪಿ ಉತ್ಸವವನ್ನು ಒಂದು ದಿನ ಸಾಂಕೇತಿಕವಾಗಿ ಆಚರಿಸಲಾಗುವುದು ಎಂದು ಸಚಿವ ಆನಂದ್ ಸಿಂಗ್ ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಹುಡಾ ಅಧ್ಯಕ್ಷ ಅಶೋಕ ಜೀರೆ, ವಿಜಯನಗರ ಜಿಲ್ಲೆಯ ವಿಶೇಷಾಧಿಕಾರಿಗಳು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಾದ ಅನಿರುದ್ಧ ಶ್ರವಣ್, ಅಪರ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ಲಾವಣ್ಯ, ಸಹಾಯಕ ಆಯುಕ್ತ ಸಿದ್ಧರಾಮೇಶ್ವರ ಮತ್ತಿತರರು ಇದ್ದರು.

English summary
CM Basavaraj Bommai to officially launch Vijayanagara District on October 2 says Minister Anand Singh. ವಿ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X