ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಜಯನಗರ: ನರೇಗಾ ಯೋಜನೆಯಲ್ಲಿ ಕೂಲಿ ಮಾಡುತ್ತಿರುವ ಅಂತಾರಾಷ್ಟ್ರೀಯ ಕರಾಟೆ ಪಟು

By ಭೀಮರಾಜ. ಯು. ವಿಜಯನಗರ
|
Google Oneindia Kannada News

ವಿಜಯನಗರ. ಜುಲೈ 17: ದೇಶಕ್ಕೆ ಕೀರ್ತಿ ತಂದ ಅಂತಾರಾಷ್ಟ್ರೀಯ ಕರಾಟೆ ಪಟು ಈಗ ತನ್ನ ಹೊಟ್ಟೆಪಾಡಿಗಾಗಿ ನರೇಗಾ ಯೋಜನೆ ಅಡಿಯಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಇದು ಈ ದೇಶದ ಪ್ರತಿಭಾನ್ವಿತರಿಗೆ ಸಂದ ಸ್ಥಿತಿಯಾಗಿದೆ.

ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ವಡ್ಡನಹಳ್ಳಿ ತಾಂಡಾದ ಬಂಜಾರ ಸಮುದಾಯದ ಮಹಿಳೆ ನೇತ್ರಾಬಾಯಿ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಟು. ಮನೆಯವರ ಮೇಲೆ ಅವಲಂಬಿತರಾಗದೇ ಸ್ವಂತ ಇಚ್ಚೆಯಿಂದ ಕರಾಟೆಯಲ್ಲಿ ಆಸಕ್ತಿಯನ್ನು ಬೆಳಸಿಕೊಂಡು ಕರಾಟೆಯಲ್ಲಿ ದಿಗ್ಗಜಳಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದ್ದಾಳೆ.

ಈಕೆ ಓದಿದ್ದು ಮಾತ್ರ ಕೇವಲ ದ್ವಿತೀಯ ಪಿಯುಸಿ, ಅದನ್ನೂ ಅರ್ಧಕ್ಕೆ ಮೊಟಕುಗೊಳಿಸಿ, ಬಡತನ ಕಾರಣದಿಂದ ಹೊಟ್ಟೆಪಾಡಿಗಾಗಿ ಕೂಲಿ ಕೆಲಸಕ್ಕೆ‌ ಹೆಜ್ಜೆ ಹಾಕಿ ನಡೆದರು. ಮನೆಯಲ್ಲಿ ಅಪ್ಪ- ಅಮ್ಮ ಮತ್ತು ಇಬ್ಬರು ಸಹೋದರಿಯರನ್ನು ನೋಡಿಕೊಳ್ಳುವ ಹೊಣೆ ಹೊತ್ತಿದ್ದಾರೆ.

ನೇತ್ರಾಬಾಯಿ ಹೂವಿನಹಡಗಲಿಯಲ್ಲಿ ಹೊಸದಾಗಿ ಕರಾಟೆ ತರಗತಿ ಆರಂಭಿಸಿದ್ದರು. ಆದರೆ, ಕೊರೊನಾ ಲಾಕ್‌ಡೌನ್ ಅಡ್ಡಿಯಾಗಿದ್ದರಿಂದ ಮಕ್ಕಳು ಕರಾಟೆ ತರಬೇತಿಗೆ ದಾಖಲಾಗದ ಕಾರಣ ತರಬೇತಿಯನ್ನು ನಿಲ್ಲಿಸಬೇಕಾಯಿತು. ಜೀವನ ನಿರ್ವಹಣೆ ಮಾಡುವುದಕ್ಕೆ ದಾರಿ ತೋಚದೆ ಇದ್ದಾಗ ಅವರಿಗೆ ಕೈ ಹಿಡಿದಿದ್ದು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ. ಇಲ್ಲಿ ಉದ್ಯೋಗ ಲಭಿಸಿದ ನಂತರ ಅಂತರಾಷ್ಟ್ರೀಯ ಕರಾಟೆ ಪಟು ಎನ್ನುವ ಹಮ್ಮು ಬಿಮ್ಮು ತೋರಿಸದೇ ಉದ್ಯೋಗ ಖಾತರಿ ಯೋಜನೆಯ ಕೂಲಿ ಕಾರ್ಮಿಕಳಾಗಿದ್ದಾಳೆ.

 ಗುಳೆ ಹೋಗುವವರನ್ನು ತಪ್ಪಿಸಿದ ನೇತ್ರಾಬಾಯಿ

ಗುಳೆ ಹೋಗುವವರನ್ನು ತಪ್ಪಿಸಿದ ನೇತ್ರಾಬಾಯಿ

ಬಹುತೇಕವಾಗಿ ಉತ್ತರ ಕರ್ನಾಟಕದ ತಾಂಡಗಳಲ್ಲಿ ಉದ್ಯೋಗವನ್ನು ಅರಸಿ ವಲಸೆ ಹೋಗುವುದು ಸಾಮಾನ್ಯ ಸಂಗತಿಯಾಗಿದೆ. ನೇತ್ರಾಬಾಯಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಮತ್ತು ತಾಂಡ ಅಭಿವೃದ್ಧಿ ನಿಗಮ ಸಹಯೋಗದಲ್ಲಿ ನಡೆಯುವ ತಾಂಡ ರೋಜಗಾರ್ ಮಿತ್ರದಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಂಡಗಳ ಕೂಲಿ ಕಾರ್ಮಿಕರು ಕಾಫಿ ಸೀಮೆ ಹಾಗೂ ನಗರ ಪ್ರದೇಶಗಳಿಗೆ ಗುಳೆ ತಪ್ಪಿಸಲು, ಸರ್ಕಾರ ತಾಂಡ ಅಭಿವೃದ್ಧಿ ನಿಗಮ ಮತ್ತು ನರೇಗಾ ಯೋಜನೆಯಡಿ ತಾಂಡ ರೋಜಗಾರ್ ಮಿತ್ರ ಜಾರಿಗೆ ತಂದಿದೆ. ಜನರಲ್ಲಿ ನರೇಗಾ ಜಾಗೃತಿ ಮೂಡಿಸಿ ಸ್ಥಳೀಯವಾಗಿಯೇ ಉದ್ಯೋಗ ನೀಡುವ ಉದ್ದೇಶವಿದೆ. ತಾಂಡ ರೋಜಗಾರ್ ಮಿತ್ರದಡಿ ತಾಲೂಕಿನ ವಡ್ಡನಹಳ್ಳಿ ತಾಂಡ, ಕಗ್ಗಲಗಟ್ಟಿ ತಾಂಡ, ಹುಗಲೂರು ತಾಂಡ, ಕೊಯಿಲಾರಗಟ್ಟಿ ತಾಂಡ, ಅಂಕ್ಲಿ ತಾಂಡ, ಕಾಲ್ವಿ ತಾಂಡಗಳನ್ನು ಆಯ್ಕೆ ಮಾಡಿದ್ದು, ಈ ವ್ಯಾಪ್ತಿಯಲ್ಲಿ 9 ಜನ ವಿದ್ಯಾವಂತ ಯುವಕ, ಯುವತಿಯರು ಕೆಲಸ ಮಾಡುತ್ತಿದ್ದಾರೆ.

 ಮನೆಯಲ್ಲಿ ಕೆಲಸ ಇಲ್ಲದೇ ಉದ್ಯೋಗ ಸಮಸ್ಯೆ

ಮನೆಯಲ್ಲಿ ಕೆಲಸ ಇಲ್ಲದೇ ಉದ್ಯೋಗ ಸಮಸ್ಯೆ

ಕಡು ಬಡತನದಲ್ಲಿಯೂ ಸಾಧಿಸುವ ಛಲ ಬಿಡದೇ ವಡ್ಡನಹಳ್ಳಿ ತಾಂಡದ ನೇತ್ರಾಬಾಯಿ ಕರಾಟೆ ತರಬೇತಿ ಪಡೆದು, ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಟುವಾಗಿದ್ದು, ಶ್ರೀಲಂಕಾ ದೇಶದ ಕೊಲೊಂಬೊದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ದೇಶಕ್ಕೆ ಕೀರ್ತಿ ತಂದಿದ್ದಾಳೆ. ಮನೆಯಲ್ಲಿ ಕೆಲಸ ಇಲ್ಲದೇ ಉದ್ಯೋಗ ಸಮಸ್ಯೆ ಎದುರಾಗಿದ್ದಾಗ ಈ ಯುವತಿಗೆ ನರೇಗಾ ಉದ್ಯೋಗ ನೀಡಿದೆ.

 ಯುವಕರಲ್ಲಿ ನರೇಗಾ ಜಾಗೃತಿ

ಯುವಕರಲ್ಲಿ ನರೇಗಾ ಜಾಗೃತಿ

ಗುಳೆ ಹೋಗುವವರನ್ನು ತಪ್ಪಿಸುವ ಸಲುವಾಗಿ ಪ್ರತಿ ಮನೆಗಳಿಗೆ ತೆರಳಿ ಕಾಫಿಸೀಮೆಗೆ ಹೋಗಿ ದುಡಿಯುವಷ್ಟು ನಮ್ಮ ಊರುಗಳಲ್ಲಿಯೇ ಬದು ನಿರ್ಮಾಣ, ತೋಟಗಾರಿಕೆ ಕೆಲಸ, ಕೃಷಿ ಹೊಂಡ, ಸಸಿಗಳನ್ನು ನೆಡುವುದು ಹೀಗೆ ಹತ್ತಾರ ಕೆಲಸಗಳನ್ನು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿಯಲ್ಲಿ ಕೆಲಸವನ್ನು ಪಡೆಯಬಹುದಾಗಿದೆ ಎಂದು ಜನರಲ್ಲಿ ಜಾಗೃತಿ ಮೂಡಿಸುತ್ತಾರೆ. ಪ್ರತಿನಿತ್ಯ ತಾಂಡದ ಕಾರ್ಮಿಕರ ಮನೆಗಳಿಗೆ ಭೇಟಿ ನೀಡಿ, ಕೆಲಸ ಅರಸಿ ಗುಳೆ ಹೋಗದಂತೆ ಜಾಗೃತಿ ಮೂಡಿಸಿ ಸ್ಥಳೀಯವಾಗಿಯೇ ಕಾರ್ಮಿಕರಿಗೆ ಕೆಲಸ ನೀಡುವ ಪ್ರಯತ್ನ ಮಾಡುತ್ತಿದ್ದಾಳೆ. ನಿಮ್ಮ ಜಮೀನುಗಳಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ನರೇಗಾದಲ್ಲಿ ಹಣ ಸಿಗಲಿದೆ. ತೋಟ ಮಾಡಿಕೊಂಡು ಮನೆಗೆ ಆದಾಯ ಮಾಡಿಕೊಳ್ಳಿ ಎಂದು ಹೇಳುವ ಮೂಲಕ 350ಕ್ಕೂ ಅಸಂಘಟಿತ ಕಾರ್ಮಿಕರು ಗುಳೆ ಹೋಗುವುದನ್ನು ತಪ್ಪಿಸಿ, ಸ್ಥಳೀಯವಾಗಿಯೇ ನರೇಗಾ ಕೆಲಸ ಮಾಡಿಸುತ್ತಿದ್ದಾಳೆ.

 ಸ್ವಂತ ಸೂರಿಲ್ಲದ ಕ್ರೀಡಾಪಟು

ಸ್ವಂತ ಸೂರಿಲ್ಲದ ಕ್ರೀಡಾಪಟು

ಅಂತರಾಷ್ಟ್ರೀಯ ಕರಾಟೆಪಟು ನೇತ್ರಾಬಾಯಿಗೆ ವಾಸಕ್ಕೆ ಸ್ವಂತಕ್ಕೆ ಅಂತ ಸರಿಯಾದ ಸೂರಿಲ್ಲ, ಚಿಕ್ಕ ತಗಡಿನ ಮನೆ. ಅದು ಮಳೆ ಬಂದರೆ ಎಲ್ಲಾ ಕಡೆ ಸೋರುತ್ತದೆ. ಗೋಡೆಗಳು ಬಿರುಕು ಬಿಟ್ಟಿವೆ. ಅಪಾಯದಡಿಯಲ್ಲಿ ಈ ಕುಟುಂಬ ವಾಸ ಮಾಡುತ್ತಿದ್ದು, ಬಡತನದಲ್ಲೇ ಇಬ್ಬರು ಸಹೋದರಿಯರು, ತಾಯಿಯನ್ನು ಸಾಕುವ ಹೊಣೆ ಹೊತ್ತಿದ್ದಾಳೆ.

 ಜನಪ್ರತಿನಿಧಿಗಳ ನಿರ್ಲಕ್ಷ್ಯ

ಜನಪ್ರತಿನಿಧಿಗಳ ನಿರ್ಲಕ್ಷ್ಯ

ಕಡು ಬಡತನದಲ್ಲಿಯೇ ಓದಿ ಸಾಧಿಸುವ ಛಲ ಬಿಡದೇ ಸಾಧನೆ ಮಾಡಿ ಇಡೀ ದೇಶಕ್ಕೆ ಕೀರ್ತಿಯನ್ನು ತಂದುಕೊಟ್ಟಿದ್ದಾಳೆ ನೇತ್ರಾಬಾಯಿ. ಇವರು ಕರಾಟೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡರೂ ಸಹ ಸ್ಥಳೀಯ ಜನಪ್ರತಿನಿಧಿಗಳ ಗ್ರಾ.ಪಂ ಸದಸ್ಯರಿಂದ ಹಿಡಿದು ಶಾಸಕರವರೆಗೂ ಯಾರೂ ಸಹ ಇವರ ಸಹಾಯಕ್ಕೆ ಸ್ಪಂದಿಸದೇ ಇರುವುದು ದುರಂತವೇ ಸರಿ. ಕರಾಟೆಗೆ ಬೇಕಾಗುವಂತಹ ಸಲಕರಣೆಗಳು, ತರಬೇತಿ ನಡೆಸುವುದಕ್ಕೆ ಪೂರಕವಾದ ವಾತಾವರಣ ನಿರ್ಮಿಸುವ ಕಾರ್ಯಕ್ಕೆ ಮುಂದಾಗಬೇಕು. ನೇತ್ರಾಬಾಯಿಗೆ ಇನ್ನು ಜಾಗತಿಕ ಮಟ್ಟದಲ್ಲಿ ಬೆಳೆಯುವುದಕ್ಕೆ ಜನಪ್ರತಿನಿಧಿಗಳಿಂದ ಈಕೆಗೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರ ಒತ್ತಾಸೆಯಾಗಿದೆ.

 ಪಿ.ಟಿ ಪರಮೇಶ್ವರ್ ನಾಯ್ಕ್ ಅಭಯ

ಪಿ.ಟಿ ಪರಮೇಶ್ವರ್ ನಾಯ್ಕ್ ಅಭಯ

"ನೋಡಿ ನನ್ನ ಕ್ಷೇತ್ರದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ನನಗೆ ಹೆಮ್ಮೆಯ ವಿಷಯ. ಶ್ರೀಲಂಕಾಗೆ ಹೋಗುವಾಗ ನಾನು ಸಹಾಯ ಮಾಡಿದ್ದೀನಿ, ಕಳೆದ ಒಂದು ವರ್ಷದ ಹಿಂದೆ ಅವರಿಗೆ ಮನೆ ಇಲ್ಲ ಅಂತ ನನ್ನ ಗಮನಕ್ಕೆ ಬಂದಿದೆ. ಕಳೆದ ಎರಡು ವರ್ಷದಿಂದ ಸರ್ಕಾರದಿಂದ ಮನೆಗಳು ಬಂದಿಲ್ಲ, ಮನೆಗಳು ಬಂದ ಕೂಡಲೇ ಅವರಿಗೆ ಮನೆ ಹಾಕುತ್ತೇನೆ. ನನ್ನಿಂದ ಏನು ಸಹಾಯ ಬೇಕೋ ಅದನ್ನು ಮಾಡುತ್ತೇನೆ,'' ಎಂದು ಹೂವಿನಹಡಗಲಿ ಕ್ಷೇತ್ರದ ಶಾಸಕ ಪಿ.ಟಿ ಪರಮೇಶ್ವರ್ ನಾಯ್ಕ್ ಹೇಳಿದರು.

 ದಾರಿ ತೋರಿಸಿದ್ದು ನರೇಗಾ ಯೋಜನೆ

ದಾರಿ ತೋರಿಸಿದ್ದು ನರೇಗಾ ಯೋಜನೆ

"ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರಾಟೆಗೆ ಸ್ಪರ್ಧೆಗೆ ಹೋಗಲು ತಾಲೂಕಿನ ಜನತೆ ಸಹಾಯ ಮಾಡಿದ್ದಾರೆ. ಮನೆಯ ಜವಾಬ್ದಾರಿ ಹೊತ್ತಿರುವ ನನಗೆ ದಾರಿ ತೋರಿಸಿದ್ದು ನರೇಗಾ ಯೋಜನೆ. ಕಾರ್ಮಿಕರು ಗುಳೆ ಹೋಗುವುದನ್ನು ತಪ್ಪಿಸಿ ಅವರಿಗೆ ಸ್ವಂತ ಊರಿನಲ್ಲೇ ನರೇಗಾದಡಿ ಕೆಲಸ ನೀಡಲಾಗುತ್ತಿದೆ. ವಾಸಕ್ಕೆ ಯೋಗ್ಯವಾದ ಮನೆ ಇಲ್ಲ, ಮಳೆ ಬಂದರೆ ಮನೆ ತುಂಬಾ ನೀರು, ಕಟ್ಟಿಕೊಳ್ಳುವಷ್ಟು ಸ್ಥಿತಿವಂತಿಕೆ ನಮಗಿಲ್ಲ, ನರೇಗಾದಿಂದ ಬಂದ ಹಣದಲ್ಲೇ ಕುಟುಂಬ ನಡೆಸುವ ಜವಾಬ್ದಾರಿ ನನ್ನ ಮೇಲಿದೆ,'' ಎಂದು ವಡ್ಡನಹಳ್ಳಿ ತಾಂಡದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಟು ನೇತ್ರಾಬಾಯಿ ಕಷ್ಟ ಹೇಳಿಕೊಂಡರು.

 ನರೇಗಾದಿಂದ ಜನರು ಗುಳೆ ಹೋಗುವುದು ತಪ್ಪಿದೆ

ನರೇಗಾದಿಂದ ಜನರು ಗುಳೆ ಹೋಗುವುದು ತಪ್ಪಿದೆ

"ನರೇಗಾ ಹಾಗೂ ಲಂಬಾಣಿ ತಾಂಡ ಅಭಿವೃದ್ಧಿ ನಿಗಮ ಸಹಯೋಗದಲ್ಲಿ ಆರಂಭಿಸಿರುವ ತಾಂಡ ರೋಜಗಾರ್ ಮಿತ್ರದಡಿ 6 ತಾಂಡಗಳಲ್ಲಿ ಕೆಲಸ ನಡೆಯುತ್ತಿದೆ. ವಡ್ಡನಹಳ್ಳಿ ತಾಂಡದ ಕರಾಟೆ ಪಟು ನೇತ್ರಾಬಾಯಿ ಯಾವುದೇ ಹಮ್ಮು ಬಿಮ್ಮು ತೋರದೇ ಕಾರ್ಮಿಕರ ಮನೆ ಬಾಗಿಲಿಗೆ ಹೋಗಿ ಗುಳೆ ತಪ್ಪಿಸಿ, ಸ್ಥಳೀಯವಾಗಿಯೇ ಕೆಲಸ ನೀಡುವ ಪ್ರಯತ್ನದಲ್ಲಿದ್ದಾರೆ,'' ಎಂದು ಹೂವಿನಹಡಗಲಿ ತಾ.ಪಂ ನರೇಗಾ ಯೋಜನೆ ಸಹಾಯಕ ನಿರ್ದೇಶಕ ಯು.ಎಚ್.ಸೋಮಶೇಖರ್ ತಿಳಿಸಿದರು.

English summary
International Karate woman Netrabai from Vaddanahalli tanda in Hoovinahadagali taluk of Vijayanagara district, is now a labourer in the Mahatma Gandhi National Rural Employment Guarantee Project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X