ಆಂಬುಲೆನ್ಸ್ ನಲ್ಲೇ ಅವಳಿ ಮಕ್ಕಳಿಗೆ ಜನ್ಮವಿತ್ತ ಮಹಿಳೆ
ಬಾಗಲಕೋಟೆ, ನವೆಂಬರ್ 16: ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗುವ ಸಮಯದಲ್ಲೇ ಮಹಿಳೆಯೊಬ್ಬರು ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಬಾಗಲಕೋಟೆ ತಾಲ್ಲೂಕಿನ ಚೌಡಾಪುರ ಗ್ರಾಮದ ಬಳಿ ಮಹಾರಾಷ್ಟ್ರ ಮೂಲದ ಮನಿಷಾ ಸುಧೀರ್ ಚೌಹಾನ್ (24) ಎಂಬ ಮಹಿಳೆ ಅವಳಿ ಮಕ್ಕಳಿಗೆ ಜನ್ಮ ಕೊಟ್ಟಿದ್ದಾರೆ. ಕಬ್ಬು ಕಟಾವು ಮಾಡುವುದಕ್ಕಾಗಿ ಪತಿ ಸುಧೀರ್ ಹಾಗೂ ಕುಟುಂಬ ಸಮೇತ ಚೌಡಾಪುರಕ್ಕೆ ಮನಿಷಾ ಬಂದಿದ್ದರು.
ವಿಜಯಪುರದಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ತಾಯಿ
ಗ್ರಾಮದ ರೈತರ ಹೊಲದಲ್ಲಿ ಗುಡಿಸಲು ಹಾಕಿಕೊಂಡು ಕೆಲಸ ಮಾಡುತ್ತಿದ್ದರು. ಇಂದು ಬೆಳ್ಳಂಬೆಳಗ್ಗೆ ಮನಿಷಾಗೆ ಹೆರಿಗೆ ಕಾಣಿಸಿಕೊಂಡಿತ್ತು. ಹಾಗಾಗಿ ಆಂಬುಲೆನ್ಸ್ ಮೂಲಕ ಮನಿಷಾಳನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಈ ಸಂದರ್ಭ ಮಾರ್ಗಮಧ್ಯೆಯೇ ಮನಿಷಾ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಹೆರಿಗೆ ಬಳಿಕ ಆಂಬುಲೆನ್ಸ್ ಸಿಬ್ಬಂದಿ ಮನಿಷಾಳನ್ನು ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ತಾಯಿ ಮಕ್ಕಳು ಆರೋಗ್ಯದಿಂದಿರುವುದಾಗಿ ವೈದ್ಯರು ತಿಳಿಸಿದ್ದಾರೆ.